ಮುಂಬಯಿ, ಮಾ. 18 : ಕಳೆದ ಒಂದೂವರೆ ದಶಕಗಳಿಂದ ಮುಂಬೈ ವಿಶ್ಕವಿದ್ಯಾನಿಲಯದ ಕನ್ನಡ ವಿಭಾಗಕ್ಕೆ ಸುವರ್ಣ ಯುಗ ಎಂದೇ ಹೇಳಬಹುದು . ಮಹತ್ತರ ಬೃಹತ್ ಪಿಎಚ್ ಡಿ ಗ್ರಂಥಗಳು ಹೊರಬಂದಿರುವುದು ನಮ್ಮ ಕನ್ನಡ ವಿಭಾಗದಲ್ಲಿ ಎನ್ನುವುದು ಹೆಮ್ಮೆಯ ವಿಷಯ. ಇದಕ್ಕೆಲ್ಲ ಮುಖ್ಯ ಕಾರಣ ಕನ್ನಡವನ್ನೇ ಉಸಿರಾಗಿಸಿಕೊಂಡ ಮುಖ್ಯಸ್ಥರ ಸಾರಥ್ಯ. ತನ್ನ ಜೀವನವನ್ನೇ ವರ್ಷದ 365 ದಿನಗಳ ಕಾಲ ತನ್ನ ಉಸಿರಿನಲ್ಲಿ ಬೆರೆತು ಹೋಗಿರುವ ಕನ್ನಡ ವಿಭಾಗಕ್ಕಾಗಿ, ಕನ್ನಡಕ್ಕಾಗಿ ,ಕನ್ನಡದ ವಿದ್ಯಾರ್ಥಿಗಳ ಸೇವೆಗಾಗಿ ಮುಡಿಪಾಗಿಟ್ಟಿದ್ದು ಇದಕ್ಕೆ ಪ್ರಸಿದ್ಧ ಸಾಹಿತಿಗಳಾದ ಡಾ ಎಸ್ ಎಲ್ ಭೈರಪ್ಪನವರು , ಡಾ.ಕಂಬಾರರು, ಪ್ರೊ.ಹಂಪನಾ, ಡಾ.ಕಮಲಾ ಹಂಪನಾ, ಡಾ.ವಿವೇಕ್ ರೈ ಮೊದಲಾದ ಸಾಹಿತ್ಯ ದಿಗ್ಗಜರು ವಿಭಾಗದ ಬಗ್ಗೆ ವ್ಯಕ್ತಪಡಿಸಿದ ಅಭಿನಂದನೀಯ ನುಡಿಗಳೇ ಸಾಕ್ಷಿಯಾಗಿವೆ. ತಾನು ಬೆಳೆದು ತನ್ನ ವಿದ್ಯಾರ್ಥಿಗಳನ್ನು ಬೆಳೆಸುವವರು ನಿಜವಾದ ಗುರುಗಳು. ಈ ಸಾಲಿನಲ್ಲಿ ಡಾ. ಜಿ .ಎನ್. ಉಪಾಧ್ಯ ಅವರು ನಿಲ್ಲುತ್ತಾರೆ. ಮುಂಬೈ ವಿವಿ ಕನ್ನಡ ವಿಭಾಗದಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಗಳು ಅಪಾರ ಎಂದು ಮುಂಬೈ ಆವೃತ್ತಿಯ ಉದಯವಾಣಿ ದೈನಿಕದಲ್ಲಿ ಹಿರಿಯ ಉಪಸಂಪಾದಕರಾಗಿರುವ ಡಾ.ದಿನೇಶ್ ಶೆಟ್ಟಿ ರೆಂಜಾಳ ಅವರು ಅಭಿಪ್ರಾಯ ಪಟ್ಟರು.
ಅವರು ಮಾ.16 ರ ಗುರುವಾರದಂದು ಡಿಪಾರ್ಟ್ ಮೆಂಟ್ ಆಫ್ ಎಜುಕೇಷನ್, ವಿದ್ಯಾನಗರಿ, ಕಲೀನಾ ಕ್ಯಾಂಪಸ್ ಇಲ್ಲಿ ಮುಂಬೈ ವಿಶ್ಕವಿದ್ಯಾನಿಲಯದ ಕನ್ನಡ ವಿಭಾಗ ಹಾಗೂ ಡಾ ವಿಶ್ವನಾಥ್ ಕಾರ್ನಾಡ್ ಪ್ರತಿಷ್ಠಾನ ಮುಂಬೈ ಇದರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ವಿದ್ಯಾರ್ಥಿ ಸಮ್ಮೇಳನ’ದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಬರವಣಿಗೆ ಮನುಷ್ಯನನ್ನು ಪೂರ್ಣನನ್ನಾಗಿಸಿದರೆ ಓದು ಮನುಷ್ಯನನ್ನು ಪರಿಪೂರ್ಣನನ್ನಾಗಿಸುತ್ತದೆ. ನಮ್ಮ ಭಾವನೆ ಮತ್ತು ಅನಿಸಿಕೆಗಳ ಶಾಬ್ದಿಕ ರೂಪವೇ ಬರವಣಿಗೆ. ಲೇಖಕನಾದವನಿಗೆ ಲೋಕಾನುಭವ ಬಹಳ ಮುಖ್ಯ .ಬರವಣಿಗೆ ಹಠವಾಗಬೇಕೆ ಹೊರತು ಚಟವಾಗಬಾರದು . ನಾವು ಇನ್ನೊಬ್ಬರನ್ನು ಮೆಚ್ಚಿಸುವುದಕ್ಕಿಂತ ನಾವು ನಮಗಾಗಿ ಬರೆಯಬೇಕು . ಕವಿ ಪುತಿನ ಅವರು ಹೇಳಿದಂತೆ ಸಾಹಿತ್ಯದ್ದು ಮಾತು. ಸಂಗೀತದ್ದು ಧಾತು. ಸಾಹಿತ್ಯ ಜ್ಯೋತಿರ್ಮಯಿಯಾದ ಭಾಷೆಯನ್ನು ತನ್ನ ಅಭಿವ್ಯಕ್ತಿ ಮಾಧ್ಯಮವಾಗಿ ಪಡೆದಿದೆ.ಮಿಂಚಿ ಮಾಯವಾಗಬಲ್ಲ ಭಾವ, ಭಾವನೆಗಳನ್ನು ಅದು ಮಾತಿನ ರೂಪದಲ್ಲಿ ಸೆರೆ ಹಿಡಿಯತ್ತದೆ. ನಮ್ಮ ಬರವಣಿಗೆಯಲ್ಲಿ ಬಾಳಿನ ಸೂತ್ರ ಇರಬೇಕು, ವಿವೇಕದ ಸಾರ ಇರಬೇಕು. ಇದು ಓದುಗರ ಬುದ್ಧಿಶಕ್ತಿಯನ್ನು, ಭಾವಶಕ್ತಿಯನ್ನು ಪ್ರಚೋದಿಸುತ್ತದೆ ಎಂದು ಬರವಣಿಗೆ,ಕವಿತೆ, ಸಂಶೋಧನೆ ಹೇಗಿರಬೇಕು ಎಂಬ ವಿಷಯದ ಕುರಿತು ಕಿರಿಯ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಯಾವ ವಿಶ್ವವಿದ್ಯಾಲಯಗಳ ಕನ್ನಡ ವಿಭಾಗಗಳು ನಡೆಸದಿರುವ ಸಮ್ಮೇಳನ ಎಂಬ ಸಾಹಿತ್ಯಿಕ ಸಾಂಸ್ಕೃತಿಕ ಪಠ್ಯವನ್ನು ಕನ್ನಡ ವಿಭಾಗ ಮುಂಬೈ ವಿಶ್ವವಿದ್ಯಾಲಯ ಮಾಡುತ್ತಿರುವುದು ಮಾದರಿಯಾಗಿದೆ. ಮರಾಠಿ ಮಣ್ಣಿನಲ್ಲಿ ಮುಂದಿನ ಎರಡು ಮೂರು ದಶಕಗಳ ಕಾಲ ಕನ್ನಡ ಭದ್ರವಾಗಿರಲಿದೆ. ನಮ್ಮ ನಮ್ಮ ಸಾಮರ್ಥದ ಅರಿವು ನಮಗಿರಬೇಕು. ಸೃಜನಶೀಲತೆ ಸ್ವಯಂಪ್ರೇರಣೆಯಿಂದ ಕಾರ್ಯಾರಂಭ ಮಾಡುವ ಛಲ ನಮ್ಮಲ್ಲಿರಬೇಕು ಎನ್ನುತ್ತಾ ಕನ್ನಡ ವಿಭಾಗದ ಹಳೆಯ ವಿದ್ಯಾರ್ಥಿಯಾಗಿ ತನ್ನ ಕೆಲವು ಅನುಭವಗಳನ್ನು ಹಂಚಿಕೊಂಡರು.
ಅಂದಿನ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಾ. ವಿಶ್ವನಾಥ್ ಕಾರ್ನಾಡ್ ಅವರು ಮಾತನಾಡಿ
ಇಲ್ಲಿ, ಯುವ ಜನರು ಉತ್ಸಾಹಭರಿತರಾಗಿದ್ದಾರೆ .ಅವರನ್ನು ನೋಡುವಾಗ ನನಗೂ ಅವರಂತೆ ಇರುವ ಆಸೆ ಆಗುತ್ತಿದೆ .ನಾನು ಇನ್ನೂ ಕೆಲಸ ಮಾಡುತ್ತಾ ಇದ್ದೇನೆ. ಮುಂದೆಯೂ ಕೆಲಸ ಮಾಡುವ ಉತ್ಸಾಹ ,ಹುಮ್ಮಸ್ಸು ನನಗೂ ಇದೆ. ವಿಭಾಗ ಇಂದು ವಿಜೃಂಭಣೆಯಿಂದ ಹುಟ್ಟುಹಬ್ಬ ಆಚರಿಸಿದೆ. ಎಲ್ಲರಿಗೂ ಅಭಾರಿ. ವಿಶ್ವವಿದ್ಯಾಲಯ ವಿದ್ಯಾರ್ಥಿ ಬಂಧುಗಳು ಚೆನ್ನಾಗಿ ಸಮ್ಮೇಳನ ನಡೆಸುತ್ತಿರುವುದು ಬಹಳ ಖುಷಿಯಾಗಿದೆ ಎಂದರು.
ಅಂದಿನ ಕಾರ್ಯಕ್ರಮದ ಅಂಗವಾಗಿ ನಡೆದ ಗೋಷ್ಠಿ 1ರ “ಕನ್ನಡದ ಹಿರಿಮೆ ಗರಿಮೆ ‘ ಉಪನ್ಯಾಸ ಕಾರ್ಯಕ್ರಮದಲ್ಲಿ , ‘ಕನ್ನಡದ ಹಿರಿಮೆ ಗರಿಮೆಯನ್ನು ಹೆಚ್ಚಿಸಿದ ಯಕ್ಷಗಾನ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಡಾ. ವೈ.ವಿ.ಮಧುಸೂದನ ರಾವ್ ಅವರು ಯಕ್ಷಗಾನದ ಕುರಿತು ವಿವರವಾದ ಪರಿಚಯ ನೀಡುತ್ತಾ , ಹಳಗನ್ನಡ ಕವಿಗಳು ನಾಟಕಗಳನ್ನು ಬರೆಯಲಿಲ್ಲ. ಕರ್ನಾಟಕದಲ್ಲಿ ವಿವಿಧ ಹೆಸರುಗಳಲ್ಲಿ ಯಕ್ಷಗಾನವು ಜನಪ್ರಿಯ ಕಲೆಯಾಗಿದೆ. ಯಕ್ಷಗಾನ ಸಾಹಿತ್ಯವು ಕನ್ನಡ ಸಾಹಿತ್ಯಕ್ಕೆ ಕೊಡುಗೆಯಾಗಿದೆ. ಜಾನಪದ ಸಾಹಿತ್ಯಕ್ಕೆ ನೀಡುವ ಮಹತ್ವವನ್ನು ಯಕ್ಷಗಾನ ಸಾಹಿತ್ಯಕ್ಕೆ ನೀಡಲಾಗಿಲ್ಲ. ವಾಗ್ಗೇಯಕಾರರು ವಾಕ್ ಮತ್ತು ಗೇಯತೆ -ಎರಡರ ಸಮನ್ವಯತೆಯನ್ನು ಸಾಧಿಸಿದವರು. ಅವರು ರಾಗ ತಾಳ ಸಮನ್ವಿತವಾದ, ರಸಾಸ್ವಾದ ಉಳ್ಳ ಯಕ್ಷಗಾನ ಗೀತೆಗಳನ್ನು ರಚಿಸಿದರು. ಯಕ್ಷಗಾನ ಸಾಹಿತ್ಯ ಸಮ್ಮೇಳನಗಳು ನಡೆಯುತ್ತಿದೆ. ಯಕ್ಷಗಾನ ವಿವಿಗಳಲ್ಲಿ ಸಂಶೋಧನ ವಿಷಯವಾಗಿದೆ ಎಂದರು.
‘ಬೈಬಲ್ ಮತ್ತು ಕನ್ನಡ ‘ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಡಾ.ಎಬ್ನೇಜರ್ ಜತ್ತನ್ನ ಅವರು ಮಾತನಾಡುತ್ತಾ, ಕ್ರೈಸ್ತರ ಪವಿತ್ರ ಧರ್ಮ ಗ್ರಂಥ ಬೈಬಲ್ ಶತಮಾನಗಳ ಹಿಂದೆಯೇ ಕನ್ನಡಕ್ಕೆ ತರ್ಜುಮೆಗೊಂಡಿದೆ.ಸಮಯ ಸಮಯದಲ್ಲಿ ನಡೆದ ಭಾಷಾಂತರದಲ್ಲಿ ಭಾಷೆಯ ಸದ್ಬಳಕೆಯಾಗಿದೆ. ಕನ್ನಡದ ಪ್ರಾದೇಶಿಕ, ಧಾರ್ಮಿಕ, ಆಡಳಿತ ಭಾಷೆಯ ಪದಬಳಕೆ ಆಗಿರುವುದನ್ನು ಬೇರೆ ಬೇರೆ ಆವೃತ್ತಿಗಳಲ್ಲಿ ತಿಳಿಯಬಹುದು. ಇದು ಇಡೀ ಕರ್ನಾಟಕದಲ್ಲಿ ಬೇರೆ ಬೇರೆ ಕನ್ನಡಗಳಲ್ಲಿ ಮಿತಿಗಳನ್ನು ಮೀರಿ ಪರಿಪೂರ್ಣವಾದ ಧಾರ್ಮಿಕ ಗ್ರಂಥವಾಗಿ ಬಂದಿದೆ. ಅನೇಕ ಬಾರಿ ಪರಿಷ್ಕರಣೆಗೆ ಒಳಪಟ್ಟ ಬೈಬಲ್ ನಲ್ಲಿ ದೈವಶಾಸ್ತ್ರೀಯ ಪದಗಳು ಬೆಳಕಿಗೆ ಬಂದಿವೆ. ಗ್ರೀಕ್ ಮತ್ತು ಹೀಬ್ರೂ ಭಾಷೆಗಳಿಂದ ನೇರವಾಗಿ ಕನ್ನಡಕ್ಕೆ ಬಂದಿರುವುದು ಹೆಮ್ಮೆಯ ವಿಷಯ. ಕನ್ನಡ ಮತ್ತು ಬೈಬಲ್ ನ ಸಂಬಂಧ ಅವಿನಾಭಾವ ಎಂದು ತಮ್ಮ ಅಭಿಪ್ರಾಯವನ್ನು ಮಂಡಿಸಿದರು.
ಗೋಷ್ಠಿಯಲ್ಲಿ ‘ತಂತ್ರಜ್ಞಾನ ಮತ್ತು ಕನ್ನಡ ‘ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಲೇಖಕ ವಿಕ್ರಮ್ ಜೋಶಿಯವರು ಮಾತನಾಡುತ್ತಾ , ಶಿಲಾಯುಗದಲ್ಲಿ ಬೆಂಕಿಯ ಕಂಡುಹಿಡಿಯುವಿಕೆ ಮತ್ತು ಚಕ್ರದ ಬಳಕೆ- ಈ ಎರಡು ತಂತ್ರಜ್ಞಾನಗಳಿಂದ ಜಗತ್ತು ಬದಲಾಯಿತು. ಕೈಗಾರಿಕಾ ಕ್ರಾಂತಿಯಿಂದ ಹೊಸದಾಗಿ ಹುಟ್ಟಿದ ಅದೆಷ್ಟೋ ಕನ್ನಡ ಪದಗಳನ್ನು ಶಬ್ಧಕೋಶದಲ್ಲಿ ಸೇರಿಸಿದಾಗ ಕನ್ನಡ ಭಾಷೆಯೂ ಶ್ರೀಮಂತವಾಗುವುದು. ತಂತ್ರಜ್ಞಾನಕ್ಕೂ ಭಾಷೆಗೂ ವಿಶೇಷ ನಂಟಿದೆ.ತಂತ್ರಜ್ಞಾನವು ಬೆಳೆದಾಗ ಭಾಷೆಯೂ ಬೆಳೆಯುವುದು. ತಂತ್ರಜ್ಞಾನದಲ್ಲಿ ಕನ್ನಡವನ್ನು ಅಳವಡಿಸಬೇಕು. ತಂತ್ರಜ್ಞಾನವು ಭಾಷೆಗೂ ಬಾಳಿಗೂ ಅವಶ್ಯಕ. ಕನ್ನಡದಲ್ಲಿ ತಂತ್ರಜ್ಞಾನ ಕುರಿತ ಕೃತಿಗಳು ಬರಬೇಕು. ಅದರಲ್ಲಿ ಹೊಸಶಬ್ದಗಳು ಬರಲಿ, ಭಾಷೆ ಶ್ರೀಮಂತವಾಗಲಿ ಎಂದು ಹಾರೈಸಿದರು.
(ಪ್ರೊ.ಜಿ.ಸಿ. ಕುಲಕರ್ಣಿ ಅವರು ‘ಕುಮಾರವ್ಯಾಸನ ಶಬ್ದಸೃಷ್ಟಿ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. )
ಗೋಷ್ಠಿ 2ರ ‘ಇತ್ತೀಚೆಗೆ ಬಿಡುಗಡೆಯಾದ ಕೃತಿಗಳ ಸಮೀಕ್ಷೆ ‘ ಕಾರ್ಯಕ್ರಮದಲ್ಲಿ ವಿವಿಯ ಎಂ.ಎ ವಿದ್ಯಾರ್ಥಿಗಳಿಂದ ವಿವಿಧ ಕೃತಿಗಳ ಸಮೀಕ್ಷೆ ನಡೆಯಿತು. ‘ಮುಂಬಯಿ ಕನ್ನಡ ಪತ್ರಿಕೋದ್ಯಮ ‘ (ಲೇ:-ಡಾ.ದಿನೇಶ್ ಶೆಟ್ಟಿ ರೆಂಜಾಳ) ಕೃತಿಯ ಕುರಿತು ಸವಿತಾ ಅರುಣ್ ಶೆಟ್ಟಿ; ‘ರವಿತೇಜ'(ಲೇ:-ಪೂರ್ಣಿಮಾ ಸುಧಾಕರ ಶೆಟ್ಟಿ); ಕೃತಿಯ ಬಗ್ಗೆ ರಾಜಶ್ರೀ ಶೆಟ್ಟಿ; ಸೂರಿ ಪರ್ವ (ಲೇ:-ಶಶಿಕಲಾ ಹೆಗಡೆ )ಕುರಿತು ವಿದ್ಯಾ ರಾಮಕೃಷ್ಣ; ಎಕ್ಕಾರಿನ ಯಕ್ಷಮಣಿ ದಯಾಮಣಿ(ಲೇ:- ಜ್ಯೋತಿ ಶೆಟ್ಟಿ) ಕುರಿತು ಆಶಾ ಸುವರ್ಣ; ಕೋಡು ಭೋಜ ಶೆಟ್ಟಿ (ಲೇ:-ಉದಯ ಶೆಟ್ಟಿ ,ಪಂಜಿಮಾರು) ಕುರಿತು ಮಹೇಶ್ ಹೆಗ್ಡೆ ಪೊಳಲಿ; ಕೊಲ್ಯಾರು ರಾಜು ಶೆಟ್ಟಿ (ಲೇ:-ಪಾರ್ವತಿ ಪೂಜಾರಿ ) ಕುರಿತು ಸವಿತಾ ಆರ್ ಶೆಟ್ಟಿ ; ಪುರಂದರದಾಸ ಮತ್ತು ಜ್ಞಾನದೇವ (ಲೇ:-ಡಾ.ಕೆ ರಾಮಮೂರ್ತಿ) ಕುರಿತು ಸುನಿಲ್ ದೇಶಪಾಂಡೆ; ಸಾರ್ವಭೌಮ (ಸಂ- ಡಾ. ಜಿ.ಎನ್ ಉಪಾಧ್ಯ ಮತ್ತು ಡಾ.ಪೂರ್ಣಿಮಾ ಸುಧಾಕರ ಶೆಟ್ಟಿ) ಕುರಿತು ಸುರೇಖಾ ಹರಿಪ್ರಸಾದ್ ಶೆಟ್ಟಿ; ‘ಅರಿವಿನಂಗಳದಲ್ಲಿ (ಸೋಮಶೇಖರ್ ಮಸಳಿ) ಕುರಿತು ಗಾಯತ್ರಿ ನಾಗೇಶ್ ಮಾತನಾಡಿದರು.
ಮುಂಬೈ ವಿವಿ ಕನ್ನಡ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರು ಆದ ಡಾ.ಜಿ ಎನ್ ಉಪಾಧ್ಯ ಅವರು ಧನ್ಯವಾದಗಳನ್ನು ಸಮರ್ಪಣೆ ಮಾಡುತ್ತಾ , ಮುಂಬೈ ವಿಶ್ವವಿದ್ಯಾಲಯದ 64 ವಿಭಾಗಗಳಲ್ಲಿ ಕನ್ನಡ ವಿಭಾಗವು ವಿದ್ಯಾರ್ಥಿ ಸಮ್ಮೇಳನ ಮಾಡುವ ಏಕೈಕ ವಿಭಾಗವಾಗಿದೆ. ಸಹಪ್ರಾಧ್ಯಾಪಕರಾದ ಡಾ ಪೂರ್ಣಿಮಾ ಶೆಟ್ಟಿ ಅವರ ಸಹಯೋಗದಲ್ಲಿ ವಿಭಾಗದಲ್ಲಿ ಅನೇಕ ಸಾಹಿತ್ಯಿಕ ಕಾರ್ಯಕ್ರಮಗಳು ನೆರವೇರುತ್ತಿವೆ. ಪ್ರತಿಯೊಂದು ಕಾರ್ಯಕ್ರಮದಲ್ಲಿ ಅವರು ವಹಿಸುವ ಶ್ರಮ , ಅವರ ಕ್ರಿಯಾಶೀಲತೆ ಶ್ಲಾಘನೀಯ. ವಿದ್ಯಾರ್ಥಿಗಳಿಂದ, ವಿದ್ಯಾರ್ಥಿಗಳಿಗಾಗಿ, ವಿದ್ಯಾರ್ಥಿಗಳಿಗೋಸ್ಕರ ಮಾಡುವ ಸಮ್ಮೇಳನವು ಸಹಕಾರ ತತ್ವದಲ್ಲಿ ನಡೆಯುತ್ತಿದೆ. ಮುಂಬೈ ವಿವಿಯಲ್ಲಿ ಎ ಗ್ರೇಡ್ ಪಡೆದ ಕೆಲವೇ ಕೆಲವು ವಿಭಾಗಗಳಲ್ಲಿ ಕನ್ನಡ ವಿಭಾಗವೂ ಒಂದು . ಚಂದ್ರಶೇಖರ ಕಂಬಾರ, ಭೈರಪ್ಪನವರಂತಹ ಸಾಹಿತಿಗಳಿಂದ ಮೆಚ್ಚುಗೆ ಗಳಿಸಿದ ವಿಭಾಗ ನಮ್ಮದು. ಕನ್ನಡಿಗರನ್ನು ಉತ್ತೇಜಿಸಿದರೆ ವಿಭಾಗ ಉಳಿಯತ್ತದೆ. ನಮ್ಮ ವಿಭಾಗದ ವಿದ್ಯಾರ್ಥಿಗಳು ಸಾಂಸ್ಕೃತಿಕ ನಾಯಕರಾಗಿ ಬೆಳೆದಿದ್ದಾರೆ. ಇಂದಿನ ಸಮ್ಮೇಳನದ ಅಧ್ಯಕ್ಷ ಡಾ.ದಿನೇಶ್ ಶೆಟ್ಟಿ ವಿಭಾಗಕ್ಕೆ ಕೋಡು ಮೂಡಿಸಿದ ಗೆಳೆಯ ಎಂದರಲ್ಲದೆ, ವಿದ್ಯಾರ್ಥಿಗಳಿಗೆ – ಆರಕ್ಕೆ ಏರಬೇಡಿ, ಮೂರಕ್ಕೆ ಇಳಿಯಬೇಡಿ ಎಂಬ ಹಿತನುಡಿಗಳನ್ನಾಡಿದರು. ನಾನು ನೆಪ ಮಾತ್ರ. ವಿದ್ಯಾರ್ಥಿಗಳ ಶ್ರಮ ದೊಡ್ಡದು. ಸಣ್ಣ ಮಾರ್ಗದರ್ಶನ ಬೇಕಾಗುತ್ತದೆ. ನಮ್ಮ ವಿದ್ಯಾರ್ಥಿಗಳು ಸಮಾಜದಲ್ಲಿ ಬೆಳೆಯಬೇಕು, ಬೆಳಗಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ದಿನೇಶ್ ಶೆಟ್ಟಿ ರೆಂಜಾಳ ಅವರನ್ನು ಗ್ರಂಥ, ಕಾಣಿಕೆಯೊಂದಿಗೆ , ಹಾರ ತೊಡಿಸಿ, ಶಾಲು ಹೊದಿಸಿ ಗೌರವಿಸಲಾಯಿತು. ಗೋಷ್ಠಿ 1ರ ಉಪನ್ಯಾಸಕಾರರಾದ ಡಾ. ವೈ ವಿ.ಮಧುಸೂದನ ರಾವ್, ಡಾ. ಎಬ್ನೇಜರ್ ಜತ್ತನ್ನ ಹಾಗೂ ವಿಕ್ರಮ್ ಜೋಶಿ ಅವರುಗಳಿಗೆ ಗ್ರಂಥ, ಕಾಣಿಕೆಯೊಂದಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು. ಕೃತಿ ಸಮೀಕ್ಷೆ ನಡೆಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಗ್ರಂಥ ಮತ್ತು ಕಾಣಿಕೆ ನೀಡಲಾಯಿತು. ಸಮೀಕ್ಷೆ ನಡೆದ ಕೃತಿಯ ಕೃತಿಕಾರರಿಗೂ ಗೌರವ ಗ್ರಂಥ ನೀಡಲಾಯಿತು.
ವಿದ್ಯಾರ್ಥಿ ಸಮ್ಮೇಳನದ ಅಧ್ಯಕ್ಷರನ್ನು, ಡಾ.ವಿಶ್ವನಾಥ್ ಕಾರ್ನಾಡ್ ಮತ್ತು ವಿಭಾಗ ಮುಖ್ಯಸ್ಥರನ್ನು ಆರತಿ ಬೆಳಗಿ ಸಭಾಂಗಣಕ್ಕೆ ಕರೆತರಲಾಯಿತು. ಕಾರ್ಯಕ್ರಮವನ್ನು ದ್ವೀಪ ಪ್ರಜ್ವಲಿಸಿ ಉದ್ಘಾಟಿಸಲಾಯಿತು. ವಿಭಾಗದ ವಿದ್ಯಾರ್ಥಿಗಳು ವಿಶ್ಕವಿದ್ಯಾನಿಲಯ ಗೀತೆಯನ್ನು ಹಾಡುವುದರೊಂದಿಗೆ ದಿನದ ವೈವಿಧ್ಯಮಯ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.
ವಿವಿಧ ಹಂತಗಳಲ್ಲಿ ನಡೆದ ನಡೆದ ಕಾರ್ಯಕ್ರಮವನ್ನು ಸಂಶೋಧನ ವಿದ್ಯಾರ್ಥಿಗಳಾದ ನಳಿನಾ ಪ್ರಸಾದ್ ಮತ್ತು ಕಲಾ ಭಾಗ್ವತ್ ಅವರು ನಿರೂಪಿಸಿದರು. ಕಲಾ ಭಾಗ್ವತ್ ಅವರು ಗಮಕ ವಾಚನಗೈದರು. ಅಂಬಿಕಾ ದೇವಾಡಿಗ ಸ್ವಾಗತಿಸಿದರು. ನಾಡಿನ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗಣ್ಯರು ಹಾಗೂ ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.