ಅವಧೂತ ಪರಂಪರೆಯ ಪ್ರಮುಖ ಕೇಂದ್ರ ನಿತ್ಯಾನಂದ ಮಂದಿರ ಮಠ ಜೀರ್ಣೋದ್ಧಾರ ಮತ್ತು ನೂತನ ಬಿಂಬ ಪ್ರತಿಷ್ಠೆ ಕಾರ್ಯಕ್ರಮ ಜ. 15 ಮತ್ತು 16ರಂದು ನಡೆಯಲಿದೆ ಎಂದು ಮಂದಿರದ ಅಧ್ಯಕ್ಷ ಕೆ. ದಿವಾಕರ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
61 ವರ್ಷಗಳ ಹಿಂದೆ ಮಂದಿರವು ಸಾಧ್ವಿ ಸೀತಾ ಶೆಟ್ಟಿ ಅವರ ಮುಂದಾಳತ್ವದಲ್ಲಿ ನಿರ್ಮಾಣವಾಗಿತ್ತು. ನಿರಂತರ ಭಜನೆ, ಸತ್ಸಂಗ, ನಿತ್ಯ ಪೂಜೆ, ಬಾಲ ಭೋಜನ, ಸಾಧುಸಂತರಿಗೆ ಆಶ್ರಯ, ದಾನಗಳಿಂದಾಗಿ ನಗರದಲ್ಲಿ ಆಧ್ಯಾತ್ಮಿಕ ವಾತಾವರಣವನ್ನು ಸೃಷ್ಟಿ ಸಿದ್ದ ಈ ಮಂದಿರ ಸಾಕಷ್ಟು ಶಿಥಿಲಾವಸ್ಥೆಯಲ್ಲಿದ್ದಾಗ ಮುಂಬಯಿ ಮೂಲದ ಉದ್ಯಮಿ ಕೆ.ಕೆ. ಆವರ್ಸೆಕರ್ ಸಹಕಾರದಲ್ಲಿ 4 ಕೋ.ರೂ. ವೆಚ್ಚ ದಲ್ಲಿ ಮರು ನಿರ್ಮಾಣಗೊಂಡಿದೆ. ಮಂದಿರದ ವಾಸ್ತು ಶೈಲಿ ಗಣೇಶ ಪುರಿಯಲ್ಲಿರುವ ನಿತ್ಯಾನಂದ ಮಂದಿರದ ಮಾದರಿಯಲ್ಲಿದೆ ಎಂದರು.
ವಿಗ್ರಹ ಮೆರವಣಿಗೆ ಜ. 15ರಂದು ಗಣೇಶ ಪುರಿಯಿಂದ ಆಗಮಿಸಿರುವ ನಿತ್ಯಾನಂದ ಸ್ವಾಮಿ ವಿಗ್ರಹವನ್ನು ಕೊಡವೂರು ಶಿರಡಿ ಸಾಯಿಬಾಬಾ ಮಂದಿರದಿಂದ ಜೋಡುಕಟ್ಟೆವರೆಗೆ ವಾಹನ ಜಾಥಾದಲ್ಲಿ ತರಲಾಗುವುದು. ಜಾಥಾಕ್ಕೆ ಮಣಿಪಾಲ ಗ್ರೂಪ್ ಮುಖ್ಯಸ್ಥ ಡಾ| ರಂಜನ್ ಪೈ ಚಾಲನೆ ನೀಡಲಿದ್ದಾರೆ. ಜೋಡುಕಟ್ಟೆಯಿಂದ ಭವ್ಯ ಶೋಭಾಯಾತ್ರೆ ನಡೆಯಲಿದೆ.
6.30ಕ್ಕೆ ಸಭಾ ಕಾರ್ಯಕ್ರಮದಲ್ಲಿ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಕನ್ಯಾಡಿ ಶ್ರೀ ಬ್ರಹ್ಮಾನಂದ ಸ್ವಾಮೀಜಿ, ಮೂಡು ಬಿದಿರೆ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಕೊಂಡೆವೂರು ಶ್ರೀ ಯೋಗಾನಂದ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ವಜ್ರದೇಹಿ ಶ್ರೀ ರಾಜಶೇಖರ ಸ್ವಾಮೀಜಿ, ಕೇಮಾರು ಶ್ರೀ ಈಶವಿಠಲದಾಸ ಸ್ವಾಮೀಜಿ, ಬಲ್ಯೊಟ್ಟು ಶ್ರೀ ವಿಖ್ಯಾತಾನಂದ ಸ್ವಾಮೀಜಿ, ವಿನಯ ಗುರೂಜಿ ಆಶೀರ್ವಚನ ನೀಡಲಿದ್ದಾರೆ.