ಸುಕುಮಾರ ಶೆಟ್ಟರ ರಾಜಕೀಯ ಇನ್ನಿಂಗ್ಸ್ ಮುಗಿದಿದೆ. ಆದರೆ ಅವರ ಜೋರು, ಅವರ ಅಬ್ಬರ, ಅವರ ಸ್ಪೀಡು ಇದಕ್ಕೆ ಯಾರೆಂದರೆ ಯಾರಿಂದಲೂ ಬ್ರೇಕ್ ಹಾಕುವುದು ಸಾಧ್ಯವಿಲ್ಲ. ತನ್ನ ಸುತ್ತ ಇರುವವರೆಲ್ಲಾ ನನ್ನ ಅಭ್ಯುದಯಕ್ಕೇ ದುಡಿಯುತ್ತಿದ್ದಾರೆ ಎಂದು ಭಾವಿಸಿದ್ದು ಶೆಟ್ಟರ ದೊಡ್ಡ ತಪ್ಪು, ಮಗುವಿನಂತೆ ಕೆಲವರನ್ನ ನಂಬಿದ್ದು ಅವರ ಮತ್ತೊಂದು ತಪ್ಪು. ಕೆಲವು ದುಡುಕು ನಿಲುವು, ನೇರ ನಿಷ್ಠೂರ ಮಾತು, ಜೊತೆಗೆ ಪ್ರಬುದ್ಧರ ಸಲಹೆ ಇಲ್ಲದ ನಿರ್ಧಾರಗಳು ಶೆಟ್ಟರಿಗೆ ಟಿಕೇಟ್ ತಪ್ಪಿಸುವ ಹಂತಕ್ಕೆ ತಂದು ನಿಲ್ಲಿಸಿತೇ ಹೊರತು ಅವರ ವಿರುದ್ಧ ತಲೆ ಹೋಗುವಂತಹ ಆರೋಪಗಳೇನೂ ಇದ್ದಿರಲಿಲ್ಲ.
ಶೆಟ್ಟರು ಹಿಂದೂ ಸಂಘಟನೆಯ ಪೋಷಕ ಶಕ್ತಿಯಾಗಿ ನಿಂತಿದ್ದರು, ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷವಾದರೂ ಜೆಲ್ಲಿ ಕಾಣದ ರಸ್ತೆಗಳನ್ನ ಕಾಂಕ್ರೀಟಿಕರಣ ಮಾಡಿಸಿದ್ದರು, ಸರಿಯಾದ ಬಸ್ಸುಗಳೇ ಓಡಾಡದ ಊರಿನಲ್ಲಿ ನಿಂತು ವಿಮಾನ ನಿಲ್ದಾಣದ ಕನಸು ಕಟ್ಟಿದ್ದರು, ತಪ್ಪೋ ಆಮೇಲಿನ ಪ್ರಶ್ನೆ ಕೊಲ್ಲೂರಿನಿಂದ ಕೊಡಚಾದ್ರಿಗೆ ಕೇಬಲ್ ಕಾರುಗಳು ಓಡಾಡುವ ಕನಸು ಹರವಿದ್ದರು, ಇಲ್ಲಿಗೇ ತರ್ತೀನಿ ಮೆಡಿಕಲ್ ಕಾಲೇಜು ಎಂದು ಹುಬ್ಬು ಮೇಲೆ ಮಾಡಿಕೊಂಡು ಖಡಕ್ ಆಗಿ ಮೇಜು ಕುಟ್ಟಿ ಮಾತಾಡುತ್ತಿದ್ದರು, ಸುಕುಮಾರ ಶೆಟ್ಟರು ಎಂದರೆ ಅಧಿಕಾರಿಗಳಿಗೆ ನಡುಕ ಹುಟ್ಟಿಸಿದ್ದರು, ಬೆಳಿಗ್ಗೆ ನಾಲ್ಕು ಗಂಟೆಯಿಂದ ರಾತ್ರಿ ಹತ್ತು ಗಂಟೆಯ ತನಕವೂ ಜನರ ಕೈಗೆ ಸಿಕ್ಕಿದರು, ಅವರಲ್ಲಿರುವ ಒಂದೊಂದು ಕಾರೂ ವರ್ಷಕ್ಕೆ ಲಕ್ಷದ ರೇಂಜಿನಲ್ಲಿ ಮೀಟರ್ ಓಡಿಸಿಕೊಂಡಿವೆ! ಶೆಟ್ಟರು ಆ ಪರಿಯಲ್ಲಿ ಕ್ಷೇತ್ರವನ್ನ ತಿರುಗಿದರು, ಉಡುಪಿ ಜಿಲ್ಲೆಯಲ್ಲೇ ಕೋಟಿ ಕೋಟಿ ಹಣ ವ್ಯಯಿಸಿ ಪಕ್ಷ ಸಂಘಟನೆ ಮಾಡಿದರು, ಶೆಟ್ಟರು ಶಾಸಕರಾದ ಮೇಲೇ ಬೈಂದೂರಲ್ಲಿ ಬಿಜೆಪಿ ಭರ್ಜರಿಯಾಗಿ ಎದ್ದು ಬಂದಿತ್ತು, ಒಂದೊಂದು ಪಂಚಾಯತ್ ಅಭ್ಯರ್ಥಿಯ ಗೆಲುವಿಗಾಗಿಯೂ ಲಕ್ಷ ಲಕ್ಷ ತನ್ನ ಸ್ವಂತ ಹಣವನ್ನ ಸುರಿದರು, ಸಟ್ ಎಂದು ಸುಕುಮಾರ ಶೆಟ್ಟರ ತಪ್ಪೇನು ಕೇಳಿದರೆ ಅವರು ತನ್ನ ಸುತ್ತಲೂ ದೇವದುರ್ಲಭ ಕಾರ್ಯಕರ್ತರಿದ್ದರೂ ಅವರಿಗಿಂತಲೂ ಹೆಚ್ಚು ಕೆಲವೇ ಕೆಲವು ಬಿಳಿ ನಗೆಯವರನ್ನ ನಂಬಿದ್ದು. ಅವರಿಗಾಗಿ ಕೆಲಸ ಮಾಡಿದ ಅವರಿಂದ ಏನನ್ನೂ ನಿರೀಕ್ಷೆ ಮಾಡದ ಹಲವರಿದ್ದರೂ ಅವರು ಯಾರೂ? ಎನ್ನುವುದೂ ಶೆಟ್ಟರಿಗೆ ಕೊನೆ ತನಕವೂ ಅರ್ಥವಾಗದೇ ಹೋದದ್ದು ಮತ್ತು ಅವರ ಬಗ್ಗೆ ಮಾಹಿತಿಯನ್ನೂ ಅವರ ಮಗ್ಗುಲಲ್ಲೇ ಇದ್ದವರು ನೀಡದೆ ಉಳಿದದ್ದು!
ಶೆಟ್ಟರ ಯಾವ ರಾಜಕೀಯ ನಿಲುವಿನ ಹಿಂದೆಯೂ ನಾನಿರಲಿಲ್ಲ, ಅವರ ಕಾರಣಕ್ಕೆ ಯಾರ ವಿರುದ್ಧವೂ ಒಂದಕ್ಷರವೂ ನಾವ್ಯಾರೂ ಬರೆದಿಲ್ಲ, ಆದರೆ ನಾವು ಸುಕುಮಾರ ಶೆಟ್ಟರ ಪರ ಇದ್ದೇವೆ ಎನ್ನುವ ಒಂದೇ ಕಾರಣಕ್ಕೆ ನಮ್ಮ ವಿರುದ್ಧ ಬರೆದರು,ಬರೆಸಿದರು ವಿನಾಕಾರಣ, ನಾವು ಕೋಟಿಗಟ್ಟಲೆ ಸಂಪಾದನೆ ಮಾಡಿದ್ದೇವೆ ಎಂದರು, ಐವತ್ತು ಲಕ್ಷದ ಪ್ಯಾಕೇಜ್ ತೆಗೆದುಕೊಂಡಿದ್ದೇವೆ ಎಂದರು! ಅಲ್ಲಿ ಅವರವರ ನಡುವಿನ ಮುನಿಸಿಗೆ ನಮ್ಮ ಕಡೆ ಬೊಟ್ಟು ಮಾಡಿದರು, ಶೆಟ್ಟರ ಜೊತೆ ಇರುವ ಇವರೇ ನಮ್ಮ ಬಗ್ಗೆ ಏನಾದರೂ ಹೇಳಿದರೇನೋ ಎಂದು ಸುಖಾಸುಮ್ಮನೆ ಅನುಮಾನಿಸಿದರು! ಆದರೆ ನನಗೆ ಆದಾವುದರ ಅಗತ್ಯ ಇರಲಿಲ್ಲ. ಓರ್ವ ವ್ಯಕ್ತಿಯ ಜೊತೆ ಇದ್ದೇ ಎಂದರೆ ಜೀವದುಸಿರು ಇರುವ ತನಕವೂ ನಾನು ಆ ಮಾತಿಗೆ ಬದ್ಧ. ಸುಕುಮಾರ ಶೆಟ್ಟರ ಜೊತೆಗಿರುವ ಕಾರಣವೂ ಅಷ್ಟೇ!
ಇಷ್ಟು ವರ್ಷದಲ್ಲಿ ಸುಕುಮಾರ ಶೆಟ್ಟರ ಮನೆಯಲ್ಲಿ ಅವರ ಅಣ್ಣ, ತಮ್ಮ, ಮಾವ, ಸೊಸೆ ಹೀಗೆ ಅವರ ಕುಟುಂಬದ ಒಬ್ಬೇ ಒಬ್ಬನನ್ನೂ ನಾನು ನೊಡಿಲ್ಲ! ಅವರ ಕುಟುಂಬ ಸದಸ್ಯರು ಯಾರೆಂದರೆ ಯಾರೂ ನನಗೆ ಪರಿಚಿತರಲ್ಲ, ಮನು ಬೋವಿ, ಜಯಂತ್ ಚಂದನ್, ಹರ್ಷ ಖಾರ್ವಿ, ಅಡುಗೆಯ ಪೂಜಾರ್ರು , ಅವರ ಮನೆಯಲ್ಲೇ ಇರುವ ಕೊರಗರ ಕರಿಯ ಮತ್ತು ಭದ್ರ, ರಾಮನಿಗೆ ಹನುಮನಂತಹ ಹರ್ಷ ಬೋವಿ! ಹೆಚ್ಚೂ ಕಮ್ಮಿ ಸುಕುಮಾರ ಶೆಟ್ಟರ ಕುಟುಂಬ ಇಷ್ಟೇ ಎನ್ನುವುದು ನನ್ನ ನಂಬಿಕೆ. ಅವರದ್ದು ಎಷ್ಟು ಮಗು ಮನಸ್ಸು ಎಂದರೆ ತನ್ನ ಕೆಲಸಗಾರರ ಜೊತೆಗೂ ಮಗುವಿನ ಸಲುಗೆಯಲ್ಲಿ ಬೆರೆಯುವುದು.
ಇವತ್ತು ಸುಕುಮಾರ ಶೆಟ್ಟರು ಎಂದರೆ ರಾಜಕಾರಣ ನೆನಪಾಗುವುದಿಲ್ಲ ಬದಲಿಗೆ ಕೊಲ್ಲೂರು ನೆನಪಾಗುತ್ತದೆ. ಜಿ.ಎಸ್.ಆಚಾರ್ ಕಾಲದ ನಂತರವೇ ಸುಕುಮಾರ್ ಶೆಟ್ಟರು ಮನಸು ಮಾಡಿದ್ದರೆ ಶಾಸಕನಾಗುವ ಅವಕಾಶವಿತ್ತು, ಆದರೆ ಶೃಂಗೇರಿ ಶ್ರೀಗಳು ’ನಿನಗೆ ರಾಜಕೀಯ ತರವಲ್ಲ’ ಎಂದಾಗ ಅದನ್ನ ನಿರಾಕರಿಸಿದರು! ಶೆಟ್ಟರ ಯೋಗದಲ್ಲಿ ರಾಜಕಾರಣಿಯಾಗುವುದು ಬರೆದಿತ್ತೇನೋ ಒಂದು ಅವಧಿಗೆ ಅದನ್ನೂ ಅನುಭವಿಸಿದರು. ರಾಜಕಾರಣ ಅವರ ವೃತ್ತಿಯಲ್ಲ, ಬದುಕು ಅವರ ಪ್ಯಾಷನ್ ನಾಳೆ ಸಾವಿರ ರಾಜಕಾರಣಿ ಬಂದಾನು ಅದು ಒಬ್ಬ ಸುಕುಮಾರ ಶೆಟ್ಟಿ ಆಗಲಾರ. ಮೊನ್ನೆ ಮೊನ್ನೆಯ ತನಕ ಶೆಟ್ಟರ ವಿರುದ್ಧ ನಿಂತಿದ್ದವರೆಲ್ಲ ಶೆಟ್ಟರಿಗೆ ಟಿಕೇಟ್ ತಪ್ಪಿದಾಗ ಬಂದು ಬಂಡಾಯ ನಿಲ್ಲಿ ನಾವೆಲ್ಲ ನಿಮ್ಮ ಜೊತೆಗಿದ್ದೇವೆ ಎಂದಾಗ ಅವರು ಸ್ಥಿತಪ್ರಜ್ಞರಾಗಿಯೇ ಕೂತರು, ಪ್ರೆಸ್ ಮೀಟಿನಲ್ಲಿ ನಾನು ಬಿಜೆಪಿ ಬಿಜೆಪಿಯೇ ಪಕ್ಷೇತರ ಅಭ್ಯರ್ಥಿಯಾಗಲು ತಲೆ ಸರಿ ಇಲ್ವಾ? ಎಂದು ಅಬ್ಬರಿಸಿದ್ದರು. ಹಾಗಂತ ಶೆಟ್ಟರು ತಪ್ಪೇ ಮಾಡಲಿಲ್ಲವಾ? ಕೇಳಬೇಡಿ, ಅವರ ಬಹುದೊಡ್ಡ ತಪ್ಪು ಎಂದರೆ ’ಇದು ತಪ್ಪು ಶೆಟ್ಟರೆ’ ಎಂದ ಯಾರನ್ನೂ ಅವರು ಜೊತೆಗೆ ಇರಿಸಿಕೊಳ್ಳಲೇ ಇಲ್ಲ! ಕೆಲವೊಂದರ ಬಗ್ಗೆ ಅವರಿಗೆ ತಿಳಿಸಿ ಹೇಳುವ ಪ್ರಯತ್ನದಲ್ಲಿ ನಾನೂ ಸೋತು ’ಈ ಶೆಟ್ರಿಗೆ ಯಾರ್ ಹೇಳಿ ಸಾಯೋದ್ ಮಾರ್ರೆ ಎಂದು ನಾನೇ ವೈರಾಗ್ಯದಲ್ಲಿ ಸುಮ್ಮನುಳಿದು ಬಿಟ್ಟಿದ್ದೆ. ನಮ್ಮ ನಡುವೆ ಬಂದು-ಹೋದ ಮುನಿಸಿಗೆ ಇಂಥಹುದೇ ಹಲವು ಕಾರಣಗಳು ಅಷ್ಟೇ
ಇಷ್ಟು ದಿನ ಸುಕುಮಾರ ಶೆಟ್ಟರ ಬಗ್ಗೆ ಯಾವುದೋ ದಾರಿಯಲ್ಲಿ ಹೋಗುವವನೂ ಕೆಲವೊಮ್ಮೆ ಬೈಯುವುದೇ ನನ್ನ ಅಧಿಕಾರ ಎಂಬಂತೆ ನಿಂದಿಸಿದ್ದೂ ಇದೆ, ಆದರೆ ಇನ್ನು ಆ ಹಂಗು ಅವರ ಹೆಗಲಿಗಿಲ್ಲ, ಅಧಿಕಾರ ಎಂಬ ಶನಿ ಹೆಗಲಿಳಿದಿದೆ! ಇಲ್ಲಿಯ ತನಕದ ಮಜಲೇ ಬೇರೆ ಇನ್ನು ಮುಂದಿನ ವಜನ್ನೇ ಬೇರೆ. ಸುಕುಮಾರ ಶೆಟ್ಟರ ಹೊಸ ಇನ್ನಿಂಗ್ಸ್ ಮತ್ತೆ ಆರಂಭಗೊಂಡಿದೆ. ಅವರು ತನ್ನ ಬದುಕಿನ ಕೊನೇ ಉಸಿರಿನ ತನಕವೂ ವಿರಮಿಸುವುದಿಲ್ಲ. ಯಾವನೋ ವ್ಯಂಗ್ಯದಿಂದ ಕೈ ತೋರಿಸುವ ಯಾವ ಕೆಲಸವನ್ನೂ ಸುಕುಮಾರ ಶೆಟ್ಟರು ಮಾಡಿಲ್ಲ. ನೂರಾರು ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಕೋಟ್ಯಾಂತರ ರೂಪಾಯಿ ಚಾರಿಟಿ ಮಾಡಿದ್ದಾರೆ, ಅವರ ವಿದ್ಯಾಸಂಸ್ಥೆಯಲ್ಲಿ ಓದುವ ಮಕ್ಕಳ ಪೀ ಮನ್ನಾ ಮಾಡಿದ್ದು ಮೂರೂವರೆ ಕೋಟಿ ರೂಪಾಯಿ ಮೊತ್ತ! ಕೊರೋನಾ ಕಾಲದಲ್ಲಿಯೂ ತನ್ನ ಅಷ್ಟೂ ಸಿಬ್ಬಂಧಿಗಳಿಗೆ ಪೂರ್ತಿ ಸಂಬಳ ಕೊಟ್ಟದ್ದು ಸುಕುಮಾರ ಶೆಟ್ಟರು. ಅವರ ಜೊತೆಗೆ ಇದ್ದ ನಾನು ಇಂದಿಗೂ ಪಶ್ಚಾತಾಪ ಪಡುವುದು ಯಾಕೆಂದರೆ ಓರ್ವ ವ್ಯಕ್ತಿಗೆ ಅವರ ಸಂಸ್ಥೆಗೆ ಕೆಲಸ ಕೊಡಿಸಿ ಆ ಸಂಸ್ಥೆಯ ಮೇಲೇ ಅಪವಾದ ಬರುವಂತಾಗಿ ಇಂದಿಗೂ ಶೆಟ್ಟರು ಆ ಕಾರಣಕ್ಕೆ ನನ್ನ ಮೇಲೆ ಬೇಸರದಲ್ಲಿ ಮಾತಾಡುತ್ತಾರೆ! ಯಾರಿಗೋ ಉಪಕಾರ ಮಾಡುವ ಕಾರಣಕ್ಕೆ ನಾನು ಕೆಟ್ಟವನಾದೆ ಎನ್ನುವ ನೋವು ಬಿಟ್ಟರೆ ಇನ್ನೇನೂ ಇಲ್ಲ! ಸುಕುಮಾರ ಶೆಟ್ಟರು ನನಗೆ ಕೊಟ್ಟ ಕೊಡುಗೆ ಕೋಟಿ ಕೊಟ್ಟರೂ ಸಿಗುವುದಲ್ಲ ಅದು ಪ್ರಾಂಜಲವಾದ ಪ್ರೀತಿ, ಗಿಳಿಯಾರ್ ಬುದ್ಧಿವಂತ ಎನ್ನುವ ಹುಸಿ ನಂಬಿಕೆ, ಗಿಳಿಯಾರ್ ನನ್ನ ದೇವಸ್ಥಾನದ ದೋಸ್ತಿ ಎಂಬ ಅಕ್ಕರೆ!
ಶೆಟ್ಟರೆ ಕಡಲ ತೆರೆಯಂತೆ ಅಧಿಕಾರ ಬರುತ್ತದೆ ಹೋಗುತ್ತದೆ. ಇನ್ನು ನಿಮ್ಮನ್ನ ಪ್ರಶ್ನೆ ಮಾಡೋರು ಯಾರೂ ಇಲ್ಲ, ಹತ್ತು ವರ್ಷ ಈ ರಾಜಕಾರಣಕ್ಕಾಗಿ ಅಲೆದೂ ಅಲೆದೂ ದಣಿದಿದ್ದೀರಿ, ಸಾಯೋ ತನಕವೂ ಕೂತುಂಡರೂ ಕರಗದ ಆಸ್ತಿಯ ಸ್ಥಿತಿವಂತ ಆಸ್ತಿ-ಭೂಮಿ ಇರುವ ರಾಜಮನೆತನದವರು ನೀವು, ಆ ಮನೆಯ ಬೀಗದ ಕೀಯನ್ನೂ ಕೊರಗರ ಕುಟುಂಬದ ಕೈಗೆ ಕೊಟ್ಟು ನೆಂಪುವಿನಲ್ಲಿ ಏಕಾಂತದಲ್ಲಿ ಬದುಕುತ್ತಿದ್ದೀರಿ, ನಿಮ್ಮ ಜೀವನದ ಬಗ್ಗೆ ನಿಮಗೆ ತೃಪ್ತಿಯಂತೂ ಇದೆ ಇನ್ನಾದರೂ ನಿರಾಳರಾಗಿ. ನೀವು ಕಟ್ಟಿದ ಸಂಸ್ಥೆಗಳ ಎಂ.ಡಿ. ಛೇಂಬರಿನಲ್ಲಿ ನೀವು ಕೂರದೆ ದಶಕವೇ ಮೀರಿದೆ! ಶೈಕ್ಷಣಿಕ ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಇನ್ನೂ ಬೇಕಿದೆ. ಸಾಧ್ಯವಾದರೆ ಒಂದು ಮೆಡಿಕಲ್ ಕಾಲೇಜು ಕಟ್ಟಿ! ನಿಮ್ಮ ಹೆಸರನ್ನ ಯಾರಿಗೂ ಅಳಿಸಲು ಸಾದ್ಯವಿಲ್ಲ. ಈ ಹತ್ತು ವರ್ಷದಲ್ಲಿ ನಿಮ್ಮ ಜೊತೆಗೆ ದೇವದುರ್ಲಭ ಕಾರ್ಯಕರ್ತರಿದ್ದರು, ಅವರನ್ನ ಸಂಪಾದಿಸಿದ ನೀವು ಗ್ರೇಟ್! ಮೊನ್ನೆ ಯಡಿಯೂರಪ್ಪನವರ ಮಗನ ಕಾಲನ್ನ ಹಿಡಿದು ಕಣ್ಣೀರು ಸುರಿಸಿದರು ನಿಮ್ಮ ಕಾರ್ಯಕರ್ತರು ಎಂದು ಕೇಳಿದೆ! ನೀವು ಎದೆಯನ್ನ ಬಗೆದು ಅವರಿಗೆ ಕೊಟ್ಟರೂ ಕಡಿಮೆ. ನಿಮ್ಮ ಬಗ್ಗೆ ಯಾವ ಗುತ್ತಿಗೆದಾರನೂ ಕಣ್ಣೀರು ಕೆಡವುದಿಲ್ಲ. ನಾಳೆ ಗೋಪಾಲ ಪೂಜಾರಿಯವರು ಗೆದ್ದರೂ ಆತನ ಐಶಾರಾಮಿ ಕಾರು ಅವರ ಮನೆಯ ಅಂಗಳದಲ್ಲಿ ನಿಲ್ಲುತ್ತದೆ! ಆದರೆ ಆ ನಿಮ್ಮ ಕಾರ್ಯಕರ್ತರಿದ್ದಾರಲ್ಲಾ? ಅವರೇ ನೀವು ರಾಜಕಾರಣದಲ್ಲಿ ಸಂಪಾದಿಸಿದ ನಿಜವಾದ ಆಸ್ತಿ. ನೀವು ಅವರಲ್ಲಿ ಕೆಲವರಿಗೆ ಯಾರದೋ ಮಾತನ್ನ ಕೇಳಿ ನೋವನ್ನೂ ಕೊಟ್ಟಿರಬಹುದು! ಆದರೂ ಅವರು ’ನಮ್ಮ ಬಾಸ್ ಹಾಗೇ ಅವರು ಕೆಟ್ಟವರಲ್ಲ’ ಎಂದು ಯಾವುದನ್ನೂ ಮನಸಿಗೆ ಹಾಕಿಕೊಳ್ಳದೇ ನಿಮ್ಮ ಜೊತೆಗೆ ನಿಂತರು! ಈ ಕಾಲದಲ್ಲಿ ಯಾರದೋ ಕಾರಣಕ್ಕೆ ಯಾವುದೋ ರಾಜಕಾರಣಿಯ ಕಾಲು ಹಿಡಿದು ಯಾರಾದರೂ ಕಣ್ಣೀರು ಹಾಕಿಯಾರ? ಇರಲಿ ಬಿಡಿ!
ನೀವು ಇತಿಹಾಸ ಪುರುಷ ನಿಮ್ಮ ಜೊತೆಗೆ ಸಲಿಗೆಯಿಂದ ಬದುಕುವ ಅವಕಾಶ ಕೊಟ್ಟಿದ್ದಕ್ಕೆ ಥ್ಯಾಂಕ್ಸ್. ಇದನ್ನ ಬಹಳ ಬಾವುಕನಾಗಿ ಬರೆದಿದ್ದೇನೆ.
ವಸಂತ್ ಗಿಳಿಯಾರ್