ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಅವಧಿಯಲ್ಲಿ ಪ್ರವಾಸೋದ್ಯಮವು ವೇಗ ಪಡೆದುಕೊಂಡಿದ್ದು, ಒಂದರ ಮೇಲೊಂದರಂತೆ ವಿವಿಧ ಅಭಿವೃದ್ಧಿ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಇತ್ತೀಚೆಗಷ್ಟೇ ದೇಶದ ಅತಿದೊಡ್ಡ ಸಭಾಂಗಣವಾದ ಭಾರತ ಮಂಠಪವನ್ನು ದೇಶಕ್ಕೆ ಸಮರ್ಪಿಸುವ ವೇಳೆ ಮತ್ತೊಂದು ಮಹತ್ತರ ಯೋಜನೆಯನ್ನು ಪ್ರಧಾನಿ ಮೋದಿ ಘೋಷಿಸಿದ್ದರು. ಅದುವೇ ‘ಯುಗೇ ಯುಗೀನ ಭಾರತ’. ವಿಶ್ವದ ಅತಿದೊಡ್ಡ ವಸ್ತು ಸಂಗ್ರಹಾಲಯ ನಿರ್ಮಾಣದ ಈ ಯೋಜನೆಗೆ ಸಂಬಂಧಿಸಿದ ಕೆಲ ವಿವರ ಹೀಗಿದೆ..
ರಾಷ್ಟ್ರಕಥೆ ಸಾರಲು ಸಾರಥ್ಯ :
ಪ್ರಸಕ್ತ ವಸ್ತು ಸಂಗ್ರಹಾಲಯವು ದೆಹಲಿಯ ಕರ್ತವ್ಯ ಪಥದ ಸಮೀಪದಲ್ಲಿದ್ದು, ನಿರ್ಮಾಣಗೊಳ್ಳಲಿರುವ ನೂತನ ವಸ್ತು ಸಂಗ್ರಹಾಲಯವು ರಾಷ್ಟ್ರಪತಿ ಭವನಕ್ಕೆ ಸಮೀಪವಾಗಿರಲಿದೆ. ಭಾರತದ ತಲಾತಲಾಂತರದ ಕಥನವನ್ನು ಸಾರುವ ಸಾಕ್ಷ್ಯಗಳಿಗೆ ಸಾರಥಿಯಾಗಿರಲಿದೆ. ಅಂದರೆ, ಪ್ರಾಚೀನ ಭಾರತದಿಂದ, ಮಧ್ಯಕಾಲೀನ ಹಾಗೂ ಆಧುನಿಕ ಭಾರತದ ಸಂಪೂರ್ಣ ಇತಿಹಾಸ, ವೈಭವ ಮತ್ತು ವಾಸ್ತವವನ್ನು ಇಲ್ಲಿ ತೆರೆದಿಡಲಾಗುತ್ತಿದೆ. ವಿಶೇಷವಾಗಿ ಡಚ್, ಬ್ರಿಟಿಷ್, ಪೋರ್ಚುಗೀಸರು ಸೇರಿದಂತೆ ವಸಹಾತುಶಾಹಿಗಳ ಆಡಳಿತ ಹಾಗೂ ಆ ನಂತರದ ಸ್ವಾತಂತ್ರ್ಯ ಹೋರಾಟ ಮತ್ತು ನಂತರದ 100 ವರ್ಷಗಳ ಹಾದಿಯನ್ನು ಯುಗೇ ಯುಗೀನ ಭಾರತ ಹೊಂದಿರಲಿದೆ.
ವಿಶ್ವದ ಅತಿದೊಡ್ಡ ವಸ್ತು ಸಂಗ್ರಹಾಲಯ :
1.17 ಲಕ್ಷ ಚದರ ಮೀಟರ್ಗಿಂತಲೂ ಹೆಚ್ಚು ವಿಸ್ತೀರ್ಣದ ಪ್ರದೇಶದಲ್ಲಿ ಯುಗೇ ಯುಗೀನ ಭಾರತ ಕಟ್ಟಡ ನಿರ್ಮಾಣಕ್ಕೆ ಯೋಜಿಸಲಾಗಿದ್ದು, ಇದರಲ್ಲಿ 950 ವಿಶಾಲ ಕೊಠಡಿಗಳನ್ನು ಹೊಂದಲು ಯೋಜಿಸಲಾಗಿದೆ. 8 ವಿಷಯಾಧಾರಿತ ವಿಭಾಗಗಳನ್ನು ಸಂಗ್ರಹಾಲಯವು ಹೊಂದಲಿದ್ದು, ನೆಲ ಮಹಡಿ ಮತ್ತು ಮೇಲಿನ 3 ಅಂತಸ್ತುಗಳಲ್ಲೇ 950 ಕೊಠಡಿಗಳ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ. ಅಷ್ಟೇ ಅಲ್ಲದೇ, ಆಡಿಯೊ-ವಿಡಿಯೊ ವ್ಯವಸ್ಥೆ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನವನ್ನೂ ಕಟ್ಟಡ ಒಳಗೊಂಡಿರಲಿದೆ. ಕಟ್ಟಡ ನಿರ್ಮಾಣಕ್ಕೆ ಫ್ರಾನ್ಸ್ ಸರ್ಕಾರವೂ ಕೈಜೋಡಿಸಲಿದೆ.
ವೈಶಿಷ್ಟ್ಯಗಳೇನೇನು ?
* ಕರ್ನಾಟಕದ ವಿಜಯನಗರ ಸಾಮ್ರಾಜ್ಯ ಸೇರಿದಂತೆ, ದೇಶದ ಪ್ರಸಿದ್ಧ ಸಾಮ್ರಾಜ್ಯಗಳಾದ ಮೌರ್ಯರು, ಗುಪ್ತರು ಹಾಗೂ ಮೊಘಲರ ಆಡಳಿತದ ಸಾಮ್ರಾಜ್ಯಗಳು ಹೇಗಿದ್ದವು ಎಂಬುದನ್ನು ವಸ್ತು ಸಂಗ್ರಹಾಲಯದ ಗೋಡೆಗಳ ಮೇಲೆ ವರ್ಚುವಲ್ ಮೂಲಕ ಪ್ರದರ್ಶಿಸಲಾಗುತ್ತದೆ.
* ವೇದ, ಉಪನಿಷತ್ತು, ಆಯುರ್ವೇದ ಹಾಗೂ ಭಾರತದ ಪ್ರಾಚೀನ ನಗರ ವ್ಯವಸ್ಥೆಯ ಬಗ್ಗೆಯೂ ಗ್ಯಾಲರಿ ಮೂಲಕವೇ ಮಾಹಿತಿ.
* ಪ್ರಾಚೀನ ಕಲಾಕೃತಿ ಹಾಗೂ ದೇಶದ ಕಲಾ ಶ್ರೀಮಂತಿಯ ಸಂಗ್ರಹಗಳನ್ನು ಒಳಗೊಂಡಿರಲಿದೆ.
* ದೇಶದ ವೈಭವ ಮಾತ್ರವಲ್ಲದೇ, ಪ್ರಾಣಿ, ಸಸ್ಯ, ಸಂಸ್ಕೃತಿ ವೈವಿಧ್ಯತೆಯ ಪ್ರದರ್ಶನವೂ ಇರಲಿದೆ.
* ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ಅಂಬೇಡ್ಕರ್, ಸರ್ದಾರ್ ವಲ್ಲಭಬಾಯಿ ಪಟೇಲ್ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರ ಪಾತ್ರ ಹಾಗೂ ದೇಶಕ್ಕೆ ಬುಡಕಟ್ಟು ಜನಾಂಗದ ಅಸಾಧಾರಣ ಕೊಡುಗೆಯನ್ನು ಸ್ಮರಿಸಲಿದೆ.
* ಗಣಿತ, ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಕ್ಕೆ ಭಾರತದ ಕೊಡುಗೆಯನ್ನು ಪ್ರದರ್ಶಿಸಲಿದೆ.