ಮಂಗಳೂರು ಮೆಟ್ರೋಪಾಲಿಟನ್ ನಗರವಾಗಿ ಬೆಳೆಯುತ್ತ ಹೋದಂತೆ, ಅದು ಪ್ರತ್ಯೇಕ ಮಂಗಳೂರು ನಗರ ಜಿಲ್ಲೆಯಾಗುವತ್ತ ಒಂದೊಂದೇ ಹೆಜ್ಜೆ ಮುಂದಿಡುತ್ತಿದ್ದಂತೆಯೇ, ದಕ್ಷಿಣ ಕನ್ನಡ ಜಿಲ್ಲೆಯ ಉಳಿದ ಸಣ್ಣ ನಗರ ಪ್ರದೇಶಗಳು ಮತ್ತು ಗ್ರಾಮಾಂತರ ಪ್ರದೇಶಗಳೆಲ್ಲಾ ಒಂದಾಗಿ ದಕ್ಷಿಣ ಕನ್ನಡ ಗ್ರಾಮಾಂತರ ಜಿಲ್ಲೆಯಾಗುವುದಂತೂ ಖಂಡಿತಾ ಅನ್ನುವ ಮಾತು ಶುರುವಾಗಿ ಆಗಲೇ ಹತ್ತತ್ತಿರ ಹತ್ತು ವರ್ಷಗಳೇ ಆಯಿತು. ಅದಕ್ಕೆ ತಕ್ಕ ಹಾಗೆ ಮುಂದೆ ಆಗಲಿರುವ ಈ ದಕ್ಷಿಣ ಕನ್ನಡ ಗ್ರಾಮಾಂತರ ಜಿಲ್ಲೆಗೆ ಪುತ್ತೂರೇ ಜಿಲ್ಲಾ ಕೇಂದ್ರವಾಗುತ್ತದೆ ಎಂಬ ಮಾತಿಗೂ ಪುಷ್ಟಿ ಸಿಕ್ಕಿತ್ತು. ಅದಕ್ಕೆ ತಕ್ಕ ಹಾಗೆ ಸರಿಯಾಗಿ ಹತ್ತು ವರ್ಷಕ್ಕೂ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರಕಾರವೇ ಇದ್ದಾಗ, ವಿ.ಎಸ್. ಆಚಾರ್ಯ ಗೃಹಮಂತ್ರಿಯಾಗಿದ್ದಾಗ ಮಂಗಳೂರಿಗೆ ಪೊಲೀಸ್ ಕಮೀಷನರ್ ಕಚೇರಿಯೂ ಬಂತು. ಈ ಪೊಲೀಸ್ ಕಮೀಷನರ್ ಆಡಳಿತ ವ್ಯಾಪ್ತಿಗೆ ಮೂಲ್ಕಿ, ಮೂಡಬಿದ್ರಿ, ಬಜ್ಪೆ, ಕೊಣಾಜೆ, ಇವೆಲ್ಲವನ್ನೂ ಸೇರಿಸಲಾಗಿತ್ತು. ಇಷ್ಟಾಗುವಾಗ ಮಂಗಳೂರಿನಲ್ಲಿದ್ದ ಎಸ್.ಪಿ ಕಚೇರಿಯ ವ್ಯಾಪ್ತಿಯಿಂದ ಮಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಹೊರಬಿದ್ದವು. ಅಲ್ಲಿಗೆ ಮಂಗಳೂರಿನಲ್ಲಿ ಆಡಳಿತಾತ್ಮಕವಾಗಿ ಎಸ್.ಪಿ ಕಚೇರಿಯ ಅಗತ್ಯವೇ ಇಲ್ಲವೆಂದು ಸಾಬೀತಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿ ಬಹಳ ದೊಡ್ಡದು. ಸುಳ್ಯದ ಸಂಪಾಜೆ, ಪುತ್ತೂರಿನ ಕೇರಳ ಗಡಿಯ, ಈಶ್ವರಮಂಗಲ, ಪಾಣಾಜೆ, ವಿಟ್ಲದ ಅಡ್ಯನಡ್ಕ , ಬೆಳ್ತಂಗಡಿಯ ಚಾರ್ಮಾಡಿ, ಪುತ್ತೂರಿನ ಗುಂಡ್ಯ, ಹೀಗೆ ಜಿಲ್ಲೆಯ ದೂರ ದೂರದ ಗಡಿಭಾಗಗಳಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಪೊಲೀಸ್ ಚೆಕ್ ಪೋಸ್ಟ್ ಗಳನ್ನು ಆಡಳಿತಾತ್ಮಕವಾಗಿ ನಿರ್ವಹಿಸಲು ಎಸ್.ಪಿ ಕಚೇರಿ ಮಂಗಳೂರಿನಲ್ಲಿರುವುದು ತೀರಾ ಅವೈಜ್ಞಾನಿಕವಾಗಿತ್ತು. ಮಂಗಳೂರಿನಲ್ಲಿ ಎಸ್.ಪಿ ಕಚೇರಿಗೆ ಯಾವುದೇ ಕೆಲಸವೇ ಇಲ್ಲದಿದ್ದರೂ ಆ ಕಚೇರಿ ಅಲ್ಲಿ ಯಾಕೆ ಇರಬೇಕು ಅನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿತ್ತು. ಪುತ್ತೂರು, ಕಡಬ, ಸುಳ್ಯ, ಬೆಳ್ತಂಗಡಿ ಮುಂತಾದ ಸೂಕ್ಷ್ಮ ಪ್ರದೇಶಗಳನ್ನು ನಿಭಾಯಿಸಲು ಭೌಗೋಳಿಕವಾಗಿ ಎಸ್.ಪಿ ಕಚೇರಿ ಮಧ್ಯಭಾಗದಲ್ಲಿರಬೇಕಿತ್ತು. ಅದಕ್ಕಾಗಿ ಪುತ್ತೂರು ಅತ್ಯಂತ ಸೂಕ್ತವಾದ ಪ್ರದೇಶವಾಗಿತ್ತು. ಹಾಗಾಗಿ ಯಾವುದೇ ಲೆಕ್ಕಾಚಾರದಲ್ಲಿ ನೋಡಿದರೂ ಎಸ್.ಪಿ ಕಚೇರಿ ಪುತ್ತೂರಿನಲ್ಲೇ ಇರಬೇಕಿತ್ತು. ಆದರೆ ಈ ಹತ್ತು ಹನ್ನೆರಡು ವರ್ಷಗಳ ಅವಧಿಯಲ್ಲಿ ಪುತ್ತೂರಿನ ಜನಪ್ರತಿನಿಧಿಗಳು ಈ ಬಗ್ಗೆ ಮಾಡಿದ ಪ್ರಯತ್ನ ಎಷ್ಟು..? ಈಗಂತೂ ಪುತ್ತೂರಿನ ಆಡಳಿತಾರೂಢ ಜನಪ್ರತಿನಿಧಿಗಳೆಲ್ಲರೂ ಮತ್ತು ರಾಜ್ಯದ ಚುಕ್ಕಾಣಿ ಹಿಡಿದಿರುವ ಆಡಳಿತ ಪಕ್ಷವೂ ಒಂದೇ ಆಗಿರುವುದರಿಂದ ಇವರೆಲ್ಲರೂ ಸೇರಿ ಈ ಬಾರಿ ಎಸ್.ಪಿ ಕಚೇರಿ ಯನ್ನು ಪುತ್ತೂರಿಗೆ ಸ್ಥಳಾಂತರಿಸುವಲ್ಲಿ ಖಂಡಿತಾ ಯಶಸ್ವಿಯಾಗುತ್ತಾರೆಂದೇ ನಂಬಲಾಗಿತ್ತು. ಆದರೆ ಈ ಸರಕಾರದ ಕೊನೆಯ ಅಧಿವೇಶನದಲ್ಲಿ ಕೇಳಲ್ಪಟ್ಟ ಒಂದು ಲಿಖಿತ ಪ್ರಶ್ನೆಗೆ ಉತ್ತರ ಸಿಕ್ಕಿದೆ… ಇದರೊಂದಿಗೆ ಪುತ್ತೂರಿಗೆ ಎಸ್.ಪಿ. ಕಚೇರಿ ಬರುವುದೇ ಇಲ್ಲವೆಂಬ ಸತ್ಯವೂ ಗೊತ್ತಾಗಿದೆ. ಎಸ್.ಪಿ ಕಚೇರಿ ಯೊಂದು ಪುತ್ತೂರಿಗೆ ಬಂದಿದ್ದಾರೆ, ಪುತ್ತೂರಿಗೆ ಒಂದಷ್ಟು ಆಡಳಿತಾತ್ಮಕವಾದ ಪ್ರಾಮುಖ್ಯತೆ ಸಿಕ್ಕುತ್ತಿತ್ತು. ಮುಂದಿನ ದಿನಗಳಲ್ಲಿ ಜಿಲ್ಲಾ ಕೇಂದ್ರವಾಗಲು ಒಂದು ದೊಡ್ಡ ಹೆಜ್ಜೆಯನ್ನು ಮುಂದಿಟ್ಟಂತಾಗುತ್ತಿತ್ತು. ಎಸ್.ಪಿ ಕಚೇರಿ ಪುತ್ತೂರಿಗೆ ಬರುವುದರಿಂದಾಗಿ ಪುತ್ತೂರು ನಗರಕ್ಕೂ ಪ್ರಯೋಜನವಾಗುವುದಿತ್ತು. ಎಸ್.ಪಿ ಕಚೇರಿ ಸ್ಥಳಾಂತರಕ್ಕಾಗಿ ನಮ್ಮ ಜನಪ್ರತಿನಿಧಿಗಳು ಮತ್ತು ನಗರಸಭೆ ಒಟ್ಟಾಗಿ ಪ್ರಯತ್ನಿಸಬೇಕಿತ್ತು. ಆದರೆ ಇದುವರೆಗೆ ಈ ಕುರಿತು ಸರಿಯಾಗಿ ಒಂದೇ ಒಂದು ಮನವಿಯನ್ನೂ ಕೊಡದೆ, ಒಮ್ಮೆಯೂ ಗೃಹಸಚಿವರನ್ನು ಭೇಟಿಯಾಗದೆ, ಈ ಕುರಿತಾಗಿ ಯಾವುದೇ ಮಾತುಕತೆಗಳನ್ನೂ ನಡೆಸದೆ, ಕಚೇರಿ ಸ್ಥಳಾಂತರಕ್ಕೆ ಇರುವ ಆಡಳಿತಾತ್ಮಕ ಕಾರಣಗಳನ್ನು ಮನದಟ್ಟು ಮಾಡಿಸುವ ಪ್ರಯತ್ನವನ್ನೇ ನಡೆಸದೆ, ಈಗ ಏಕಾಏಕಿ ಈ ಕಚೇರಿ ಪುತ್ತೂರಿಗೆ ಬರಬೇಕೆಂದರೆ ಹೇಗೆ..? ಗೃಹಸಚಿವರಿಗೆ ಎಸ್.ಪಿ ಕಚೇರಿಯನ್ನು ಯಾಕೆ ಪುತ್ತೂರಿಗೆ ಸ್ಥಳಾಂತರಿಸಬೇಕು ಅನ್ನುವುದೇ ಸ್ಪಷ್ಟವಿಲ್ಲ. ಹಾಗಾಗಿ ಪ್ರಶ್ನೆಗೆ ನಕಾರಾತ್ಮಕ ಉತ್ತರ ಸಚಿವರ ಕಡೆಯಿಂದ ಬಂದಿದೆ..! ಪಾಪ ಗೃಹ ಸಚಿವರು ಸದನದಲ್ಲಿ ಈ ಕುರಿತು ಕೇಳಲಾದ ಪ್ರಶ್ನೆಗೆ ” ಈ ಸ್ಥಳಾಂತರದ ಬಗ್ಗೆ ಯಾವುದೇ ಪ್ರಸ್ತಾವನೆ ಪರಿಶೀಲನೆಯಲ್ಲಿ ಇಲ್ಲ” ಅಂತ ಪ್ರಾಮಾಣಿಕವಾಗಿಯೇ ಉತ್ತರಿಸಿದ್ದಾರೆ…! ಅಷ್ಟಕ್ಕೂ ಪುತ್ತೂರಿನ ಜನಪ್ರನಿಧಿಗಳು ಇದುವರೆಗೆ ಈ ಕುರಿತ ಯಾವುದೇ ಪ್ರಸ್ತಾವನೆಯನ್ನೂ ಸಲ್ಲಿಸದೇ ಇರುವುದರಿಂದಲೇ ಗೃಹಸಚಿವರು ಈ ಉತ್ತರ ನೀಡಿದ್ದಾರೆ..! ಈ ಒಂದು ಪ್ರಕರಣದಿಂದಾಗಿ ರಾಜಕೀಯ ಇಚ್ಛಾಶಕ್ತಿಯ ಕೊರತೆ ಎಂದರೆ ಏನೆಂಬುದನ್ನು ಉದಾಹರಣೆಯ ಸಹಿತವಾಗಿ ಪುತ್ತೂರಿನ ಜನತೆಗೆ ಮತ್ತೊಮ್ಮೆ ಈ ಮೂಲಕ ಅರ್ಥ ಮಾಡಿಸಲಾಗಿದೆ ಅಂತ ನಾನು ಭಾವಿಸುತ್ತೇನೆ… ಇನ್ನು ಪುತ್ತೂರಿಗೆ ಎಸ್.ಪಿ ಕಚೇರಿ ಸ್ಥಳಾಂತರದ ಕುರಿತು ಮತ್ತೆ ಮೊದಲಿನಿಂದ ಪ್ರಯತ್ನ ಶುರುಮಾಡಬೇಕು… ಹೀಗಿದೆ ಪುತ್ತೂರಿನ ಜನ ಮತ ನೀಡಿ ಆಯ್ಕೆ ಮಾಡಿ ಕಳಿಸಿದ ಜನಪ್ರತಿನಿಧಿಗಳ ಕಾರ್ಯಶೈಲಿ…!
ಅಶೋಕ್ ಕುಮಾರ್ ರೈ
ರೈ ಎಸ್ಟೇಟ್, ಕೋಡಿಂಬಾಡಿ