ಕರ್ನಾಟಕದ ಬಾಗಲು ಕೋಟೆ ಜಿಲ್ಲೆಯ ಇಳಕಲ್ ಎಂಬ ಸಣ್ಣ ಊರಿನ ಚಟ್ಟಕ್..ಪಟ್ಟಕ್.. ಶಬ್ದ ಕೇಳುತ್ತಿರುವ ಗಲ್ಲಿಯೊಳಗೆ ತಯಾರಾಗುವ ಇಳಕಲ್ ಸೀರೆ ಸಂಸತ್ತಿನಲ್ಲಿ ಕಾಣಸಿಕ್ಕಿದ್ದು ಪರೋಕ್ಷವಾಗಿ ನೇಕಾರಿಗೆ ಸಲ್ಲಿಸಿದ ಗೌರವ, ಪ್ರೇರಣೆ ಹಾಗೂ ವ್ಯವಹಾರದ ಏರಿಕೆಗೂ ಇಳಕಲ್ ಸೀರೆ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆಯುಲು ಕಾರಣವಾಯಿತು.
2023 ರ ಕೇಂದ್ರ ಬಜೆಟ್ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಚಿವೆಯಾಗಿ ಸತತ 5 ನೇ ಬಾರಿಗೆ ಮತ್ತು ಮುಂದಿನ ವರ್ಷದ ಮಹಾಚುನಾವಣೆಗೆ ಮುಂಚಿತವಾಗಿ ಸಂಸತ್ತಿನಲ್ಲಿ ಬಜೆಟ್ ಮಂಡಿಸಲು ಬಂದಾಗ ಉಟ್ಟ ಇಳಕಲ್ ಸೀರೆ ಇಳಕಲ್ ಸೀರೆಗಳ ಮೆರಗನ್ನು ಹೆಚ್ಚಿಸಿತು. ಅನೇಕರು ಸಾಮಾಜಿಕ ಜಾಲತಾಣದಲ್ಲಿ ಈ ಸೀರೆಯ ಕುರಿತು ಮಾಹಿತಿ ಕಲೆಹಾಕಿದ್ದಾರೆ. ಇಳಕಲ್ ಸೀರೆಗಳ ಮಾಹಿತಿ ಕೇಂದ್ರ ವೆಬ್ ಸೈಟ್ ಗಳನ್ನು ಜಾಲಾಡಿದವರ ಸಂಖ್ಯೆಯು ಅಪರಿಮಿತ. ಅಷ್ಟೇ ಅಲ್ಲದೆ ಸೀರೆ ಅಂಗಡಿಗೆ ಹೋಗಿ ಇಳಕಲ್ ಸೀರೆ ಕಂಡು, ಕೊಂಡು ಬಂದವರ ಸಂಖ್ಯೆ ಎಷ್ಟು ಎಂದರೆ ಇಡೀ ಒಂದು ವರ್ಷದಲ್ಲಿ ಮಾರಾಟವಾಗುವ ಸಂಖ್ಯೆಯ ಅರ್ಧದಷ್ಟು ಇಳಕಲ್ ಸೀರೆ ಬಜೆಟ್ ಮಂಡನೆಯ ಮರುದಿನದಿಂದ 5 ದಿನಗಳ ಒಳಗೆ ನಡೆದಿದೆಯೆಂದರೆ ನಿಜಕ್ಕೂ ಬೆರಗು, ನೇಕಾರರ ಮೊಗದಲ್ಲಿ ಮೆರಗು ಮೂಡಿದೆ.
ಪ್ರತಿ ಬಜೆಟ್ ಮಂಡನೆ ವೇಳೆ ವಿಶೇಷ ಸೀರೆಯಲ್ಲಿ ಗಮನ ಸೆಳೆಯುತ್ತಿದ್ದ ನಿರ್ಮಲಾ ಸೀತಾರಾಮನ್ ಈ ಬಾರಿ ಧಾರವಾಡದ ಕಸೂತಿ ಕಲೆ ಮಿಳತಗೊಂಡ ಕೆಂಪು ಇಳಕಲ್ ಸೀರೆಯಲ್ಲಿ ಬಿಳಿ ಮತ್ತು ಹಳದಿ ಬಣ್ಣದ ಬುಟ್ಟಿ, ಕಂದು ಬಣ್ಣದ ಬಾರ್ಡರ್ ಹೊಂದಿದ ಇಳಕಲ್ ಕಾಂತಿಯ ಕೆಂಪು ಸೀರೆ ಉಟ್ಟಿದ್ದರು.
ಕೈಮಗ್ಗದ ಸೀರೆಗಳನ್ನು ಉತ್ತೇಜಿಸುವ ಬಗ್ಗೆ ಹಣಕಾಸು ಸಚಿವೆ ಹಲವೆಡೆ ಮಾತಾಡಿದ್ದರು. ಕೇವಲ ತನ್ನ ಭಾಷಣದಲ್ಲಿ ಕೈಮಗ್ಗದ ಸೀರೆಗಳಿಗೆ ಉತ್ತೇಜನ ಕೊಡಬೇಕು ಅಂದು ಸುಮ್ಮನಿರದೆ ತಾನು ನಿರಂತರವಾಗಿ ಕೈಮಗ್ಗದ ಸೀರೆ ಊಟ್ಟು ನುಡಿದಂತೆ ನಡೆದರು. ಅದರಲ್ಲೂ ಕೆಂಪು ಸೀರೆ ಆಯ್ಕೆ ವೆಚ್ಚುವಂತಾಹದ್ದು. ಕೆಂಪು ಬಣ್ಣ ಪ್ರೀತಿ, ಬದ್ಧತೆ, ಶಕ್ತಿ ಮತ್ತು ಧೈರ್ಯದ ಸಂಕೇತ. ಕೆಂಪು ಮಹಿಳಾ ಶಕ್ತಿಯ ರೂಪವು ಹೌದು.
ಭಾರತ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ವತಿಯಿಂದ ಜಿಯೋಗ್ರಾಫಿಕಲ್ ಇಂಡಿಕೇಷನ್ ಹೊಂದಿದ ಇಳಕಲ್ ಸೀರೆಗಳು ಉಟ್ಟರೆ ಮೈಗೆ ಬಲುಹಿತ, ನೋಟಕ್ಕೂ, ಅಂದವಾದ ಅಪ್ಪಟ ದೇಸಿ ಸೀರೆಯ ಹಿಂದೆ ನೇಕಾರರ ದುಡಿವೆಯ ಹಿಂದಿನ ಶ್ರಮವೆಲ್ಲ ಸೀರೆಯ ಸೊಬಗಿನಲ್ಲಿ ಹರಡಿದೆ. ಬಾಗಲು ಕೋಟೆ ಜಿಲ್ಲೆಯ ಇಳಕಲ್ ನಲ್ಲಿ ತಯಾರಾಗುತ್ತಿರುವ ಅಂದರೆ ಸೀರೆ ತಯಾರಿಸುವ ಪರಿಯನೊಮ್ಮೆ ನೋಡಬೇಕು. ಇಲ್ಲಿ ಸೀರೆಯ ಮೈ ಹತ್ತಿ ಹೊದಿಕೆಯಿಂದ ಮಾಡಿದರೆ ಅಂಚು ಹಾಗೂ ಸೆರಗು ಕಲಾತ್ಮಕ ರೇಷ್ಮೆಯ ನೂಲಿನ ಹೊಳಪಿರುತ್ತದೆ . ಸಂಪ್ರದಾಯಿಕ ಇಳಕಲ್ ಸೀರೆಗಳಲ್ಲಿ ದಾಳಿಂಬೆಯ ಕೆಂಪು, ನವಿಲು ಗರಿಯ ಹಸಿರು ಮಿಶ್ರಿತ ಬಣ್ಣ, ಗಿಳಿಯ ಹಸಿರು ರಂಗು ಹಾಗೂ ಗಿರಿ ಕುಂಕುಮ ಎಂದು ಕರೆಯಲಾಗುವ ಸಿಂಧೂರದ ಬಣ್ಣದ ಪ್ರಖ್ಯಾತ ಸೀರೆ ಬಹಳ ಚಂದ. ಸೆರಗಿನ ಕೊನೆಯಲ್ಲಿ ಹೆಣಗೆಯ ರಚನೆ, ಕೋಟಿ ಕಮ್ಮಲಿನ ವಿನ್ಯಾಸ, ತೆನೆಯ, ಪರ್ವತಗಳ ಆಕ್ರತಿಗಳ ಹೊಂದಿದ ಈ ಸೀರೆ ಕೆಂಪು ಬಣ್ಣದ ಸೆರಗಿನ ಬಣ್ಣ ಗಾಢವಾಗಿದ್ದರೆ ಅದರೊಂದಿಗೆ ತಿಳಿ ಬಣ್ಣದ 2 ಭಾಗದ ಬಿಳಿಯ ರಂಗು ಅದಕ್ಕೆ ಹೊಂದಿಕೊಂಡು ಇಳಕಲ್ ಸೀರೆಯ ಸೆರಗಿಗೆ ವಿಶಿಷ್ಟತೆಯನ್ನು ಹೆಚ್ಚಿಸುವಲ್ಲಿ ಶ್ರಮವಹಿಸುದನ್ನು ಕಾಣಬಹುದು. ಸಂಪ್ರದಾಯಿಕ ರಚನೆ ಸೀರೆಯ ಮೈಯಲ್ಲಿ ಇರುವ ಮುಖ್ಯ ವಿನ್ಯಾಸವೆಂದರೆ ಚೌಕಗಳು, ಆಯತ, ನೇರಗೆರೆಗಳು 6 ಯಾರ್ಡ್, 8 ಮತ್ತು 9 ಯಾರ್ಡ್ ನಲ್ಲಿ ತಯಾರಾಗುತ್ತದೆ .
ಇಳಕಲ್ ಸೀರೆ ಬರೆ ಸೀರೆ ವರ್ಗಕ್ಕೆ ಸೇರುದಲ್ಲ. ಅದು ಹೆಣ್ಣಿನ ಗೌರವದ ಸಂಕೇತ. 8 ನೇ ಶತಮಾನ ದಿಂದಲೇ ಪ್ರಾರಂಭವಾದ ಸೀರೆ ತಯಾರಿಕೆ ಇಂದಿಗೂ ನಿತ್ಯನೂತನ. ಕರ್ನಾಟಕದ ಪ್ರಸಿದ್ಧ ಸೀರೆಗಳಲ್ಲಿ ಇಳಕಲ್ ಸೀರೆಯು ಒಂದು ಇದರ ಅಂಚು ಮೂರು ರೀತಿಯಲ್ಲಿ ತಯಾರಾಗುತ್ತದೆ. 1. ಗೋಮಿ ಅಂದರೆ ಇಳಕಲ್ ದಡಿ 2. ಪರಸ್ ಪೇಟ್ ಇದರಲ್ಲಿ ಚಿಕ್ಕ ಪರಸ್, ಡೊಡ್ಡ ಪರಸ್ ಎಂಬ ಎರಡು ಬಗೆಗಳು 3. ಗಾಡಿ ಈ ಸೀರೆಗಳ ಒಡಲು ಅಂದರೆ ಮಧ್ಯಭಾಗವನ್ನು ಮೂರು ವಿನ್ಯಾಸಗಳಲ್ಲಿ ಕಾಣಬಹುದು. ಬಣ್ಣದ ಪಟ್ಟಿಗಳು ಆಯತಾ ಕೃತಿ ಹಾಗೂ ಚೌಕಳಿ ಆಕಾರದ ವಿನ್ಯಾಸದ ಸೀರೆ. ಇಳಕಲ್ ಸೀರೆಯ ವಿಶೇಷತೆ ಇರುವುದು ಅದರ ಬಣ್ಣ ಮತ್ತು ವಿನ್ಯಾಸದಲ್ಲಿ ಸೀರೆ ಹರಿದರು ಬಣ್ಣ ಮಾಸುವುದಿಲ್ಲ. ನೂಲಿಗೆ ಬಣ್ಣ ಹಾಕುವ ವೃತ್ತಿಯಲ್ಲಿ ಬಣ್ಣಗಾರ ಹಾಗೂ ನೀಲಗಾರ ಎಂಬ ಎರಡು ಗುಂಪುಗಳು ತಲತಲಾಂತರ ದಿಂದ ಕೆಲಸ ಮಾಡುತ್ತಾರೆ.
” ಇಳಕಲ್ ಸೀರೆ ಉಟ್ಟೊಂಡ್, ಮೊಣಕಾಲ್ ಗಂಟ ಎತ್ತೊಂಡ್ಕು ಏರಿ ಮೇಲೆ ಏರಿ ಬಂದ ನಾರಿ” ಎನ್ನುವ ಹಾಡು ರೇಡಿಯೋಗಳಲ್ಲಿ ಹೆಚ್ಚು ಪ್ರಸಾರವಾಗುತ್ತಿದ್ದ ಹಳೆಯ ಹಾಡು ಕೇಳದವರು ವಿರಳ. ಇಳಕಲ್ ಸೀರೆಗೆ ತನ್ನದೇ ಆದ ಪರಂಪರೆ ಇದೆ. ಬಹು ಬಾಳಿಕೆ ಬರುವ ಸೀರೆ ಇದು. ಕಲಾತ್ಮಕವಾದ ಸೀರೆಗಳಲ್ಲಿ ಸೆರಗು ಒಡಲು ಮತ್ತು ದಡಿ ಮೂರು ಮುಖ್ಯ ಭಾಗಗಳು. ಸೀರೆಯನ್ನು ಬೇರೆ ನೇಯ್ದು ಒಡಲು ಹಾಗೂ ಸೆರಗನ್ನು ನಂತರ ಜೋಡಿಸುವ ಕಲೆಯನ್ನು ಇದರಲ್ಲಿ ಕಾಣಬಹುದು. ಈ ದಡಿಯ ಜೊತೆಗೆ ಸೀರೆಯ ಒಡಲಿನ ಒಡ್ಡರ, ದಪ್ಪಳ, ರಾಗವಳಿ, ಚಂದ್ರಕಳಿ ಮುಂತಾದ ನಮುನೆಗಳು ರೂಪಗೊಂಡವು. ಕ್ರಮೇಣ ಸದಾ ಸೆರಗಿನ ಬದಲು ಬುಗಡಿ ತಿರುಗಿದ ಸೆರಗುಗಳು ಹುಟ್ಟಿಕೊಂಡವು. ಈ ಸೆರಗು ಅತ್ಯಂತ ಕಲಾತ್ಮಕ ಹಾಗೂ ಆಕರ್ಷಕವಾಗಿ ರುತ್ತವೆ. ಮೂರು ಲಾಳಿಗಳನ್ನು ಬಳಸಿ ಇಬ್ಬರು ಒಟ್ಟಿಗೆ ಸೀರೆ ನೇಯುತ್ತಾರೆ. ಹಲವಾರು ಕೊಂಡಿ, ಕಾಣಿಕೆಗಳನ್ನು ನಿರ್ಮಿಸಿಕೊಂಡು ಸೀರೆ ಒಡಲಿನ ಭಾಗದ ನೇಯ್ಗೆಯನ್ನು ಸೆರಗಿನ ಜತೆ ಜೋಡುಸುವ ವಿಶಿಷ್ಟ ಕಲೆ ಈ ತಂತ್ರ ಬಳಸಿ ಒಟ್ಟು ನೇಕಾರರು 6,8,9 ಗಜದಷ್ಟು ಬಟ್ಟೆಯನ್ನು ಮಾತ್ರ ನೇಯ್ದ ನಂತರ ಮೂರು ಬೇರೆ ಬೇರೆ ಭಾಗಗಳನ್ನು ಒಟ್ಟಾಗಿ ಜೋಡಿಸಲು ಕೊಂಡಿ ಹಾಗೂ ಗೊಣಸುತಂತ್ರದ ಬಳಕೆಯಾಗುತ್ತದೆ ಬುಗಡಿ ಸೆರಗಿನ ಸೀರೆ ಮತ್ತು ಟೋಪಿ ತೆನೆ ಎಂಬ ತಂತ್ರದಿಂದ ತಯಾರಾಗುವ ಇಳಕಲ್ ಸೀರೆಗೆ ಹೆಚ್ಚು ಬೇಡಿಕೆ.
ದೊಡ್ಡ ದೊಡ್ಡ ಅಂಗಡಿ ಮಾಲ್ ಗಳಲ್ಲಿ, ಸೀರೆ ತಯಾರಿಕಾ ಕೇಂದ್ರ ಇಳಕಲ್ ಗುಡಿ ಕೈಗಾರಿಕೆಯ ಕೈಮಗ್ಗದ ಗ್ರಾಮೀಣ ಕೇಂದ್ರದೊಳಗೆ ಇಳಕಲ್ ಸಾಂಪ್ರದಾಯಿಕ ಕೈಮಗ್ಗದ ಸೀರೆ ತಯರಿಕಾ ಪ್ರಸಿದ್ಧಿ ಪಡೆದ ಗಲ್ಲಿಗಳಲ್ಲಿ ಹತ್ತಾರು ವಿನ್ಯಾಸಗಳ ಸೀರೆ ತಯಾರುಸುವ ಮಗ್ಗದಲ್ಲೂ ಬಗೆ ಬಗೆಯ ಇಳಕಲ್ ಸೀರೆ ಸಿಗುತ್ತದೆ.
ಇಳಕಲ್ ಸೀರೆಗಳಲ್ಲಿ ಇತ್ತೀಚೆಗೆ ಹೊಸ ವಿನ್ಯಾಸ ತಯಾರಾಗಿದೆ. ಸೀರೆಯ ಒಡಲಿನಲ್ಲಿ ಹೂ, ಆನೆ, ನವಿಲು, ಪಕ್ಷಿ, ಪಲ್ಲಕ್ಕಿಗಳ ಕಸೂತಿ ಚಿತ್ರಗಳ ಹಣೆಗೆ ಒಂಬತ್ತು ಗಜ ಸೀರೆ, ಸೆರಗಿಗೆ ದೇವಸ್ಥಾನದ ಗೋಪುರದ ವಿನ್ಯಾಸ ವಿರುತ್ತದೆ. ಸೆರಗು ಸಾಮಾನ್ಯವಾಗಿ ಕೆಂಪು ಬಣ್ಣದ ರೇಷ್ಮೆ ದಾರಗಳಿಂದ ನೇಯ್ಗೆಯಾದರೆ ಅದಕ್ಕೊಪುವಂತೆ ಬಿಳಿಯ ಚಿತ್ರ ಅಲಂಕಾರವಿರುತ್ತದೆ
ಆಧುನಿಕ ಜಗತ್ತಿನಲ್ಲಿ ಇಳಕಲ್ ಸೀರೆ ಮಿಂಚುತ್ತಿದೆ ಹ್ಯಾಂಡ್ ಲೂಮ್ ನ ಇಳಕಲ್ ಸೀರೆಗಳಲ್ಲಿ ಕೆಲವು ಸಿದ್ದ ಉಡುಪುಗಳಿಗೆ ಬಳಸಲಾಗಿದೆ ರಾಂಪ್ ಮೇಲೂ ಇಳಕಲ್ ಸೀರೆಯನ್ನು ಪ್ರಯೋಗಿಸಿದ ದಾಖಲೆ ಇದೆ. ಇಳಕಲ್ ಸೀರೆ ಸಿಂಗಾಪುರ, ಜರ್ಮನ್, ಅಮೆರಿಕ, ಅರಬ್ ದೇಶಗಳು ಥಾಯ್ಲೆಂಡ್, ಶ್ರೀ ಲಂಕಾದಂತ ದೇಶಗಳಲ್ಲಿ ನೆಲೆಸಿದ ಅನಿವಾಸಿಗಳು ಇಷ್ಟ ಪಟ್ಟು ಆನ್ ಲೈನ್ ನಲ್ಲಿ ತರಿಸಿಕೊಳ್ಳುತಾರೆ. ಜಗತ್ತು ಎಷ್ಟೇ ಮುಂದುವರಿದರು ಎಂತಹ ಆಧುನಿಕ ಉಡುಪುಗಳು ಹೆಣ್ಣಿನ ದೇಹವನ್ನು ಅಲಂಕರಿಸಿದರೂ, ಸೀರೆಗಿರುವ ಗೌರವ ಮಾನ್ಯತೆ ಮಾಸುವುದೇ ಇಲ್ಲ.
ಲತಾ ಸಂತೋಷ ಶೆಟ್ಟಿ ಮುದ್ದುಮನೆ