ಪವಿತ್ರ ದೇಶ ನಮ್ಮದು. ಭಾರತದಲ್ಲಿರುವ ಹಲವು ಜಾತಿ, ಕುಲ, ಭಾಷೆ, ವಿಭಿನ್ನ ಸಂಸ್ಕೃತಿ ಎಲ್ಲಿಯೂ ಕಾಣಸಿಗದು. ವಿದೇಶಕ್ಕೆ ಹೋದ ಮಕ್ಕಳು ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ಸಂಘ ಕಳೆದ 10 ವರ್ಷಗಳಿಂದ ಸಾಮಾಜಿಕ ಶೈಕ್ಷಣಿಕ ಕಾರ್ಯ ಮಾಡುತ್ತಾ, ಸಾಧನೆಯನ್ನು ಗುರುತಿಸಿ ಸಮಾಜದವರನ್ನು ಸಮ್ಮಾನ ಮಾಡುತ್ತಿದೆ ಎಂದು ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಶ್ರೀ ವಿವೇಕ ಚೈತನ್ಯ ಸ್ವಾಮೀಜಿಯವರು ಹೇಳಿದರು.
ಅವರು ಗುರುಪುರ ಬಂಟರ ಮಾತೃ ಸಂಘದ ಆಶ್ರಯದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು, ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಇಂಟರ್ನ್ಯಾಶನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಮಂಗಳೂರು ಹಾಗೂ ಬೆಂಗಳೂರು ಬಂಟರ ಸಂಘದ ಸಹಯೋಗದೊಂದಿಗೆ ರವಿವಾರ ವಾಮಂಜೂರು ಚರ್ಚ್ ಸಭಾಭವನದಲ್ಲಿ ನಡೆದ ಗುರುಪುರ ಬಂಟರ ಮಾತೃ ಸಂಘದ ದಶಮಾನೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಬಂಟ ಸಮಾಜದಲ್ಲಿಯೂ ಕಷ್ಟದಲ್ಲಿ ಇದ್ದವರು ಇದ್ದಾರೆ. ಅವರು ಸಮಾಜದ ಅವಿಭಾಜ್ಯ ಅಂಗ. ಎಲ್ಲಾ ಸಮಾಜ ಗಟ್ಟಿಯಾದರೆ, ಸನಾತನ ಧರ್ಮ ಗಟ್ಟಿಯಾಗುತ್ತದೆ. ಎಲ್ಲರಿಗೂ ಬಂಟ ಸಮಾಜ ಆದರ್ಶವಾಗಬೇಕು. ಸಂಸ್ಕಾರ, ಸಂಸ್ಕೃತಿ, ಸಂಪ್ರದಾಯ, ಆಚಾರ, ವಿಚಾರ ತಿಳಿಯಲು ಹಾಗೂ ಸಮಾಜ ಉದ್ಧಾರಕ್ಕೆ ಸಂತರನ್ನು ಬಂಟ ಸಮಾಜ ಕೊಡಬೇಕು ಎಂದು
ಅವರು ಹೇಳಿದರು.
ಮಂಗಳೂರು ತಾಲೂಕು ಬಂಟರ ಯಾನೆ ನಾಡವರ ಮಾತೃ ಸಂಘದ ಸಂಚಾಲಕ ವಸಂತ ಶೆಟ್ಟಿ ಮಾತನಾಡಿ, ಸಮಾಜದ ಜನರ ಪ್ರತಿಭೆಯನ್ನು ಹೊರಹೊಮ್ಮುವಂತೆ ಮಾಡಿ, ಸಮಾಜದ ಯುವ ಜನರನ್ನು ಸಾಧನೆ ಮಾಡುವಂತೆ ಪ್ರೋತ್ಸಾಹಿಸುವ ಉದ್ದೇಶ ಈ ಕಾರ್ಯಕ್ರಮದ್ದಾಗಿದೆ. ಇದು ಸ್ಪರ್ಧೆ ಅಲ್ಲ, ಇದು ನಮ್ಮೆಲ್ಲರ ಒಗ್ಗಟ್ಟಿಗಾಗಿ, ಸ್ಪರ್ಧೆಯಲ್ಲಿ ಯಾರೂ ಜಯಗಳಿಸಿದರೂ ನಮ್ಮ ಸಮಾಜ ಜಯಗಳಿಸಿದಂತೆ ಭಾವಿಸಬೇಕು. ಈಗಾಗಲೇ ಸಂಘಕ್ಕೆ ಜಾಗ ತೆಗೆದು ಕೊಂಡಾಗಿದೆ. ಅದರಲ್ಲಿ ಬಂಟರ ಭವನದ ಕಟ್ಟಡ ನಿರ್ಮಾಣವಾಗಬೇಕು. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದರು.
ಗುರುಪುರ ಪಂ.ನ. ಪಿಡಿಒ ಪಂಕಜ ಶೆಟ್ಟಿ ಮಾತನಾಡಿ, ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಒಳ್ಳೆಯ ಸಾಧನೆ ತೋರಿಸುತ್ತಿದ್ದಾರೆ. ಆದರೆ ಸರಕಾರಿ ವಲಯದ ಹುದ್ದೆಯಲ್ಲಿ ನಮ್ಮವರು ಇಲ್ಲ ಈ ಬಗ್ಗೆ ಚಿಂತನೆ ನಡೆಸಬೇಕಿದೆ ಎಂದು ಹೇಳಿದರು. ಅದ್ಯಪಾಡಿ ಶ್ರೀ ನೀಲಕಂಠ ಉಮಾಮಹೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಮಂಜುನಾಥ ಭಂಡಾರಿ ಶೆಡ್ಡೆ ಮಾತನಾಡಿ, 16 ಗ್ರಾಮಗಳು ಒಂದಾಗಿ ಈ ಸಂಘವನ್ನು ಬೆಳೆಸಬೇಕು. ಪ್ರತಿ ಮನೆ ಮನೆಯವರು ಸದಸ್ಯರಾಗಬೇಕು ಎಂದು ಹೇಳಿದರು.
ಪುಣೆಯ ಹೊಟೇಲ್ ಉದ್ಯಮಿ ಯಶವಂತ ಶೆಟ್ಟಿ, ಪ್ರಗತಿಪರ ಕೃಷಿಕ ರಾಜೇಂದ್ರ ಮೇಂಡ ಮೊಗರು, ಸುಭಾಷ್ ಭಂಡಾರಿ, ಪಿಂಪ್ರಿ-ಚಿಂಚ್ವಾಡ ಬಂಟರ ಸಂಘದ ಅಧ್ಯಕ್ಷ ರಾಕೇಶ್ ಶೆಟ್ಟಿ, ಥಾಣೆ ಬಂಟರ ಸಂಘದ ಮಾಜಿ ಅಧ್ಯಕ್ಷ ವೇಣುಗೋಪಾಲ್ ಶೆಟ್ಟಿ, ಮುಂಬಯಿ ಚಿಣ್ಣರ ಬಿಂಬದ ವಿಜಯ ಕುಮಾರ್ ಶೆಟ್ಟಿ ತೋನ್ಸೆ ಸಂಧರ್ಭೋಚಿತವಾಗಿ ಮಾತನಾಡಿದರು.
ಪ್ರಗತಿಪರ ಕೃಷಿಕ, ಉದ್ಯಮಿ ನವೀನ್ಚಂದ್ರ ಆಳ್ವ ತಿರುವೈಲುಗುತ್ತು ಅವರನ್ನು ಸಮ್ಮಾನಿಸಲಾಯಿತು. ರವಿರಾಜ್ ಶೆಟ್ಟಿ ನಿಟ್ಟೆಗುತ್ತು, ರಘು ಶೆಟ್ಟಿ ಬೆಳ್ಳೂರುಗುತ್ತು, ದೇವಿಚರಣ್ ಶೆಟ್ಟಿ, ಸಂಜೀತ್ ಶೆಟ್ಟಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಶೆಡ್ಡೆ ಹೊಸಲಕ್ಕೆ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆಗೈದ ದೀಪಕ್ ಶೆಟ್ಟಿ ಲಿಂಗಮಾರುಗುತ್ತು ಅವರನ್ನು ಅಭಿನಂದಿಸಲಾಯಿತು.
ಸುದರ್ಶನ್ ಶೆಟ್ಟಿ, ರಾಜಕುಮಾರ ಶೆಟ್ಟಿ ಸ್ವಾಗತಿಸಿದರು, ಜಯರಾಂ ರೈ ಉಳಾಯಿಬೆಟ್ಟು ವಿದ್ಯಾರ್ಥಿ ವೇತನದ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಜಯಚಂದ್ರ ಶೆಟ್ಟಿ ಸಮ್ಮಾನ ಪತ್ರ ವಾಚಿಸಿದರು. ಸಂಘದ ಉಪಾಧ್ಯಕ್ಷ ಪ್ರವೀಣ್ ಆಳ್ವ ಗುಂಡ್ಯ, ಹರಿಕೇಶ್ ಶೆಟ್ಟಿ ವಂದಿಸಿದರು. ಅರ್ಪಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ದಶಮಾನೋತ್ಸವದ ಅಂಗವಾಗಿ ನಡೆದ ಯುವ ಸಂಭ್ರಮ 2023 ಅಂತರ್ ಬಂಟರ ಸಂಘಗಳ ನೃತ್ಯ ಸ್ಪರ್ಧೆಯಲ್ಲಿ 20 ತಂಡಗಳು ಸ್ಪರ್ಧಿಸಿದ್ದು, ಪ್ರಥಮ ಸ್ಥಾನವನ್ನು ಬಂಟ್ವಾಳ ಬಂಟರ ಸಂಘ, ದ್ವಿತೀಯ ಸ್ಥಾನವನ್ನು ಜಪ್ಪು ಬಂಟರ ಸಂಘ, ತೃತೀಯ ಸ್ಥಾನವನ್ನು ಜಪ್ಪಿನಮೊಗರು ಬಂಟರ ಸಂಘ, ಚತುರ್ಥ ಸ್ಥಾನವನ್ನು ಉಳ್ಳಾಲ ಬಂಟರ ಸಂಘ ಹಾಗೂ ಸಮಾಧಾನಕರ ಬಹುಮಾನವನ್ನು ಕಾಪು ಬಂಟರ ಸಂಘ ಹಾಗೂ ಶಿಸ್ತುಬದ್ಧ ತಂಡವಾಗಿ ಸುರತ್ಕಲ್ ಬಂಟರ ಸಂಘಗಳು ಪ್ರಶಸ್ತಿಯನ್ನು ಪಡೆದವು.