‘ಸಂತೋಷವಾಗಿರುವುದು ತುಂಬಾ ಸರಳ ಆದರೆ ಸರಳವಾಗಿರುವುದು ಮಾತ್ರ ತುಂಬಾ ಕಷ್ಟ.’ ಹೀಗೆಂದವರು ಗುರುದೇವ ರವೀಂದ್ರನಾಥ ಠಾಗೋರ್. ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಪ್ರತಿಷ್ಠಿತ ಮನೆತನ ಕುಳಾಲು. ಇಲ್ಲಿ ಕೆ ವಿಶ್ವನಾಥ ರೈ ಹಾಗೂ ಚಂದ್ರಾವತಿ ರೈ ದಂಪತಿಗಳ ಮೂರನೇ ಮಗುವಾಗಿ ಸುರೇಶ್ ರೈ ಅವರು ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಕುಳಾಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿದರು. ಪ್ರೌಢ ಶಿಕ್ಷಣವನ್ನು ಸರಕಾರಿ ಪ್ರೌಢ ಶಾಲೆ ಕನ್ಯಾನದಲ್ಲೂ, ಪದವಿ ಪೂರ್ವ ಶಿಕ್ಷಣವನ್ನು ಪದವಿ ಪೂರ್ವ ಕಾಲೇಜು ವಿಟ್ಲದಲ್ಲಿ ಪೂರೈಸಿದರು. ಬಿ ಎ ಪದವಿಯನ್ನು ಸಂತ ಅಲೋಶಿಯಸ್ ಕಾಲೇಜ್ ಮಂಗಳೂರು, ಸ್ನಾತಕೋತ್ತರ ಪದವಿಯನ್ನು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಇತಿಹಾಸದಲ್ಲಿ ದ್ವಿತೀಯ ಶ್ರೇಣಿಯೊಂದಿಗೆ ಮುಗಿಸಿದರು. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಮೂಲಕ “ಜ್ಯುಡಿಶಿಯಲ್ ಸಿಸ್ಟಮ್ ಇನ್ ದ ಸೋಶಿಯಲ್ ಟ್ರೆಡಿಷನ್ ಇನ್ ತುಳುನಾಡು” ವಿಷಯದ ಬಗ್ಗೆ ಪಿ. ಎಚ್. ಡಿ ಪದವಿಯನ್ನು ಪಡೆದರು.
ಸುರೇಶ್ ರೈ ಅವರು ತಮ್ಮ ವೃತ್ತಿ ಜೀವನವನ್ನು ಭಂಡಾರ್ ರ್ಕರ್ ಕಾಲೇಜ್ ಕುಂದಾಪುರ ಇಲ್ಲಿ ಉಪನ್ಯಾಸಕರಾಗಿ ಪ್ರಾರಂಭಿಸಿದರು. ನಂತರ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿಯಲ್ಲಿ 12 ವರ್ಷ, ಡಾ. ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಉಡುಪಿಯಲ್ಲಿ ಐದು ವರ್ಷ ಸೇವೆ ಸಲ್ಲಿಸಿದರು. 2002ರಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ, 2010ರಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿ, 2017ರಲ್ಲಿ ಪ್ರೊಫೆಸರ್ ಆಗಿ ಭಡ್ತಿ ಪಡೆದ ಪ್ರೊಫೆಸರ್ ಸುರೇಶ್ ರೈ ಈಗ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಉಡುಪಿ ಇಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸರಕಾರಿ ಶಿಕ್ಷಣ ಕ್ಷೇತ್ರದಲ್ಲಿ 30 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ಇವರು ಮಂಗಳೂರು ವಿಶ್ವವಿದ್ಯಾನಿಲಯದ ಬಿಎ ವಿದ್ಯಾರ್ಥಿಗಳಿಗಾಗಿ 26 ಪಠ್ಯ ಪುಸ್ತಕ ರಚನೆಗಳ ತಂಡದಲ್ಲಿ ಒಬ್ಬರಾಗಿದ್ದರು. ಇತಿಹಾಸದ ವಿಶೇಷ ಅಧ್ಯಯನಕ್ಕಾಗಿ ಎರಡು ರೆಫರೆನ್ಸ್ ಪುಸ್ತಕಗಳ ರಚನೆ ಇವರು ಮಾಡಿದ್ದು, ರಾಷ್ಟ್ರೀಯ ಅಂತರಾಷ್ಟ್ರೀಯ ನಿಯತ ಕಾಲಿಕೆಗಳಲ್ಲಿ 23 ಲೇಖನಗಳನ್ನು ಪ್ರಕಟಿಸಿರುತ್ತಾರೆ. IQAC ಸಂಚಾಲಕರಾಗಿ ರಾಜ್ಯ ಮಟ್ಟದ ಗುಣಮಟ್ಟ ನಿರ್ವಹಣೆ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ 16 ವರ್ಷ ಸೇವೆ, NSS ಅಧಿಕಾರಿಯಾಗಿ ಏಳು ವರ್ಷ ಸೇವೆ, NAAC ಸಂಚಾಲಕರಾಗಿ 15 ವರ್ಷ ಸೇವೆ ಸಲ್ಲಿಸಿರುತ್ತಾರೆ.
ಪ್ರೊಫೆಸರ್ ಸುರೇಶ್ ರೈಯವರ ಧರ್ಮಪತ್ನಿ ನೀರೆ ಪೆರಿಮಾರುಗುತ್ತು ಕಾರ್ಕಳ ತಾಲ್ಲೂಕಿನ ಮಲ್ಲಿಕಾ ರೈಯವರು ವೃತ್ತಿಯಲ್ಲಿ ಉಪನ್ಯಾಸಕಿ, ಸ್ನಾತಕೋತ್ತರ ಮತ್ತು ಕಾನೂನು ಪದವೀಧರೆ. ಮಗ ಶಾಂತನು ರೈ NITK ಸುರತ್ಕಲ್ ನಲ್ಲಿ ಕಂಪ್ಯೂಟರ್ ಸೈನ್ಸ್ ನಲ್ಲಿ ಬಿ ಟೆಕ್ ಪದವೀಧರ. ಮಗಳು ಶಾಲ್ಮಲಿ ರೈ ಉಡುಪಿಯ ಜ್ಞಾನ ಸುಧಾದಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಳೆ.