ಬಂಟರ ಸಂಘ ಕಾರ್ಯ ಚಟುವಟಿಕೆಗಳ ಬಗ್ಗೆ ಮಕ್ಕಳಿಗೆ ವಿಸ್ಥಾರವಾಗಿ ತಿಳಿಯಲು ಸಂಘವು ಆಪ್ ನ್ನು ತಯಾರಿಸಿದ್ದೇವೆ. ಅದರಲ್ಲಿ ತಳಮಟ್ಟದಿಂದ ಉನ್ನತ ಮಟ್ಟಕ್ಕೇರಿ ಸಾಧನೆಗೈದ ಗಣ್ಯರ ಸಂದರ್ಶನವಿದೆ. ಮಕ್ಕಳು ಅದನ್ನು ಓದುವದು ಅತಿ ಅಗತ್ಯ. ಇದು ನಮ್ಮ ಸಮಾಜದ ಮಕ್ಕಳು ಉತ್ತಮ ಭವಿಷ್ಯ ರೂಪಿಸುವಲ್ಲಿ ಸಹಕಾರಿಯಾಗಬಹುದು. ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಪ್ರೋತ್ಸಾಹ ನೀಡಲು ಸಂಘ ಹಲವಾರು ಯೋಜನೆಗಳನ್ನು ಕೈಗೊಂಡಿದ್ದೇವೆ ಎಂದು ಬಂಟರ ಸಂಘ ಮುಂಬಯಿಯ ಅಧ್ಯಕ್ಷರಾದ ಚಂದ್ರಹಾಸ ಕೆ. ಶೆಟ್ಟಿ ಯವರು ನುಡಿದರು.
ಕಾಂದಿವಲಿ ಪಶ್ಚಿಮದ ಪೊಯಿಸರ್ ಜಿಮ್ಖಾನದಲ್ಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ನಿಟ್ಟೆ ಎಮ್. ಜಿ. ಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಬಂಟರ ಸಂಘ ಮುಂಬಯಿಯ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ವಿದ್ಯಾರ್ಥಿ ವೇತನ, ವಿಕಲ ಚೇತನ ವೇತನ, ಧನ ಸಹಾಯ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಚಂದ್ರಹಾಸ ಕೆ. ಶೆಟ್ಟಿಯವರು ಬಂಟ ಸಮಾಜದ ಬಂಧುಗಳು ಸಾಧನೆ ಮಾಡುವ ಶಕ್ತಿವಂತರು, ನಮ್ಮ ವ್ಯಕ್ತಿತ್ವದ ಬಗ್ಗೆ ಯಾರಲ್ಲೂ ಕೀಳರಿಮೆ ಇರಬಾರದು. ಬಂಟರ ಸಂಘದಲ್ಲಿ ಹಲವಾರು ಯೋಜನೆಗಳಿವೆ. ಶಿಕ್ಷಣಕ್ಕಾಗಿ ಸಂಘದಿಂದ ಸಾಲ ಪಡೆದು ಉನ್ನತ ಶಿಕ್ಷಣ ಗಳಿಸಿ, ಕೆಲಸ ಸಿಕ್ಕಿದ ನಂತರ ಅದನ್ನು ಹಿಂತಿರುಗಿಸಿದವರು ಅನೇಕ ವಿದ್ಯಾರ್ಥಿಗಳಿದ್ದಾರೆ. ಕಂಕಣ ಭಾಗ್ಯದಂತಹ ಯೋಜನೆಗಳು ನಮ್ಮಲ್ಲಿದೆ. ನಮ್ಮ ಮಕ್ಕಳು ಕ್ರೀಡಾ ಸ್ಪರ್ಧೆ ಮಾಡುವವರಿದ್ದರೆ ಅಂತವರಿಗೂ ಕೂಡ ಸಂಘ ನಿರಂತರ ಪ್ರೋತ್ಸಾಹ ನೀಡುತ್ತಾ ಬಂದಿದೆ. ವಿವಿಧ ಕ್ಷೇತ್ರಗಳಲ್ಲಿ ಪ್ರತಿಭಾವಂತ ಪ್ರತಿಭೆಗಳಿದ್ದರೆ ಅದಕ್ಕೆ ಪ್ರೋತ್ಸಾಹ ಮಾಡುವ ಎಲ್ಲಾ ಸೌಲಭ್ಯಗಳು ದಾನಿಗಳು ನಮ್ಮ ಸಮಾಜದಲ್ಲಿದ್ದಾರೆ. ಶಿಕ್ಷಣಕ್ಕಾಗಿ ಪ್ರತಿ ವರ್ಷ ಕೋಟಿ ರೂಪಾಯಿ ಅನುದಾನ ನೀಡುವುದರೊಂದಿಗೆ ಎಸ್ಎಂ ಶೆಟ್ಟಿ ಮತ್ತು ಉನ್ನತ ಶಿಕ್ಷಣ ಯೋಜನೆಯ ಶಾಲೆಯಲ್ಲಿ ವಿವಿಧ ರೂಪದಲ್ಲಿ ಸುಮಾರು ಒಂದು ಕೋಟಿ ಸಹಕಾರವನ್ನು ನಮ್ಮ ಸಮಾಜದ ವಿದ್ಯಾರ್ಥಿಗಳಿಗೆ ನೀಡುತ್ತಾ ಬಂದಿದ್ದೇವೆ. ಸಂಘದಲ್ಲಿ ವಿದ್ಯಾರ್ಥಿಗಳಿಗಾಗಿ ವಿವಿಧ ಯೋಜನೆಗಳು ರೂಪುಗೊಂಡಿದೆ ಅದರ ಪ್ರಯೋಜನ ಪಡೆಯಬೇಕು. ಪ್ರತಿಭಾವಂತ ಮಕ್ಕಳ ಉತ್ತಮ ಭವಿಷ್ಯಕ್ಕೆ ನಮ್ಮ ಪ್ರೋತ್ಸಾಹ ಯಾವತ್ತೂ ಇದೆ. ಬೋರಿವಿಲಿ ಪರಿಸರದಲ್ಲಿ ಅತ್ಯುನ್ನತ ಮಟ್ಟದ ಶಿಕ್ಷಣ ನೀಡುವ ಶಿಕ್ಷಣ ಸಂಸ್ಥೆ ಈಗಾಗಲೇ ಪ್ರಾರಂಭಗೊಳ್ಳುವುದಕ್ಕೆ ಸರ್ವಸಿದ್ಧತೆ ಗೊಂಡಿದೆ ಇದಕ್ಕಾಗಿ ನಮ್ಮ ಸಮಾಜದ ಮಹಾದಾನಿಗಳು ಕೋಟ್ಯಾಂತರ ರೂಪಾಯಿ ದಾನ ರೂಪದಲ್ಲಿ ದೇಣಿಗೆ ನೀಡಿದ್ದಾರೆ. ಅವರೆಲ್ಲರ ಯೋಚನೆ ನಮ್ಮ ಸಮಾಜದ ಮಕ್ಕಳು ವಿದ್ಯಾವಂತರಾಗಬೇಕು, ಉನ್ನತ ಸ್ಥಾನಮಾನದಲ್ಲಿ ಸಮಾಜದಲ್ಲಿ ಗುರುತಿಸಬೇಕು ಎನ್ನುವುದು. ಆದ್ದರಿಂದ ಇಂದು ಪ್ರಯೋಜನ ಪಡೆದ ವಿದ್ಯಾರ್ಥಿಗಳೆಲ್ಲರೂ ಮುಂದೆ ಈ ಸಂಘವನ್ನು ಮುನ್ನಡೆಸುವ ಶಕ್ತಿವಂತರಾಗಬೇಕು ಮತ್ತು ನಾಯಕತ್ವದ ಗುಣವನ್ನು ಬೆಳೆಸಬೇಕು ಎಂದು ನುಡಿದರು.
ಕಾರ್ಯಕ್ರಮವನ್ನು ಉತ್ತರ ಮುಂಬಯಿ ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ್ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು. ಸಂಘದ ಬೋರಿವಿಲಿ ಶಿಕ್ಷಣ ಸಮಿತಿಯ ಕಾರ್ಯಧ್ಯಕ್ಷ ಡಾ. ಪಿ ವಿ ಶೆಟ್ಟಿಯವರು ಮಾತನಾಡುತ್ತಾ ಸಮಾಜದಲ್ಲಿರುವ ಹೆಚ್ಚಿನ ಗಣ್ಯ ವ್ಯಕ್ತಿಗಳು ತಳಮಟ್ಟದಿಂದ ಉನ್ನತ ಮಟ್ಟಕ್ಕೇರಿದವರು. ಜೀವನದಲ್ಲಿ ನಾವು ಸಾಧನೆ ಮಾಡಬೇಕಾದರೆ ನಾವು ಕಷ್ಟವನ್ನು ಅನುಭವಿಸಬೇಕಾಗುತ್ತದೆ. ಆಗ ಮಾತ್ರ ಉನ್ನತ ಮಟ್ಟಕೇರಲು ಸಾಧ್ಯ. ಮಕ್ಕಳ ಭವಿಷ್ಯದ ಬಗ್ಗೆ ಅವರ ಮನಸ್ಸಲ್ಲಿ ಮಹತ್ವಕಾಂಕ್ಷೆ ಇದ್ದಲ್ಲಿ ಅದು ಈಡೇರಲು ಸಾಧ್ಯ. ಮಕ್ಕಳ ಪೋಷಕರು ತಮ್ಮ ಹೆಚ್ಚಿನ ಸಮಯವನ್ನು ಮಕ್ಕಳೊಂದಿಗೆ ಕಳೆಯಬೇಕು. ಮಕ್ಕಳೊಂದಿಗೆ ಪಾಲಕರು ಸರಿಯಾಗಿ ಸಮಯ ಕಳೆಯುವುದರಿಂದ ಮಕ್ಕಳ ಬಗ್ಗೆ ಅವರಿಗೆ ಆಳವಾಗಿ ತಿಳಿಯಲು ಸಾಧ್ಯ ಶೈಕ್ಷಣಿಕ ಕ್ಷೇತ್ರದಲ್ಲಿ ಬಂಟರ ಸಂಘ ಮಕ್ಕಳಿಗೆ ಬಹಳಷ್ಟು ಪ್ರೋತ್ಸಾಹ ನೀಡುತ್ತಿದೆ. ಮಕ್ಕಳು ಸಮಯವನ್ನು ವ್ಯರ್ಥ ಮಾಡಬಾರದು. ದುಡ್ಡು ಕಳಕೊಂಡರು ನಂತರ ಸಂಪಾದಿಸಬಹುದು ಆದರೆ ಸಮಯವನ್ನು ಸಂಪಾದಿಸಲು ಅಸಾಧ್ಯ. ಸಮಯ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಸಹಕರಿಸುತ್ತದೆ ಎಂದರು.
ಸಂಘದ ಜೊತೆ ಕೋಶಾಧಿಕಾರಿ ಮುಂಡಪ್ಪ ಎಸ್. ಪಯ್ಯಡೆಯವರು ಮಕ್ಕಳಿಗೆ ಕಿವಿ ಮಾತನ್ನು ನೀಡುತ್ತಾ ದೇವರ ನಾಮ ಸ್ಮರಣೆಯಿಂದ ಹಾಗೂ ತಮ್ಮ ತಂದೆ ತಾಯಂದಿರ ಪಾದ ಸ್ಪರ್ಶ ಮಾಡುವುದರಿಂದ ಭಗವಂತನ ಆಶೀರ್ವಾದ ಸಿಗುತ್ತದೆ. ಮಕ್ಕಳು ಮೊಬೈಲನ್ನು ಮಿತಿಮೀರಿ ಉಪಯೋಗಿಸುದರಿಂದ ಶಿಕ್ಷಣಕ್ಕೆ ಮಾರಕವಾಗಬಹುದು. ಮಕ್ಕಳು ತಮ್ಮ ನೆನಪು ಶಕ್ತಿಯನ್ನು ಬೆಳೆಸಿಕೊಳ್ಳಬೇಕು. ಉತ್ತಮ ನಾಗರೀಕರಾಗಿ ಸಮಾಜ ಸೇವೆಯನ್ನು ಮಾಡಬೇಕು. ನಾವು ಯಾವುದನ್ನು ಹೇಳುತ್ತೇವೋ ಅದನ್ನು ನಡೆಸಬೇಕು ಮನುಷ್ಯ ಜನ್ಮ ಪುಣ್ಯಜನ್ಮ, ಬದುಕಿನಲ್ಲಿ ಜ್ಞಾನ, ಸಂಸ್ಕಾರ, ಚರಿತ್ರೆ, ವ್ಯವಹಾರ ಇದನ್ನು ಸದಾ ನೆನಪಿನಲ್ಲಿಡಬೇಕು. ವಿದ್ಯಾರ್ಥಿಗಳು ವಿದ್ಯಾವಂತರಾದ ಮೇಲೆ ಒಳ್ಳೆಯ ರೀತಿಯ ಸಂಪಾದನೆಗಳನ್ನು ಮಾಡಬೇಕು. ಇನ್ನೊಬ್ಬರಿಗೆ ಅನ್ಯಾಯ ಮಾಡಿ ಹಣ ಗಳಿಸಬಾರದು ಅದರಿಂದ ನಮ್ಮ ಪಾಪಗಳು ಹೆಚ್ಚಾಗುವುದು, ಮಾನಸಿಕ ಒತ್ತಡದ ಯಾವುದೇ ವಿದ್ಯೆಯನ್ನು ಕಲಿಯಬಾರದು. ವಿದ್ಯೆ ಕಲಿತ ಮೇಲೆ ಅಹಂಕಾರ ಪಡೆಯಬಾರದು, ಇನ್ನೊಬ್ಬರಿಗೆ ಉಪಯೋಗವಾಗುವ ರೀತಿಯಲ್ಲಿ ನಮ್ಮ ಬದುಕು ರೂಪುಗೊಳ್ಳಬೇಕು ಎಂದು ನುಡಿದರು.
ಸಂಘದ ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ಉಪ ಕಾರ್ಯಾಧ್ಯಕ್ಷ ಭಾಸ್ಕರ ಶೆಟ್ಟಿ ಕಾಂದೇಶ್ ಮಾತನಾಡಿ ಉನ್ನತ ಶಿಕ್ಷಣಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಸಂಘಕ್ಕೆ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿಯನ್ನು ಪಡೆದು ಅದನ್ನು ಅಚ್ಚುಕಟ್ಟಾಗಿ ಇಡುವ ಮೂಲಕ ಸಮಾಜದ ಅರ್ಹರಿಗೆ ಸಂಘದ ಸಹಾಯ ಸಿಗುವಲ್ಲಿ ನಮ್ಮ ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ಎಲ್ಲಾ ಕಾರ್ಯಕರ್ತರ ಕೆಲಸ ಪ್ರಶಂಸನೀಯ, ನಮ್ಮ ಸಮಾಜದ ವಿದ್ಯಾರ್ಥಿಗಳು ಇದೀಗ ವಿದ್ಯಾರ್ಥಿ ವೇತನ ಪಡೆಯುವುದಕ್ಕೆ ಕಡಿಮೆ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಬಂಟ ಸಮಾಜದಲ್ಲಿ ವಿದ್ಯಾರ್ಥಿ ವೇತನ ಪಡೆಯುವ ವಿದ್ಯಾರ್ಥಿಗಳು ಇಲ್ಲ ಎನ್ನುವಷ್ಟು ಸಮಾಜ ಬೆಳೆಯಬೇಕು ಎಂದರು.
ವೇದಿಕೆಯಲ್ಲಿ ಬಂಟರ ಸಂಘದ ಉಪಾಧ್ಯಕ್ಷ ಮುಂಡ್ಕೂರು ರತ್ನಾಕರ ಶೆಟ್ಟಿ, ಗೌ. ಪ್ರ. ಕಾರ್ಯದರ್ಶಿ ಡಾ. ಆರ್. ಕೆ. ಶೆಟ್ಟಿ, ಗೌ. ಮಹಿಳಾ ವಿಭಾಗದ ಕಾರ್ಯದರ್ಶಿ ಶಶಿಕಲಾ ಪೂಂಜ , ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯದರ್ಶಿ ಜಯ ಎ ಶೆಟ್ಟಿ ಶಿಮಂತೂರು, ಕೋಶಾಧಿಕಾರಿ ನವೀನ್ ಶೆಟ್ಟಿ ಇನ್ನಾ ಬಾಳಿಕೆ, ಪ್ರಾದೇಶಿಕ ಸಮಿತಿಯ ಮುಖ್ಯ ಸಲಹೆಗಾರ ಮನೋಹರ್ ಎನ್. ಶೆಟ್ಟಿ, ಸಲಹೆಗಾರರಾದ ವಿಜಯ ಆರ್. ಭಂಡಾರಿ, ಪ್ರಾದೇಶಿಕ ಸಮಿತಿಯ ಉಪ ಕಾರ್ಯಾಧ್ಯಕ್ಷ ಪ್ರೇಮನಾಥ್ ಶೆಟ್ಟಿ ಕೊಂಡಾಡಿ, ಕಾರ್ಯದರ್ಶಿ ಅಶೋಕ್ ವಿ. ಶೆಟ್ಟಿ, ಕೋಶಾಧಿಕಾರಿ ಗಂಗಾಧರ ಎ. ಶೆಟ್ಟಿ, ಜೊತೆ ಕಾರ್ಯದರ್ಶಿ ರಘುನಾಥ್ ಎನ್. ಶೆಟ್ಟಿ, ಜೊತೆ ಕೋಶಾಧಿಕಾರಿ ಅವಿನಾಶ್ ಎಮ್ ಶೆಟ್ಟಿ, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಸುನಿತಾ ಎನ್ ಹೆಗ್ಡೆ, ಸಲಹೆಗಾರ ವಿನೋದ ಎ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಧೀರಜ್ ಡಿ. ರೈ ಹಾಗೂ ಪ್ರಾದೇಶಿಕ ಸಮಿತಿಯ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಪ್ರವೀಣ್ ಜೆ. ಶೆಟ್ಟಿ ಉಪಸ್ಥಿತರಿದ್ದರು.
ಸಮಿತಿಯ ಕಾರ್ಯಾಧ್ಯಕ್ಷರಾದ ನಿಟ್ಟೆ ಎಮ್. ಜಿ. ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಅಶೋಕ್ ಶೆಟ್ಟಿ (ಎಲ್ಐಸಿ) ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಮಾರ್ಗ ಸೂಚಿಗಳನ್ನು ತಿಳಿಸಿದರು, ಸಮಿತಿಯ ಜೊತೆ ಕಾರ್ಯದರ್ಶಿ ರಘುನಾಥ್ ಎನ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮವನ್ನು ನಿರೂಪಿಸಿದರು ಪ್ರವೀಣ್ ಜೆ. ಶೆಟ್ಟಿ ಧನ್ಯವಾದ ನೀಡಿದರು. ರಜನಿ ಆರ್ ಶೆಟ್ಟಿ ಪ್ರಾರ್ಥನೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಸುಮಾರು 254ಕ್ಕೂ ಅಧಿಕ ವಿದ್ಯಾರ್ಥಿಗಳು, ವಿಕಲ ಚೇತನರು ಹಾಗೂ ವಿಧವೆಯರು ಬಂಟರ ಸಂಘದ ಸಹಾಯ ಧನವನ್ನು ಸ್ವೀಕರಿಸಿದರು.
ವರದಿ, ಚಿತ್ರ : ದಿನೇಶ್ ಕುಲಾಲ್