ತುಳುವರ ಆದಿಮೂಲದ ದೈವ ಬೆರ್ಮೆರ್ ಯಾರು? ದೇವರು ಹಾಗೂ ದೇವೆರ್ ಎಂಬ ಎರಡೂ ಪದಗಳೂ ಸಂಸ್ಕೃತ ಜನ್ಯ. ಹಾಗಿದ್ದರೆ ತುಳುವರು ದೇವ ಅಥವಾ ದೇವರು ಎಂಬ ಪದಕ್ಕೆ ಸಂವಾದಿಯಾಗಿ ಯಾವ ಪದವನ್ನು ಬಳಸುತ್ತಿದ್ದರು? ಮತ್ತು ಅದ್ಯಾಕೆ ದಿನಬಳಕೆಯಲ್ಲಿ ಇಲ್ಲ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಎಂದರೆ ತುಳುನಾಡಿನ ಅದಿಮೂಲದ ದೈವ ಯಾವುದು ಎಂಬ ಪ್ರಶ್ನೆಗೆ ಉತ್ತರ ಹುಡುಕುವುದೇ ಆಗಿದೆ. ನನ್ನ ಊರು ಐವರ್ನಾಡಿನಲ್ಲಿ ಇರುವ ಎರಡು ಪ್ರದೇಶಗಳ ಹೆಸರು ಸ್ಥಳನಾಮೆಗಳ ಬಗ್ಗೆ ಓದುವಾಗ ಕುತೂಹಲವನ್ನು ಮೂಡಿಸಿದ್ದವು. ಬಿರ್ಮುಕಜೆ ಮತ್ತು ಬೆಮ್ಮಿತ್ತಿಕಂಡ. ಈ ಎರಡೂ ಪದಗಳನ್ನು ಸರಳವಾಗಿ ನಾವು ಬಿಡಿಸಬಹುದು.
ಬಿರ್ಮುಕಜೆ – ಬಿರ್ಮರೆ ಕಜೆ
ಬೆಮ್ಮಿತ್ತಿಕಂಡ – ಬೆರ್ಮೆರ್ ಇತ್ತಿ ಕಂಡ.
ಈ ಎರಡೂ ಪ್ರದೇಶಗಳೂ ಬೆರ್ಮೆರ್ ಎಂಬ ದೈವದ ನೆಲೆಗಳೇ ಅಗಿವೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಈ ಎರಡೂ ಪ್ರದೇಶಗಳಲ್ಲಿ ಈಗ ಬೆರ್ಮೆರ್ ಗೆ ಸಂಬಂಧಿಸಿದ ಆಚರಣೆಗಳು ನಡೆಯುತ್ತಿಲ್ಲ. ಹಾಗಾದರೆ ಈ ಬೆರ್ಮೆರ್ ಎಲ್ಲಿ ಹೋದರು?
ಬೆರ್ಮೆರ್ ಅಥವಾ ಬಿರ್ಮೆರ್ ಎಂಬ ಎರಡೂ ಬಳಕೆಗಳು ಜಾನಪದರಲ್ಲಿ ಇವೆ. ಬೆರ್ಮೆರ್ ವೇದಗಳ ಚತುರ್ಮುಖ ಬ್ರಹ್ಮನಲ್ಲ. ಅಲ್ಲದೇ ಸಂಸ್ಕೃತದ ಬ್ರಹ್ಮ ಎಂಬ ಪದದಿಂದ. ಬೆರ್ಮೆರ್ ಪದ ಹುಟ್ಟಿಲ್ಲ. ಕಾಲಾಂತರದಲ್ಲಿ ಬೆರ್ಮೆರ್ ಅನ್ನು ವೈದಿಕ ಬ್ರಹ್ಮನೊಂದಿಗೆ ಸಮೀಕರಿಸಿ, ನಾಗ ಹಾಗೂ ಬೆರ್ಮೆರ್ ಇಬ್ಬರ ಅಬೇಧ್ಯ ಸಂಬಂಧವನ್ನು ವೈದಿಕ ಪುರಾಣಗಳ ಜೊತೆಗೆ ಜೋಡಿಸಿ ಬೆರ್ಮೆರ ಎಲ್ಲಾ ನೆಲೆಗಳನ್ನೂ ಸ್ಥಿತ್ಯಂತರಗೊಳಿಸಲಾಗಿದೆ. ಹೀಗಾಗಿ ಬರ್ಮೇರ ಅಲಡೆಗಳು ಬ್ರಹ್ಮಸ್ಥಾನಗಳಾಗಿಸಲಾಗಿದೆ. ಶಿವಾಲಯಗಳಾಗಿ ಮಾರ್ಪಟ್ಟ ನೆಲೆಗಳು ಬ್ರಹ್ಮಲಿಂಗೇಶ್ವರ ದೇವಾಲಯಗಳಾಗಿವೆ. ಆರಂಭದಲ್ಲಿಯೇ ನಾವು ವೈದಿಕ ಬ್ರಹ್ಮ ಹಾಗೂ ಬೆರ್ಮೆರ್ ಗೆ ಯಾವುದೇ ಸಂಬಂಧ ಇಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.
“ಕೆಲವೊಂದು ತುಳುಶಾಸನಗಳಲ್ಲಿ ಬ್ರಹ್ಮನನ್ನು ದೇವರೆಂದು ಉಲ್ಲೇಖಿಸಿದ್ದು, ಆದರೆ ಬಹಳ ವಿಚಿತ್ರ ಎನ್ನುವಂತೆ ಅವನನ್ನು ಭೂತಗಳ ಸಾಲಿಗೆ ಸೇರಿಸಿವೆ. ನಾಗನನ್ನು ಬ್ರಹ್ಮನೊಂದಿಗೆ ಅವಿಭಾಜ್ಯವಾಗಿ ಸಂಗಡಿಸಲಾಗಿದೆ. ನಾಗ ಹಾಗೂ ಬ್ರಹ್ಮನಿಗೆ ಹಾಲು ನೈವೇದ್ಯ ಮಾಡಿದ ಪ್ರಸಂಗದ ವಿವರಣೆ ಶಾಸನವೊಂದರಲ್ಲಿ ಸಿಗುತ್ತದೆ”(ಪಾದೂರು ಗುರುರಾಜ ಭಟ್ಟ, 1975)
ಹಾಗಾದರೆ ಈ ಬೆರ್ಮೆರ್ ಯಾರು? ಬೆರ್ಮೆರ್ ಎಂಬ ಪದ ಹೇಗೆ ಹುಟ್ಟಿತು?
ತಮಿಳಿನಲ್ಲಿ ಸಾಮಾನ್ಯವಾಗಿ ಎಲ್ಲಾ ದೇವರ ಹೆಸರಿನ ಜೊತೆಗೆ ಪೆರುಮಾಳ್ ಎಂಬ ಹೆಸರೂ ಇರುತ್ತದೆ. ವರದರಾಜ ಪೆರುಮಾಳ್ ಕೋಯಿಲ್, ವೈಕುಂದ ಪೆರುಮಾಳ್ ದೇವಸ್ಥಾನ, ಚೆನ್ರಾಯ ಪೆರುಮಾಳ್ ದೇವಸ್ಥಾನ, ಗೋವಿಂದರಾಜ ಪೆರುಮಾಳ್, ಕರಕಾಟು ಪೆರುಮಾಳ್, ನಿರಕಾಟು ಪೆರುಮಾಳ್, ಇತ್ಯಾದಿ. ಇಲ್ಲಿ ಪೆರುಮಾಳ್ ಎಂಬ ಹೆಸರು ದೇವರು ಎಂಬ ಅರ್ಥದಲ್ಲಿ ಬಳಕೆಯಾಗಿದೆ.
ಅನೇಕ ಬಾರಿ ಪೆರುಮಾಳ್ ಎಂಬ ಹೆಸರು ವೈಷ್ಣವ ದೇವತೆಗಳನ್ನು ಪ್ರತಿನಿಧಿಸುತ್ತವೆ. ತಮಿಳು ಸಂತ, ಕವಿ ಕೌಮಾರಂ ಪರಂಪರೆಯ ಅರುಣಗಿರಿನಾಥರ್ (ಸಾ.ಶ 1370- 1450) ತನ್ನ ತಿರುಪ್ಪುಗಳ್ ಭಕ್ತಿ ಕಾವ್ಯದಲ್ಲಿ ಮುರುಗನ್ ಅಂದರೆ ಸ್ಕಂದನನ್ನು ಪೆರುಮಾಳ್ ಎಂದು ಕರೆದಿದ್ದಾನೆ. ತಮಿಳಿನಲ್ಲಿ ಪೆರುಮಾಳ್ ಎಂದರೆ ಯಾವುದೇ ನಿರ್ಧಿಷ್ಟ ದೇವತೆಯಾಗಿರದೆ ಎಲ್ಲಾ ದೇವರನ್ನೂ ಪೆರುಮಾಳ್ ಎಂದೇ ಕರೆಯಲಾಗಿದೆ. ಆದರೆ ಬೇರೆ ಬೇರೆ ಕಾಲಘಟ್ಟದಲ್ಲಿ ಉಚ್ಛ್ರಾಯದಲ್ಲಿ ಇದ್ದ ದೇವತೆಗಳು ಪೆರುಮಾಳ್ ಎಂದೇ ಕರೆಸಿಕೊಂಡಿದ್ದಾರೆ. ಆಯಾಯ ಪಂಥಗಳ, ಮತಗಳ ಮೂಲ ದೇವರು ಅವರಿಗೆ ಪೆರುಮಾಳ್ ಆಗಿದ್ದಾರೆ.
ಪೆರುಮ+ ಆಳ್ – ಪೆರುಮಾಳ್
ಪೆರುಮ , ಪೆರಿಯ ಇವೆಲ್ಲವೂ ಹಿರಿಯ, ದೊಡ್ಡ, ಶ್ರೇಷ್ಠವಾದ ಎಂಬ ಅರ್ಥದಲ್ಲಿ ಬಳಕೆಯಾಗಿವೆ. ಅಳ್ ಎಂದರೆ ವ್ಯಕ್ತಿ ಎಂದರ್ಥ. ಹಿರಿಯ ವ್ಯಕ್ತಿಯೇ ಪೆರುಮಾಳ್. ಅದು ದೇವರೇ ಇರಬಹದು, ರಾಜನಿರಬಹುದು ಅಥವಾ ಕುಟುಂಬದ ಹಿರಿಯ ವ್ಯಕ್ತಿ ಇರಬಹುದು. ಯಾರು ನಮ್ಮೆಲ್ಲರಿಗೂ ಹಿರಿಯನೋ ಅವನು ಪೆರುಮಾಳ್. ಇದೇ ಅರ್ಥ, ಭಾವವನ್ನು ತುಳುನಾಡಿನ ಬೆರ್ಮೆರ್ ಗೆ ಕೂಡ ಸಲ್ಲುತ್ತದೆ. ಬೆರ್ಮೆ+ ಆರ್- ಬೆರ್ಮೆರ್, ಬೆರ್ಮ ಎಂದರೆ ಹಿರಿಯ ಎಂದು ಅರ್ಥ. ಹೀಗಾಗಿ ಬೆರ್ಮೆರ್, ಪೆರುಮಾಳ್ ಇವು ದ್ರಾವಿಡ ಭಾಷಾ ವರ್ಗದಲ್ಲಿ ದೇವರು ಎಂದೇ ಅರ್ಥ. ಬೆರ್ಮೆರ್ ಎಂದರೆ ಅದಿ ಮೂಲದ ದೇವರಾದರೆ ನಂತರ ಹುಟ್ಟಿಕೊಂಡ ದೈವಗಳಿಗೆ ಬೇರೆ ಬೇರೆ ಹೆಸರು ಇಡಲಾಗಿದೆ. ಇವೆಲ್ಲವನ್ನೂ ಬೆರ್ಮೆರ್ ಎಂದು ಕರೆಯಲಾಗಿಲ್ಲ. ತಮಿಳಿನಲ್ಲಿ ಮುರುಗನ್ ಪೆರುಮಾಳ್ ಇದ್ದಂತೆ ತುಳುವರು ಪಂಜುರ್ಲಿ ಬೆರ್ಮೆರ್ ಎಂದು ಕರೆಯುವುದಿಲ್ಲ. ಹಾಗಾಗಿ ಬೆರ್ಮೆರ್ ಎಂದರೆ ಅದಿಯಲ್ಲಿ ಇದ್ದ ದೇವರು.
ತುಳುನಾಡಿನ ಪೂರ್ವಕ್ಕೆ ಇರುವ ಪಶ್ಚಿಮ ಘಟ್ಟದ ಸಾಲುಗಳು ಮತ್ತು ಸಮೃದ್ಧವಾದ ಹಸಿರು ಹಾವುಗಳ ವಾಸಕ್ಕೆ ಪೂರಕವಾಗಿದೆ. ಸರ್ಪಗಳು ವಿಷಕಾರಿ ಮಾತ್ರವಲ್ಲ, ಪಾದಗಳಿಲ್ಲದೆ ನೀರಿನ ತೊರೆಗಳಂತೆ ಹರಿದು ಹೋಗುವುದು ಭಯಾನಕತೆಯನ್ನು ಸೃಷ್ಟಿಸಿದಂತೆ ತೋರುತ್ತದೆ. ಹೀಗಾಗಿ ನಾಗನನ್ನು ಆರಾಧಿಸಲು ಆರಂಭಿಸಿದರು. ಜಗತ್ತಿನ ಬಹುತೇಕ ನಾಗಾರಾಧನೆ ಇದೇ ಹಿನ್ನಲೆಯನ್ನು ಹೊಂದಿವೆ. ಸರ್ಪಗಳ ಕಡಿತದಿಂದ ಸಂಭವಿಸುವ ಸಾವು ಭಯಾನಕ. ಹೀಗಾಗಿ ಸರ್ಪಗಳನ್ನು ಸಂತೈಸಲು ಅವುಗಳನ್ನು ಅರಾಧಿಸಲಾಯಿತು.
ಬಹುಶಃ ಆರಂಭದಲ್ಲಿ ನೀರು ಮತ್ತು ಸರ್ಪಗಳನ್ನು ಆರಾಧಿಸುತ್ತಿದ್ದರು ಎಂದು ತೋರುತ್ತದೆ. ಕಾಶ್ಮೀರವನ್ನು ಕರ್ಕೊಟಕ ನಾಗಾ ವಂಶವು ಕ್ರಿ.ಶ ೭-೮ ನೇ ಶತಮಾನದಲ್ಲಿ ಆಳಿದ್ದಾರೆ. ಉತ್ತರ ಪ್ರದೇಶದಲ್ಲಿ ಇರುವ ಅಹಿಚ್ಛತ್ರ ನಾಗ ಜನರ ಪ್ರದೇಶ. ಇವರನ್ನು ಸಮುದ್ರಗುಪ್ತ ಸೋಲಿಸಿದ. ಚುಟು ವಂಶೀಯರು ಆಳಿದ ನಾಗರಖಂಡ ಬನವಾಸಿಯಲ್ಲಿದೆ. ಇಲ್ಲಿ ನಾಗ ಎಂದರೆ ಸರ್ಪವಲ್ಲ. ನಾಗ ಎಂದರೆ ಒಂದು ಜನಾಂಗ. ತುಳುನಾಡನ್ನು ನಾಗರ ಲೋಕ ಎಂದೂ ಕರೆಯುತ್ತಾರೆ. ತುಳುನಾಡಿನಲ್ಲಿ ನಾಗಾರಾಧನೆ ಮುಖ್ಯವಾದ ಆಚರಣೆ. ಅದಿ ತುಳುವರಲ್ಲಿ ನಾಗನೇ ಮೂಲ ದೇವತೆಗಳಲ್ಲಿ ಒಬ್ಬ ಇರಬೇಕು. ಹೀಗಾಗಿ ನಾಗನೂ ಬೆರ್ಮೆರ್ ಆಗಿರುವುದರಿಂದ ಬೆರ್ಮೆರ ಸ್ಥಾನಗಳು ನಾಗ ಸಾನಿಧ್ಯಗಳೇ ಆಗಿವೆ. ಹೀಗಾಗಿ ಬೆರ್ಮೆರ್ ಜೊತೆ ನಾಗ ಹೆಚ್ಚಿನ ಸಂದರ್ಭಗಳಲ್ಲಿ ತಲುಕುಹಾಕಿಕೊಂಡಿದ್ದಾನೆ. ಹೀಗಾಗಿ ತುಳುನಾಡಿನಾದ್ಯಂತ ನಾಗಬ್ರಹ್ಮರ (ವೈದಿಕರಿಂದ ಮರುನಾಮಕರಣಗೊಂಡು) ಸಾನಿಧ್ಯಗಳನ್ನು ಕಾಣಬಹುದು.
ಹೀಗಾಗಿ ಬೆರ್ಮೆರ್ ಮತ್ತು ನಾಗ ಇವೆರಡೂ ಅವೈದಿಕ ದೇವತೆಗಳು. “ನಾಗ ಎಂಬ ಶಬ್ದವಾಗಲೀ, ನಾಗ (ಸರ್ಪ) ಪೂಜೆಯಾಗಲೀ ವೇದಗಳಲ್ಲಿ ಅಥವಾ ಬ್ರಾಹ್ಮಣದಲ್ಲಿ ಹೇಳಿಲ್ಲ”(ಗೋವಿಂದ ಪೈ, 570, ೧೯೪೭) ತುಳುನಾಡಿನ ಪ್ರಪ್ರಥಮ ಅರಸರು ಅಲುಪರು. ಸಿರಿ ಪಾಡ್ದನದಲ್ಲಿ ಬರುವ ಸಿರಿಯ ಅಜ್ಜ ಬೆರ್ಮ ಆಳ್ವೆರ್ ಎಂಬುದು ಹಿರಿಯ ಅರಸ (ಬೆರ್ – ಪೆರ್= ಹಿರಿಯ ಆಳ್ವೆರ್ = ಅರಸ) ಎಂದೇ ಆಗಿದೆ. “ಬೆಳ್ಮಣ್ ನ ತಾಮ್ರ ಶಾಸನ (8 ನೇ ಶತಮಾನ) ಸಿರಿ ಆರಾಧನೆಯ ಪರಿಸರಕ್ಕೆ ಸಮೀಪವಾಗಿದೆ. ಈ ಶಾಸನದಲ್ಲಿ ಹೀಗೆ ಬರೆಯಲಾಗಿದೆ – ‘ ಬ್ರಹ್ಮನಿಂದ ರಕ್ಷಿತವಾದ ಕುಲದಲ್ಲಿ ಅಭಿಮಾನವುಳ್ಳ ಶ್ರೀಮದಾಳುವರಸ…..’ (ಪಾದೂರು ಗುರುರಾಜ ಭಟ್ಟ, 1975) ಈ ಪ್ರದೇಶಗಳ ಆಳುಪ ಅರಸರು ಕ್ರಿ.ಶ. 14 ನೇ ಶತಮಾನದ ವರೆಗೆ ಆಳಿದ್ದಾರೆ. ಸಿರಿ ಪಾಡ್ದನದಲ್ಲಿ ಬರುವ ಬೆರ್ಮ ಆಳ್ವೆರ್ ಒಂದು ಸಾಹಿತ್ಯಿಕ ಅರ್ಥ ಇರುವ ಹೆಸರು (ಪೀಟರ್ ಜೇ ಕ್ಲಾಸ್, 525, ೨೦೦೭)
ಬೆರ್ಮ ಆಳ್ವೆರ್ ಎಂಬುದು ಸಾಂಕೇತಿಕವಾಗಿ ಮೂಲ ಪುರುಷ ಅಥವಾ ಅರಸನ್ನೇ ಸಂಕೇತಿಸಿಲಾಗಿದೆ. ಬೆರ್ಮೆರ್ ಎಂಬವ ಒಬ್ಬ ಕುಲದ ಮೂಲ ಪುರುಷ, ಒಡೆಯ, ಅರಸನೇ ಆಗಿರಬೇಕು.
ಬೆರ್ಮೆರ್ ಅರಸನೇ?
ಬೆರ್ಮೆರ್ ಸ್ಥಾನವನ್ನು ಆಲಡೆ, ಅಥವಾ ಸಿಂಗ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಅಲಡೆಗಳು ಸಮೃದ್ಧ ನೀರು ಇರುವ ಜಾಗಗಳಲ್ಲಿ ಇರುತ್ತವೆ.
“ಪ್ರಾಯಶಃ ಇದೇ ‘ಆರ್’ ಸಂಬಂಧಿಸಿದ ಪದಗಳಾಗಿರಬೇಕು – ಆಲುಪ, ಆಳ್ವ, ಅನೂಪ (ಸಂ.ಜಲಭರಿತವಾದ ಭೂಮಿ) ಆಳುಪ ಮುಂತಾದ ರೂಪಗಳು…….. ಆಲಂಪುರ ಹಳೆಯ ಹೈದರಾಬಾದ್ ಸಂಸ್ಥಾನದ ರಾಯಚೂರು ಜಿಲ್ಲೆಯ ನಂದಿಕೋಟಿಕೂರು ತಾಲೂಕಿನಲ್ಲಿದ್ದ ಊರು. ಇಲ್ಲಿ ನವಬ್ರಹ್ಮಶ್ವರ ಮಂದಿರ ಸಮೂಹವೇ ಇಲ್ಲಿಯ ಪ್ರಮುಖ ಇಲ್ಲಿಯ ಮಧ್ಯಭಾಗದಲ್ಲಿರುವ ಬಾಲಬ್ರಹೇಶ್ವರನ ಮಂದಿರ ಪ್ರಮುಖವಾಗಿದೆ. ಉಳಿದ ಅಪ್ಪ ಶಿವಮಂದಿರಗಳೆಂದರೆ ‘ಕುಮಾರ ಬ್ರಹ್ಮ, ಅರ್ಕ ಬ್ರಹ್ಮ, ವೀರ ಬ್ರಹ್ಮ, ವಿಶ್ವ ಬ್ರಹ್ಮ, ತಾರಕ ಬ್ರಹ್ಮ, ಗರುಡ ಬ್ರಹ್ಮ, ಸ್ವರ್ಗ ಬ್ರಹ್ಮ, ಮತ್ತು ಪದ್ಮ ಬ್ರಹ್ಮ ಬಾಲ, ಬ್ರಹ್ಮಶ್ವರನನ್ನು ಬರಿಯ ಬ್ರಹ್ಮಶ್ವರ ಎಂದೂ ಕರೆಯಲಾಗುತ್ತದೆ. ಈ ಶಿವ ಮಂದಿರದಿಂದಾಗಿ ಆಲಂಪುರಕ್ಕೆ ಬ್ರಹ್ಮಶ್ವರ ಕ್ಷೇತ್ರ ಅಥವಾ ನವಬ್ರಹೇಶ್ವರ ಕ್ಷೇತ್ರ ಎಂಬ ಮತ್ತೊಂದು ಅಭಿದಾನವೂ ಪ್ರಾಪ್ತವಾಗಿದೆ.” (ಕೆಮ್ತೂರು ರಘುಪತಿ ಭಟ್ಟ, ೩೯)
” ಕ್ಷೇತ್ರದ ಬಳಿ ಸಮೀಪ ‘ಬೀಡು’ ಎನ್ನುವ ಆಲಡೆ ಮನೆಗಳಿವೆ. ಇಲ್ಲಿ ಪಟ್ಟಾಭಿಷೇಕ ಆಗುವ ಪದ್ಧತಿ ಇದೆ. ಈ ಪಟ್ಟಾಭಿಷೇಕದಲ್ಲಿ ಅಜಲಿನ ಎಲ್ಲಾ ಜಾತಿಗಳು ಹಾಜರಿರುತ್ತಾರೆ. ಹೀಗೆ ಈ ಕ್ಷೇತ್ರ ಆಳುವ ಎಡೆಯೂ ಆಗಿದೆ. ಮಾನವ ಶಾಸ್ತ್ರಜ್ಞರ ಪ್ರಕಾರ ಬುಡಗಟ್ಟು ಒಂದು ರಾಜಕೀಯ ಘಟಕವೂ ಆಗಿದೆ. ಬೀಡು ಎಂಬುದು ಆಲಡೆಯ ರಾಜಕೀಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಗಳನ್ನು ನಿರ್ದೇಶಿಸುವ ನಾಯಕನ ಮನೆ, ಆಲಡೆ, ಮನೆಯ ಆಳುವ ವ್ಯಕ್ತಿಯ ಪಟ್ಟಾಭಿಷೇಕದಲ್ಲಿ ಪಡೆಯುವ ಹೆಸರು ಅರ್ಥಾತ್ ಪಟ್ಟದ ಆಳುವ ನಾಮ ಪರಂಪರೆಯಿಂದ ಬದಲಾಗದೆ ಮುಂದುವರಿದಿದೆ ಎಂಬ ಗ್ರಹಿಕೆ ಇದೆ. ಈ ಹೆಸರನ್ನು ಆಲಯದ ಪುದರ್ ಎನ್ನುತ್ತಾರೆ. ನೀರು ಇರುವ ಎಡೆಯನ್ನು ಜನರು ವಾಸದ ಎಡೆಯನ್ನಾಗಿ ಆರಿಸಿದ, ಯಾವುದೇ ಬುಡಕಟ್ಟುಗಳ ಆಳ್ವಿಕೆಯಲ್ಲೂ ಆಳುವ ನಾಯಕ ಇರುತ್ತಾನೆ” (ಇಂದಿರಾ ಹೆಗ್ಡೆ,೪೦, ೨೦೧೨)
ಬೆರ್ಮೆರ್ ಸ್ಥಾನವನ್ನು ಆಲಡೆ ಹಾಗೂ ಸಿಂಗ ಎಂದು ಕರೆಯುತ್ತಾರೆ. ತುಳುವರು ತಮ್ಮ ಪಿತೃ ಪೂಜೆ ಮಾಡಲು ತಮ್ಮ ಮೂಲತಾನಕ್ಕೆ ಬರುತ್ತಾರೆ. ಇಲ್ಲಿ ಬೆರ್ಮೆರ್ ಜೊತೆಗೆ ಪ್ರದೇಶದ ರಕ್ಷಕ ದೈವ ಕ್ಷೇತ್ರಪಾಲ, ನಾಗ, ನಂಡಿಗೋಣ, ಪಂಜುರ್ಲಿ, ಲೆಕ್ಕೆಸಿರಿ, ಚಿಕ್ಕು, ಅಬ್ಬಾಗ – ದಾರಗ ಇನ್ನಿತರ ದೈವಗಳು ಇರುತ್ತವೆ. ವರ್ಷಾವರ್ತಿ ನಡೆಯುವ ಯಾವುದೇ ಕಾರ್ಯಕ್ರಮಕ್ಕೆ ಕುಟುಂಬದ ಒಬ್ಬನಾದರೂ ಆ ಮೂಲತಾನಕ್ಕೆ ಸಂಬಂಧಿಸಿದವರು ಇರಲೇ ಬೇಕು. ಹೀಗೆ ಹೋಗದೆ ಇದ್ದಲ್ಲಿ ಕುಟುಂಬದಲ್ಲಿ ಸಂದಿ ಹೋದವರು ಉಪದ್ರ ಕೊಡುತ್ತಾರೆ ಎಂಬ ನಂಬಿಕೆ ಇದೆ.
ಇಲ್ಲಿ ಎರಡು ಪದಗಳ ಬಗ್ಗೆ ನನ್ನ ಚರ್ಚೆಯನ್ನು ಹೇಳುತ್ತೇನೆ.
1. ಆಲಡೆ
ಆಲಡೆ ಎಂಬ ಪದದ ವ್ಯುತ್ಪತ್ತಿ ಬಗ್ಗೆ ಅನೇಕ ಚರ್ಚೆಗಳು ಇವೆ. ಇವುಗಳಲ್ಲಿ ಭಿನ್ನತೆಗಳು ಇವೆ. ಆಲಡೆ ಎಂದರೆ ಆಳುವ ಎಡೆ, ಆಡಳಿತ ನಡೆಸುವ ಮೂಲ ಸ್ಥಳ.
2. ಸಿಂಗ
ದೈವಗಳ ಪರಿಕರಗಳನ್ನು ಇಡುವ ವ್ಯವಸ್ತೆಯನ್ನು ಸಿಂಗದನ ಎಂದು ಕರೆಯುತ್ತಾರೆ. ಸಿಂಗದನ ಎಂದರೆ ಸಿಂಹಾಸನ. ಇಲ್ಲಿ ಸಿಂಗ ಎಂದರೆ ಸಿಂಹಾಸನವೇ ಇರಬೇಕು.
ತುಳುವರು ಬೆರ್ಮೆರ್ ಅನ್ನು ಕುದುರೆಯ ಮೇಲೆ ಕೂತ, ಖಡ್ಗದಾರಿ, ಸತ್ತಿಗೆ (ಕೊಡೆ) ಹಿಡಿದಿರುವ ಒಬ್ಬ ಯೋಧನಂತೆ ಚಿತ್ರಿಸಿದ್ದಾರೆ. ಇದನ್ನು ಗುರುರಾಜ ಭಟ್ಟರು ಜೈನರ ಪ್ರಭಾವ ಎಂದು ಹೇಳಿದ್ದಾರೆ. ಆದರೆ ಅದಕ್ಕೂ ಹಿಂದೆ ಈ ಪರಿಕಲ್ಪನೆ ಇರಲ್ಲಿಲ್ಲ ಎಂದು ಹೇಳಲು ನಮ್ಮಲ್ಲಿ ಆಧಾರಗಳು ಇಲ್ಲ. ಕೋಟಿ ಚೆನ್ನಯರ ಪಾಡ್ದನದಲ್ಲಿ ಕೆಮ್ಮಲೆಯ ಬೆರ್ಮಾ ಬಿಳಿ ಕುದುರೆ ಏರಿ ಬೆಳ್ಗೊಡೆ ಹಿಡಿದಿರುತ್ತಾನೆ.
“ಊರಿನ ಕೊನೆಯಲ್ಲಿ ಗುಡ್ಡದ ಮೇಲಿದ್ದ ‘ನಾರಾಯಣ’ ಎಂಬ ದೇವಸ್ಥಾನ ನೋಡಲು ಹೋದೆ. ಮಾಡಿಗೆ ತೆಂಗಿನ ಸೋಗೆ ಹೊದಿಸಿದ್ದರು. ಮರದ ಹಲಗೆಗಳನ್ನು ಜೋಡಿಸಿ ಕಟ್ಟಿದ ಗುಡಿ ಇದು. ಇದನ್ನು ರಾಣಿ ಕಟ್ಟಿಸಿದಳಂತೆ. ಇದರ ಒಳಗೆ ಭೂತ (devil) ವಿಗ್ರಹವಿತ್ತು…. ಬ್ರಾಹ್ಮಣ ದುಬಾಶಿ ಭೂತಕ್ಕೆ ಹೆದರಿ ದೂರ ನಿಂತುಬಿಟ್ಟ… ನಾನು ಜೀಸಸ್ ಕ್ರೈಸ್ತನ ಧ್ಯಾನ ಮಾಡುತ್ತಾ ಗುಡಿಯ ಬಾಗಿಲು ತೆಗೆದು ಒಳಕ್ಕೆ ಹೋದೆ. ವಿಗ್ರಹ ಬಿಳಿಯ ಕಲ್ಲಿನದು. ಒಂದು ಆಳು ಪ್ರಮಾಣಕ್ಕಿಂತ ಬೆರ್ಮರ ದೊಡ್ಡದು. ಅದಕ್ಕೆ ಬಣ್ಣ ಹಚ್ಚಿ ಸುಂದರ ಯುವಕನಂತೆ ಕಾಣುವ ಹಾಗೆ ಮಾಡಿದ್ದರು. ತಲೆಯ ಮೇಲೆ ಕಿರೀಟವಿತ್ತು. ನಾಲ್ಕು ಕೈಗಳಿದ್ದು ವಿಗ್ರಹದ ಜಾಡಿನ ಕಾಲುಗಳ ಮಧ್ಯೆ ಉದ್ದನೆಯ ಗಡ್ಡ ಬಿಟ್ಟ ಬೆತ್ತಲೆಯ ಮನುಷ್ಯನ ವಿಗ್ರಹವಿತ್ತು. ಅದರ ಕೈಗಳು ನೆಲಕ್ಕೆ ಊರಿದ್ದುವು ಪ್ರಾಣಿಯೊಂದು ನಡೆಯುವ ರೀತಿಯಲ್ಲಿ. ದೈವಗ ಇದರ ಮೇಲೆ ಭೂತ ಕುಳಿತು ಸವಾರಿ ಮಾಡುತ್ತಿರುವಂತೆ ಕಾಣುತ್ತಿತ್ತು. ರಾಣಿ ಇಲ್ಲಿ ಗುಡಿ ಕಟ್ಟಿಸಿ Brimore ಎಂಬ ವಿಗ್ರಹವನ್ನು ಸ್ಥಾಪನೆ ಮಾಡಿದ್ದಾಳೆ. Brimore ಎಂಬ ಭೂತ ಬಹಳ ದೊಡ್ಡ ಭೂತವಂತೆ, ಸಾವಿರ ಭೂತಗಳಿಗೆ ಒಡೆಯನಂತೆ. ನನ್ನ ಈ ಊಹೆ ಸರಿ ಎಂದು ಆಮೇಲೆ ಇಲ್ಲಿಯವರು ಹೇಳಿದರು. ಈ ವಿಗ್ರಹಕ್ಕೆ “ಬುತೋ” (Buto – ಭೂತ) ಎಂದು ಹೆಸರು’” (ಪ್ರವಾಸಿ ಕಂಡ ದಕ್ಷಿಣ – ಎಸ್.ಎಲ್. ನಾಗೇಗೌಡ)
ಸ್ವತಃ ಜೈನಳಾಗಿದ್ದ ಉಳ್ಳಾಲದ ರಾಣಿ ಕಟ್ಟಿದ ಈ ಗುಡಿ ಜೈನ ಬ್ರಹ್ಮನ ಗುಡಿ ಅಲ್ಲ. ಯಾಕೆಂದರೆ ಪಿಯೊತ್ರೋದೆಲ್ಲಾವೆಲ್ಲೆ ಈ ವಿಗ್ರಹವನ್ನು ಭೂತ ಎಂದು ದಾಖಲಿಸಿದ್ದಾನೆ ಮಾತ್ರವಲ್ಲ ಬ್ರಿಮೋರ್ ಎಂದು ಕರೆದಿದ್ದಾನೆ.
ಬ್ರಹ್ಮ ಯಕ್ಷನ ಮೂರ್ತಿಯ ಲಕ್ಷಣಗಳ ಬಗ್ಗೆ ಹಂ ಪ ನಾಗರಾಜಯ್ಯ ಅವರ ಚರ್ಚೆಯನ್ನು ಗಮನಿಸೋಣ. ಬ್ರಹ್ಮ ಯಕ್ಷ ತುರಗವಾಹನ, ಅಷ್ಟಬಾಹು, ಚತುರ್ಮುಖ ಎಂದು ಶಾಸ್ತ್ರ ಕೃತಿಗಳಲ್ಲಿ ವರ್ಣಿತನಾಗಿದ್ದರೂ ದ್ವಿಬಾಹು ಹಾಗೂ ಏಕವಕ್ತ ಮೂರ್ತಿಗಳೇ ದಕ್ಷಿಣ ಕನ್ನಡದಲ್ಲಿ ಕಂಡು ಬರುತ್ತವೆ. ಮಾತುಲಂಗ ಸಂತಾನ ಭಾಗ್ಯ ಸೂಚಕ, ಶ್ವೇತಾಂಬರ, ದಿಗಂಬರ ಎರಡೂ ಪಂಥಗಳ ಚತುರ್ಮುಖ, ಅಷ್ಟಭುಜ ಮತ್ತು ಹಲವು ಆಯುಧ ವಿಕೋಪಗಳು ಧರಿಸಿದ ಬ್ರಹ್ಮನ ವಿಕೋಪಗಳು ಜೈನಶಾಸ್ತ್ರದ ಗ್ರಂಥಗಳಲ್ಲಿವೆ. (Ref. ಇಂದಿರಾ ಹೆಗ್ಗಡೆ, ತುಳುವರ ಮೂಲತಾನ ʼಆದಿ ಆಲಡೆʼ)
ಆದರೆ ತುಳುವರು ಬೆರ್ಮೆರನ್ನು ಅವ್ಯಕ್ತ, ನಿರಾಕಾರವಾಗಿ ನಂಬುತ್ತಲೇ ಕಲ್ಲುಗಳಲ್ಲಿ ಕೂಡ ಅರೋಪಿಸಿಕೊಂಡು ನಂಬಿದ್ದಾರೆ.
“ತಂದೆ ಮುದ್ದು ನರಯನ, ತಾಯಿ ಮುಂಗುಲಿ ಹೆಂಗುಸು. ಒಂದನೇ ಬೇನೆಗೆ ಒಂದು ಮಾಲೆ ತತ್ತಿ, ಎರಡನೆಯ ಬೇನೆಗೆ ಎರಡು ಮಾಲೆ ತತ್ತಿ, ಮೂರನೆಯ ಬೇನೆಗೆ ಮೂರು ಮಾಲೆ ತತ್ತಿ – ಹೀಗೆ ಪ್ರತಿ ಬೇರೆಯಲ್ಲೂ ಬೇರೆ ಬೇರೆ ಜಾತಿಯ ಹಾವುಗಳ ಮೊಟ್ಟೆ ಇಡುತ್ತಾಳೆ. ಆರನೆಯ ಬೇನೆಯಲ್ಲಿ ಕೇರೆ ಮಾರಾಜೆ ಹಾವುಗಳು, ಏಳನೆಯ ಬೇನೆಯಲ್ಲಿ ಕರಿಯ ಸಂಕಪಾಲೆ ಮತ್ತು ಬೆಳಿಯ (ಬಿಳಿಯ) ಸಂಕಪಾಲೆ (ಕಾಳಿಂಗ ಸರ್ಪ) ಹುಟ್ಟುತ್ತದೆ……” (ಇಂದಿರಾ ಹೆಗ್ಗಡೆ, 78, ೨೦೧೨)
“ಅಣ್ಣಪ್ಪ ರಾಜ್ಯದ ನಾರಾಯಣ ದೇವರು ಮತ್ತು ಮುಂಗುಡೆ ದೆಯ್ಯಾರು ಗಂಡ ಹೆಂಡತಿ, ಮುಂಗುಡೆ, ದೆಯ್ಯಾರು ಇಟ್ಟ ಮೊಟ್ಟೆ, ಒಂದನೇ ಬೇನೆಗೆ ಒಂದು ಮಾಲೆ ತತ್ತಿ ಎರಡನೆಯ ಬೇನೆಗೆ ಎರಡು ಮಾಲೆ ಹಾವಿನ ಮೊಟ್ಟೆ, ಮೂರನೆಯ ಬೇನೆಗೆ ಮೂರು ಮಾಲೆ ಹಾವಿನ ಮೊಟ್ಟೆ – ಹೀಗೆ ಮೊಟ್ಟೆಯಿಡುತ್ತಾ ಹೋಗುತ್ತಾಳೆ. ಆರನೆಯ ಬೇನೆಯಲ್ಲಿ ಅರುವತ್ತಾರು ಕೋಟಿ ಹೆಡೆಯ ಬೊಳ್ಯ (ಬಿಳಿ) ಸಂಕಪಾಲೆ ‘ಸರ್ಪ’ ಹುಟ್ಟುತ್ತದೆ. ಏಳನೆಯ ಬೇನೆಯಲ್ಲಿ ಎಪ್ಪತ್ತೇಳು ಕೋಟಿ ಹೆಡೆಯುಳ್ಳ ‘ಕರಿಯ ಸಂಕಪಾಲೆ’ – ಹುಟ್ಟುತ್ತದೆ. ನಾರಾಯಣ ದೇವರು(ಸೂರ್ಯ) ಕರಿಯ ಸಂಕಪಾಲನನ್ನು ಕರೆದು “ನೀನು ಭೂಲೋಕಕ್ಕೆ ಹೋಗಿ ಭೂಲೋಕ ಪಾತಾಳ ಲೋಕಗಳ ಅಧಿಪತಿಯಾಗಿ ನಾಗರಾಜನೆಂಬ ಖ್ಯಾತಿಯಿಂದ ಜೀವಿಸು’ ಎಂದು ಹರಸುತ್ತಾರೆ.” ಭೂಲೋಕ, ಪಾತಾಳ ಲೋಕಗಳ ಅಧಿಪತಿ ‘ಬೆರ್ಮೆರ್’ ಎಂದು ಕರೆಸಿಕೊಂಡ ಎಂಬುದನ್ನು ಇಲ್ಲಿಯ ಪಾಡ್ಡನಗಳು ಸ್ಪಷ್ಟಪಡಿಸುತ್ತವೆ. (ಇಂದಿರಾ ಹೆಗ್ಗಡೆ, 64, ೨೦೧೨)
ಬೆರ್ಮೆರ್ ವೀಳ್ಯದೆಲೆಯಷ್ಟು ತೆಳ್ಳಗೆ, ಅಡಿಕೆಯಷ್ಟು ಉರುಟಾಗಿ, ತಾಳೆ ಮರದಷ್ಟು ಎತ್ತರಕ್ಕೆ, ಅಲದ ಮರದಷ್ಟು ವಿಶಾಲವಾಗಿ ಉದಿಸಿದರು, ಅವರ ಎಡಭಾಗದಲ್ಲಿ ನಾಗರ ಹುತ್ತ ಬಲ ಭಾಗದಲ್ಲಿ ನಗರಹುತ್ತ, ಮಧ್ಯದಲ್ಲಿ ಜಯವುಳ್ಳ ಬೆರ್ಮೆರ್ ಉದಿಸಿದರು…….(ಇಂದಿರಾ ಹೆಗ್ಗಡೆ, 79, ೨೦೧೨)
“ಬೆರ್ಮೆರ್ ಹುಟ್ಟಿದ ನಾಡು ಬಲವಾದ ದೇಶ, ಮಣಿ, ಗಂಗೆ, ನೀರು, ಗಂಗೆ, ಮೊಸರು ಗಂಗೆ, ಉಪ್ಪು ನೀರು ಗಂಗೆ, ನೆತ್ತರು ಗಂಗೆಗಳಲ್ಲಿ ಉತ್ತರ ಉರಿಕಂಚಿ, ಪಾತಾಳ ಪಣಿಕಂಚಿ, ಏಳು ಕಂಚಿ ಕಡಂಗದ ಅರಮನೆಯಲ್ಲಿ ಜಗ ಮಗುಚಿತು. (ನಸುಕಿನಲ್ಲಿ) ಜಂಬು ಉಡೆಂಡ್ (ಬಿರಿಯಿತು) ಕತ್ತಲೆ ಬೆಳಕಾಯಿತು, ಎಡದಲ್ಲಿ ಬೆಳ್ಳಿಯ ಪೂ ಮುಡಿ, (ಹೂ ಅಣಿ), ಪೂ ಪುಂಚ (ಹುತ್ತ) ಬಲದಲ್ಲಿ ಬಂಗಾರದ ಪೂ ಮುಡಿ, ಪೂ ಪುಂಜೆ ಆಗ ಕೆಮ್ಮಲೆಯ ಬಿರ್ಮೆರಿಗೆ ಎಡ ಭುಜದಲ್ಲಿ ಬೆಳ್ಳಿಯ ಜನಿವಾರ, ಬಲ ಭುಜದಲ್ಲಿ ಬಂಗಾರದ ಜನಿವಾರ, ಎಡಭಾಗದಲ್ಲಿ ಏಳು ನಿಲೆ (ಅಂಕಣ)ಯ ಬೆಳ್ಳಿಯ ಸತ್ತಿಗೆ, (ಛತ್ರ) ಬಲಭಾಗದಲ್ಲಿ ಒಂಬತ್ತು ನೆಲೆಯ ಬಂಗಾರದ ಸತ್ತಿಗೆ, ಅಳಿನಷ್ಟು ಉದ್ದಕ್ಕೆ ಜಲ್ಲಿ ಕೀಳೂದ್ದ ಬೀಸಣಿಕೆ, ಮೈರೆ ರೆಕ್ಕೆಯ ಸರ್ವಶಾಸ್ತ್ರ ಬೇಧಗಳೊಂದಿಗೆ ಉದ್ಭವವಾದವರು ಕೆಮ್ಮಲೆಯ ಬೆರ್ಮೆರು……(ಇಂದಿರಾ ಹೆಗ್ಗಡೆ, 80, ೨೦೧೨)
ಇಂದಿರಾ ಹೆಗ್ಗಡೆಯವರ ತುಳುವರ ಮೂಲತಾನ ಆಲಡೆ ಕೃತಿಯಲ್ಲಿ ಇರುವ ಬೆರ್ಮೆರ ಉಪಿದಿಪ ಕಥನಗಳನ್ನಷ್ಟೇ ಗಮನಿಸಿದರೆ, ಬೆರ್ಮೆರ್ ಹುಟ್ಟಿದ್ದು ನೀರಿನಲ್ಲಿ….ಏಳು ಗಂಗೆಗಳ ನಡುವಿನ ಅರಮನೆಯಲ್ಲಿ. ಬೆರ್ಮೆರ್ ಜೊತೆಗೆ ಸರ್ಪಗಳು, ಹಾವುಗಳು ಕೂಡ ಹುಟ್ಟುತ್ತವೆ. ಹಾಗಾಗಿ ಸರ್ಪಗಳು ಕೂಡ ಬೆರ್ಮೆರ್ ಆಗಿದ್ದಾವೆ.
ಆದಿಯಲ್ಲಿ ನೀರು, ಸರ್ಪಗಳೇ ದೇವರು. ಹೀಗಾಗಿ ನಾಗ. ಬೆರ್ಮನ ಆರಾಧನೆ ಮಾಡಿದರು. ಹೀಗಾಗಿ ಒಂದು ಕಡೆಯಲ್ಲಿ ರಾಜನಂತೆ ಬೆರ್ಮೆರನ್ನು ಕಂಡು ಇನ್ನೊಂದು ನಾಗರೂಪಿಯಾಗಿ ನೋಡಿದ್ದರಲ್ಲಿ ವೈರುಧ್ಯ ಇಲ್ಲ. ನಾಗ ಶಿಲ್ಪಗಳಲ್ಲಿ ರಾಜದಂಡ ಹಿಡಿದುಕೊಂಡ ಮಾನವಾಕಾರ ಸೊಂಟದ ಕೆಳಗಡೆ ನಾಗರ ರೂಪ ಇರುವುದನ್ನು ನಾವು ಕಾಣಬಹುದು.
ಬೆರ್ಮೆರ್ ಅನ್ನು ಅರಸು ಎಂದೇ ಭಾವಿಸಿದರೂ ಲೌಕಿಕ ರಾಜ್ಯವನ್ನು ಅಳಲು ಒಬ್ಬ ಅರಸು ಇರುತ್ತಾನೆ. ಆದರೆ ಈ ಅರಸು ಬೆರ್ಮೆರ್ ಗೆ ನಡೆದುಕೊಳ್ಳುತ್ತಾನೆ. ಬೆರ್ಮೆರ್ ವನಾಧಿಪತಿ. ಕಾಡೇ ಅವನ ವಾಸಸ್ಥಾನ. ಕಾಡು ಲೌಕಿಕವಾಗಿ ಕಂಡರೂ ತನ್ನೊಳಗೆ ಅನೇಕ ನಿಗೂಢತೆಗಳನ್ನು ಕಾಯ್ದುಕೊಂಡಿರುತ್ತದೆ. ಕಾಡನ್ನು ಬೆರ್ಮೆರ್ ನಿಯಂತ್ರಿಸುತ್ತಾ ಕಾಡಿನಿಂದ ಹೊರಡುವ ಎಲ್ಲಾ ಎಲ್ಲಾ ನೀಚ ಶಕ್ತಿಗಳನ್ನೂ ಬೆರ್ಮೆರ್ ನಿಯಂತ್ರಿಸುತ್ತಾನೆ.
ಏಕಕಾಲಕ್ಕೆ ಬೆರ್ಮೆರ್ ನಾಗನಾಗಿ, ಅರಸನಾಗಿ, ಕುಟುಂಬದ ಮೂಲಪುರುಷನಾಗಿ, ಫಲವಂತಿಕೆಯ ದೇವತೆಯಾಗಿ ಕಾಣಿಸಿಕೊಳ್ಳುತ್ತಾನೆ. ಬೆರ್ಮೆರ್ ಎಂದರೆ ನಿರಾಕರವಾದ ಒಂದು ಶಕ್ತಿ. ಮೂಲದಲ್ಲಿ ಇದ್ದದ್ದು ಬೆರ್ಮೆರ್ ಮಾತ್ರ.
ಆಕರಸೂಚಿ:
1. ಗೋವಿಂದ ಪೈ, ತುಳುನಾಡು ಪೂರ್ವಸ್ಮೃತಿ, ತೆಂಕನಾಡು, ಕಾಸರಗೋಡು ಸಾಹಿತ್ಯ ಸಮ್ಮೇಳನ ನೆನಪಿನ ಸಂಪುಟ, ಕಾಸರಗೋಡು, ೧೯೪೭
2.ಇಂದಿರಾ ಹೆಗ್ಗಡೆ, ತುಳುವರ ಮೂಲತಾನ ʼಆದಿ ಆಲಡೆʼ, ನವ ಕರ್ನಾಟಕ ಪ್ರಕಾಶನ, ಬೆಂಗಳೂರು, ೨೦೧೨
3.ಕೆಮ್ತೂರು ರಘುಪತಿ ಭಟ್ಟ, ತುಳುನಾಡಿನ ಸ್ಥಳನಾಮೆಗಳು, ೨೦೦೮
4. ಮೌಖಿಕ ಸಂಪ್ರದಾಯಗಳು, ಅರಸು ಆರಾಧನೆ, ದಕ್ಷಿಣ ಭಾರತದ ಜಾತಿವ್ಯವಸ್ಥೆಯ ಮರುಪರಿಶೀಲನೆಗೆ ತಕ್ಕ ಸಾಮಗ್ರಿಗಳು; ಪೀಟರ್ ಜೆ ಕ್ಲಾಸ್, ತುಳು ಸಾಹಿತ್ಯ ಚರಿತ್ರೆ, ಪ್ರಸರಾಂಗ, ಕನ್ನಡ ವಿಶ್ವವಿದ್ಯಾನಿಲಯ, ಹಂಪಿ, ೨೦೦೭
– ಚರಣ್ ಐವರ್ನಾಡ್