ಮಾಧ್ಯಮಗಳು ಉತ್ತಮವಾದ ಶಿಸ್ತು ಮತ್ತು ಸಂಸ್ಕಾರವನ್ನು ಹೊಂದಿರುವ ಸುದ್ದಿಗಳನ್ನು ಸಮಾಜಕ್ಕೆ ನೀಡಬೇಕು. ಮಾಧ್ಯಮದಲ್ಲಿ ತಪ್ಪು ಮಾಹಿತಿಯನ್ನು ನೀಡಿದಾಗ ಪತ್ರಿಕೆ ತನ್ನ ಮಹತ್ವವನ್ನು ಕಳೆದುಕೊಳ್ಳುತ್ತದೆ. ನೈಜ ಸುದ್ದಿಯನ್ನು ಕೊಡುವ ಮಾಧ್ಯಮವಾಗಿ ದಿನಪತ್ರಿಕೆಯನ್ನು ನೋಡಬಹುದು ಎಂದು ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ. ಬಿ. ಹರೀಶ್ ರೈ ಹೇಳಿದರು. ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು ತಾಲೂಕು ಆಶ್ರಯದಲ್ಲಿ ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜು ಸಹಯೋಗದೊಂದಿಗೆ ಜು.12ರಂದು ಸಂತ ಫಿಲೋಮಿನಾ ಕಾಲೇಜಿನ ಸಿಲ್ವರ್ ಜ್ಯುಬಿಲಿ ಹಾಲ್ ನಲ್ಲಿ ನಡೆದ ಪತ್ರಿಕಾ ದಿನಾಚರಣೆ ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.


ವಿಶ್ವಾಸಾರ್ಹ ಸುದ್ದಿಗಾಗಿ ಜನರು ಪತ್ರಿಕೆ ಅವಲಂಬಿಸುತ್ತಾರೆ. ಇದರಿಂದ ಪತ್ರಿಕೆಯೂ ಉಳಿಯುತ್ತದೆ. ಇಂದು ಪತ್ರಿಕೆಯಿಂದ ಮೊದಲು ಸೋಷಿಯಲ್ ಮೀಡಿಯಾದಲ್ಲಿ ಮೊದಲು ಸುದ್ದಿಗಳು ಬರುತ್ತದೆ. ಇದನ್ನೇ ಸತ್ಯವೆಂದು ಜನರು ನಂಬುತ್ತಾರೆ. ವಿದ್ಯಾರ್ಥಿಗಳಿಗೆ ಜ್ಞಾನವನ್ನು ವೃದ್ಧಿಸಿಕೊಳ್ಳಲು ಪಠ್ಯದ ಜೊತೆಗೆ ಪತ್ರಿಕೆಗಳು ಕೂಡ ಸಹಕಾರಿಯಾಗುತ್ತದೆ ಎಂದು ತಿಳಿಸಿ ಪತ್ರಿಕೆಯ ಉಗಮ, ಇತಿಹಾಸ ಮತ್ತು ಸ್ವರೂಪದ ಕುರಿತು ಅವರು ಮಾಹಿತಿ ನೀಡಿದರು. ನಾನು ಫಿಲೋಮಿನಾ ಕಾಲೇಜಿನಲ್ಲಿ ಓದಿದವನು. ಫಿಲೋಮಿನಾ ಶೇಷ್ಠ ವಿದ್ಯಾ ಸಂಸ್ಥೆಯಾಗಿದೆ. ಇಲ್ಲಿನ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಖುಷಿಯಾಗಿದೆ ಎಂದು ಹರೀಶ್ ರೈ ಹೇಳಿದರು.
ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರೆ. ಫಾ. ಅಶೋಕ್ ರಾಯನ್ ಕ್ರಾಸ್ತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಈ ಕಾರ್ಯಕ್ರಮ ನಮ್ಮ ಮಕ್ಕಳಿಗೆ ಸಿಕ್ಕಿದ ಅವಕಾಶವಾಗಿದೆ. ವಿದ್ಯಾರ್ಥಿಗಳು ಪತ್ರಿಕಾ ರಂಗದಲ್ಲಿ ಬೆಳೆಯಬೇಕು. ವಿದ್ಯಾರ್ಥಿಗಳು ಪತ್ರಿಕೆಯನ್ನು ಓದುವುದರಿಂದ ಪ್ರಪಂಚದ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ. ನೀವು ಜೀವನದಲ್ಲಿ ಉತ್ತುಂಗಕ್ಕೆ ಏರಬಹುದು. ಪತ್ರಿಕೆಗಳು ಸಮಾಜದ ಒಳಿತಿಗಾಗಿ ಬೆನ್ನೆಲುಬಾಗಿ ನಿಲ್ಲುವ ಕಾರ್ಯವನ್ನು ಮಾಡಬೇಕು ಎಂದು ಹೇಳಿದರು. ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ಪತ್ರಕರ್ತರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷ ಡಾ. ಶಿವಶರಣ್ ಶೆಟ್ಟಿ ಮಾತನಾಡಿ ಪತ್ರಿಕೋದ್ಯಮವು ಶಿಕ್ಷಣದ ಒಂದು ಭಾಗವಾಗಿದ್ದು, ಶಿಕ್ಷಣದೊಂದಿಗೆ ಜಗತ್ತಿನ ಇತಿಹಾಸವನ್ನು ನಿರ್ಮಿಸಬಲ್ಲ ಶಕ್ತಿಯಾಗಿದೆ. ದಿನಪತ್ರಿಕೆಯನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಎಷ್ಟೋ ಸ್ವರ್ದಾತ್ಮಕ ಪರೀಕ್ಷೆಗಳಿಗೆ ಮಾಹಿತಿಯನ್ನು ಪಡೆದುಕೊಳ್ಳಲು ಪತ್ರಿಕೆಗಳು ಉತ್ತಮ ಸೇತುವೆಯಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಅಧ್ಯಕ್ಷ ತಿಲಕ್ ರೈ ಕುತ್ಯಾಡಿ ಮಾತನಾಡಿ ಕರ್ನಾಟಕ ಪತ್ರಕರ್ತರ ಸಂಘದ ಕೆಲಸ ಕಾರ್ಯಗಳು ಸಮಾಜಮುಖಿ ಚಿಂತನೆಯನ್ನು ಒಳಗೊಂಡಿದೆ. ವಾಸ್ತವ ಸುದ್ದಿಗಳನ್ನು ಸಮಾಜಕ್ಕೆ ನೀಡುವ ಮೂಲಕ ಸಮಾಜವನ್ನು ಮುನ್ನಡೆಸುವ ಕೈಗನ್ನಡಿಯಂತೆ ಕೆಲಸವನ್ನು ಮಾಡುತ್ತದೆ ಎಂದರು. ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸುದೇಶ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ ದಿನಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಸೋಶಿಯಲ್ ಮೀಡಿಯಾದ ಬಳಕೆಯನ್ನು ವಿದ್ಯಾರ್ಥಿಗಳು ಕಡಿಮೆ ಮಾಡಬೇಕು. ಬದಲಾಗಿ ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಹೆಚ್ಚು ಬೆಳೆಸಿಕೊಳ್ಳಬೇಕು ಎಂದರು.
ಮಾಹಿತಿ ಕಾರ್ಯಾಗಾರದ ಬಳಿಕ ವಿದ್ಯಾರ್ಥಿಗಳ ಜೊತೆಗೆ ಸಂವಾದ ನಡೆಯಿತು. ಕರ್ನಾಟಕ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಪ್ರಧಾನ ಕಾರ್ಯದರ್ಶಿ ಶ್ರೀಧರ್ ರೈ ಕೋಡಂಬು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾ ಸದಸ್ಯ ದತ್ತಾತ್ರೇಯ ಹೆಗ್ಡೆ, ಮಧುಪ್ರಪಂಚ ಮಾಸ ಪತ್ರಿಕೆಯ ಪ್ರಧಾನ ಸಂಪಾದಕ ನಾರಾಯಣ ರೈ ಕುಕ್ಕುವಳ್ಳಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ಉಮಾಪ್ರಸಾದ್ ರೈ ನಡುಬೈಲು, ಸಂಘದ ಜತೆ ಕಾರ್ಯದರ್ಶಿ ಪ್ರಜ್ವಲ್ ಪುತ್ತೂರು, ಮಾಜಿ ಅಧ್ಯಕ್ಷ ಯೂಸುಫ್ ರೆಂಜಲಾಡಿ, ಮಾಜಿ ಕೋಶಾಧಿಕಾರಿ ನರೇಶ್ ಜೈನ್, ಸದಸ್ಯರಾದ ಪಿ. ಎಸ್. ಭಟ್, ಮೋಹನ್ ಶೆಟ್ಟಿ ಉರುವಾಲು, ಆದಿತ್ಯ ಈಶ್ವರಮಂಗಲ, ರಾಜೇಶ್ ಸಂಪ್ಯಾಡಿ, ಶಿವಕುಮಾರ್ ಈಶ್ವರಮಂಗಲ, ಸಮದ್, ಸುದ್ದಿಬಿಡುಗಡೆಯ ಹಿರಿಯ ವರದಿಗಾರರಾದ ಲೋಕೇಶ್ ಬನ್ನೂರು, ವಸಂತ್ ಸಾಮೆತ್ತಡ್ಕ, ವಿದ್ಯಾಮಾನ ವೆಬ್ ಸೈಟ್ ನ ಮುಖ್ಯಸ್ಥರಾದ ಫಾರೂಕ್ ಶೇಖ್ ಮುಕ್ವೆ, ಗಣೇಶ್ ಕಲ್ಲರ್ಪೆ, ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜಿನ ಬೋಧಕ ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಉಪನ್ಯಾಸಕಿಯರಾದ ಸುಮಾ ಡಿ, ಯಶಸ್ವಿನಿ, ಸಿಬ್ಬಂದಿ ಸಂತೋಷ್, ಕರ್ನಾಟಕ ಪತ್ರಕರ್ತರ ಸಂಘದ ಉಪಾಧ್ಯಕ್ಷ ಶರತ್ ಕುಮಾರ್ ಪಾರ, ಕೋಶಾಧಿಕಾರಿ ರಕ್ಷಿತಾ ಎಚ್. ನಾಯ್ಕ್, ಮಾಜಿ ಉಪಾಧ್ಯಕ್ಷೆ ಶೈಲಜಾ ಸುದೇಶ್ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಪ್ರದರ್ಶನ ಕಲಾ ಸಂಘದ ವಿದ್ಯಾರ್ಥಿಗಳು ಪ್ರಾರ್ಥಿಸಿ, ಉಪನ್ಯಾಸಕರಾದ ಶರತ್ ಆಳ್ವ ಚಣಿಲ ಸ್ವಾಗತಿಸಿದರು. ಕರ್ನಾಟಕ ಪತ್ರಕರ್ತರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ಉಪನ್ಯಾಸಕ ಲಕ್ಷ್ಮೀಕಾಂತ್ ಅನಿಕೂಟೇಲ್ ವಂದಿಸಿ, ಉಪನ್ಯಾಸಕಿ ಸುಮನ ಕೆ. ಕಾರ್ಯಕ್ರಮ ನಿರೂಪಿಸಿದರು.





































































































