ಅಬ್ಬರದ ಮಳೆ ನಡು ನಡುವೆ ಅಲ್ಪ ಬಿಸಿಲು ಮೈ ತಾಕುತ್ತಿದ್ದ ತಂಗಾಳಿ ಕುಗ್ಗದ ಉತ್ಸಾಹದಲ್ಲಿ ಆಡಿ ನಲಿದು ಸಂಭ್ರಮಿಸುತ್ತಾ, ಹಿಂದಿನ ಪರಂಪರೆಯ ಬಗ್ಗೆ ಇಂದಿನ ಪೀಳಿಗೆಗೆ ತಿಳುವಳಿಕೆ ಮೂಡಿಸುವಲ್ಲಿ ಗಾಳಿಬೀಡುವಿನಲ್ಲಿ ನಡೆದ ಬಂಟ ಸಮುದಾಯದವರ ‘ಆಡಿಡೊಂಜಿ ದಿನ ಕೆಸರ್ದ ಗೊಬ್ಬು’ ಕಾರ್ಯಕ್ರಮ ಯಶಸ್ವಿಯಾಯಿತು. ಗಾಳಿಬೀಡುವಿನ ಕೃಷಿಕ ಹೊರಮಲೆ ಶಿವಪ್ರಸಾದ್ ರೈ ಅವರ ಭತ್ತದ ಗದ್ದೆಯಲ್ಲಿ ಹಮ್ಮಿಕೊಂಡಿದ್ದ ಈ ವಿಶೇಷ ಕಾರ್ಯಕ್ರಮದಲ್ಲಿ ಯುವಕರು, ಮಹಿಳೆಯರು, ಮಕ್ಕಳು, ಹಿರಿಯರು ಎಲ್ಲರೂ ವಯಸ್ಸಿನ ಅಂತರದ ಅಂಜಿಕೆಯಿಲ್ಲದೆ ಆಡಿ ನಲಿದು ಸಂಭ್ರಮಿಸಿದರು.
ಕೆಸರು ಗದ್ದೆಯಲ್ಲಿ ಮನರಂಜನೆಗಾಗಿ ಹ್ಯಾಂಡ್ ಬಾಲ್, ಹಗ್ಗ ಜಗ್ಗಾಟ, ಓಟ, ಮುಂತಾದ ಸ್ಪರ್ಧೆಗಳು ನಡೆದವು. ಆಕರ್ಷಕವಾಗಿ ವಿನ್ಯಾಸಗೊಂಡಿದ್ದ ಮುಖ್ಯ ವೇದಿಕೆ ‘ಹೊರಮಲೆ ಚಾವಡಿ’ಯಲ್ಲಿ ಸಾಂಪ್ರದಾಯಿಕ ಬದುಕಿನ ಚಿತ್ರಣವನ್ನು ತಿಳಿಸುವ ಪ್ರಯತ್ನವಾಯಿತು. ಇಂಥದ್ದೊಂದು ಅಪರೂಪದ ಕಾರ್ಯಕ್ರಮಕ್ಕೆ ವೇದಿಕೆ ಒದಗಿಸಿದ್ದು ಕೊಡಗು ಜಿಲ್ಲಾ ಯುವ ಬಂಟ್ಸ್ ಅಸೋಸಿಯೇಷನ್.
ಕೊಡಗು ಜಿಲ್ಲಾ ಬಂಟರ ಸಂಘ, ಮಡಿಕೇರಿ ನಗರ ಬಂಟರ ಮಹಿಳಾ ಘಟಕ, ಗಾಳಿಬೀಡು ಹೋಬಳಿ ಬಂಟರ ಸಂಘದ ಸಹಕಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲೆಯ ವಿವಿಧೆಡೆಯಿಂದ 600ಕ್ಕೂ ಅಧಿಕ ಮಂದಿ ಪಾಲ್ಗೊಂಡು ಸಂಭ್ರಮಿಸಿದರು. ಯುವ ಸಮೂಹ, ಹಿರಿಯರೆಲ್ಲ ನಿತ್ಯದ ಜಂಜಡವನ್ನು ಮರೆತು ಕೆಸರಿನಲ್ಲಿ ಮಿಂದೆದ್ದು ಸಂಭ್ರಮಿಸಿದರು. ಪ್ರತಿ ದಿನ ಶಾಲೆ, ಪಠ್ಯದ ಚಟುವಟಿಕೆಗಳಲ್ಲಿ ಮಗ್ನರಾಗಿರುತ್ತಿದ್ದ ಮಕ್ಕಳು ತಮಗೆ ಸಿಕ್ಕ ಅಪರೂಪದ ಅವಕಾಶದಲ್ಲಿ ಗದ್ದೆಯಲ್ಲಿ ಆಡಿ, ನಲಿದು ಖುಷಿಪಟ್ಟರು.
ಶಿವಪ್ರಸಾದ್ ರೈ ಅವರು ಎತ್ತುಗಳನ್ನು ಬಳಸಿ ಉಳುಮೆ ಮಾಡುವುದರ ಪ್ರಾತ್ಯಕ್ಷಿಕೆ ನೀಡಿದರು. ಯಾಂತ್ರೀಕೃತ ಚಟುವಟಿಕೆ ಹೆಚ್ಚಾಗಿರುವ ಇಂದಿನ ದಿನದಲ್ಲಿ ಮರೆಯಾಗುತ್ತಿರುವ ಎತ್ತಿನ ಉಳುಮೆ ವಿಶೇಷ ಎನಿಸಿತು. ಆಟಿ ತಿಂಗಳಿನಲ್ಲಿ ತುಳುನಾಡಿನಲ್ಲಿ ಕಾಣ ಸಿಗುವ ಆಟಿ ಕಳೆಂಜ ಪ್ರದರ್ಶನ ಜನರನ್ನು ಆಕರ್ಷಿಸಿತು. ವೇಷ ಧರಿಸಿ, ತೆಂಬರೆ ಭಾರಿಸುತ್ತಾ ಗದ್ದೆ, ವೇದಿಕೆ ಬಳಿ ಸಾಗಿದ ಕಲಾವಿದರ ಜತೆಗೆ ಫೋಟೋ ತೆಗೆಸಿಕೊಳ್ಳುತ್ತಾ ವಿಶೇಷ ಕ್ಷಣವನ್ನು ಅನುಭವಿಸಿದರು. ಬಂಟ ಸಮುದಾಯದಿಂದ ಮೊದಲ ಬಾರಿಗೆ ನಡೆದ ಈ ಕಾರ್ಯಕ್ರಮದಲ್ಲಿ ಗ್ರಾಮದ ಇತರೆ ಸಮುದಾಯದ ಬಂಧುಗಳು ಕೂಡಾ ಪಾಲ್ಗೊಂಡು, ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಆಟಿ ಖಾದ್ಯಗಳ ಪ್ರದರ್ಶನ : ಚಳಿ ದೂರ ಮಾಡಲು ಬಿಸಿ ಬಿಸಿ ಬೆಲ್ಲದ ಕಾಫಿ ವಿತರಿಸಲಾಯಿತು. ಮಧ್ಯಾಹ್ನ ನಗರ ಮಹಿಳಾ ಘಟಕದಿಂದ ಆಟಿ ಸಂದರ್ಭದಲ್ಲಿ ಸೇವಿಸುವ ವಿಶೇಷ ಖಾದ್ಯಗಳ ಪ್ರದರ್ಶನ ನಡೆಯಿತು. ಮರುವಾಯಿ ಕಡುಬು, ಪತ್ರೊಡೆ, ಕೆಸ ಸಾರು, ಅಕ್ಕಿ ಕಡುಬು, ಸೀಗಡಿ ಚಟ್ನಿ, ಕಡ್ಲೆ ಬಲಿಯಾರ್, ಅಣಬೆ ಸಾರು, ಕಡ್ಲೆ ಬೇಳೆ ಮತ್ತು ಹೆಸರುಕಾಳು ಪಾಯಸ, ನಾಟಿ ಕೋಳಿ ಸಾರು, ಅರಶಿನ ಎಲೆ ಗಟ್ಟಿ, ಹಲಸಿನ ಗಟ್ಟಿ, ಮೂಡೆ, ನೀರ್ದೋಸೆ ಕೋಳಿ ಸಾರು ಮುಂತಾದ ಖಾದ್ಯಗಳನ್ನು ಮನೆಯಿಂದ ತಯಾರಿಸಿ ತಂದು, ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ ಹಂಚಿದರು.
ಗಾಳಿಬೀಡು ಹೋಬಳಿ ಅಧ್ಯಕ್ಷ ಸುಭಾಷ್ ಆಳ್ವ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮವನ್ನು ಕೃಷಿಕ ಹೊರಮಲೆ ಶಿವಪ್ರಸಾದ್ ರೈ ಉದ್ಘಾಟಿಸಿದರು. ಅಸೋಸಿಯೇಷನ್ ಉಪಾಧ್ಯಕ್ಷ ಪ್ರಾಸ್ತಾವಿಕ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಯುವ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ವಸಂತ ರೈ, ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಬಿ.ಡಿ. ಜಗದೀಶ್ ರೈ, ಕಾರ್ಯದರ್ಶಿ ರವೀಂದ್ರ ವಿ. ರೈ, ಸಹಕಾರ್ಯದರ್ಶಿ ಬಿ.ಸಿ. ಹರೀಶ್ ರೈ, ಉದ್ಯಮಿ ಜಯಪ್ರಕಾಶ್ ರೈ, ನಗರ ಮಹಿಳಾ ಘಟಕ ಕಾರ್ಯದರ್ಶಿ ಸುಜಾತ ಗಣೇಶ್, ಉಪಾಧ್ಯಕ್ಷೆ ಬೇಬಿ ಜಯರಾಮ್ ರೈ ವೇದಿಕೆಯಲ್ಲಿದ್ದರು. ಉಪನ್ಯಾಸಕಿ ಪ್ರತಿಮಾ ಹರೀಶ್ ರೈ ‘ಆಟಿ ತಿಂಗಳು ಮತ್ತು ಬಂಟ ಸಮುದಾಯ’ ವಿಷಯವಾಗಿ ವಿಚಾರ ಮಂಡಿಸಿದರು.
ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ :
ಸಂಜೆ ವಸಂತ ರೈ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು. ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳಿಗೆ ಕೊಡಗು ಜಿಲ್ಲಾ ಬಂಟರ ಸಂಘದಿಂದ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಇದೇ ವೇಳೆ ಸಮುದಾಯದ ಸಾಧಕರಾದ ವಿ.ಡಿ. ದೀಕ್ಷಿತ್ ಶೆಟ್ಟಿ (ಸೇನಾ ಕ್ಷೇತ್ರ), ಪ್ರತಿಮಾ ಹರೀಶ್ ರೈ (ಶಿಕ್ಷಣ, ಸಾಹಿತ್ಯ), ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಕೃಷಿಕ ಹೊರಮಲೆ ಶಿವಪ್ರಸಾದ್ ರೈ, ಕಾರ್ಯಕ್ರಮ ಸಂಚಾಲಕ ನಿಖಿಲ್ ಆಳ್ವ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಜಿಲ್ಲಾಧ್ಯಕ್ಷ ಜಗದೀಶ್ ರೈ, ಗೌರವಾಧ್ಯಕ್ಷ ಬಿ.ಬಿ. ಐತಪ್ಪ ರೈ, ಉಪಾಧ್ಯಕ್ಷ ಬಿ.ಕೆ. ರವೀಂದ್ರ ರೈ, ಮಡಿಕೇರಿ ತಾಲೂಕು ಅಧ್ಯಕ್ಷ ರಮೇಶ್ ರೈ, ವಿರಾಜಪೇಟೆ ತಾಲೂಕು ಅಧ್ಯಕ್ಷ ಲೀಲಾಧರ ರೈ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಲೀಲಾಧರ ರೈ, ನಗರ ಮಹಿಳಾ ಘಟಕ ಅಧ್ಯಕ್ಷೆ ಸೌಮ್ಯ ಶೆಟ್ಟಿ ಮುಂತಾದವರಿದ್ದರು. ಹಿತ ಯೋಗೇಶ್ ಶೆಟ್ಟಿ ಪ್ರಾರ್ಥಿಸಿದರು. ಬಾಲಕೃಷ್ಣ ರೈ ಸ್ವಾಗತಿಸಿದರು. ಕಿಶೋರ್ ರೈ ಕತ್ತಲೆಕಾಡು ನಿರೂಪಿಸಿದರು.