ಇತ್ತೀಚೆಗೆ ಒಂದು ಫೇಸ್ಬುಕ್ ಪೋಸ್ಟ್ ನೋಡ್ತಾ ಇದ್ದೆ. ಅದ್ರಲ್ಲಿ ಕಮೆಂಟ್ ಸೆಕ್ಷನ್ ಅಲ್ಲಿದ್ದ ನೆಗೆಟಿವ್ ಕಮೆಂಟ್ಗಳಿಗೆಲ್ಲ ಆ ಪೋಸ್ಟ್ ಮಾಡಿದ ವ್ಯಕ್ತಿ ಖಾರವಾದ ಪ್ರತಿಕ್ರಿಯೆ ನೀಡ್ತಾ ಇದ್ರು. ಪುನಃ ಆ ಕಮೆಂಟ್ಗಳಿಗೆ ಮತ್ತೆ ವಾದಿಗಳು , ಪ್ರತಿವಾದಿಗಳು ಹೀಗೆ ಪಟ್ಟಿ ಬೆಳೀತಾನೆ ಇತ್ತು .. ಕೊನೆಗೆ ಗೆಲುವು ಯಾರದ್ದು ಅಂತ ಕೇಳಿದ್ರೆ ಅದು ಕೊನೆಯಿರದ ಯುದ್ಧ ಅಷ್ಟೇ.. ಕಮೆಂಟ್ಗಳಿಗೆ, ಬೇರೆಯವರ ಮಾತುಗಳಿಗೆ ತಲೆ ಕೆಡಿಸಿಕೊಳ್ಳದೆ ಇರೋದು ಜೀವನದಲ್ಲಿ ಎಲ್ಲರಿಗೂ ಇರಲೇಬೇಕಾಗಿರುವ ಗುಣ ಅಂದ್ರೆ ಒಪ್ತೀರಿ ಅಲ್ವಾ , ಅದು ಜೀವನ ಬೇಕಾದ್ರೂ ಆಗಿರಲಿ ಅಥವಾ ಸಾಮಾಜಿಕ ಜಾಲತಾಣಗಳು ಬೇಕಾದರೂ ಆಗಿರಲಿ.
ಚಿಕ್ಕ ವಯಸ್ಸಿನಲ್ಲಿ ನನಗೆ ಯಾರಾದರೂ ನನ್ನ ವಿಚಾರವಾಗಿ ಕಮೆಂಟ್ಗಳನ್ನು ಮಾಡಿದಾಗ, ತಮ್ಮ ಅಭಿಪ್ರಾಯಗಳನ್ನು ಅನಗತ್ಯ ವಾಗಿ ಹೇರಿದಾಗ ಅದನ್ನ ಸ್ವೀಕರಿಸುವುದಕ್ಕೆ ಬಹಳ ಕಷ್ಟ ಆಗ್ತಿತ್ತು. ಕೋಪ ಬರ್ತಾ ಇತ್ತು ಬೇಜಾರ್ ಆಗ್ತಾ ಇತ್ತು. ಎಲ್ಲೋ ಒಂದು ಕಡೆ ಕೀಳರಿಮೆ ಕೂಡ ಕಾಡ್ತಿತ್ತು. ಆತ್ಮವಿಶ್ವಾಸದ ಮೇಲೆ ಒಂದು ರೀತಿ ಹೊಡೆತ ಬಿದ್ದಂತಹ ಫೀಲ್ ಕೂಡ ಆಗ್ತಾ ಇತ್ತು. ಹಲವು ಬಾರಿ ಅದನ್ನೇ ನಿಜ ಇರಬಹುದು ಅಂತ ಅಂದುಕೊಂಡು ಹೆದರಿ ಸುಮ್ಮನೆ ಇದ್ದ ದಿನಗಳು ಕೂಡ ಇದ್ದವು. ಬುದ್ಧಿ ಭಾವನೆ ಅಷ್ಟಾಗಿ ಬೆಳೆಯದೆ ಇರುವಂತಹ ಚಿಕ್ಕ ವಯಸ್ಸಿನಲ್ಲಿ ಯಾವ ರೀತಿ ಪ್ರತಿಕ್ರಿಯೆ ನೀಡಬೇಕು ಅಂತಾನೇ ಗೊತ್ತಾಗ್ತಾ ಇರಲಿಲ್ಲ. ಅಷ್ಟು ಧೈರ್ಯ ಕೂಡ ಬೆಳೆದಿರಲಿಲ್ಲ. ಇದನ್ನೆಲ್ಲಾ ಯಾರು ಹೇಳಿ ಕೊಡಲೂ ಕೂಡ ಸಾಧ್ಯವಿಲ್ಲ ಅನುಭವಗಳ ಮೂಲಕ ಕಲಿಯಬೇಕಾಗಿರುವ ವಿಚಾರಗಳಿವು.
ಬೆಳಿತಾ ಬೆಳಿತಾ ಎಲ್ಲಾ ರೀತಿಯ ಜನರ ಜೊತೆ ಮಿಂಗಲ್ ಆಗ್ತಾ ಯಾರಾದ್ರೂ ಏನಾದ್ರೂ ಕಮೆಂಟ್ ಮಾಡಿದರೆ ಸ್ವಲ್ಪ ಕೂಡ ಬೇಜಾರನ ಮಾಡಿಕೊಳ್ಳದೇನೆ ಅದನ್ನ ಸಮಚಿತ್ತದಿಂದ ಸ್ವೀಕರಿಸುವ ಮನಸ್ಥಿತಿನ ರೂಢಿಸಿಕೊಂಡೆ. ಕೆಲವೊಂದು ಸತ್ಯ ಇದೆ ಅಂತ ಅನಿಸಿದ್ದನ್ನು ನನ್ನೊಳಗೆ ಅಳವಡಿಸಿಕೊಳ್ಳುತ್ತಾ ಹೋದೆ. ಅನಗತ್ಯ ಅನಿಸಿದ್ದು, ಕೆಲಸಕ್ಕೆ ಬಾರದ ಅಭಿಪ್ರಾಯ ಗಳನ್ನೆಲ್ಲಾ ಅಲ್ಲೇ ಬಿಟ್ಟು ಮುಂದಕ್ಕೆ ಹೋಗೋದು ಅಭ್ಯಾಸ ಆಗಿಬಿಟ್ಟಿತ್ತು .ಆ ವಿಷಯದಲ್ಲಿ ಇನ್ನೂ ಕೂಡ ಸ್ಥಿತಪ್ರಜ್ಞತೆ ಬರಬೇಕು ಅನ್ನೋ ಗುರಿ ಕೂಡ ಇದೆ.
ಒಂದು ವಿಷಯ ಅಂತೂ ಸತ್ಯ. ಪ್ರಪಂಚದಲ್ಲಿ ಕಮೆಂಟ್ಗಳು ಯಾವತ್ತಿಗೂ ಕೂಡ ಕಡಿಮೆ ಅಥವಾ ಖಾಲಿ ಆಗೋದೇ ಇಲ್ಲ. ನಾವು ಜೀವಿಸುವ ಜಗತ್ತಿನಲ್ಲಿ ಚಿಕ್ಕ ಪುಟ್ಟ ವಿಷಯಗಳಿಂದ ಹಿಡಿದು ದೊಡ್ಡ ವಿಚಾರಗಳ ತನಕ ಎಲ್ಲರೂ ಕೂಡ ಅವರಿಗನಿಸಿದಂತಹ ವಿಚಾರಗಳನ್ನ ಹೇಳುವುದು ಸ್ವಾಭಾವಿಕ ಆದರೆ ಅದನ್ನು ತೀರ ಗಂಭೀರವಾಗಿ ತೆಗೆದುಕೊಂಡು ಬಹಳ ಬೇಗ ಯಾವುದಾದರು ತೀರ್ಮಾನಕ್ಕೆ ಬರುವ ಮನೋಭಾವವನ್ನು ಹೊಂದಿದ್ದರೆ, ಜೀವನ ಯಾವಾಗಲೂ ಕೂಡ ದುಃಖದಲ್ಲೇ ಮುಳುಗಿರುವ ಸಾಧ್ಯತೆಗಳು ಇರುತ್ತವೆ.
ಮೊದಲು ಇದಕ್ಕೆ ಬೇಕಾಗಿರುವ ಪರಿಹಾರಗಳನ್ನು ನಮ್ಮೊಳಗಡೆ ಹುಡುಕಿಕೊಳ್ಳುವ ಪ್ರಯತ್ನಗಳನ್ನು ಮಾಡುವುದು ಅತ್ಯಂತ ಅವಶ್ಯಕವಾದದ್ದು. ಅದರಲ್ಲಿ ಮೊದಲನೆಯದು ನಮ್ಮನ್ನು ನಾವು ಚೆನ್ನಾಗಿ ಅರ್ಥ ಮಾಡಿಕೊ ಕೊಳ್ಳುವ ಕೆಲಸ. ನಾವು ಏನು ಅನ್ನೋದು ನಮಗೆ ಚೆನ್ನಾಗಿ ಗೊತ್ತಿದ್ದಾಗ ಇನ್ನೊಬ್ಬರ ಅಭಿಪ್ರಾಯಗಳು ನಮ್ಮನ್ನು ಎಂದಿಗೂ ಕೂಡ ಡಿಸ್ಟರ್ಬ್ ಮಾಡುವ ಕೆಲಸವನ್ನು ಮಾಡುವುದಿಲ್ಲ. ಎರಡನೆಯದು ಯಾರು ಏನೇ ಹೇಳಿದರೂ ಅದು ಕೇವಲ ಅವರ ಅಭಿಪ್ರಾಯ ಮಾತ್ರ ಅದು ನಮ್ಮ ಅಭಿಪ್ರಾಯ ಅಥವಾ ಶಾಶ್ವತವಾದಂತಹ ಅಭಿಪ್ರಾಯ ಆಗಿರುವುದಿಲ್ಲ ಎನ್ನುವ ವಿಷಯವನ್ನು ನಾವು ಚೆನ್ನಾಗಿ ಅರ್ಥಮಾಡಿಕೊಂಡಿರಬೇಕಾಗುತ್ತದೆ. ಎಲ್ಲರೂ ಕೂಡ ತಮ್ಮದೇ ಆದಂತಹ ಅಭಿರುಚಿಗಳನ್ನು ಹೊಂದಿರುತ್ತಾರೆ. ಹಾಗೆ ಮನಸ್ಸಿನ ಒಳಗಡೆ ತಮ್ಮದೇ ಆದಂತಹ ಸಿದ್ಧಾಂತಗಳಿಗೆ ಬದ್ಧರಾಗಿರುತ್ತಾರೆ. ಅದಕ್ಕನುಗುಣವಾಗಿ ಅದೇ ವಿಚಾರಗಳನ್ನು ಅದರಲ್ಲೂ ತಮಗಿಷ್ಟ ಬಂದಂತಹ ತಮಗಿಷ್ಟವಾಗುವಂತಹ ವಿಚಾರಗಳನ್ನು ಬೇರೆಯವರ ಜೀವನದಲ್ಲೂ ಕೂಡ ಹುಡುಕುತ್ತಾರೆ. ಹಾಗಾಗಿ ಉಳಿದೆಲ್ಲ ವಿಚಾರಗಳು ಅವರಿಗೆ ತಪ್ಪಾಗಿ ಕಾಣಿಸುತ್ತದೆ. ಅದನ್ನು ತಮ್ಮ ಮಾತಿನಲ್ಲಿ ಬೇರೆಯವರ ಮುಂದೆ ತೋರ್ಪಡಿಸಿಕೊಳ್ಳುತ್ತಾರೆ. ತಮ್ಮನ್ನು ತಾವು ಸರಿ ಎಂದು ನಿರೂಪಿಸುವುದಕ್ಕಾಗಿ ನಿರಂತರವಾಗಿ, ಬೇರೆಯವರ ಮೇಲೆ ತಮ್ಮ ಅಭಿಪ್ರಾಯಗಳನ್ನು ಹೇರುವ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ.
ಎಷ್ಟೋ ಬಾರಿ ನಮಗಿಷ್ಟವಾಗಿರುವುದು ಇನ್ನೊಬ್ಬರಿಗೆ ಇಷ್ಟವಿಲ್ಲದೆ ಇರುವ ವಿಷಯ ಆಗಿರಬಹುದು ಅಥವಾ ಇನ್ನೊಬ್ಬರಿಗೆ ನಮ್ಮ ವಿಚಾರಗಳು ನಮ್ಮ ವಸ್ತುಗಳು ನಮ್ಮ ಚಟುವಟಿಕೆಗಳು ಇಷ್ಟ ಆಗಲೇಬೇಕು ಅಂತ ಏನು ಇಲ್ಲ. ಇದು ಸಹಜ ಸತ್ಯ ಕೂಡ. ಹಾಗೆಯೇ ಬಹಳ ಮುಖ್ಯವಾಗಿ ಇನ್ನೊಬ್ಬರು ನಮ್ಮ ಬಗ್ಗೆ ಅವರ ಅಭಿಪ್ರಾಯವನ್ನು ಹೇಳಿದ ತಕ್ಷಣ ಅದು ನಿಜವಾಗಿ ಬಿಡುವುದಿಲ್ಲ ಅಥವಾ ಅವರು ಹೇಳಿದಂತಹ ವಿಚಾರಗಳಲ್ಲಿ ಕೆಲವೊಮ್ಮೆ ನಮ್ಮ ಒಳ್ಳೆಯದು ಕೂಡ ಅಡಗಿರಬಹುದು. ಹಾಗೆಯೇ ಅವರು ಹೇಳಿದಂತಹ ಬದಲಾವಣೆಗಳನ್ನು ಮಾಡಿಕೊಂಡು ಅಥವಾ ಆ ವಿಚಾರಗಳನ್ನು ನಮ್ಮಲ್ಲಿ ಅಳವಡಿಸಿಕೊಂಡಾಗ ನಾವು ಮೊದಲಿಗಿಂತ ಹೆಚ್ಚಿನ ಪ್ರಗತಿಯನ್ನು ಕೂಡ ಸಾಧಿಸುವ ಸಾಧ್ಯತೆಗಳು ಕೂಡ ಇರುತ್ತದೆ.
ಹಾಗೆಯೇ ಅವರು ಹೇಳಿದಂತಹ ವಿಚಾರಗಳನ್ನ ಅಳವಡಿಸಿಕೊಂಡು ಮೊದಲಿಗಿಂತ ಒಂದು ಹೆಜ್ಜೆ ಮುಂದೆ ಹೋಗುವ ಬದಲು ಹಿಂದೆಯೇ ಹೋಗಿ ನಮ್ಮ ಪ್ರಗತಿ ಕುಂಠಿತವಾಗಬಹುದಾದ ಸಂಭವ ಕೂಡ ಇದೆ. ಬೇರೆಯವರ ನೆಗೆಟಿವ್ ಕಮೆಂಟ್ಗಳು ರೇಖೆಗಳು ಟೀಕೆಗಳು ಅಭಿಪ್ರಾಯಗಳು ನಮ್ಮನ್ನು ಸ್ವಲ್ಪವೂ ಅಲುಗಾಡಿಸದೆ ಇರುವಷ್ಟು ಗಟ್ಟಿಯಾದ ಮನಸ್ಥಿತಿಯನ್ನು ನಿರ್ವಿಕಾರ ಚಿತ್ತವನ್ನು ಬುದ್ಧಿಶಕ್ತಿಯನ್ನು ಒಮ್ಮೆ ರೂಡಿಸಿಕೊಂಡಿದ್ದೆ ಆದರೆ ಖಂಡಿತವಾಗಿಯೂ ಯಾರ ನೆಗೆಟಿವ್ ಕಮೆಂಟ್ಗಳು ನಮ್ಮನ್ನು ನೋಯಿಸುವುದು ಇಲ್ಲ ಡಿಸ್ಟರ್ಬ್ ಮಾಡುವುದು ಇಲ್ಲ ಜೀವನದಲ್ಲಿ ಮುಂದೆ ಸಾಗುವುದನ್ನು ತಡೆಯುವುದು ಇಲ್ಲ.
ಇದುವರೆಗೆ ಜಗತ್ತಿನಲ್ಲಿ ಸಾಧನೆ ಮಾಡಿದ ಎಲ್ಲಾ ಸಾಧಕರು ಯಶಸ್ವಿ ವ್ಯಕ್ತಿಗಳು ತಮ್ಮ ಜೀವನದಲ್ಲಿ ಬೇರೆಯವರ ಮಾತಿಗೆ ಎಂದೂ ತಲೆಕೆಡಿಸಿಕೊಂಡವರೇ ಅಲ್ಲ. ಅದರಿಂದ ಖಂಡಿತ ಯಾವುದೇ ಪ್ರಯೋಜನವೂ ಇಲ್ಲ ಬದಲಾಗಿ ನಷ್ಟವೇ ಜಾಸ್ತಿ. ಜನರು ನನ್ನ ಬಗ್ಗೆ ಒಳ್ಳೆಯ ಕಮೆಂಟ್ ಗಳನ್ನು ಮಾಡಬೇಕು ಎಂದು ಅಪೇಕ್ಷೆ ಮಾಡಿ ಅದೇ ಪ್ರಕಾರವಾಗಿ ಬದುಕುವುದು ದೊಡ್ಡ ಮೂರ್ಖತನವಾಗುತ್ತದೆ ವಿನಹ ಬೇರೇನೂ ಅಲ್ಲ . ಜೀವನದಲ್ಲಿ ಗುರಿ ಇದ್ದು ಆ ಗುರಿಯನ್ನು ಸಾಧಿಸಲು ಹೊರಟವರಿಗೆ ಯಾವ ಟೀಕೆಗಳು ಟಿಪ್ಪಣಿಗಳು ಏನು ಕೂಡ
ಮಾಡಲಾರವು.
ಆರ್ ಜೆ ನಯನಾ ಶೆಟ್ಟಿ