ಪರೋಪಕಾರ ಬಂಟ ಸಮುದಾಯದ ದೊಡ್ಡ ಗುಣ, ಗುರುಪೀಠವಿಲ್ಲದೇ ಬಂಟ ಸಮುದಾಯವು ಎಲ್ಲಾ ಕ್ಷೇತ್ರಗಳಲ್ಲೂ ಇಂದು ಪ್ರಗತಿ ಸಾಧಿಸಿದೆ, ಸಮುದಾಯದ ಹಿರಿಯರು ಗುರುಪೀಠಕ್ಕೆ ಹೋರಾಡದೆ ಬಂಟರ ಸಂಘ, ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡಿರುವುದರಿಂದಲೇ ಇಂದು ಸಮುದಾಯದ ಅಭಿವೃದ್ಧಿ ಸಾಧ್ಯವಾಗಿರುವುದು, ಹಾಗಾಗಿ ಈ ಸಮುದಾಯವು ಗುರುಪೀಠದ ಗೋಜಿಗೆ ಹೋಗದೆ ಹಿರಿಯರು ತೋರಿದ ಹಾದಿಯಲ್ಲೇ ಮುಂದೆ ಸಾಗಬೇಕು, ದೇವರನ್ನೇ ಗುರುವನ್ನಾಗಿ ಕಾಣಬೇಕು, ಈ ನಿಟ್ಟಿನಲ್ಲಿ ಸಮಾಜಕ್ಕೆ ಅರಿವು ಮೂಡಿಸುವ ಕೆಲಸಗಳಾಗಬೇಕೆಂದು ಕೇಮಾರು ಸಾಂದೀಪನೀ ಸಾಧನಾಶ್ರಮದ ಈಶ ವಿಠಲದಾಸ ಸ್ವಾಮೀಜಿಯವರು ಹೇಳಿದರು.
ಮೂಡುಬಿದಿರೆ ಯುವ ಬಂಟರ ಸಂಘದ ವತಿಯಿಂದ ನಡೆದ ಬಂಟರ ಸಮ್ಮಿಲನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಸ್ವಾಮೀಜಿಯವರು ಸಂಸ್ಕøತಿ, ಶಿಕ್ಷಣ, ಉದ್ಯಮ, ಧಾರ್ಮಿಕ, ಸಾಮಾಜಿಕ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಬಂಟ ಸಮುದಾಯದ ಕೊಡುಗೆ ದೊಡ್ಡದು, ಇದು ಬಂಟ ಸಮುದಾಯದ ಹೆಮ್ಮೆ ಎಂದರು.
ಆಧ್ಯಾತ್ಮವೆಂದರೆ ಕೇವಲ ಗುಡಿ ಗೋಪುರಗಳನ್ನು ಕಟ್ಟುವುದಲ್ಲ, ಯಾರು ಹಸಿದವರಿರುತ್ತಾರೋ, ಯಾರು ಕಷ್ಟದಲ್ಲಿರುತ್ತಾರೋ ಅಂತವರಿಗೆ ನೆರವಾಗುವುದೇ ಶ್ರೇಷ್ಠವಾದ ಆಧ್ಯಾತ್ಮವೆಂದು ಹೇಳಿದ ಅವರು ಬಂಟ ಸಮುದಾಯವು ಎಲ್ಲ ಸಮುದಾಯದವರೊಂದಿಗೂ ಬೆರೆತುಕೊಂಡು, ಸರ್ವಧರ್ಮೀಯರ ಕಷ್ಟ ಸುಖಗಳಲ್ಲಿ ಭಾಗಿಯಾಗಬೇಕೆಂದರು. ನ್ಯಾಯವಾದಿಗಳಾದ ಚೇತನ್ ಕುಮಾರ್ ಶೆಟ್ಟಿ, ನಾಗೇಶ್ ಶೆಟ್ಟಿ, ಉದ್ಯಮಿ ತೋಡಾರು ದಿವಾಕರ ಶೆಟ್ಟಿ ,ಸುಕೇಶ್ ಶೆಟ್ಟಿ ಶಿರ್ತಾಡಿ, ಪ್ರೇಮನಾಥ ಮಾರ್ಲ, ಮಿಥುನ್ ಶೆಟ್ಟಿ ನ್ಯೂ ಪಡಿವಾಳ್ಸ್, ವಂದನಾ ರೈ ಕಾರ್ಕಳ, ಭೋಜ ಶೆಟ್ಟಿ, ಕುಮಾರ್ ಶೆಟ್ಟಿ ಇರುವೈಲು, ಯುವ ಬಂಟರ ಸಂಘದ ಅಧ್ಯಕ್ಷ ಜಯ ಕುಮಾರ್ ಶೆಟ್ಟಿ, ಉಪಾಧ್ಯಕ್ಷ ಭರತ್ ಶೆಟ್ಟಿ ಇರುವೈಲು, ಪದಾಧಿಕಾರಿಗಳು ಉಪಸ್ಥಿತರಿದ್ದರು.