ತೀರ್ಥಹಳ್ಳಿ ಸಮೀಪ ಮಂಜುನಾಥ ಮತ್ತು ಸುಶೀಲ ದಂಪತಿಗಳ ಎರಡನೇ ಮಗನಾಗಿ ಶರತ್ ಏಪ್ರಿಲ್ 17 1989 ರಂದು ಜನಿಸಿದರು.ಅತ್ಯಂತ ಎಳವೆಯಲ್ಲೇ ತನ್ನ ತಂದೆತಾಯಿಯನ್ನು ಕಳೆದುಕೊಂಡ ಇವರು ಕನ್ನಂಗಿ ಸಮೀಪ ಹೊನ್ನಾಸ್ಗದ್ದೆ ಎಂಬ ಹಳ್ಳಿಯಲ್ಲಿ ತನ್ನ ಅಜ್ಜಿ ಮನೆಯಲ್ಲಿ ಬೆಳೆದರು.ಸ್ಥಳೀಯ ಶಾಲೆಯಲ್ಲಿ ಏಳನೇ ತರಗತಿ ತನಕದ ವಿದ್ಯಾಭ್ಯಾಸ.ಕಡುಬಡತನದ ಕಾರಣದಿಂದ ವಿದ್ಯಾಭ್ಯಾಸಕ್ಕೆ ತಿಲಾಂಜಲಿ ಇತ್ತು ತೀರ್ಥಹಳ್ಳಿಯಲ್ಲಿ ಹೋಟೆಲೊಂದರಲ್ಲಿ ಕೆಲಸಕ್ಕೆ ಸೇರಿದರು. ಬಾಲ್ಯದಿಂದಲೇ ಮಂದಾರ್ತಿ ಮೇಳದ ಯಕ್ಷಗಾನ ನೋಡುತ್ತಾ ಬೆಳೆದ ಇವರಿಗೆ ಯಕ್ಷಗಾನ ಕಲಾವಿದ ಆಗಬೇಕೆಂಬ ಆಸೆ ಚಿಕ್ಕಂದಿನಿಂದಲೇ ಇತ್ತು. ಮಂದಾರ್ತಿ ಮೇಳದಲ್ಲಿ ತಿರುಗಾಟ ಮಾಡಬೇಕೆಂಬ ಆಸೆ ನಾಟ್ಯ ಕಲಿಯದ ಕಾರಣ ಈಡೇರಲಿಲ್ಲ. ಅದೇ ಸಮಯದಲ್ಲಿ ಧರ್ಮಸ್ಥಳ ಯಕ್ಷಗಾನ ಕೇಂದ್ರದ ಜಾಹೀರಾತು ನೋಡಿ ಭಾಗವತಿಕೆ ಕಲಿಯಲು ಅರ್ಜಿ ಸಲ್ಲಿಸಿದರು. ಕೇಂದ್ರಕ್ಕೆ ಹೋಗಿ ಸಂದರ್ಶನ ಎದುರಿಸಿದ ಇವರನ್ನು ಯಕ್ಷಗಾನದ ಗಂಧಗಾಳಿ ಗೊತ್ತಿಲ್ಲದ ಕಾರಣದಿಂದ ಪಾಸ್ ಮಾಡಲಿಲ್ಲ. ಇವರ ಆಸಕ್ತಿಯನ್ನು ಗಮನಿಸಿದ ದಿ.ಅಡೂರ್ ಗಣೇಶ ರಾವ್ರವರು ಕೇಂದ್ರಕ್ಕೆ ಸೇರ್ಪಡೆಗೊಳಿಸಿದರು. ಆಗ ಭಾಗವತಿಕೆ ಗುರುಗಳಾದ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳ 15 ದಿನದ ಪಾಠ ಆದರೂ ಏನೊಂದೂ ತಲೆಗೆ ಹತ್ತದ ಕಾರಣ ನಾಟ್ಯ ಗುರುಗಳಾದ ದಿವಾಣ ಶಿವಶಂಕರ ಭಟ್ಟರ ಪ್ರೇರಣೆಯಂತೆ ನಾಟ್ಯ ಕಲಿಯಲು ತೊಡಗಿದರು .
ಯಕ್ಷಗಾನ ನಾಟ್ಯದಲ್ಲೂ ಏನೂ ಚುರುಕಾಗಿರದಿದ್ದರೂ ಇವರನ್ನು ಧರ್ಮಸ್ಥಳ ಮೇಳದಲ್ಲಿ 2004- 05 ನೇ ಸಾಲಿನ ತಿರುಗಾಟದಲ್ಲಿ ಮೇಳಕ್ಕೆ ಸೇರಿಸಿದರು. ಹೀಗೆ ಧರ್ಮಸ್ಥಳ ಮೇಳದಲ್ಲಿ ಗೆಜ್ಜೆ ಕಟ್ಟಿ ತಿರುಗಾಟ ಪ್ರಾರಂಭಿಸಿದ ಇವರು ಮೊದಲ ತಿರುಗಾಟದಲ್ಲಿ ಬಾಲಗೋಪಾಲ ವೇಷಮಾಡಿ ದೇವೇಂದ್ರ ಬಲ ,ಇತ್ಯಾದಿ ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತಿದ್ದರು. ಮುಂದಿನ ತಿರುಗಾಟಕ್ಕೆ ಮೇಳಕ್ಕೆ ಬೇಡ ಎಂದ ಕಾರಣ ಇವರು ಬಡಗಿನ ಮಂದಾರ್ತಿ ಕೇಂದ್ರದಲ್ಲಿ ಹಾರಾಡಿ ರಮೇಶ್ ಗಾಣಿಗರಿಂದ ಬಡಗಿನ ನಾಟ್ಯಾಭ್ಯಾಸವನ್ನೂ ಮಾಡಿದರು. ದಿವಾಣ ಶಿವಶಂಕರ ಮತ್ತು ಮೇಳದ ಮೇನೇಜರ್ ಗಿರೀಶ್ ಹಗ್ಡೆಯವರ ಕೃಪೆಯಿಂದ ಪುನಃ ಧರ್ಮಸ್ಥಳ ಮೇಳದಲ್ಲೆ ಮುಂದಿನ ತಿರುಗಾಟ ಮಾಡುವ ಅವಕಾಶ ಪಡೆದುಕೊಂಡರು. ಇವರದೇ ಪ್ರೋತ್ಸಾಹದಿಂದ ಅದೇ ತಿರುಗಾಟದಲ್ಲಿ ಮನಸ್ಸಿಲ್ಲದಿದ್ದರೂ ಮುಖ್ಯ ಸ್ತ್ರೀ ವೇಷ ಮಾಡುವಂತೆ ಆಯಿತು. ಕೆದಿಲ ಜಯರಾಮ ಭಟ್ಟರ ಸಹಕಾರವೂ ಸೇರಿ ಆರು ವರ್ಷಗಳ ಕಾಲ ಧರ್ಮಸ್ಥಳ ಮೇಳದಲ್ಲಿ ಮುಂದುವರಿದರು. ಮುಂದೆ ಮಳೆಗಾಲದಲ್ಲಿ ಸಾಲಿಗ್ರಾಮ ಮೇಳದಲ್ಲಿ ಬಡಗಿನ ತಿರುಗಾಟವನ್ನೂ ಮಾಡಿದರು. ಮುಂದೆ ಒಂದು ವರ್ಷ ಮಂಗಳಾದೇವಿ ಮೇಳದಲ್ಲಿ ತಿರುಗಾಟ ಮಾಡಿ ತುಳು ಭಾಷೆಯಲ್ಲೂ ಪರಿಣತಿ ಪಡೆದರು. ಈ ಸಂದರ್ಭದಲ್ಲಿ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ, ಕೊಳ್ತಿಗೆ ನಾರಾಯಣ ಗೌಡರ ಸಹಕಾರ ದೊರೆಯಿತು. ಮುಂದೆ ನಾಲ್ಕು ವರ್ಷ ಹೊಸನಗರ, ಎರಡು ವರ್ಷ ಎಡನೀರು ಮೇಳದ ತಿರುಗಾಟ ಮಾಡಿದರು. ಈ ಸಂದರ್ಭದಲ್ಲಿ ಅಂಬಾಪ್ರಸಾದ್ ಪಾತಾಳ ಮತ್ತು ಸಂತೋಷ ಕುಮಾರ್ ಹಿಲಿಯಾಣದವರು ಇವರನ್ನು ತಿದ್ದಿ ಓರ್ವ ಉತ್ತಮ ಸ್ತ್ರೀ ವೇಷಧಾರಿಯಾಗಿ ರೂಪಿಸಿದರು. ಮುಂದೆ ಉಜಿರೆ ಅಶೋಕ ಭಟ್ಟರ ನಿರ್ದೇಶನದಂತೆ ಧರ್ಮಸ್ಥಳ ಮೇಳವನ್ನು ಸೇರುವ ಅವಕಾಶ ಪಡೆದ ಇವರು ಕಳೆದ ಆರು ವರ್ಷಗಳಿಂದ ಧರ್ಮಸ್ಥಳ ಮೇಳದಲ್ಲೇ ವೃತ್ತಿ ನಿರತರಾಗಿದ್ದಾರೆ.
ಮಳೆಗಾಲದಲ್ಲಿ 9 ವರ್ಷಗಳ ತಿರುಗಾಟ ನಿಡ್ಲೆ ತಂಡದಲ್ಲೂ ನಾಲ್ಕು ತಿರುಗಾಟ ಪುತ್ತೂರು ಶ್ರೀಧರ ಭಂಡಾರಿಗಳ ಮಹಾಲಿಂಗೇಶ್ವರ ಪ್ರವಾಸಿ ತಂಡದಲ್ಲೂ ಮಾಡಿ,ಈ ವರ್ಷದಿಂದ ಚಂದ್ರಶೇಖರ ಧರ್ಮಸ್ಥಳ ನೇತೃತ್ವದಲ್ಲಿ ಸಂಚರಿಸಿದ ಮಹಾಲಿಂಗೇಶ್ವರ ಪ್ರವಾಸಿ ಮಂಡಳಿಯಲ್ಲಿ ಪ್ರಧಾನ ಸ್ತ್ರೀ ವೇಷಧಾರಿಯಾಗಿದ್ದರು. ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ, ಪಾತಾಳ ಅಂಬಾಪ್ರಸಾದ್, ಸಂತೋಷ್ ಹಿಲಿಯಾಣ, ಶಶಿಕಾಂತ್ ಶೆಟ್ಟಿ ಕಾರ್ಕಳ ಇವರನ್ನು ಹೆಚ್ಚು ಮೆಚ್ಚುವ ಇವರು, ಇವರಿಂದ ಹೆಚ್ಚಿನ ರಂಗಮಾಹಿತಿ ನಡೆಗಳನ್ನು ಕಲಿತುಕೊಂಡಿದ್ದಾರೆ. ಧರ್ಮಸ್ಥಳ ಮೇಳದಲ್ಲಿ ಸುಬ್ರಾಯ ಹೊಳ್ಳ, ರಘುರಾಮಹೊಳ್ಳ, ರಾಮಕೃಷ್ಣ ಮಯ್ಯರ ಪ್ರೋತ್ಸಾಹ ಸಹಕಾರದಿಂದ ಎಲ್ಲಾ ರೀತಿಯ ವೇಷವನ್ನು ಮಾಡಬಲ್ಲರು.
ದಮಯಂತಿ, ಅಮ್ಮುದೇವಿ, ಶ್ರೀದೇವಿ, ಸುಭದ್ರೆ, ಮಾಲಿನಿ, ಅಲೋಲಿಕೆ ಪದ್ಮಾವತಿ, ರಾಣಿ, ಸಹಿತ ಎಲ್ಲಾ ರೀತಿಯ ಗರತಿ ಮತ್ತು ಶೃಂಗಾರ ಪಾತ್ರಗಳನ್ನು ಮಾಡಬಲ್ಲರು. ವಿಷ್ಣು ಕೃಷ್ಣ, ಇತ್ಯಾದಿ ಸಾತ್ವಿಕ ಪುರಷ ಪಾತ್ರಗಳನ್ನೂ ನಿರ್ವಹಿಸಬಲ್ಲವರು. ಕುಂಬಳೆ ಶ್ರೀಧರ ರಾಯರ ಪ್ರೋತ್ಸಾಹ ನೆನಪಿಸಿಕೊಳ್ಳುತ್ತಾರೆ.
ಶ್ರೀಲತಾ ಎಂಬವರನ್ನು ವಿವಾಹಿತರಾದ ಇವರು ಶನ್ವಿತ ಎಂಬ ಪುಟ್ಟ ಮಗಳೊಂದಿಗೆ ಪ್ರಸ್ತುತ ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪ ದಬ್ಬೆಕಟ್ಟೆ ಎಂಬಲ್ಲಿ ಸಂತೃಪ್ತಿಯಿಂದ ಜೀವಿಸುತ್ತಿದ್ದಾರೆ. ಶ್ರೀ ಡಾ.ಡಿ.ವಿರೇಂದ್ರ ಹೆಗ್ಡೆ, ಶ್ರೀ ಹರ್ಷೆಂದ್ರ ಕುಮಾರರ ಅನುಗ್ರಹ ಸದಾ ಸ್ಮರಿಸುವ ಇವರಿಗೆ ಧರ್ಮಸ್ಥಳ ಮಂಜುನಾಥೇಶ್ವರ ಹಾಗೂ ಮಹಾಗಣಪತಿಯು ಸನ್ಮಂಗಲಗನ್ನುಂಟುಮಾಡಲಿ ಯಕ್ಷಗಾನ ಕ್ಷೇತ್ರದಲ್ಲಿ ಇನ್ನಷ್ಟು ಸಾಧಿಸುವಂತೆ ಅನುಗ್ರಹಿಸಲಿ, ಸನ್ಮಾನ ಪ್ರಶಸ್ತಿ ಸಿಗಲೆಂದು ಸಮಸ್ತ ಬಂಟ ಸಮಾಜದ ಪರವಾಗಿ ಶುಭ ಹಾರೈಸುತ್ತೇನೆ.