ಇದು ಆಧುನಿಕ ಕಾಲ. ಭಾರತ ಅಭಿವೃದ್ಧಿ ಹೊಂದಿದೆ.. ಹಾಗಾಗಿ ನಮ್ಮಲ್ಲೇ ಅತ್ಯಾಧುನಿಕ ತಂತ್ರಜ್ಞಾನಗಳು ಬಂದಿದೆ. ಭಾರತ ರಸ್ತೆ ನಿರ್ಮಾಣದಲ್ಲಿ ಈಗಾಗಲೇ ನಾಲ್ಕು ವರ್ಲ್ಡ್ ರೆಕಾರ್ಡ್ ಗಳನ್ನೂ, ಗಿನ್ನೆಸ್ ರೆಕಾರ್ಡ್ ಗಳನ್ನೂ ಮಾಡಿದೆ. ಇತ್ತೀಚಿನದ್ದು ಅತ್ಯಂತ ವೇಗದ ರಸ್ತೆ ನಿರ್ಮಾಣ. 75 ಕಿಲೋಮೀಟರ್ ದೂರದ ಡಾಮಾರು ರಸ್ತೆಯನ್ನು ಕೇವಲ 105 ಗಂಟೆ 33 ನಿಮಿಷಗಳಲ್ಲಿ ನಿರ್ಮಿಸಲಾಗಿದೆ. ಇದರೊಂದಿಗೆ ಭಾರತ ಅತ್ಯಂತ ವೇಗವಾಗಿ ರಸ್ತೆ ನಿರ್ಮಿಸುವುದರಲ್ಲಿ ಗಿನ್ನೆಸ್ ದಾಖಲೆಗೆ ಸೇರಿಹೋಯಿತು. ಈ ಸುದ್ದಿ ಟಿವಿ. ಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಬರುತ್ತದೆ. ಪುತ್ತೂರು ಕೂಡಾ ಭಾರತದಲ್ಲಿಯೇ ಇರುವುದರಿಂದಾಗಿ, ಭಾರತ ಅಭಿವೃದ್ಧಿ ಹೊಂದಿರುವುದರಿಂದ ಪುತ್ತೂರು ಕೂಡಾ ಅಭಿವೃದ್ಧಿ ಹೊಂದಿರಲೇ ಬೇಕು ಎಂಬ ತರ್ಕ ಇಟ್ಟುಕೊಂಡು ನೋಡಿದರೆ ಪುತ್ತೂರಲ್ಲಿಯೂ ಅತ್ಯಾಧುನಿಕ ತಂತ್ರಜ್ಞಾನಗಳೆಲ್ಲ ಬಂದಿದ್ದು ಇಲ್ಲಿನ ಜನ ಈಗ ಟಿವಿಗಳನ್ನು ನೋಡುತ್ತಿದ್ದಾರೆ ಮತ್ತು ಪತ್ರಿಕೆಗಳನ್ನು ಓದುತ್ತಿದ್ದಾರೆ. ಆದರೆ ಭಾರತ ಅತ್ಯಂತ ವೇಗದ ರಸ್ತೆ ನಿರ್ಮಾಣದಲ್ಲಿ ವಿಶ್ವ ದಾಖಲೆ ಮಾಡಿದ ಸುದ್ದಿ ಕೇಳಿ ಪುತ್ತೂರಿನ, ಅದರಲ್ಲೂ ಪುತ್ತೂರು ಉಪ್ಪಿನಂಗಡಿ ರಸ್ತೆ ಯ ಇಕ್ಕೆಲಗಳಲಲ್ಲಿ ವಾಸಿಸುವ ಜನರಿಗೆ ಒಂದು ಆಶೆ ಶುರುವಾಗಿದೆ. ಈ ಗಿನ್ನೆಸ್ ಪುಸ್ತಕದಲ್ಲಿ ಅತ್ಯಂತ ನಿಧಾನ ವಾಗಿ ರಸ್ತೆ ನಿರ್ಮಾಣ ಮಾಡಿದ್ದಕ್ಕೂ ಏನಾದರೂ ದಾಖಲೆ ನೀಡುತ್ತಾರೋ ಎಂಬ ಕುತೂಹಲ ಇದೆ.. ಯಾಕೆಂದರೆ ಪುತ್ತೂರು ಮತ್ತು ಉಪ್ಪಿನಂಗಡಿ ಮಧ್ಯೆ ಇರುವ 10.2 ಕಿಲೋಮೀಟರ್ ರಸ್ತೆಯನ್ನು, ಎರಡು ಪಥ ಇದ್ದದ್ದನ್ನು ನಾಲ್ಕು ಪಥದ ರಸ್ತೆಯಾಗಿ ಮಾಡುವುದಕ್ಕೆ ನಮ್ಮ ಪುತ್ತೂರಿನ ಪಿಡಬ್ಲ್ಯೂಡಿ ಮತ್ತು ನಗರಸಭೆಗಳ ಡಬ್ಬಲ್ ಎಂಜಿನ್ನು ಗಳು ಸೇರಿಕೊಂಡು ಅದೆಷ್ಟು ವರ್ಷ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ… ಒಮ್ಮೆ ಈ ಚತುಷ್ಪಥ ರಸ್ತೆ ಪೂರ್ಣವಾದ ಮೇಲೆ ನಾವೆಲ್ಲರೂ ಗಿನ್ನೆಸ್ ಪುಸ್ತಕ ಇರುವಲ್ಲಿಗೆ ಹೋಗೋಣ ಎಂಬ ಚಿಂತನೆ ಇಲ್ಲಿನ ಜನರಿಗಿದೆ. ಆದರೆ ಈ ಉಪ್ಪಿನಂಗಡಿ ಪುತ್ತೂರು ರಸ್ತೆಯನ್ನು ನಿರ್ಮಾಣ ಮಾಡಲಿಕ್ಕೆ ತೆಗೆದುಕೊಂಡ ಅವಧಿಯನ್ನು ಗಂಟೆಗಳಲ್ಲಿ ಲೆಕ್ಕಾಚಾರ ಮಾಡುವುದೇ ಒಂದು ಸಮಸ್ಯೆಯಾಗಿದೆ…! ಅಷ್ಟಕ್ಕೂ ಈ ಉಪ್ಪಿನಂಗಡಿ ಪುತ್ತೂರು ರಸ್ತೆಯ ಅಗಲೀಕರಣ ಎಂಬುದು ಒಂದು ಪ್ರತ್ಯೇಕ ಯೋಜನೆಯೇ ಅಲ್ಲ.. ಇಲ್ಲಿನ ಜನಪ್ರತಿನಿಧಿಗಳು ಬಿಂಬಿಸಿಕೊಳ್ಳುವಂತೆ ಇದು ಪುತ್ತೂರು ತಾಲೂಕಿಗೋಸ್ಕರ ಜಾರಿಯಾದ ವಿಶೇಷ ಯೋಜನೆಯೂ ಅಲ್ಲ.. ಅಥವಾ ಯಾರದೇ “ಕನಸಿನ” ಯೋಜನೆಯೂ ಅಲ್ಲ. ಗುರುವಾಯನಕೆರೆಯಿಂದ ಉಪಿನಂಗಡಿಯವರೆಗೆ ಇರುವ 26 ಕಿಲೋಮೀಟರ್ ಉದ್ದದ ರಸ್ತೆಯನ್ನು ಚತುಶ್ಪಥ ರಸ್ತೆಯನ್ನಾಗಿ ಮಾಡುವ ಯೋಜನೆ ಬೆಳ್ತಂಗಡಿ ತಾಲೂಕಿಗೆ ಸೇರಿದ ಯೋಜನೆ. ಈ ರಸ್ತೆ ಧರ್ಮಸ್ಥಳಕ್ಕೂ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾದುದರಿಂದ ಇದನ್ನು ಮೇಲ್ದರ್ಜೆಗೇರಿಸಲು ರಾಜ್ಯ ಸರಕಾರದಿಂದಾಗಿಯೇ ಈ ಯೋಜನೆ ಜಾರಿಯಾದದ್ದು. ಇದೇ ಯೋಜನೆಯ ಮುಂದುವರಿದ ಭಾಗವಾಗಿ 26 ಕಿಲೋಮೀಟರ್ ಇದ್ದ ರಸ್ತೆ ಗೆ ಇನ್ನೂ ಹತ್ತು ಕಿಲೋಮೀಟರ್ ಸೇರಿಸಿ 36 ಕಿಲೋಮೀಟರ್ ಮಾಡಿ ಅದನ್ನು ರಾಜ್ಯ ಹೆದ್ದಾರಿ 118 ಕ್ಕೆ ಸೇರಿಸಲಾಗಿದೆ. ಆದರೆ ಈ ಯೋಜನೆಯನ್ನೇ ತಮ್ಮದೊಂದು ಮಹತ್ತರ ಸಾಧನೆ ಎಂಬಂತೆ ಬಿಂಬಿಸಿಕೊಂಡ ನೂರಾರು ಬ್ಯಾನರು ಗಳು ಪುತ್ತೂರಿನ ತುಂಬಾ ಕಳೆದ ಮೂರು ವರ್ಷಗಳಲ್ಲಿ ಹಾರಾಡಿ ಹರಿದುಹೋಗಿವೆ. ಆದರೆ ಉಪ್ಪಿನಂಗಡಿ ಪುತ್ತೂರಿನ ಮಧ್ಯೆ ಇರುವ ಈ 10 ಕಿಲೋಮೀಟರ್ ರಸ್ತೆ ಮಾತ್ರ ಇನ್ನೂ ಆಗಿಲ್ಲ. ಪುತ್ತೂರಿನಿಂದ ಉಪ್ಪಿನಂಗಡಿಗೆ ಹೋಗುವ ಈ ರಸ್ತೆಯ ಇಕ್ಕೆಲಗಳಲ್ಲಿರುವ ಹಳ್ಳಿಗಳ ಸಾವಿರಾರು ಜನ, ಶಾಲಾಮಕ್ಕಳು ನಿತ್ಯವೂ ಈ ರಸ್ತೆ ಯನ್ನು ಬಳಸುತ್ತಾರೆ. ಇವರ್ಯಾರೂ ಈ ರಸ್ತೆಯನ್ನು ಅಗಲಗೊಳಿಸಿ ನಾಲ್ಕು ಪಥದ ರಸ್ತೆಯನ್ನಾಗಿ ಮಾಡಿ ಅಂತ ಯಾವುದೇ ಜನಪ್ರತಿನಿಧಿಗಳನ್ನೂ ಕೇಳಿಕೊಂಡಿಲ್ಲ. ಆದರೂ ಈ ಯೋಜನೆ ಜಾರಿಯಾಯಿತು. ರಸ್ತೆ ಚೆನ್ನಾಗಾಗುತ್ತದೆ ಅಂತ ಇಲ್ಲಿನ ಜನಗಳಿಗೂ ಖುಷಿಯಾಯಿತು. ಆದರೆ ಈಗ ಖುಷಿ ಯ ಜಾಗದಲ್ಲಿ ದುಃಖ, ಬೇಸರ, ಅಸಹಾಯಕತೆ, ಸಿಟ್ಟು, ಆಕ್ರೋಶ ಇದೆ. ಇಲ್ಲಿನ ಜನ ಈಗಾಗಲೇ ಹಲವಾರು ಬಾರಿ ಪ್ರತಿಭಟನೆಗಳನ್ನೂ ಮಾಡಿದ್ದಾರೆ. ಆದರೂ ನಮ್ಮ ಸ್ಥಳೀಯಾಡಳಿತಕ್ಕೆ ಮತ್ತು ಜನಪ್ರತಿನಿಧಿಗಳಿಗೆ ಆರೋಗ್ಯ ಸಮಸ್ಯೆ ಇದೆ. ಅವರಿಗೆ ಕಣ್ಣು ಸರಿಯಾಗಿ ಕಾಣಿಸುವುದಿಲ್ಲ… ಕಿವಿ ಸರಿಯಾಗಿ ಕೇಳಿಸುವುದಿಲ್ಲ.. ಹಾಗಾಗಿ ಜನರ ಆಕ್ರೋಶದ ಕೂಗು ಇವರಿಗಿನ್ನೂ ಕೇಳಿಲ್ಲ… ಮತ್ತು ಜನರ ಕಷ್ಟ ಇವರ ದೃಷ್ಟಿಗಿನ್ನೂ ಬಿದ್ದಿಲ್ಲ.. ಕಳೆದ ಸುಮಾರು ಮೂರು ವರ್ಷಗಳಿಂದಲೂ ಇಲ್ಲಿನ ಜನ ನರಕ ಅನುಭವಿಸುತ್ತಿದ್ದಾರೆ. ಇಲ್ಲಿನ ಅಸಂಖ್ಯಾತ ಮನೆಗಳಿಗೆ ಈ ಹಿಂದೆ ಸುಸ್ಥಿತಿಯಲ್ಲಿ ಇದ್ದ ದಾರಿಗಳನ್ನು ಅಗೆದು ಹಾಕಿ ದೊಡ್ಡ ಗುಂಡಿಗಳನ್ನು ನಿರ್ಮಿಸಿ ವರ್ಷಗಳೇ ಕಳೆದು ಹೋಯಿತು. ಅಸಂಖ್ಯಾತ ಮನೆಗಳವರಿಗೆ ತಮ್ಮ ಮನೆಗಳಿಗೆ ಅತ್ಯಂತ ಜರೂರತ್ತಿದ್ದರೂ ವಾಹನಗಳನ್ನು ತೆಗೆದುಕೊಂಡು ಹೋಗಲಾಗುತ್ತಿಲ್ಲ. ಮಳೆಗಾಲದಲ್ಲಂತೂ ಶಾಲಾ ಮಕ್ಕಳಿಗೆ, ವಯಸ್ಸಾದವರಿಗೆ, ರೋಗಿಗಳಿಗೆ ಜೀವನ ನರಕ ಸದೃಶವಾಗಿದೆ. ರಸ್ತೆಯ ಇಕ್ಕೆಲಗಳಲ್ಲೂ ಆಳವಾದ ಗುಂಡಿಗಳಿದ್ದು ರಾತ್ರಿ ಪ್ರಯಾಣಿಕರಿಗೆ ಅಪಾಯವಾಗುವಂತಿದೆ. ಈಗಾಗಲೇ ಈ ರಸ್ತೆ ಕಾಮಗಾರಿ ಮುಗಿಸುವುದಕ್ಕೆ ಹಲವಾರು ಗಡುವುಗಳನ್ನು ನೀಡಲಾಗಿತ್ತು, ಮಾರ್ಚ್, ಆಗಸ್ಟ್, ಡಿಸೆಂಬರ್, ಹೀಗೆ ಉದ್ದಕ್ಕೂ ಕ್ಯಾಲೆಂಡರಿನಲ್ಲಿರುವ ತಿಂಗಳ ಹೆಸರುಗಳನ್ನೆಲ್ಲ ನೀಡಲಾಯಿತು.. ಆದರೂ ಕಾಮಗಾರಿ ಮುಗಿಯಲಿಲ್ಲ. ಕೊರೋನಾದಿಂದಾಗಿ ಕಾಮಗಾರಿ ನಿಂತು ಹೋಗಿತ್ತು… ಮಳೆಯಿಂದಾಗಿ ಕಾಮಗಾರಿ ನಿಧಾನವಾಯಿತು… ರಸ್ತೆಯ ಇಕ್ಕೆಲಗಳಲ್ಲಿರುವ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಕೆಲಸವಿದ್ದುದರಿಂದ ಕಾಮಗಾರಿ ವಿಳಂಬವಾಯಿತು… ಅಂತೆಲ್ಲಾ ಹಲವಾರು ಕಾರಣಗಳನ್ನು ಹೇಳಲಾಗುತ್ತಿತ್ತು. ಈಗ ಉಪ್ಪಿನಂಗಡಿಯಿಂದ ಪುತ್ತೂರಿಗೆ ಕುಡಿಯುವ ನೀರು ಪೂರೈಕೆ ಮಾಡುವ ಪೈಪುಗಳ ಸ್ಥಳಾಂತರ ಆಗದ ಕಾರಣ ರಸ್ತೆ ಕಾಮಗಾರಿ ನಿಧಾನವಾಗಿದೆ ಎಂಬ ಕಾರಣ ನೀಡಲಾಗುತ್ತಿದೆ. ದೇಶದ ಆಡಳಿತ, ರಾಜ್ಯದ ಆಡಳಿತ, ಪುತ್ತೂರಿನ ಪುರಸಭೆಯ ಆಡಳಿತ ಎಲ್ಲವೂ ಒಂದೇ ರಾಜಕೀಯ ಪಕ್ಷದ ಕೈಯಲ್ಲಿದೆ… ರಾಜ್ಯ ಸರಕಾರಕ್ಕೆ ಸೇರಿದ್ದ ಪಿಡಬ್ಲ್ಯೂಡಿ, ವಿದ್ಯುತ್ ಇಲಾಖೆ, ಕರ್ನಾಟಕ ಒಳಚರಂಡಿ ಮತ್ತು ನೀರುಸರಬರಾಜು ಯೋಜನಾ ಇಲಾಖೆಯವರು ಮತ್ತು ಪುತ್ತೂರಿನ ನಗರಸಭೆಯವರೇ ಈ ರಸ್ತೆ ಕಾಮಗಾರಿಯ ವಿಳಂಬಕ್ಕೆ ನೇರವಾಗಿ ಕಾರಣವಾಗುತ್ತಾರೆ… ಆದರೂ ಇಲ್ಲಿನ ಜನಪ್ರತಿನಿಧಿಗಳ ಮುಖದಲ್ಲಿ ಅಪರಾಧೀ ಪ್ರಜ್ಞೆಯ ಲವಲೇಶವೂ ಕಾಣಿಸುವುದಿಲ್ಲ… ಅಂದಹಾಗೆ ಈ ಉಪ್ಪಿನಂಗಡಿ ಪುತ್ತೂರು ಚತುಷ್ಪಥ ರಸ್ತೆ ಯೋಜನೆಯಿಂದ ತೊಂದರೆಗೊಳಗಾದವರಲ್ಲಿ ನಾನೂ ಕೂಡಾ ಒಬ್ಬ. ನನ್ನ ಮನೆಯ ಮುಂದೆಯೇ ಹಾದುಹೋಗುವ ರಸ್ತೆಯಾದುದರಿಂದ, ಈ ರಸ್ತೆ ಅಗಲವಾಗಿ, ನಾಲ್ಕು ಪಥಗಳಾಗಿ ಮೇಲ್ದರ್ಜೆಗೇರಿದರೆ ಎಲ್ಲರಿಗೂ ಅನುಕೂಲವಾಗುತ್ತದೆ ಎಂಬ ಭಾವನೆ ನನಗೂ ಇತ್ತು. ಅದಕ್ಕಾಗಿಯೇ ಈ ರಸ್ತೆ ಅಗಲೀಕರಣಕ್ಕಾಗಿ ನನ್ನ ಸ್ವಂತ ವರ್ಗ ಜಾಗವನ್ನು ಸರಕಾರಕ್ಕೆ ಸಂಪೂರ್ಣ ಉಚಿತವಾಗಿಯೇ ಬಿಟ್ಟುಕೊಟ್ಟಿದ್ದೇನೆ. ನನ್ನ ಜಾಗ ರಸ್ತೆಗೆ ಹೋದದ್ದಕ್ಕಾಗಿ ಸರಕಾರದಿಂದ ಪರಿಹಾರ ರೂಪದಲ್ಲಿ ಬಿಡಿಗಾಸನ್ನೂ ನಾನು ಪಡೆದಿಲ್ಲ… ಸಾರ್ವಜನಿಕರ ಉಪಯೋಗಕ್ಕಾಗಿಯೇ ಸರಕಾರ ಯೋಜನೆ ರೂಪಿಸಿದ್ದರಿಂದ ಇದರಲ್ಲಿ ನನ್ನದೂ ಕೂಡಾ ಒಂದು ಪಾಲಿರಲಿ ಅಂತ ಬಯಸಿಯೇ ಉಚಿತವಾಗಿ ಜಾಗ ನೀಡಿದ್ದೆ. ಆದರೆ ನಮ್ಮ ಸರಕಾರೀ ಇಲಾಖೆಗಳ ಮತ್ತು ಅಧಿಕಾರಿಗಳ ಉದಾಸೀನ ಮತ್ತು ಜನರ ಕಷ್ಟಗಳಿಗೆ ಸ್ಪಂದಿಸದೇ ಇರುವ ಧಾರ್ಷ್ಟ್ಯದ ವರ್ತನೆ ಕಂಡು ಮನಸ್ಸು ರೋಸಿ ಹೋಗಿದೆ. ಇದರ ಜೊತೆಗೆಯೇ ಜನ ಪ್ರತಿನಿಧಿಗಳು ಅಂತನ್ನಿಸಿಕೊಂಡವರ ನಿರ್ಲಕ್ಷ್ಯ ಮನೋಭಾವನೆ, ಏನೇ ಆದರೂ ಜನ ವೋಟು ಹಾಕಿ ಗೆಲ್ಲಿಸುತ್ತಾರೆಂಬ ಅಹಂಕಾರದ ವರ್ತನೆ ನೋಡಿ ಅಸಹ್ಯವಾಗುತ್ತದೆ. ಇವರಿಗೆಲ್ಲ ಸರಿಯಾಗಿ ಪಾಠ ಕಲಿಸಬೇಕು ಅನ್ನೋ ಮನಸ್ಸಾಗುತ್ತದೆ. ಸರಕಾರದ ಯೋಜನೆ ಅದೆಷ್ಟೇ ಉತ್ತಮವಾಗಿರಲಿ, ಅದೆಷ್ಟೇ ಜನೋಪಯೋಗಿ ಆಗಿರಲಿ, ಅದರಿಂದ ಊರಿಗೆ ಅದೆಷ್ಟೇ ಒಳ್ಳೆಯದಾಗಲಿ, ಆದರೆ ಆ ಊರಿನ ಜನಪ್ರತಿನಿಧಿಗಳಲ್ಲಿ ರಾಜಕೀಯ ಇಚ್ಛಾಶಕ್ತಿಯೇ ಇಲ್ಲದಿದ್ದರೆ, ಅದೇ ಯೋಜನೆ ಹೇಗೆ ಹಳ್ಳಹಿಡಿದು, ಜನಗಳಿಗೆ ಉಪಯೋಗವಾಗುವ ಬದಲು ಮಾರಕವಾಗುತ್ತದೆ ಎಂಬುದಕ್ಕೆ ಈ ಉಪ್ಪಿನಂಗಡಿ ಪುತ್ತೂರು ಚತುಷ್ಪಥ ರಸ್ತೆ ಯೋಜನೆ ಕೂಡಾ ಒಂದು ಒಳ್ಳೆಯ ಉದಾಹರಣೆ.
ಅಶೋಕ್ ಕುಮಾರ್ ರೈ
ರೈ ಎಸ್ಟೇಟ್, ಕೋಡಿಂಬಾಡಿ.
Previous Articleಮೇ ಪ್ಲವರ್ ಎಂಬ ಕೆಂಪು ಚೆಲುವೆ