ಪ್ರಕೃತಿಯ ಸಮತೋಲನಕ್ಕೆ ಪರಿಸರ ರಕ್ಷಣೆ ಪೂರಕ. ಪರಿಸರವನ್ನು ನಾವು ಅವಲಂಬಿಸಿದ್ದೇವೆಯೇ ಹೊರತು ಅದು ನಮ್ಮನ್ನು ಅವಲಂಬಿಸಿಲ್ಲ ಎಂಬುದನ್ನು ಮೊದಲು ಗಮನಿಸಿಕೊಳ್ಳಬೇಕು. ಭೂರಮೆಯ ಒಡಲು ವಿಸ್ಮಯಗಳ ಆಗರ ಆದರೆ ಮಾನವನ ಅತಿ ಆಸೆಯಿಂದ ಪ್ರಕೃತಿಯ ಮೇಲಿನ ವಿಧ್ವಂಸಕ ಕೃತ್ಯಗಳು ಮಿತಿ ಮೀರಿ ಅಕ್ರಮಣವಾಗುತ್ತಿದ್ದು ಎಲ್ಲವನ್ನೂ ಸಹಿಸಿಕೊಂಡ ಭೂಮಿ ಜೀವರಾಶಿಗಳನ್ನು ಕಾಪಾಡಿಕೊಂಡು ಬರುತ್ತಿದೆಯಾದರೂ ಒಂದಲ್ಲ ಒಂದು ರೂಪದಲ್ಲಿ ಅವತರಿಸಿ ಬುದ್ದಿ ಕಲಿಸಿತು, ಈಗಿಂದಲೇ ಪ್ರಾಕೃತಿಕ ಸಮತೋಲನ ಕಾಯ್ದುಕೊಳ್ಳುವತ್ತ ಚಿತ್ತಹರಿಸಬೇಕಾದ ಅಗತ್ಯವಿದೆ. ದಿನದಿಂದ ದಿನಕ್ಕೆ ಪರಿಸರ ಮಾಲಿನ್ಯವೂ ಹೆಚ್ಚಾಗುತ್ತಲೇ ಇದ್ದು ಅಭಿವೃದ್ಧಿಯ ಹೆಸರಿನಲ್ಲಿ ಸ್ವಾರ್ಥ ಸಾಧನೆಗೆ ಹೊರಟಿದ್ದೇವೆ ಎನ್ನುವುದರ ಅರಿವಿಲ್ಲದೆ ಇಡುತ್ತಿರುವ ಹೆಜ್ಜೆಗಳು ನಿಸರ್ಗದ ಪರಿಸ್ಥಿತಿ ಕೆಡಲು ಕಾರಣವಾಗಿದೆ. ಪ್ರಕೃತಿ ಮುನಿದಾಗ ಮಾನವ ಬಹುದೊಡ್ಡ ಸವಾಲು ಎದುರಿಸಲೇಬೇಕಾಗುತ್ತದೆ.
ಪ್ರಕೃತಿಯ ಸಮತೋಲನದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಪ್ರಾಕೃತಿಕ ಅನಾಹುತಗಳು ಖಂಡಿತ. ಇಂದು ಭೌತಿಕ, ಜೈವಿಕ ಹಾಗೂ ಭೌಗೋಳಿಕ ಪರಿಸರದ ಆರೋಗ್ಯ ಕೆಟ್ಟಿದ್ದು, ಕುಡಿವ ನೀರು ಸೇವಿಸುವ ಗಾಳಿ, ನಡೆದಾಡುವ ಭೂಮಿ ಮಲಿನಗೊಂಡಿದೆ. ಸಮತೋಲನ ತಪ್ಪಿದ ಪರಿಸರದಿಂದ ಮುಂದಾಗಬಹುದಾದ ಅನಾಹುತಗಳು ಬಹುಗಂಭೀರ. ಪರಿಸರ ಹಾನಿ ಇದರ ಅರ್ಥವೇ ಜೀವ ಕೋಟಿಗಳ ಅವನತಿ. ಪರಿಸರ ರಕ್ಷಣೆಯ ಕೂಗು ನಿನ್ನೆ ಮೊನ್ನೆಯದಲ್ಲವಾದರೂ ಮಾನವರ ದುಷ್ಕೃತ್ಯಗಳನ್ನು ತಡೆಯಲಾರದೆ ಪ್ರಥ್ವಿ ನಲುಗುತ್ತಿದೆ.
ಪರಿಸರ ನಾಶದ ನೇರ ಪರಿಣಾಮವೇ ಪ್ರಕೃತಿ ವಿಕೋಪಗಳಿಗೆ ಕಾರಣ. ಜಾಗತಿಕ ತಾಪಮಾನದ ಹೆಚ್ಚಳ, ಅಂರ್ತಜಲದ ಮಟ್ಟದಲ್ಲಿ ಕುಸಿತ, ಹವಾಮಾನ ವೈಪರೀತ್ಯ, ಮಾನವ ಹಾಗೂ ಕಾಡು ಪ್ರಾಣಿಗಳ ಸಂಘರ್ಷ, ಪ್ರಾಕೃತಿಕ ದುರಂತ, ಹಸಿರುಗದ್ದೆ ಬೆಟ್ಟ- ಗುಡ್ಡಗಳು ಮಾಯವಾಗಿ ಪ್ರಾಕೃತಿಕ ವೈಭವಕ್ಕೆ ಕತ್ತರಿ ಬಿದ್ದಿದ್ದು ನಶಿಸುತ್ತಿರುವ ಅರಣ್ಯ ಪ್ರದೇಶ, ಬತ್ತುತಿರುವ ಜಲಮೂಲ, ಹೆಚ್ಚುತ್ತಿರುವ ವಾಯುಮಾಲಿನ್ಯ ಇವೆಲ್ಲಾ ಪರಿಸರದ ಅಸಮತೋಲನಕ್ಕೆ ಕಾರಣವಾಗಿದೆ. ಇದಕ್ಕೆಲ್ಲ ಕಾರಣ ನಮ್ಮೆಲ್ಲರ ಜೀವನ ಶೈಲಿ ಹಾಗೂ ಆಡಂಬರದ ಬದುಕು ಕಟ್ಟಿಕೊಳ್ಳಲು ಬಳಸಿದ ಮಾರ್ಗದಲ್ಲಿ ಮುಂದೆ ಸಾಗಲು ಭೂರಮೆಯ ನಗ್ನಗೊಳಿಸುತ್ತಿದ್ದೆವೆ.
ಮಾನವ ತನ್ನ ಪ್ರಗತಿಯ ಬಗ್ಗೆ ಯೋಚಿಸುತ್ತಾ, ಯೋಜನೆಗಳನ್ನು ರೂಪಿಸಿಕೊಳ್ಳುತ್ತಾ ಪರಿಸರವನ್ನು ಸ್ವೇಚ್ಛೆಯಾಗಿ ನಾನಾ ತರದಲ್ಲಿ ಬಳಸಿಕೊಳ್ಳುತ್ತಿದ್ದಾನೆ. ಮಾನವನ ದುಷ್ಕತ್ಯಗಳನ್ನು ತಡೆಯಲಾರದೆ ಪೃಥ್ವಿ ನಲುಗುತ್ತಿದೆ. ಸೃಷ್ಟಿಯ ಚಲನೆಗೆ ಮನುಷ್ಯ ಜೀವನಕ್ಕೆ ಉಪಯುಕ್ತವಾಗಿರುವ ಪ್ರಕೃತಿ ಕಲಿಸಿದ ಪಾಠ ಮರೆಯದಿದ್ದರೆ ಉತ್ತಮ ಭವಿಷ್ಯ ನಮ್ಮ ಮುಂದೆ ಇದೆ. ಆದರೆ ಮಾನವ ನಿರ್ಮಿತ ಅನಾಹುತ ಒಂದೇ ಎರಡೇ? ಪ್ರಕೃತಿ ವಿಕೋಪದ ಮುಂದೆ ಮನುಷ್ಯ ಶಕ್ತಿ ಗೌಣ. ಬರದಿಂದ ತತ್ತರಿಸಿದ್ದ ಪ್ರದೇಶಗಳೇ ನೆರೆಯ ತೀವ್ರ ಹಾವಳಿಗೂ ಒಳಗಾಗಬೇಕಾಯಿತು. ಊರಿಡಿ ನೀರಿನಿಂದ ಆವೃತವಾಗಿದ್ದರೂ ಕುಡಿಯಲು ನೀರಿಲ್ಲದೆ ಕಂಗಾಲಾದ ಮಾನವ, ಪ್ರಕೃತಿ ಮೇಲೆ ನಡೆಸಿದ ದುರಾಕ್ರಮಣ ಈ ಸ್ಥಿತಿಗೆ ಕಾರಣ.
ಭೂಮಿಯಲ್ಲಿನ ಪರಿಸರ ಮನುಷ್ಯನ ಜೀವನಾಡಿ ಅವುಗಳ ಸಂರಕ್ಷಿಸಿ ಉಳಿಸುವ ಕೆಲಸ ಪ್ರತಿಯೊಬ್ಬ ನಾಗರೀಕನದ್ದು ಆಗಿದೆ. ಮಾನವ ಆರೋಗ್ಯವಾಗಿ ಬದುಕಲು ಬೇಕಾದ ಉತ್ತಮ ಪರಿಸರ, ಪರಿಶುದ್ಧ ಗಾಳಿ, ನೀರು ಸಿಗಲೇಬೇಕೆಂದರೆ ಪರಿಸರ ಸಂರಕ್ಷಣೆ ಎಲ್ಲರ ಕರ್ತವ್ಯವಾಗಲೇಬೇಕು.
ಭೂಮಿ ಹಾಗೂ ಪರಿಸರ ಮುಂದಿನ ತಲೆಮಾರಿನ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ್ದು ಇದರ ದುರ್ಬಳಕೆ ಅನಾಹುತಕ್ಕೆ ಆಹ್ವಾನ. ಅದರಲ್ಲೂ ಅರಣ್ಯವೆಂದರೆ ಭೂರಮೆಯ ಮೆರಗು, ಜೀವ ವೈವಿಧ್ಯದ ತೊಟ್ಟಿಲು. ಮಾನವ ವಿಕಾಸದತ್ತ ಸಾಗುತ್ತಾ ಹೋದಂತೆ ಪರಿಸರ ಕಡೆಗಣಿಸಿ ಸ್ವಾರ್ಥ ಮೆರೆದು ಅಭಿವೃದ್ಧಿಯ ಹೆಸರಿನಲ್ಲಿ ಮರಗಳ ತುಂಡರಿಸಿ ರಸ್ತೆ ಅಗಲಿಕರಣ, ಅಣೆಕಟ್ಟು, ಕಾಲುವೆ, ವಿದ್ಯುತ್ ಉತ್ಪಾದನೆ, ದೂರ ಸಂಪರ್ಕ ಮೊದಲಾದ ಕಾರಣದಿಂದ ಎಲ್ಲೆಡೆ ಅತಿವೃಷ್ಟಿ ಹಾಗೂ ಅನಾವೃಷ್ಟಿ ಎರಡೂ ಕಾಡುತ್ತಿರುವ ಬೆನ್ನಲ್ಲೇ ವಿಶ್ವಸಂಸ್ಥೆ ಪರಿಸರ ಸಂರಕ್ಷಣೆಯ ಕುರಿತು ಎಚ್ಚರಿಕೆ ನೀಡಿದ್ದು ಅರಣ್ಯ ಉಳಿಸಿ ಇಲ್ಲವೇ ಮುಂದಿನ ದಿನಗಳಲ್ಲಿ ಪರಿತಪಿಸಬೇಕಾಗುತ್ತದೆ ಎಂದು ತಿಳಿಸಿದೆ. ಭೂರಮೆಯ ಒಡಲು ವಿಸ್ಮಯಗಳ ಆಗರ, ಅದರ ಸಂರಕ್ಷಣೆಯ ಅವಶ್ಯಕತೆ ತುಂಬಾ ಇದೆ. ಅಲ್ಲಲ್ಲಿ ಸಂಭವಿಸುತ್ತಿರುವ ಭೂಕುಸಿತಕ್ಕೆ, ನೆರೆಹಾವಳಿಗೆ ಮಾನವ ಹಸ್ತಕ್ಷೇಪ ಹಾಗೂ ಅವೈಜ್ಞಾನಿಕ ಕಾಮಗಾರಿ ಕಾರಣ ಎಂದು ಭೂವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.
ವಿಜ್ಞಾನ ಹಾಗೂ ತಂತ್ರಗಾರಿಕೆಯಲ್ಲಿ ಅಮೋಘ ಆವಿಷ್ಕಾರಗಳನ್ನು ಮಾಡುವ ಕನಸಿನಲ್ಲಿ ಪ್ರಗತಿ ಎಂಬ ಹಣೆಪಟ್ಟಿ ಸೇರಿಸಿಕೊಂಡು ಕೈಗಾರಿಕೆಗಳಿಂದಾಗಿ ಫಲವತ್ತಾದ ಭೂಮಿ ಕಳಕೊಂಡೆವು .ಕಾಲ ಇನ್ನೂ ಮಿಂಚಿಲ್ಲ ನಿರ್ಲಪ್ತತೆಯಿಂದ ಕುಳಿತುಕೊಂಡರೆ ನಮ್ಮ ಭೂಮಿಯನ್ನು ರಕ್ಷಿಸುವವರು ಯಾರು? ಪ್ರಕೃತಿಯ ಮೇಲೆ ಮನುಷ್ಯ ಮಾಡುವ ಹಸ್ತ ಕ್ಷೇಪವನ್ನು ನಿಲ್ಲಸಬೇಕು. ಮಾನವ ಕುಲ ನೆಮ್ಮದಿಯಿಂದ ಉಸಿರಾಡಬೇಕಾದರೆ ಅರಣ್ಯ ಹಾಗೂ ಜೀವ ವೈವಿಧ್ಯತೆಯ ರಕ್ಷಣೆ ಅಗತ್ಯ. ಕೃಷಿ ಭೂಮಿ ಹಡಲು ಬೀಳಿಸಿ ಸ್ವಾರ್ಥ ದುರಾಶೆಗೆ ಗುಡ್ಡ, ಬೆಟ್ಟ, ನದಿಗಳನ್ನು ತನಗೆ ಹೇಗೆ ಬೇಕೊ ಹಾಗೆ ಉಪಯೋಗಿಸುತ್ತಾ ಹೋದರೆ ಪ್ರಕೃತಿ ಖಂಡಿತವಾಗಿ ಕಠಿಣ ಪಾಠ ಕಲಿಸುತ್ತದೆ. ಮುಗಿಲೆತ್ತರಕ್ಕೆ ಬೆಳೆದು ನಿಂತ ಪಶ್ಚಿಮ ಫಟ್ಟಗಳು ಪ್ರಕೃತಿ ನೀಡಿರುವ ಅಪೂರ್ವ ಬಳುವಳಿ. ಅತ್ಯಂತ ಸೂಕ್ಷ್ಮ ಜೈವಿಕ ವೈವಿಧ್ಯತೆಯ ತಾಣವಿದು, ಇಲ್ಲಿಂದಲೇ ಉಗಮಗೊಂಡು ಭೂರಮೆಯ ತಂಪು ಗೊಳಿಸುವ ನದಿಮೂಲದ ನಾಶಕ್ಕೂ ಕೈಹಾಕಿದ. ಮುನ್ನೆಚ್ಚರಿಕೆಯ ಗಂಟೆಯಾಗಿ ನಾವೆಲ್ಲರೂ ಜಾಗ್ರತರಾದರೆ ಭೂಮಿ ಉಳಿದೀತು.
ರೈತರು ರಸ ಗೊಬ್ಬರ ಮತ್ತು ಕೀಟನಾಶಕಗಳನ್ನು ಯಥೇಚ್ಛವಾಗಿ ಬಳಸುತ್ತಿರುವುದರಿಂದ ಮಣ್ಣಿನ ಆರೋಗ್ಯ ಸಂಪೂರ್ಣ ಹದಗೆಟ್ಟು ಫಲವತ್ತತೆ ಕಡಿಮೆಯಾಗಿ ಕೀಟ ನಾಶಕ ಎಂಬ ಸರ್ವನಾಶಕದಿಂದ ನಮ್ಮ ಭೂಮಿಗೆ ಮಾತ್ರವಲ್ಲ ಪಕ್ಷಿ ಸಂಕುಲಕ್ಕೆ, ಜೀವ ಜಂತುಗಳಿಗೂ ಮಾರಣಾಂತಿಕ. ವಿವಿಧ ಬಗೆಯ ಕೀಟ, ಜೇನು ನೊಣ, ದುಂಬಿ ಸೇರಿದಂತೆ ಮಕರಂದ ಹೀರುವುದರ ಜೊತೆಗೆ ಪರಾಗಸ್ಪರ್ಶ ಕ್ರಿಯೆಯನ್ನು ನಡೆಸುವ ನೂರಾರು ಕೀಟಗಳು ಕೀಟನಾಶಕದ ಹೊಡೆತಕ್ಕೆ ಬಲಿಯಾಗಿದೆ. ಹವಾಮಾನ ವೈಪರೀತ್ಯವೂ ಜಲಚರದ ಮೇಲೆ ಅಡ್ಡ ಪರಿಣಾಮ ಬೀರಿದೆ. ತಾಪಮಾನ ಏರಿಕೆಯ ಪರಿಣಾಮದಿಂದ ಸಮುದ್ರದಲ್ಲಿ ಮೀನುಗಳು ಇತ್ತೀಚಿನ ವರ್ಷಗಳಲ್ಲಿ ತತ್ತರಿಸುತ್ತಿದೆ. ಪರಿಸರ ಸಂರಕ್ಷಿಸದಿದ್ದರೆ ಆಪತ್ತು ಕಟ್ಟಿಟ್ಟ ಬುತ್ತಿ.
ಅನ್ನದಾತರೆ ದೇಶದ ಬೆನ್ನೆಲುಬು ಎಂಬ ಮಾತಿದೆ ಆದರೆ ರೈತನ ಬೆನ್ನೆಲುಬು, ಪಕ್ಕೆಲುಬುಗಳೆಲ್ಲ ಮುರಿದು ಹೋದ ಕಾಲವಿದು. ಹಲವು ಸಮಸ್ಯೆಗಳಿಂದ ಬಳಲುತಿರುವ ಕೃಷಿ ಕ್ಷೇತ್ರದ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕಬೇಕಾಗಿದೆ. ಭತ್ತದ ಕಣಜವಾಗಿದ್ದ ನಮ್ಮೆಲ್ಲರ ಊರುಕೇರಿಗಳು ಇಂದು ಭತ್ತದ ಗದ್ದೆಗಳನ್ನು ವಾಣಿಜ್ಯ ಬೆಳೆಗಾಗಿ ಉಪಯೋಗಿಸಿ ಪರಂಪರಾಗತವಾಗಿ ಕೃಷಿ ಮಾಡದೆ ಭೂಮಾತೆಯ ಗರ್ಭಕ್ಕೆ ವಿಷ ಬೆರೆಸಿದರು. ಮಣ್ಣು ಹಾಗೂ ಮಾನವನಿಗೆ ಬಿಡಲಾರದ ನಂಟು. ಆದರೂ ಆಧುನಿಕ ಕೃಷಿಯ ಭ್ರಾಮಕ ಲೋಕದ ಆಕರ್ಷಣೆಯಿಂದ ಭೂಮಿಗೆ ರಾಸಾಯನಿಕ ಗೊಬ್ಬರ, ಕೀಟ ನಾಶಕಗಳನ್ನು ಸುರಿದು ಫಲವತ್ತತೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಾ ಭೂಮಾತೆಯ ಒಡಲು ವಿಷವಾಗುತ್ತಿದೆ. ಒಟ್ಟಿನಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಸ್ವಾರ್ಥ ಸಾಧನೆಗೆ ತೊಡಗಿ ಪ್ರಕೃತಿ ವಿನಾಶಕ್ಕೆ ಮಾನವ ನಾಂದಿಹಾಡಿದ.
– ಲತಾ ಸಂತೋಷ ಶೆಟ್ಟಿ ಮುದ್ದುಮನೆ