ಜಾಗತಿಕ ಬಂಟರ ಸಂಘಗಳ ಒಕ್ಕೂಟ ಹಾಗೂ ಪಟ್ಲ ಫೌಂಡೇಶನ್ ಟ್ರಸ್ಟ್ ನ ಮಹಾಪೋಷಕ, ಮಹಾನ್ ದಾನಿ, ನಿಸ್ವಾರ್ಥ ಸಮಾಜ ಸೇವಕರಾಗಿರುವ ಕೂಳೂರು ಕನ್ಯಾನ ಸದಾಶಿವ ಕೆ. ಶೆಟ್ಟಿ ಅವರು ಕಾಸರಗೋಡು ಜಿಲ್ಲೆಯ ಮಂಜೇಶ್ವರ ಬಳಿಯ ಕನ್ಯಾನದ ಕೂಳೂರಿನ ಫಕೀರ ಶೆಟ್ಟಿ ಮತ್ತು ಶೀಲಾವತಿ ದಂಪತಿಗಳ ಸುಪುತ್ರರಾಗಿ ಜೂನ್ 13, 1954ರಂದು ಜನಿಸಿದರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಹುಟ್ಟೂರಿನಲ್ಲಿ ಕಲಿತ ಅವರು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಓದಿದರು. ಆ ಬಳಿಕ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಎಂ.ಎಸ್ಸಿ ಸ್ನಾತಕೋತ್ತರ ಪದವಿ ಪಡೆದರು. ತದನಂತರ, ಉದ್ಯೋಗ ನಿಮಿತ್ತ ಮುಂಬಯಿಗೆ ಹೋದ ಅವರು ನಿರ್ಲೋನ್ ಲಿಮಿಟೆಡ್, ಘಾರ್ದ ಇಂಡಸ್ಟ್ರೀಸ್, ಹೋಟೆಸ್ಟ್ ಫಾರ್ಮಾಸಿಟಿಕಲ್ಸ್ ಲಿ. ಸೇರಿದಂತೆ ಹಲವಾರು ಪ್ರತಿಷ್ಠಿತ ಕಂಪೆನಿಗಳಲ್ಲಿ ಸುಮಾರು ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದರು. ಕೈಗಾರಿಕೆ ಕ್ಷೇತ್ರದಲ್ಲಿ ಸಲ್ಲಿಸಿದ 20 ವರ್ಷಗಳ ಅನುಭವವು ಅವರನ್ನು ಸ್ವಂತ ಉದ್ಯಮ ಆರಂಭಿಸಲು ಪ್ರೇರೇಪಿಸಿತ್ತು.
ಕಠಿಣ ಪರಿಶ್ರಮ, ಛಲ, ಮಹತ್ವಾಕಾಂಕ್ಷೆ, ದೂರದೃಷ್ಟಿತ್ವ ಮತ್ತು ಸ್ವಾಭಿಮಾನ ಅವರನ್ನು ಸ್ವತಂತ್ರ ಉದ್ಯಮ ಸ್ಥಾಪಿಸಲು ಸ್ಪೂರ್ತಿದಾಯಕವಾಗಿ ಧೈರ್ಯದಿಂದ ಆತ್ಮವಿಶ್ವಾಸದಿಂದ ಒಂದು ಬೃಹತ್ ಕಂಪೆನಿಯ ಉದಯಕ್ಕೆ ಕಾರಣವಾಗಿ ಹೇರಂಬ ಇಂಡಸ್ಟ್ರೀಸ್ ಲಿಮಿಟೆಡ್ ಎಂಬ ಸ್ವಂತ ಕಂಪೆನಿಯನ್ನು ಆರಂಭಿಸಿದರು. ಕೃಷಿಗೆ ಸಂಬಂಧಿಸಿದ ರಾಸಾಯನಿಕಗಳ ಗೊಬ್ಬರಗಳು ಹಾಗೂ ಔಷಧಗಳನ್ನು ಹೇರಂಬ ಇಂಡಸ್ಟ್ರೀಸ್ ಲಿಮಿಟೆಡ್ ಮೂಲಕ ಉತ್ಪಾದಿಸಲಾಗುತ್ತಿದ್ದು, ಆರಂಭದ ಅವಧಿಯಲ್ಲೇ ಈ ಕಂಪೆನಿ ಯಶಸ್ಸು ಸಾಧಿಸಿ ಬಹುಬೇಡಿಕೆ ಪಡೆದು ಜನಮನ್ನಣೆ ಗಳಿಸಿ ಪ್ರಸಿದ್ಧಿಗೆ ಬಂತು. ಇದಕ್ಕೆ ಮುಖ್ಯ ಕಾರಣವೆನೆಂದರೆ, ಸಂಸ್ಥೆಯ ಉತ್ಪನ್ನಗಳ ಬಳಕೆಯಿಂದ ಗ್ರಾಹಕರಿಗೆ ಉತ್ತಮ ಇಳುವರಿ ಮತ್ತು ಕೃಷಿಗೆ ಸಂಬಂಧಿಸಿದ ರೋಗಗಳಿಂದ ಮುಕ್ತಿ ಪಡೆಯಲು ಸಾಧ್ಯವಾಗಿದ್ದು, ಇಲ್ಲಿ ಉಲ್ಲೇಖನೀಯವಾಗಿದೆ.
ಹೇರಂಬ ಇಂಡಸ್ಟ್ರೀಸ್ ಲಿಮಿಟೆಡ್ ಅದ್ಭುತ ಫಲ ಕೊಟ್ಟಿದ್ದರಿಂದ ದೇಶದಾದ್ಯಂತ ಸಂಸ್ಥೆಯ ಉತ್ಪನ್ನಗಳನ್ನು ಸರಬರಾಜು ಮಾಡಿ ಅದರಲ್ಲೂ ಅವರು ಸಫಲತೆ ಗಳಿಸಿದರು. ಸುಮಾರು 28 ವರ್ಷಗಳ ಹಿಂದೆ ಮುಂಬಯಿಯಲ್ಲಿ ಸದಾಶಿವ ಕೆ. ಶೆಟ್ಟಿ ಮತ್ತು ರಘರಾಮ ಶೆಟ್ಟಿ ಸಹೋದರರಿಂದ ಆರಂಭವಾದ ಹೇರಂಬ ಇಂಡಸ್ಟ್ರೀಸ್ ಲಿಮಿಟೆಡ್ ಕಂಪೆನಿಯು ಇಂದು ದೇಶದಲ್ಲೇ ಅತ್ಯಂತ ಪ್ರಮುಖ ಬಹುಬೇಡಿಕೆಯ ಪ್ರತಿಷ್ಠಿತ ಕಂಪೆನಿಯಾಗಿ ಬೆಳೆದಿದೆ. ಇದನ್ನು ಉತ್ತಮವಾಗಿ ಮುನ್ನಡೆಸುತ್ತಿರುವ ಸದಾಶಿವ ಕೆ. ಶೆಟ್ಟಿಯವರು ಇಂದು ಸಹಸ್ರಾರು ಉದ್ಯೋಗಿಗಳಿಗೆ ಅನ್ನದಾತರಾಗಿದ್ದಾರೆ. ಈ ಕಂಪೆನಿಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಮಂದಿ ಉದ್ಯೋಗಿಗಳಿದ್ದಾರೆ.
ಹೇರಂಬ ಇಂಡಸ್ಟ್ರೀಸ್ ಲಿಮಿಟೆಡ್ ಕೀಟನಾಶಕ ರಫ್ತು ವಿಷಯದಲ್ಲಿ ಗಣನೀಯ ಸಾಧನೆ ದಾಖಲಿಸಿದ್ದು, 11 ವರ್ಷಗಳ ಹಿಂದೆಯೇ ಎಕ್ಸ್ಪೋರ್ಟ್ ಅವಾರ್ಡ್ ಅಂದರೆ ರಫ್ತು ಪ್ರಶಸ್ತಿ ಪಡೆದು ಕೊಂಡಿದೆ. ಇದನ್ನು ಆಗಿನ ಮಾಜಿ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಸರಕಾರದ ಪರವಾಗಿ ಕಂಪೆನಿಗೆ ನೀಡಿದ್ದರು. ಇದು ಕಂಪೆನಿಯ ಪ್ರತಿಷ್ಠೆಯನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ಕೊಂಡ್ಯೊಯ್ದಿದೆ.
ಹಣವಂತರೆಲ್ಲಾ ದಾನಿಗಳಲ್ಲ, ಶ್ರೀಮಂತರೆಲ್ಲಾ ತಮ್ಮ ಪ್ರತಿಷ್ಠೆ, ಅಂತಸ್ತನ್ನು ಬದಿಗಿರಿಸಿ ಸಮಾಜದ ಪರವಾಗಿ, ಬಡವರ ಧ್ವನಿಯಾಗಿ ನಿಲ್ಲುವವರಲ್ಲ. ಆದರೆ, ಪ್ರತಿಷ್ಠಿತ ಉದ್ಯಮಿ ಸದಾಶಿವ ಕೆ. ಶೆಟ್ಟಿ ಅವರು ಈ ಮಾತಿಗೆ ಹೊರತಾಗಿದ್ದಾರೆ. ಅವರೊಬ್ಬ ಹೃದಯ ಶ್ರೀಮಂತಿಕೆಯ ಬಡವರ ಬಂಧು, ಅಗರ್ಭ ಶ್ರೀಮಂತರಾಗಿದ್ದರೂ, ತನ್ನ ದುಡಿಮೆಯ ಬಹುಪಾಲನ್ನು ಅವರು ಸಮಾಜಸೇವೆಗೆ ಮೀಸಲಿಟ್ಟಿದ್ದಾರೆ. ಇಂದಿಗೂ ಹುಟ್ಟೂರಿನ ವ್ಯಾಮೋಹವನ್ನು ಬಿಟ್ಟಿರಲಾರದ ಅವರು ಊರಿನ ಹತ್ತು ಹಲವು ಸಮಾಜಪರ ಸೇವಾಕಾರ್ಯಗಳಿಗೆ ತುಂಬು ಹೃದಯದ ಆರ್ಥಿಕ ಸಹಕಾರವನ್ನು ನೀಡುತ್ತಾ ಬಂದಿದ್ದಾರೆ.
ಊರಲ್ಲಿರುವ ಹಲವಾರು ದೇವಸ್ಥಾನ, ದೈವಸ್ಥಾನ ಮತ್ತು ಭಜನಾ ಮಂದಿರ ಸಮಿತಿಯಲ್ಲಿದ್ದುಕೊಂಡು ಧಾರ್ಮಿಕ ಸೇವೆ ಸಲ್ಲಿಸುತ್ತಿದ್ದಾರೆ. ಕಷ್ಟದಲ್ಲಿರುವವರಿಗೆ, ನೊಂದವರಿಗೆ, ಅನಾರೋಗ್ಯ ಪೀಡಿತರಿಗೆ ಆರ್ಥಿಕ ನೆರವು ನೀಡುತ್ತಾ ಬಂದಿದ್ದಾರೆ. ಬಡ ಕುಟುಂಬಗಳ ಎಷ್ಟೋ ಮಂದಿಗೆ ಉದ್ಯೋಗವನ್ನು ನೀಡಿದ ಅವರು ಕೃಷಿ ಮೇಲಿನ ಪ್ರೀತಿಯನ್ನು ಉಳಿಸಿ ಬೆಳೆಸಿದ್ದಾರೆ. ಅದಕ್ಕವರ ಕೃಷಿಗೆ ಸಂಬಂಧಿಸಿದ ಉತ್ಪನ್ನಗಳಿಗೆ ಹೆಸರು ವಾಸಿಯಾದ ಹೇರಂಬ ಇಂಡಸ್ಟ್ರೀಸ್ ಲಿಮಿಟೆಡ್ ದೇಶ ವಿದೇಶಗಳಲ್ಲಿ ಪ್ರಖ್ಯಾತಿ ಹೊಂದಿರುವುದೇ ಪ್ರಮುಖ ಸಾಕ್ಷಿಯಾಗಿದೆ. ಅವರು ಮುಂಬಯಿಯ ಬಂಟರ ಸಂಘ, ಹುಟ್ಟೂರಿನ ಸೇರಿದಂತೆ ಹಲವಾರು ದೇವಸ್ಥಾನಗಳಲ್ಲಿ ಟ್ರಸ್ಟಿಯಾಗಿದ್ದಾರೆ. ಊರಿನ ಅನೇಕ ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯದಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡಿದ್ದಾರೆ. ದೇವಸ್ಥಾನಗಳಿಗೆ ಆರ್ಥಿಕ ಸಹಕಾರ ನೀಡಿ ಕೊಡುಗೈ ದಾನಿ ಎಂದು ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಕೃಷಿ ಪ್ರಧಾನ ಸಂಸ್ಕೃತಿ ಹಾಗೂ ಧಾರ್ಮಿಕ ಕೇಂದ್ರಗಳ ನಂಟನ್ನು ತನ್ನ ಬದುಕಿನಲ್ಲಿ ಅಳವಡಿಸಿ ಸಾರ್ಥಕತೆಯನ್ನು ಕಂಡಿರುವ ಅವರನ್ನು ಅನೇಕ ಸಂಘ, ಸಂಸ್ಥೆಗಳು ಹಾಗೂ ಧಾರ್ಮಿಕ ಕೇಂದ್ರಗಳು ಸನ್ಮಾನಿಸಿ ಗೌರವಿಸಿವೆ. ಸದಾಶಿವ ಕೆ. ಶೆಟ್ಟಿ ಮತ್ತು ಸುಜಾತ ಶೆಟ್ಟಿ ದಂಪತಿಗಳಿಗೆ ಇಬ್ಬರು ಮಕ್ಕಳು. ಶ್ರೇಯಾ ಶೆಟ್ಟಿ ಮತ್ತು ಶ್ರೀರಾಜ್ ಶೆಟ್ಟಿ. ಶ್ರೀರಾಜ್ ಶೆಟ್ಟಿ ಅವರು ತಂದೆ ಸದಾಶಿವ ಕೆ. ಶೆಟ್ಟಿಯವರೊಂದಿಗೆ ಕಂಪೆನಿ ವ್ಯವಹಾರ ನೋಡಿಕೊಳ್ಳುತ್ತಿದ್ದಾರೆ. ಶ್ರೀರಾಜ್ ಶೆಟ್ಟಿ ಅವರ ಪತ್ನಿ (ಸದಾಶಿವ ಶೆಟ್ಟಿಯವರ ಸೊಸೆ) ಡಾ. ಪ್ರಕೃತಿ ಶೆಟ್ಟಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸದಾಶಿವ ಕೆ. ಶೆಟ್ಟಿಯವರ ಮಗಳು ಶ್ರೇಯಾ ಶೆಟ್ಟಿ ಅವರಿಗೆ ಮೇಘರಾಜ್ ಶೆಟ್ಟಿ ಅವರೊಂದಿಗೆ ವಿವಾಹ ಮಾಡಿಕೊಡಲಾಗಿದೆ. ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕರಾಗಿರುವ ದೇವತಾ ಮನುಷ್ಯ ಸದಾಶಿವ ಶೆಟ್ಟಿಯವರಿಗೆ ಸಮಸ್ತ ಬಂಟ ಸಮಾಜದ ಪರವಾಗಿ ಹುಟ್ಟುಹಬ್ಬದ ಶುಭಾಶಯವನ್ನು ಕೋರುತ್ತಾ ಭಗವಂತ ಆರೋಗ್ಯ, ಐಶ್ವರ್ಯ ಸಕಲ ಸಂಪತ್ತನ್ನು ನೀಡಿ ಹರಸಲಿ ಎಂದು ಶುಭ ಹಾರೈಸುತ್ತಿದ್ದೇವೆ.