ಉಡುಪಿ ಜಿಲ್ಲೆಯ ಬ್ರಹ್ಮಾವರದಿಂದ ಬಾರಕೂರಿಗೆ ಹೋಗುವ ಮುಖ್ಯರಸ್ತೆಯಲ್ಲಿ ದೊಡ್ಡ ಸೇತುವೆಗಿಂತ ಮುನ್ನ ಸಿಗುವ ಸಣ್ಣ ಸೇತುವೆಯ ಪೂರ್ವಕ್ಕೆ ಮಟಪಾಡಿ ಶೆಟ್ಟರ ಕುದ್ರುವಿನ ಗದ್ದೆ ಮಧ್ಯದಲ್ಲಿ ಬೊಬ್ಬರ್ಯನ ಸನ್ನಿಧಾನವಿದೆ. ಶೆಟ್ಟರಕುದ್ರಿನಲ್ಲಿ ಒಂದಿಷ್ಟು ಬಂಟರ ಮನೆಗಳಿದ್ದು ಅವರೇ ಆಡಳಿತೆದಾರರು. ನೂರು ವರ್ಷಗಳ ಹಿಂದೆ ಶೆಟ್ಟರು ಬ್ರಹ್ಮಾವರಕ್ಕೆ ಹೋಗುವುದು ಗದ್ದೆಯ ಅಂಚುಕಟ್ಟಿನಲ್ಲಿ ನಡೆದುಕೊಂಡು. ವಾಪಸು ಬರುವಾಗ ಕತ್ತಲೆಯಾದರೆ ನೆನಪಾಗುವುದು ಬೊಬ್ಬರ್ಯ. “ಓ ಬೊಬ್ಬರ್ಯ, ಮನೆಗೆ ಹೋಯ್ಕಲೆ ಮಾರಾಯ” ಎನ್ನುತ್ತಿದ್ದರಂತೆ. ಬೊಬ್ಬರ್ಯ ಎರಡು ಸೂಡಿ (ದೊಂದಿ- ಸೂಟೆ)ಗಳನ್ನು ಕಳುಹಿಸುತ್ತಿದ್ದನೋ, ಆತನೇ ಸೂಡಿಯಾಗಿ ಬರುತ್ತಿದ್ದನೋ ನಮ್ಮ ಮಂದಬುದ್ಧಿಗೆ ಅರ್ಥ ವಾಗದ್ದು. ಶೆಟ್ಟರು ಮನೆ ಸೇರುತ್ತಿದ್ದರು. ಇದನ್ನು ತಮ್ಮ ಸೋದರಮಾವ ದಿ| ಶೀನಪ್ಪ ಶೆಟ್ಟಿಯವರು ಹೇಳಿರುವು ದನ್ನು ಹಿರಿಯರಾದ ಕರುಣಾಕರ ಶೆಟ್ಟಿಯವರೂ, ತಾಯಿ ದಿ| ರತ್ನಾವತಿ ಶೆಟ್ಟಿಯವರು ಹೇಳುತ್ತಿದ್ದುದನ್ನು ಬ್ರಹ್ಮಾವರ ತಾ.ಪಂ. ಮಾಜಿ ಉಪಾಧ್ಯಕ್ಷ ಸುಧೀರ್ಕುಮಾರ್ ಶೆಟ್ಟಿಯವರೂ ನೆನಪು ಮಾಡುತ್ತಾರೆ.
ಜೀವಂತ ಸಾಕ್ಷಿಗಳು
50 ವರ್ಷಗಳ ಹಿಂದಿನ ಘಟನೆ. ಮಾರ್ಟಿನ್ ಲೋಬೋ ಬೊಬ್ಬರ್ಯ ಕಟ್ಟೆ ಪಕ್ಕದಲ್ಲಿದ್ದ ಬಾವಿಯಿಂದ ನೀರು ತರು ತ್ತಿದ್ದರು. ಮಾರ್ಟಿನ್ ತುಂಬಿದ ಗರ್ಭಿಣಿ. ಮನೆಯವರೆಲ್ಲರೂ ಬ್ರಹ್ಮಾವರದ ಒಂದು ಮದುವೆಗೆ ಹೋಗಿದ್ದರು. ಹಿಂದಿನ ದಿನ ಮಳೆ ಬಂದು ಮಣ್ಣು ಹಸಿಯಾಗಿತ್ತು. ಮಾರ್ಟಿನ್ ಬಾಗಿ ನೀರು ಸೇದುವಾಗ ಮಣ್ಣು ಕುಸಿದು ನೀರಿಗೆ ಬಿದ್ದರು. ಎರಡು ಬಾರಿ ಮುಳುಗಿ ಮೇಲೆದ್ದು “ಬೊಬ್ಬರ್ಯ ನನ್ ಕತೆ ಮುಗೀತು ಮಾರಾಯ” ಎಂದಾಗ, ಹಿಡಿದುಕೊಳ್ಳಲು ಆಧಾರ ಸಿಕ್ಕಿತು. ಒಕ್ಕಲಾಗಿದ್ದ ಕುಪ್ಪ ಪೂಜಾರಿ ಮಟಪಾಡಿ ಬೋಳುಗುಡ್ಡೆಗೆ ಹೋಗಿದ್ದವರು ಬೊಬ್ಬೆ ಕೇಳಿ ಅದೇ ಹೊತ್ತಿಗೆ ಬಂದು ಮೇಲೆತ್ತಿದರು. “ಒಂದೇ ಒಂದು ಗಾಯ, ನೋವು ಆಗಲಿಲ್ಲ’ ಎಂಬ ನೆನಪು 77 ವರ್ಷದ ಮಾರ್ಟಿನ್ರಿಗೆ ಈಗಲೂ ಇದೆ. ಆಗ ಹೆತ್ತ ಮಗು ಗಟ್ಟಿಮುಟ್ಟಿದ್ದ ಕಾರಣ “ಬೊಬ್ಬರ್ಯ’ ಎಂದು ಕರೆಯುತ್ತಿದ್ದರು. ಆ ಮಗುವಿಗೆ (ಐವನ್ ಲೋಬೋ) ಈಗ 50 ವರ್ಷ. ಚಾರ್ಲಿ ಲೂವಿಸ್ರಿಗೂ ಬೊಬ್ಬರ್ಯ ದೊಂದಿ ತೋರಿಸಿದ್ದ. 25 ವರ್ಷಗಳ ಹಿಂದೆ ಮೃತಪಟ್ಟ ಚಾರ್ಲಿಯವರು ಹೇಳಿರುವುದನ್ನು ಇದೇ ಐವನ್ ಕೇಳಿಸಿಕೊಂಡಿದ್ದಾರೆ. 30 ವರ್ಷಗಳ ಹಿಂದೆ ಟ್ರ್ಯಾಕ್ಟರ್ ಬಂದ ಕಾಲದಲ್ಲಿ ಮಟಪಾಡಿಯ ಬಾಬುಟ್ಟಿ ಡಿ’ಆಲ್ಮೇಡರು ಬೊಬ್ಬರ್ಯನ ಪಕ್ಕದ ಗದ್ದೆ ಉಳುವಾಗ ಒಂದು ಚಿನ್ನದ ರಾಡ್ ಕಂಡದ್ದು, ಅದಕ್ಕೆ ಕೈ ಹಾಕಿದಾಗ ಅದು ಸರ್ಪವಾಗಿ ಕಂಡ ಅನುಭವ ಸ್ವತಃ ಐವನ್ರಿಗೆ ಇದೆ.
ದೊಂದಿ ಅಗತ್ಯವಿರದೆ ಎಷ್ಟೋ ವರ್ಷಗಳಾಗಿವೆ. ಇದು ಈಗ ಬಡತನದ ಸಂಕೇತ. ಆಗ ಟಾರ್ಚ್ ಇರಲಿಲ್ಲ, ವಿದ್ಯುತ್ ಗಗನಕುಸುಮ. ಆಗ ಬೊಬ್ಬರ್ಯನಿಂದ ನಿರೀಕ್ಷಿಸುತ್ತಿದ್ದುದು ದಾರಿ ತೋರಿಸಲು ಬೆಳಕು ಮಾತ್ರ. ಈಗ ದೊಂದಿ ಯಾರಿಗೆ ಬೇಕು? ದೊಂದಿ ಬೇಡವಾದರೂ ಬೊಬ್ಬರ್ಯ ದೊಂದಿಯನ್ನು ತೋರಿಸುವುದಾದರೆ ಈಗ “ಪವಾಡ’ ಎಂಬ ಬೋರ್ಡ್ ತಗಲಿ “ಬಡ ಬೊಬ್ಬರ್ಯ” ಸ್ವರ್ಣಮಂದಿರ ವಾಸಿಯಾದಾನು! ಪ್ರಧಾನಿಯೇ ಬೊಬ್ಬರ್ಯನ ಗದ್ದೆಗೆ ಬಂದರೆ ಅಚ್ಚರಿ ಇಲ್ಲ, ಅವರು ಬರುವಂತೆ ಮಾಡುವ ಚಾಕಚಕ್ಯತೆ ನಮಗಿದೆಯಲ್ಲ! ಈಗಂತೂ ಚುನಾವಣೆ “ಪರ್ವಕಾಲ”. ರಾಜಕೀಯ ಪಕ್ಷಗಳ ಘಟಾನುಘಟಿಗಳು ತಾ ಮೇಲು, ನಾ ಮೇಲು ಎಂದು ಬೊಬ್ಬರ್ಯನ “ಪಾದಸೇವಾ ಕೈಂಕರ್ಯ” ನಡೆಸುತ್ತಿರಲಿಲ್ಲವೆ? ತಾತ್ಪರ್ಯವಿಷ್ಟೆ, ದೊಂದಿ ನಮಗೆ ದಾರಿ ತೋರಲು ಅಲ್ಲ, ಆತನಿಗೇ ದಾರಿ ತೋರಿಸಲು! ಹಣಬಲದಿಂದ ನೈಸರ್ಗಿಕ ಸ್ಥಾನಗಳನ್ನು ಅನೈಸರ್ಗಿಕವಾಗಿಸಲು!
ವಿಶ್ವಶಕ್ತಿ (ಕಾಸ್ಮಿಕ್ ಪವರ್), ಅಕಲ್ಟ್ ಪವರ್/ದೇವತಾಶಕ್ತಿಗಳು ಎಷ್ಟು ಸರಳ, ನಿಷ್ಪಕ್ಷಪಾತಿಯಾಗಿರುತ್ತವೆೆ? ಇವುಗಳಿಗೆ “ಸೋ ಕಾಲ್ಡ್ ದೊಡ್ಡಸ್ತಿಕೆ” ಬೇಕೆ? ಜೀವಿಗಳ ಕನಿಷ್ಠ ಅಗತ್ಯಗಳನ್ನು ನಿಸರ್ಗ ಕೊಡಬಲ್ಲದು, ಆದರೆ ದುರಾಸೆಗಳನ್ನಲ್ಲ. ನಿಷ್ಕಲ್ಮಶ ಮನಸ್ಸು, ಪ್ರಾಮಾಣಿಕತೆ, ಕಪಟವಿಲ್ಲದ, ಸತ್ಯಸಂಧತೆಯಂತಹ ಖರ್ಚೇ ಇಲ್ಲದ ಕೆಲವು ಸರಳ ಸುಗುಣಗಳನ್ನು ಮನುಷ್ಯ ಬೆಳೆಸಿಕೊಂಡರೆ ಸಾಕಲ್ಲ ಎಂಬ ಸಂದೇಶ ಸಿಗುತ್ತದೆ. “ದೇವರನ್ನು ನೋಡಬೇಕು ಎಂದು ಬಯಸಬೇಡಿ. ದೇವರು ನಿಮ್ಮನ್ನು ನೋಡುವಂತೆ ವರ್ತಿಸಿ”- ಇಸ್ಕಾನ್ ಸ್ಥಾಪಕ ಶ್ರೀಶೀಲ ಪ್ರಭುಪಾದರು ಮತ್ತೆ ಮತ್ತೆ ಹೇಳುತ್ತಿದ್ದ ವಾಕ್ಯವಿದು. ನಾವು ನಿತ್ಯವೂ ಮೇಲಿನ ಅಧಿಕಾರಸ್ಥರನ್ನು ಮೆಚ್ಚಿಸಲು ಯತ್ನಿಸುವುದಿಲ್ಲವೆ? ಮೇಲಾಧಿಕಾರಿಗಳೇ ಮೆಚ್ಚುವಂತೆ ವರ್ತಿಸುತ್ತೆವೆಯೆ? ಇದೇ ಬುದ್ಧಿಯನ್ನು ದೇವರ ಕುರಿತೂ ಅಪ್ಲೆ„ ಮಾಡಿದ್ದೇವೆ.
ಬೊಬ್ಬರ್ಯನ ಮೂಲ ಗೊತ್ತೆ?
ಬ್ರಹ್ಮಾವರ ಸೈಂಟ್ ಮೇರೀಸ್ ಸೀರಿಯನ್ ಕಾಲೇಜಿನ ಇತಿಹಾಸ ವಿಭಾಗದ ವಸ್ತು ಸಂಗ್ರಹಾ ಲಯದಲ್ಲಿ ದಿ| ಬಿ. ವಸಂತ ಶೆಟ್ಟಿಯವರು ಪ್ರಾಂಶುಪಾಲ ರಾಗಿದ್ದಾಗ ಬೊಬ್ಬರ್ಯನ ಕಲ್ಲಿನ ವಿಗ್ರಹವಿರಿಸಿದ್ದಾರೆ. ವಿಗ್ರಹದಲ್ಲಿ ಗಡ್ಡವಿದೆ. ಸಂಶೋಧಕರ ಪ್ರಕಾರ ಬೊಬ್ಬರ್ಯನ ತಂದೆ ಮುಸ್ಲಿಂ ಅಂತೆ. ವಾತಾವರಣ ದಲ್ಲಿರುವ ಯಾವುದೇ ಜೀವಾತ್ಮನೆಂಬ ಬೀಜವನ್ನು ಯಾವುದೇ ಗದ್ದೆಯಲ್ಲಿ ಬಿತ್ತಿ ಬೆಳೆಸಲು ನಿಸರ್ಗಕ್ಕೆ ಗೊತ್ತಿದೆ. ಈ “ಇಲಾಖೆ” ಅಧಿಕಾರವನ್ನು ನಿಸರ್ಗವೇ (ದೇವರೆನ್ನಬಹುದು) ಇಟ್ಟುಕೊಂಡಿದೆ. ಅದು
ಕೊಟ್ಟದ್ದನ್ನು ಪಡೆಯುವುದು ಮಾತ್ರ ನಮ್ಮ ಇತಿಮಿತಿ. ಅದುವೇ ಕೊಟ್ಟದ್ದನ್ನು ಪಡೆದು, ಅದು ಕೊಟ್ಟ ಶಕ್ತಿ ಯಿಂದಲೇ “ಧಿಮಾಕು” (ಅಹಂ) ತೋರಿಸುವುದೂ ಇದೆ! ಇದು ಒಂಥರ “ಮಿನಿಭಸ್ಮಾಸುರ ಬುದ್ಧಿ”!