ಕುಗ್ರಾಮದ ಕೊಡ್ಲಾಡಿ ಗ್ರಾಮದ ಮಾರ್ಡಿ ಸರಕಾರಿ ಹಿ.ಪ್ರಾ. ಶಾಲೆಗೆ ಬೆಂಗಳೂರಿನ “ಬೆಳಕು’ ತಂಡವು ಸುಣ್ಣ – ಬಣ್ಣ ಬಳಿಯುವ ಮೂಲಕ ಹೊಸತೊಂದು ರೂಪವನ್ನು ನೀಡಿದೆ. ಈಗ ಈ ಶಾಲೆಯ ಗೋಡೆಯಲ್ಲಿ ಚಿತ್ರಗಳ ಚಿತ್ತಾರ, ಕಟ್ಟಡದ ಗೋಡೆ, ಆವರಣ ಗೋಡೆಗೆ ಅಂದದ ಬಣ್ಣದಿಂದ ಸಿಂಗಾರಗೊಂಡು ಕಂಗೊಳಿಸುತ್ತಿದೆ.
ಬೆಳಕು ತಂಡದ 21 ಮಂದಿ ಸ್ವಯಂಸೇವಕರು ಕಳೆದ ಶುಕ್ರವಾರ ರಾತ್ರಿ ಬೆಂಗಳೂರಿನಿಂದ ಹೊರಟು ಶನಿವಾರ ಹಾಗೂ ರವಿವಾರ 2 ದಿನಗಳ ಕಾಲ ಶಾಲೆಯ ಸೌಂದರ್ಯ ವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಂಡರು. ಸುಮಾರು 60ಕ್ಕೂ ಅಧಿಕ ವಿದ್ಯಾರ್ಥಿಗಳಿರುವ ಶಾಲೆ ಇದಾಗಿದ್ದು, ಇಡೀ ಶಾಲೆ ಕಟ್ಟಡದ ಒಳಗೆ ಮತ್ತು ಹೊರಗೆ ಸುಣ್ಣ-ಬಣ್ಣ, ಬೋರ್ಡಿಗೆ ಬಣ್ಣ ಬಳಿಯಲಾಗಿದೆ. ಶಾಲೆ ಎದುರಿನ ಗೋಡೆಗೆ ಶಿಕ್ಷಣ ಹಾಗೂ ಮಾಹಿತಿ ಆಧಾರಿತ ಚಿತ್ರಗಳು.
ಹೊರಭಾಗದ ಆವರಣ ಗೋಡೆ ಹಾಗೂ ಶಾಲಾ ಸ್ವಾಗತ ಗೋಪುರಕ್ಕೆ ಬಣ್ಣ ಬಳಿಯುವ ಮೂಲಕ ಇಡೀ ಶಾಲೆಯ ಅಂದ ಹೆಚ್ಚಿಸಲಾಗಿದೆ. ಹಳೆ ವಿದ್ಯಾರ್ಥಿ ಸಂದೀಪ್ ಕೊಡ್ಲಾಡಿ ಕೋರಿಕೆಯಂತೆ ಬೆಳಕು ತಂಡ ಆಗಮಿಸಿ, ಈ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಈಗಾಗಲೇ ಬೆಂಗಳೂರು, ಮಂಡ್ಯ, ಉತ್ತರ ಕನ್ನಡ ಸಹಿತ 9 ಶಾಲೆಗಳ ಸೌಂದರ್ಯ ವೃದ್ಧಿ ಕಾರ್ಯ ನಡೆದಿದ್ದು, ಮಾರ್ಡಿ ಶಾಲೆ ಹತ್ತನೆಯದ್ದಾಗಿದೆ. ತಂಡದ ವಿನಯ್ ಕೆ.ಆರ್. ಪೇಟೆ ಅವರ ಕೈಚಳಕದಿಂದ ಗೋಡೆಗಳ ಮೇಲೆ ಸುಂದರವಾದ ಚಿತ್ರಗಳು ಮೂಡಿದೆ.
2 ದಿನ ಮಾರ್ಡಿ ಶಾಲೆಯಲ್ಲಿಈ ಕೈಂಕರ್ಯದ ಸಮಾರೋಪ ರವಿವಾರ ಸಂಜೆ ನಡೆಯಿತು. ಹಳೆ ವಿದ್ಯಾರ್ಥಿ ಸಂದೀಪ್ ಕೊಡ್ಲಾಡಿ ಅವರನ್ನು ಸಮ್ಮಾನಿಸಲಾಯಿತು. ಬೆಳಕು ತಂಡದ ಕಾರ್ಯಕ್ಕೆ ಸದಸ್ಯರನ್ನು ಅಭಿನಂದಿಸಲಾಯಿತು. ಸ್ಥಳೀಯರಾದ ಕೊಡ್ಲಾಡಿ ಸುಭಾಶ್ಚಂದ್ರ ಶೆಟ್ಟಿ, ಗ್ರಾ.ಪಂ. ಸದಸ್ಯರಾದ ರತ್ನಾಕರ ನಾಯ್ಕ, ಪ್ರವೀಣ್ ಕುಮಾರ್ ಶೆಟ್ಟಿ, ಯೋಗೇಂದ್ರ ನಾಯ್ಕ ಕೊಡ್ಲಾಡಿ, ವಿದ್ಯಾಧರ ಶೆಟ್ಟಿ, ನಿವೃತ್ತ ಯೋಧ ಶಿವರಾಮ ನಾಯ್ಕ, ಉದಯ ಕುಮಾರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಂಕರ್ ಬಿ.ಕೆ., ಶಾಲಾಭಿವೃದ್ಧಿ, ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಗಜೇಂದ್ರ ನಾಯ್ಕ ಉಪಸ್ಥಿತರಿದ್ದರು.