ಸಹಸ್ರಾರು ಸಂಖ್ಯೆಯ ಅಭಿಮಾನಿಗಳು, ಕಾರ್ಯಕರ್ತರು, ಬೆಂಬಲಿಗರ ಜಯಘೋಷದೊಂದಿಗೆ ಮೂಡುಬಿದಿರೆ ಪೇಟೆಯಲ್ಲಿ ಮೆರವಣಿಗೆ ನಡೆಸಿದ ಕಾಂಗ್ರೆಸ್ ಮುಖಂಡ ಮಿಥುನ್ ಎಂ. ರೈ ಅವರು ಸೋಮವಾರ ಮೂಡುಬಿದಿರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಸ್ವರಾಜ್ ಮೈದಾನದಲ್ಲಿ ನಡೆದ ಬಹಿರಂಗ ಸಮಾವೇಶದ ಬಳಿಕ ಮಿಥುನ್ ಅವರು ತೆರೆದ ವಾಹನದಲ್ಲಿ ಕಾರ್ಯಕರ್ತರತ್ತ ಕೈ ಬೀಸುತ್ತಾ, ನಮಸ್ಕರಿಸುತ್ತಾ ಮೆರವಣಿಗೆಯಲ್ಲಿ ಸಾಗಿದರು. ಮಿಥುನ್ ಅವರ ಅಚ್ಚುಮೆಚ್ಚಿನ ಪಿಲಿ ನಲಿಕೆ ತಂಡಗಳು ಮತ್ತು ಚೆಂಡೆ ಬಳಗ ಜತೆಯಾಗಿದ್ದು, ಮೆರವಣಿಗೆಯ ರಂಗು ಹೆಚ್ಚಿಸಿತು. ಬಾವುಟಗಳನ್ನು ಬೀಸುತ್ತಾ ಸಾಗಿದ ಕಾರ್ಯತರ್ಕರ ಉದ್ಘೋಷ ಮುಗಿಲು ಮುಟ್ಟಿತ್ತು. ಪೇಟೆಯ ನಿಶ್ಮಿತಾ ಟವರ್ಸ್ ವರೆಗೆ ಸಾಗಿದ ಮೆರವಣಿಗೆ ವಾಪಸು ಆಡಳಿತ ಸೌಧದವರೆಗೆ ಬಂತು.
ಇದಕ್ಕೂ ಮುನ್ನ ಕ್ಷೇತ್ರ ವ್ಯಾಪ್ತಿಯ ಕಟೀಲು ದುರ್ಗಾಪರಮೇಶ್ವರಿರೀ ದೇವಸ್ಥಾನ, ಬಪ್ಪನಾಡು ದುರ್ಗಾಪರಮೇಶ್ವರೀ ದೇವಸ್ಥಾನ, ಅಲಂಗಾರು ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನ, ಪುತ್ತಿಗೆ ಸೋಮನಾಥೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿ ದೇವರ ದರ್ಶನ ಮಾಡಿದರು.
ಬಹಿರಂಗ ಸಭೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಶಾಸಕ ಯು.ಟಿ. ಖಾದರ್, ಮಿಥುನ್ ರೈ ಅವರ ರಾಜಕೀಯ ಗುರು ಮಾಜಿ ಸಚಿವ ಅಭಯಚಂದ್ರ ಜೈನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಮತಾ ಗಟ್ಟಿ, ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಪಿಂಟೋ, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶಾಲೆಟ್ ಪಿಂಟೋ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲುಕಾ¾ನ್ ಬಂಟ್ವಾಳ, ಪ್ರಮುಖರಾದ ಸುಧೀರ್ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ, ಎ.ಸಿ. ವಿನಯರಾಜ್, ಎಂ. ಶಶಿಧರ ಹೆಗ್ಡೆ, ಭಾಸ್ಕರ ಕೆ. ತುಂಬೆ ಪ್ರಕಾಶ್ ಶೆಟ್ಟಿ, ಯು.ಪಿ.ಇ ಬ್ರಾಹಿಂ, ಸುಪ್ರಿಯಾ ಮೊದಲಾದವರು ಭಾಗವಹಿಸಿದ್ದರು.
ಹೆತ್ತವರ ಉಪಸ್ಥಿತಿ, ಆಶೀರ್ವಾದ
ಸಭೆಯಲ್ಲಿ ಭಾಗವಹಿಸಿದ್ದ ತಂದೆ ಖ್ಯಾತ ಮೂಳೆ ತಜ್ಞ ಡಾ| ಮಹಾಬಲ ರೈ ಮತ್ತು ತಾಯಿ ಮಲ್ಲಿಕಾ ಎಂ. ರೈ ಅವರಿಂದ ಮಿಥುನ್ ರೈ ಆಶೀರ್ವಾದ ಪಡೆದರು. ಅಣ್ಣ ಡಾ| ಮನೀಶ್ ರೈ ಅವರೂ ಈ ವೇಳೆ ಉಪಸ್ಥಿತರಿದ್ದರು.
ಸೂರ್ಯ-ಚಂದ್ರರ ಚಿತ್ರದ ಕೆಂಪು ಶಾಲು
ಮಿಥುನ್ ರೈ ಅವರು ನಾಮಪತ್ರ ಸಲ್ಲಿಕೆ ವೇಳೆ ಕಡು ನೀಲಿ ಬಣ್ಣದ ಪ್ಯಾಂಟ್ ಮತ್ತು ಬಿಳಿ ಶರ್ಟ್ ಧರಿಸಿದ್ದರು. ಕಡು ಕೆಂಪು ಬಣ್ಣದ ಸೂರ್ಯ-ಚಂದ್ರರ ಚಿತ್ರವಿರುವ ತುಳು ನಾಡಿನ ಬಾವುಟ ಎಂದು ಹೆಸರು ಪಡೆದಿರುವ ಶಾಲು ಧರಿಸಿದ್ದರು. ಸ್ವರಾಜ್ ಮೈದಾನದಲ್ಲಿ ನಡೆಯುತ್ತಿದ್ದ ಬಹಿರಂಗ ಸಮಾವೇಶಕ್ಕೆ ಆಗಮಿಸಿದ ಅವರು ವೇದಿಕೆ ಹತ್ತಿ ಮೊದಲು ಸಭೆಯ ಮುಂಭಾಗದಲ್ಲಿದ್ದ ಕಾರ್ಯಕರ್ತರಿಗೆ ಅಡ್ಡ ಬಿದ್ದರು. ಬಳಿಕ ತಮ್ಮ ರಾಜಕೀಯ ಗುರು ಅಭಯಚಂದ್ರ ಜೈನ್ ಅವರ ಕಾಲಿಗೆ ಎರಗಿ ಆಶೀರ್ವಾದ ಪಡೆದರು.
ಈ ಬಾರಿಯ ಚುನಾವಣ ಹಬ್ಬವನ್ನು ಪ್ರಾಮಾಣಿಕವಾಗಿ ಆಚರಿಸಬೇಕು. ಮೇ 13ರಂದು ನಡೆಯುವ ಮತ ಎಣಿಕೆ ಸಂದರ್ಭ ಎಲ್ಲ 221 ಬೂತ್ಗಳಲ್ಲೂ ಕಾಂಗ್ರೆಸ್ ಮುನ್ನಡೆ ಎನ್ನುವ ಮಾತು ಕೇಳಿ ಬಂದು, ಸೂರ್ಯ-ಚಂದ್ರರು ಇರುವವರೆಗೆ ಕಾಂಗ್ರೆಸ್ ಪತಾಕೆ ಹಾರಿಸುವ ಸಂಕಲ್ಪ ನಾವು ಮಾಡಬೇಕು.