ಒಬ್ಬ ದೈವಭಕ್ತನು ರಾತ್ರಿ ವೇಳೆ ತನ್ನ ನಿತ್ಯ ಪ್ರಾರ್ಥನೆಗೆ ಸಿದ್ಧನಾಗಿ ಪೂಜಾಗೃಹದಲ್ಲಿ ಕುಳಿತುಕೊಂಡ. ಆದರೆ ಆ ರಾತ್ರಿ ಯಾವುದೋ ಒಂದು ಕಾಡುಗಪ್ಪೆಯೊಂದು ಗಟ್ಟಿಯಾಗಿ ವಟಗುಟ್ಟತೊಡಗಿತು. ಅದರಿಂದ ಆ ದೈವಭಕ್ತನ ಪ್ರಾರ್ಥನೆಗೆ ಭಂಗವುಂಟಾಯಿತು. ಮನಸ್ಸನ್ನು ಕೇಂದ್ರೀಕರಿಸಿ ತನ್ನ ಪೂಜಾ ಕಾರ್ಯಕ್ರಮವನ್ನು ಮುಂದುವರೆಸಲು ಆತನು ಎಷ್ಟು ಪ್ರಯತ್ನಿಸಿದರೂ ಆ ಕಪ್ಪೆಯ ಶಬ್ದದಿಂದಾಗಿ ಪ್ರಾರ್ಥನೆ ಮಾಡುವುದು ಅವನಿಗೆ ಅಸಾಧ್ಯವೆನಿಸಿತು. ಅವನು ಸಹನೆಯನ್ನು ಕಳೆದುಕೊಂಡು ಕಿಟಿಕಿಯ ಹೊರಗೆ ತಲೆಯಿಟ್ಟು ಗಟ್ಟಿಯಾಗಿ ಕಿರುಚಿದನು, “ಸಾಕು ಮಾಡು ನಿನ್ನ ಗೋಳು! ನಾನು ಪ್ರಾರ್ಥನೆ ಮಾಡುತ್ತಿದ್ದೇನೆ ಎನ್ನುವುದು ನಿನಗೆ ಅರಿವಾಗದೇ?” ನಮ್ಮ ದೈವಭಕ್ತನು ಶಕ್ತಿಸಮನ್ವಿತನಾಗಿದ್ದ, ವಾಕ್ಸಿದ್ಧಿಯನ್ನು ಗಳಿಸಿದ್ದ. ಹಾಗಾಗಿ ಆ ಮಾತುಗಳನ್ನು ಆ ಕಪ್ಪೆ ಶಿರಸಾವಹಿಸಿ ಪಾಲಿಸಿತು. ಅದು ವಟಗುಟ್ಟುವುದನ್ನು ಸಂಪೂರ್ಣವಾಗಿ ನಿಲ್ಲಿಸಿತು. ಆತನ ಪ್ರಾರ್ಥನೆಗೆ ಭಂಗವುಂಟು ಮಾಡಬಾರದೆಂದು ಉಳಿದ ಜೀವರಾಶಿಯೂ ಸಹ ತಾವು ಸಾಧಾರಣವಾಗಿ ಮಾಡುತ್ತಿದ್ದ ಶಬ್ದಗಳನ್ನು ನಿಲ್ಲಿಸಿ ನಿಶ್ಶಬ್ದವಾದವು. ಆದರೆ ಆ ಭಕ್ತನ ಹೃದಯಾಂತರಾಳದಿಂದ ಸಣ್ಣ ದನಿಯೊಂದು ಕೇಳಿಸಿತು. “ನಿನ್ನ ಪ್ರಾರ್ಥನೆ, ಜಪತಪಗಳು, ಶ್ಲೋಕಗಳನ್ನು ಪಠಿಸುವುದರ ಮೂಲಕ ಭಗವಂತನು ಎಷ್ಟು ಸಂತೋಷ ಪಡುತ್ತಾನೆಯೋ ಅದೇ ವಿಧವಾಗಿ ಆ ಕಾಡುಗಪ್ಪೆಯ ವಟಗುಟ್ಟುವಿಕೆಯಿಂದ ಕೂಡಾ ದೇವರು ಅಷ್ಟೇ ಸಂತೋಷಗೊಳ್ಳುತ್ತಿದ್ದಾನೇನೋ! ಆ ವಿಷಯವನ್ನು ನೀನು ಎಂದಾದರೂ ಆಲೋಚಿಸಿದ್ದೀಯಾ?” ಎಂದು ಆ ಧ್ವನಿಯು ಪ್ರಶ್ನಿಸಿತು.

“ಕಪ್ಪೆ ಮಾಡುವ ವಿಕೃತ ಧ್ವನಿಗಳು ಭಗವಂತನಿಗೆ ಹೇಗೆ ಮೆಚ್ಚುಗೆಯಾಗುತ್ತವೆ?” ಎಂದು ತಿರಸ್ಕಾರ ಭಾವದಿಂದ ಆ ಭಕ್ತನು ಮರು ನುಡಿದನು. ಆದರೆ ಅವನ ಅಂತರಾಳದ ಧ್ವನಿಯು ಅಲ್ಲಿಗೇ ನಿಲ್ಲಲಿಲ್ಲ. ಅದು ಅವನನ್ನು ಹೀಗೆ ಪ್ರಶ್ನಿಸಿತು, “ದೇವರಿಗೆ ಆ ಶಬ್ದವು ಅಷ್ಟು ಕರ್ಣಕಠೋರವಾಗಿದ್ದರೆ, ಆ ಕಪ್ಪೆಯ ಧ್ವನಿಪೆಟ್ಟಿಗೆಯನ್ನು ಭಗವಂತನು ಹಾಗೇಕೆ ಸೃಷ್ಟಿಸುತ್ತಿದ್ದ?” ಆ ಭಕ್ತ ಈ ವಿಷಯವನ್ನು ಒಂದು ಕೈ ನೋಡಿಯೇ ಬಿಡೋಣ ಎಂದುಕೊಂಡ. ಈ ಸಾರಿ ಪುನಃ ಕಿಟಕಿಯ ಹೊರಗೆ ತಲೆಯಿಟ್ಟು “ನೀವೆಲ್ಲಾ ಹಾಡಿರಿ” ಎಂದು ಆಜ್ಞಾಪಿಸಿದ. ಆ ಕಾಡುಗಪ್ಪೆ ಪುನಃ ತನ್ನ ವಟಗುಟ್ಟುವಿಕೆಯನ್ನು ಆರಂಭಿಸಿತು. ಉಳಿದ ಜೀವರಾಶಿಯೂ ಸಹ ತಮ್ಮ ಅರುಚುವಿಕೆಯನ್ನು ಮುಂದುವರೆಸಿದವು. ಈ ಸಾರಿ ಆ ಭಕ್ತನು ಕಿವಿಗೊಟ್ಟು, ಮನಸ್ಸಿಟ್ಟು ಆ ಶಬ್ದಗಳನ್ನು ಕೇಳಿಸಿಕೊಳ್ಳತೊಡಗಿದ. ಈಗ ಅವನಿಗೆ ಆ ಶಬ್ದಗಳು ಕೆಟ್ಟ ಅರುಚುವಿಕೆಯಂತೆ ಕೇಳಿಸದೆ ಅವು ಅವನ ಕಿವಿಗೆ ಇಂಪಾಗಿ ಕೇಳಿಸಲಾರಂಭಿಸಿದವು. ಆ ಅಪರಾತ್ರಿ ವೇಳೆಯ ನಿಶ್ಶಬ್ದದಲ್ಲಿ ಆ ಜೀವರಾಶಿಗಳ ಧ್ವನಿಯು ಅವನಿಗೆ ಮತ್ತಷ್ಟು ಶೋಭಾಯಮಾನವಾಗಿ ಕೇಳಿಸಿದ್ದಲ್ಲದೆ ಅವನ್ನು ಕೇಳುವುದು ತನ್ನ ಸೌಭಾಗ್ಯವೆಂದು ಅವನು ಭಾವಿಸಿದ. ಭಗವಂತನ ಸೃಷ್ಟಿಯ ಸೌಂದರ್ಯದ ಅರಿವಾದ ಕೂಡಲೇ ಭಕ್ತನ ಹೃದಯವು ಉಳಿದ ಸೃಷ್ಟಿಯೊಂದಿಗೆ ಮಧುರವಾಗಿ ಸುಶ್ರಾವ್ಯವಾಗಿ ಕಲೆತು ಸ್ಪಂದಿಸಲಾರಂಭಿಸಿತು. ಆ ಭಕ್ತನಿಗೆ ನಿಜವಾದ ಪ್ರಾರ್ಥನೆಯು ಹೇಗೆ ಇರುತ್ತದೆ ಎನ್ನುವುದು ಜೀವನದಲ್ಲಿ ಮೊದಲ ಬಾರಿಗೆ ಅನುಭವಕ್ಕೆ ಬಂದಿತು.

















































































































