ಮಲಗಿರುವಾಗ ಮತ್ತು ಹಠಾತ್ತನೆ ಎದ್ದು ನಿಂತಾಗ ಅಥವಾ ಫಕ್ಕನೆ ತಲೆ ಮೇಲೆತ್ತಿ ನೋಡಿದಾಗ ಯಾ ಬಾಗಿದಾಗ ತಲೆ ತಿರುಗಿದ ಅನುಭವ ನಮ್ಮಲ್ಲಿ ಅನೇಕರಿಗೆ ಆಗಿರುತ್ತದೆ. ಪ್ರತೀ ಬಾರಿಯೂ ಹೀಗಾದರೆ ಪರಿಹಾರ ಏನು? ಸಮತೋಲನ ಕಳೆದುಕೊಂಡ ಹಾಗೆ, ತಲೆ ಹಗುರವಾದ ಹಾಗೆ ಅಥವಾ ಇಡೀ ಕೋಣೆ ನಿಮ್ಮ ಸುತ್ತ ಸುತ್ತುತ್ತಿರುವ ಹಾಗೆ ಅನುಭವವಾದರೆ ಏನು ಮಾಡಬೇಕು? ಈ ಲಕ್ಷಣಗಳೆಲ್ಲ ಹಠಾತ್ತನೆ ಅನುಭವಕ್ಕೆ ಬಂದಾಗ ನೂರು ಪ್ರಶ್ನೆಗಳು ಮನಸ್ಸಿನಲ್ಲಿ ಉದ್ಭವಿಸುತ್ತವೆ.
ಏಕೆ ಹೀಗಾಗುತ್ತದೆ?
ತಲೆ ತಿರುಗುವಿಕೆಯು ವರ್ಟಿಗೊ, ಮೂರ್ಛೆ ತಪ್ಪುವುದು, ದೈಹಿಕ ಸಮತೋಲನ ಕಡಿಮೆಯಾಗಿರುವುದು ಅಥವಾ ಮೂರ್ಛೆ ರೋಗ/ ಸೆಳವಿನಿಂದ ಆಗಿರಬಹುದು. ವರ್ಟಿಗೊ ಎಂದರೆ ತಲೆ ತಿರುಗುವಿಕೆಯ ಒಂದು ವಿಧವಾಗಿದ್ದು, ಇಡೀ ಜಗತ್ತು ವೇಗವಾಗಿ ಸುತ್ತುತ್ತಿರುವ ಅನುಭವ ಉಂಟಾಗುತ್ತದೆ. ಇದರ ಇನ್ನಿತರ ಲಕ್ಷಣಗಳಲ್ಲಿ ದೇಹಭಂಗಿಗಳಲ್ಲಿ ಅಸ್ಥಿರತೆ, ಚಳಿ ಹಿಡಿಯುವುದು, ಹೊಟ್ಟೆ ತೊಳೆಸುವಿಕೆ ಮತ್ತು ವಾಂತಿ ಸೇರಿರುತ್ತವೆ. ಈ ಲಕ್ಷಣಗಳು ಕೆಲವು ಸೆಕೆಂಡುಗಳಿಂದ ತೊಡಗಿ ಕೆಲವು ದಿನಗಳ ವರೆಗೆ ಇರಬಹುದು ಮತ್ತು ಚಲಿಸಿದಾಗ ಇನ್ನಷ್ಟು ಉಲ್ಬಣಗೊಳ್ಳಬಹುದು. ನಮ್ಮ ಕಿವಿಯ ಒಳಭಾಗದಲ್ಲಿರುವ ವೆಸ್ಟಿಬ್ಯುಲಾರ್ ವ್ಯವಸ್ಥೆಯ ಕಾಯಿಲೆಗಳಿಂದ ಸಾಮಾನ್ಯವಾಗಿ ವರ್ಟಿಗೊ ಉಂಟಾಗುತ್ತದೆ. ಕಿವಿಯ ಒಳಭಾಗದಲ್ಲಿರುವ ವೆಸ್ಟಿಬ್ಯುಲಾರ್ ವ್ಯವಸ್ಥೆಯು ನಮ್ಮ ದೇಹಕ್ಕೆ ಸಂವಾದಿಯಾಗಿ ತಲೆಯ ಸ್ಥಾನವನ್ನು ಗ್ರಹಿಸಲು ಮಿದುಳಿಗೆ ಸಹಾಯ ಮಾಡುತ್ತದೆ ಮತ್ತು ದೇಹದ ಭಂಗಿಯನ್ನು ನಿಭಾಯಿಸುವುದಕ್ಕೆ ಮಿದುಳಿನ ಜತೆಗೆ ಸಂಯೋಜಿತವಾಗಿ ಕಾರ್ಯನಿರ್ವಹಿಸುತ್ತದೆ. ವೆಸ್ಟಿಬ್ಯುಲಾರ್ ನರ ಅಥವಾ ದೈಹಿಕ ಸಮತೋಲನಕ್ಕೆ ಸಂಬಂಧಿಸಿದ ಮಿದುಳಿನ ಭಾಗಗಳಿಗೆ ಸಂಬಂಧಿಸಿದ ಅನಾರೋಗ್ಯಗಳಿಂದ ವರ್ಟಿಗೊ ಉಂಟಾಗುತ್ತದೆ.
ಇದಕ್ಕೆ ಏನು ಕಾರಣ? ಈ ಸಮಸ್ಯೆ ಎಷ್ಟು ದೊಡ್ಡದು?
ತಲೆ ತಿರುಗುವುದಕ್ಕೆ ಸಂಭಾವ್ಯ ಕಾರಣಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ದೇಹದ ಸಮತೋಲನ ವ್ಯವಸ್ಥೆಯ ಪ್ರಾಥಮಿಕ ಅರಿವು ಹೊಂದಿರುವುದು ಅಗತ್ಯ. ಒಳಗಿವಿ ಮತ್ತು ಅದನ್ನು ಸಂಪರ್ಕಿಸುವ ನರಗಳಿಗೆ ಸಂಬಂಧಿಸಿದ ಅನಾರೋಗ್ಯಗಳು ಗಂಭೀರವೇನೂ ಅಲ್ಲ ಎಂಬ ತಪ್ಪು ಕಲ್ಪನೆ ಜನರಲ್ಲಿದೆ.
ಇದಕ್ಕೆ ಸಾಮಾನ್ಯವಾಗಿ ಆಡಿಯಾಲಜಿಸ್ಟ್ಗಳು ಕೌಶಲ, ವೆಸ್ಟಿಬ್ಯುಲಾರ್ ಪುನರ್ಸ್ಥಾಪನೆ ವ್ಯಾಯಾಮಗಳು ಮತ್ತು ಆಹಾರ ಪದ್ಧತಿಯಲ್ಲಿ ಬದಲಾವಣೆಗಳ ಮೂಲಕ ಚಿಕಿತ್ಸೆ ನೀಡುತ್ತಾರೆ. ಕೆಲವೊಮ್ಮೆ ಇದಕ್ಕೆ ಕಾರಣಗಳು ಹೆಚ್ಚು ಗಂಭೀರ, ಪ್ರಾಣಾಪಾಯಕಾರಿ ಅಥವಾ ಗಂಭೀರವಲ್ಲದೆ ಇರಬಹುದು. ಪರಿಣತ ವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ. ಅದೃಷ್ಟವಶಾತ್ ಬಹುತೇಕ ವಿಧದ ತಲೆ ತಿರುಗುವಿಕೆಗಳಿಗೆ ಪರಿಣಾಮಕಾರಿ ಚಿಕಿತ್ಸೆಗಳು ಲಭ್ಯವಿವೆ. ಮಿದುಳಿನ ಸೋಂಕು, ತೀವ್ರ ತರಹದ ತಲೆನೋವು, ಸತತ ವಾಂತಿ ಮತ್ತು ದೈಹಿಕ ಅಸಮತೋಲನ, ವಸ್ತುಗಳು ಎರಡೆರಡಾಗಿ ಕಾಣಿಸುವುದು, ದೃಷ್ಟಿ ಸಮಸ್ಯೆಗಳು, ಶ್ರವಣ ಶಕ್ತಿ ಹಠಾತ್ ನಷ್ಟವಾಗುವುದು ಅಥವಾ ಜೋಮು ಹಿಡಿಯುವಂತಹ ಲಕ್ವಾದ ಪ್ರಾಥಮಿಕ ಲಕ್ಷಣಗಳಿದ್ದರೆ ತತ್ಕ್ಷಣ ವೈದ್ಯಕೀಯ ನೆರವು ಪಡೆಯಬೇಕು.