ದೈವರಾಧನೆಯ ಕರ್ಮಿಗಳಲ್ಲಿ ಎಲ್ಲವರ್ಗದವರೂ ಇರುತ್ತಾರೆ ಎಂಬುದು ತುಳುನಾಡಿನ ಪ್ರತಿಯೊಬ್ಬನಿಗೂ ಗೊತ್ತಿರುವ ವಿಚಾರ. ಅದು ಕೆಲ ಅಲ್ಪರು ಹೇಳುವಂತೆ ಒಂದು ವರ್ಗಕ್ಕೆ ಸೀಮಿತವಾದ ಕಟ್ಟಳೆಯಲ್ಲ. ದೈವಗಳ ನುಡಿ ಎಂದರೆ, ಅದು ತಲೆತಲಾಂತರದಿಂದ ಬಂದ ನುಡಿಕಟ್ಟುಗಳು. ಆ ನುಡಿಕಟ್ಟಲ್ಲಿ ಗಗ್ಗರ ತೆಗೆದುಕೊಳ್ಳುವ ಮುನ್ನ ದೈವ ಹೀಗನ್ನುತ್ತದೆ…
ನೂಲುಪಾಲ್ – ನೂರ್ದಾಲ್ – ಸಾರಾಳ್ – ಸಾರುಬಿರು ಒಂಜಿ ರಾಜ್ಯಡ ಕೇಂಡೊಂದು ಗಗ್ಗರ ದೆತೋನ್ವೆ..ಇಲ್ಲಿ ನೂಲುಪಾಲು ಅಂದರೆ ಬ್ರಾಹ್ಮಣರು, ನೂರ್ದಾಲ್ ಅಂದರೆ ಬಂಟರು, ಜೈನರು ಎಂಬ ನಿರ್ದಿಷ್ಟ ಕುಲಕಸುಬಿಗೆ ಒಳಪಡದ ವರ್ಗ, ಸಾರಾಳ್ ಅಂದರೆ ಕುಲಕಸುಬು ಇರುವ ವರ್ಗಗಳು ಅದು ಕುಂಬಾರ, ನೇಕಾರ , ಮಡಿವಾಳ, ಆಚಾರರು, ಚಮ್ಮಾರರು ಹೀಗೆ ನಂತರದಲ್ಲಿ ಬರುವುದು ಸಾರ ಬಿರು ಅಂದರೆ ಬಿರುವರು ಅರ್ಥಾತ್ ಬಿಲ್ಲವರು ಹಾಗೂ ಮಲಯಾಳಿ ಬಿಲ್ಲವರ ವರ್ಗ. ದೈವವೇ ಇವರನ್ನೆಲ್ಲಾ ಒಳಗೊಂಡಂತೆ ಒಂದು ರಾಜ್ಯವೆಂದು ಕರೆದು ಗಗ್ಗರ ಸ್ವೀಕರಿಸಲು ಅನುಮತಿ ಕೇಳುವಾಗ ಒಂದು ವರ್ಗದ ಮೇಲೆ ದ್ವೇಷ ಕಾರಲು ನಾವು ಯಾರು ? ಆರ್ಯ ಹಾಗೂ ದ್ರಾವಿಡ ಎಂಬ ಆಧಾರರಹಿತ ಪೊಟ್ಟುವಾದಕ್ಕೆ ದೈವದ ನುಡಿಯೇ ಇಲ್ಲಿ ಉತ್ತರ. ಇಲ್ಲಿ ಯಾರೂ ಹೊರಗಿನವರಲ್ಲ ಎಲ್ಲವೂ ಭಾರತದ್ದೇ ಪದ್ದತಿ.
ದೈವವನ್ನ ದೇವರ ರೂಪವೆಂದು ಯಾರಾದರೂ ಸಾಧಿಸಲು ಬಂದರೆ ಅವರನ್ನು ವಿರೋಧಿಸುವುದು ಉಚಿತ ಯಾಕೆಂದರೆ ಪಂಜುರ್ಲಿ ವರಾಹರೂಪ ಹೌದು ಆದರೆ ಆ ವರಾಹ ಇಲ್ಲಿ ವಿಷ್ಣುವಲ್ಲ ಅದನ್ನು ವಿಷ್ಣುರೂಪ ಎಂದು ಸಾರಲು ಯತ್ನಿಸಿದ ವ್ಯಕ್ತಿಗಳನ್ನು ವಿರೋಧಿಸಬೇಕೇ ವಿನಹಃ ದೈವವೇ ಕರೆಯುವ ನೂಲುಪಾಡಿ ಸಂಸಾರವನ್ನ ವಿರೋಧಿಸಲು ನಾವ್ಯಾರು ? ದೈವಕ್ಕೆ ಚಂಡಿಕಾಯಾಗ ಮಾಡಹೊರಟರೆ, ಆರತಿ ಎತ್ತಿದರೆ ಅದಕ್ಕೆ ವಿರೋಧಿಸೋಣ ಅಥವಾ ಅದನ್ನ ಇನ್ಯಾವುದೋ ದೇವರ ಅಂಶವೆಂದೋ ಸಾರಹೊರಟರೆ ಅದನ್ನ ವಿರೋಧಿಸುವ ಆದರೆ ಅದರ ಬದಲಾಗಿ ಒಂದು ಜಾತಿಯ ಕಾರಣಕ್ಕಾಗಿ ವಿರೋಧಿಸುವುದು ಉಚಿತ ಅಲ್ಲವೇ ಅಲ್ಲ.
ಜಾತಿ ವ್ಯವಸ್ಥೆ ನಿಜವಾಗಿಯೂ ಕೆಟ್ಟ ಕಾರಣಕ್ಕೆ ಮಾಡಿದ್ದಲ್ಲ ಆದರೆ ಅಸ್ಪ್ರಶ್ಯತೆಯಂತಹ ಪಿಡುಗುಗಳು ಉಂಟಾದದ್ದು ಕೂಡಾ ಅದನ್ನ ದಾರಿತಪ್ಪಿಸಿದ ಜನಗಳಿಂದ ಅರ್ಥಾತ್ ಈಗಿನ ಪ್ರಗತಿಪರರ ಥರ ಮಧ್ಯಕಾಲದ ಕೆಲ ಸ್ವಾರ್ಥಿಗಳಿಂದಾಗಿ ದಾರಿ ತಪ್ಪಿದ್ದು ಅಷ್ಟೇ. ಜಾತಿ ವ್ಯವಸ್ಥೆಯ ಮುಖ್ಯ ಉದ್ಧೇಶ ಜನರಿಗೆ ಉದ್ಯೊಗ ನೀಡುವುದು.
ಹಿಂದಿನ ಕಾಲದಲ್ಲಿ ಶಿಕ್ಷಣವನ್ನ ಕಲಿಸುವವನಿಗೊಂದು ಜಾತಿ, ಆಡಳಿತ ನಡೆಸುವವನಿಗೊಂದು ಜಾತಿ, ಸೈನ್ಯದಲ್ಲಿರುವವನಿಗೊಂದು ಜಾತಿ ಹಾಗೂ ವ್ಯಾಪಾರ ಮಾಡುವವನಿಗೊಂದು ಜಾತಿ ಎಂದು ಮಾಡಿಕೊಳ್ಳಲಾಗಿತ್ತು. ಆಗಿನ ಜನಸಂಖ್ಯೆಗೆ ಅದು ಪ್ರಸ್ತುತವಾಗಿರಬಹುದು ಅದನ್ನ ತಪ್ಪು ಎನ್ನುವ ಯಾವ ಹಕ್ಕೂ ನಮಗೆ ಇರದು. ಯಾಕೆಂದರೆ ಆಗಿನ ಕಾಲಘಟ್ಟದಲ್ಲಿ ನಾವು ಜೀವಿಸಿದವರಲ್ಲ. ಆ ಪದ್ಧತಿಯನ್ನು ವಿರೋಧಿಸುವುದೂ ಒಂದೇ, ನಗರದವರು ಹಳ್ಳಿಯ ಜೀವನಶೈಲಿಯನ್ನ , ಹಳ್ಳಿಯವರು ನಗರದ ಜೀವನಶೈಲಿಯನ್ನ ವಿರೋಧಿಸುವುದು ಒಂದೇ.ಜಾತಿಯ ಕುರಿತಾಗಿನ ಚರ್ಚೆಗಳು ಇಂದಿಗೆ ಅಪ್ರಸ್ತುತ , ಯಾಕೆಂದರೆ ಈಗ ವ್ರತ್ತಿ ಸ್ವರೂಪ ಬದಲಾಗಿದೆ, ಯಾರು ಯಾವ ಉದ್ಯೋಗವನ್ನು ಬೇಕಾದರೂ ಮಾಡಬಹುದು.
ನಮ್ಮ ಮನೆಗೆ ಸಂಬಂಧಿಕರನ್ನು ಅಡುಗೆ ಮನೆಯವರೆಗೂ ,ಗೆಳೆಯರನ್ನ ಮನೆಯ ಚಾವಡಿಗೂ , ಸೇಲ್ಸ್ ಮೆನ್ ಗಳನ್ನ ಅಂಗಳದಲ್ಲೇ ನಿಲ್ಲಿಸಿ ಮಾತಾಡ್ತೇವೆ. ಸಂಬಂಧಿಕರಲ್ಲಿ ಜಾತಿಯವರೇ ಇರುತ್ತಾರೆ , ಆದರೆ ಗೆಳೆಯರಲ್ಲಿ ಯಾವ ಜಾತಿಯವ ಬೇಕಾದರೂ ಇರಬಹುದು. ಅದೇ ರೀತಿ ಸೇಲ್ಸ್ ಮೆನ್ ಗಳಲ್ಲಿ ಬ್ರಾಹ್ಮಣ,ಕ್ಷತ್ರಿಯ,ವೈಶ್ಯ, ಶೂದ್ರ ಯಾವ ವರ್ಗಕ್ಕೆ ಸೇರಿದವ ಬೇಕಾದರೂ ಇರಬಹುದು , ಆದರೆ ಅವರ ಬಗ್ಗೆ ಗೊತ್ತಿರದ ಕಾರಣ ನಾವು ಹೊರಗಡೆ ನಿಲ್ಲಿಸಿ ಮಾತಾಡುತ್ತೇವೆ. ಇದರ ಬಗ್ಗೆ ಮುಂದೊಂದು ದಿನ ನಮ್ಮ ಮುಂದಿನ ಜನಾಂಗ, ನಮ್ಮ ಹಿರಿಯರು ಸೇಲ್ಸ್ ಮೆನ್ ಗಳನ್ನ ಅಂಗಳದಲ್ಲಿ ನಿಲ್ಲಿಸುತ್ತಿದ್ದರಂತೆ ಅವರನ್ನು ಕೀಳಾಗಿ ಕಾಣುತ್ತಿದ್ದರಂತೆ ಎಂದರೆ ಅದನ್ನು ಸ್ಪಷ್ಟನೆ ನೀಡಲು ಮುಂದೆ ಯಾರಿರುತ್ತಾರೆ ?
ಆರಾಧನಾ ಪದ್ಧತಿಯಲ್ಲಿ ಯಾರೂ ಶ್ರೇಷ್ಟರು ಎಂದು ಭಾವಿಸುತ್ತಾರೋ , ಅವರು ದೇವರ ಗರ್ಭಗುಡಿಯ ಒಳಗಡೆ ಹೋಗಿ ಸೇವೆ ಮಾಡಬೇಕು . ಅದೇ ಯಾರು ಕೀಳು ಎಂದು ಭಾವಿಸುತ್ತಾರೋ, ಅವೆರೆಡೆಗೆ ದೇವರೇ ಶೃಂಗಾರಗೊಂಡು ನಿತ್ಯಪೂಜೆಯಲ್ಲಿ ಕಾಣದ ಬಿರುದಾವಳಿ ,ಪ್ರಭಾವಳಿ ಸಹಿತ ಬಲಿಮೂರ್ತಿಯಾಗಿ ಬರುತ್ತಾನೆ ಹಾಗಾಗಿ ಇಲ್ಲಿ ಯಾರು ಮೇಲು ?ಯಾರು ಕೀಳು!
ದೈವವು ತನ್ನ ನುಡಿಗಟ್ಟಲ್ಲಿ..
ಘಟ್ಟದ ಪುಡೆರ್ದ್ – ಕಡಲ ಪುಡೆ ಮುಟ್ಟ – ದಂಡ್’ದ ರಾಜ್ಯೊರ್ದ್ – ಏಳ್ ಗಂಗೆದ ಕಡಪ ಇಪ್ಪುನಂಚಿನ ದೈವ ನಂಬಿಂಚಿ ಸಂಸಾರಲೆನ್ ಎನ್ನ ಮಾಯದ ಪೊರುವೆಳ್’ಡ್ ದೀದ್ ಕಾಪುವೆ….ಅಂದರೆ ಘಟ್ಟದ ಬುಡದಿಂದ ,ಕಡಲತಡಿ ತನಕ ದಂಡಿನ ರಾಜ್ಯದಿಂದ ಏಳು ಕಡಲಿನ ಗಡಿ ತನಕ ಇರುವಂತಹ ದೈವ ನಾನು, ನಂಬಿದಂತಹ ಸಂಸಾರವನ್ನು ಅಂದರೆ ಇಲ್ಲಿ ನಂಬಿದವನ ಜಾತಿ ಹೇಳಿಲ್ಲ ,ಬದಲಾಗಿ ಯಾರೇ ನಂಬಿದರೂ ಅವರನ್ನ ಮಾಯದ ರಕ್ಷಣೆಯಲ್ಲಿ ಕಾಪಾಡುತ್ತೇನೆ ಎಂದು ಹೇಳುತ್ತದೆ.ಇಲ್ಲಿ ಜಾತಿಯವಾದಕ್ಕೆ ಅವಕಾಶವಿದೆಯೇ ?
ಈ ದಲಿತರ ಮೇಲಿನ ದ್ವೇಷವಾಗಲೀ ಅಥವಾ ಬ್ರಾಹ್ಮಣರ ಮೇಲಿನ ದ್ವೇಷವಾಗಲೀ ಇದೆಲ್ಲ ಕೆಲಸವಿಲ್ಲದ ಹಾಗೂ ಜ್ಞಾನವಿಲ್ಲದ ವ್ಯಕ್ತಿಗಳು ಮಾಡುವಂತದ್ದು. ನಮ್ಮ ತುಳುನಾಡಲ್ಲಿ ದೈವಗಳು ಎಲ್ಲರನ್ನ ಗೌರವದಿಂದಲೇ ಕಾಣುತ್ತದೆ ಅದರ ಹಾದಿಯನ್ನ ನಾವು ಹಿಡಿಯಬೇಕು ಅಷ್ಟೇ .
ದೈವದಂಗಳದಲ್ಲಿ ನೂಲು ಹಾಕಿದ ಬ್ರಾಹ್ಮಣನ ಎದುರು ದೀಪವಿರಿಸಿ ಗೌರವ ನೀಡೋದು ಆತನಿಗಲ್ಲ , ಬದಲಾಗಿ ಅದು ಆತನ ಮನೆಯ ದೇವರಿಗೆ .ಯಾಕೆಂದರೆ ಬ್ರಾಹ್ಮಣರು ದೇವರನ್ನು ಉಪಾಸಿಸುವ ವರ್ಗ , ಅಂತೆಯೇ ದೈವದ ಕಲದಲ್ಲಿ ಕುರ್ಚಿ ಇಟ್ಟು , ಅದರಲ್ಲಿ ಕುಳಿತ ಗುತ್ತಿನವರ ಎದುರು ಬಾಳೆ ಎಲೆಯ ಮೇಲೆ ಸೀಯಾಳ ಇಡುವುದು ಅವರಿಗಲ್ಲ , ಅದು ಅವರ ಗುತ್ತಿನ ದೈವಗಳಿಗೆ. ಇಂದು ಹಲವೆಡೆ ಆ ಗುತ್ತಿನವರು ಕೂತ ಜಾಗದಲ್ಲಿ, ಅವರ ಮನೆಮಂದಿಯೆಲ್ಲಾ ಬಂದು ಕೂರುವುದನ್ನು ನೋಡಿದ್ದೇವೆ, ಆದರೆ ಅಸಲಿಗೆ ಆತನ ಮನೆಯ ದೈವದ ಪ್ರತಿನಿಧಿಯಾಗಿ ಕೂರುವುದಕ್ಕೆ ಆ ಕುರ್ಚಿ ಹಾಕುವುದು.ಅಲ್ಲಿ ನೀಡಲಾದ ಸೀಯಾಳವನ್ನ ಆತ ಮನೆಗೆ ತೆಗೆದುಕೊಂಡು ಹೋಗಿ ತನ್ನ ಮನೆಯ ಅಂದರೆ ಗುತ್ತಿನ ದೈವದ ಮನೆಮಂಚಾವಿನಲ್ಲಿ ಇರಿಸಬೇಕು ಆದರೆ ಅದರ ಬಗ್ಗೆ ಮಾಹಿತಿ ಇರದವರು ಅದನ್ನ ನೇರವಾಗಿ ತಾವೇ ಕುಡಿದುಬಿಡುತ್ತಾರೆ.
ದೈವ ಸ್ಥಾನದಲ್ಲಿ ದೈವದ ಚಾಕರಿ ಮಾಡುವ ಪೂಜಾರಿಯ ಹೊರತಾಗಿ ಇನ್ನಿತರರಿಗೆ ಪ್ರವೇಶವಿಲ್ಲ ಎಂದರೆ ಉಳಿದವರು ಇಲ್ಲಿ ಕೀಳು ಎಂದಲ್ಲ. ಅದು ವ್ಯವಸ್ಥೆಗಾಗಿ ಮಾಡಿಕೊಂಡ ತುಳುನಾಡಿನ ಶಿಷ್ಟಾಚಾರ. ದೈವದ ಗಂಧಪ್ರಸಾದ ಕೊಡುವಾಗ ಬ್ರಾಹ್ಮಣನ ಮನೆಯ ದೈವವಾದರೆ ಅಲ್ಲಿ ದಲಿತ ಅತಿಥಿಯಾದರೆ , ಬತ್ತಿ ಬಿನ್ನೆರೆಗ್ ಅಂದರೆ ಬಂದ ಅತಿಥಿಗೆ ಮೊದಲು ಗಂಧ ನೀಡೋದು ಕ್ರಮ ಹಾಗಾದರೆ ಮೇಲು ಕೀಳು ಎಲ್ಲಿ ಬಂತು ?
ತುಳುನಾಡು ಎಂದರೆ ಕಾಶೀ,ರಾಮೇಶ್ವರಕ್ಕೆ ಹೋಗುವ ದಾರಿ ಎಂದು ಹೇಳುವ ದೈವದ ನುಡಿಗಳು ದೈವಕ್ಕೆ ತುಳುನಾಡಿನವರು ಮಾತ್ರ ಸೀಮಿತವೆಂಬ ಭಾವವೂ ಇಲ್ಲ . ದೈವಕ್ಕೆ ಈ ಮಣ್ಣನ್ನು ಗೌರವಿಸಿ ಬದುಕುವ ಎಲ್ಲರೂ ಸಮಾನರು. ನೂಲುಪಾಡಿ ಸಂಸಾರದಿಂದ ಜಾತಿ , ಅರೆಜಾತಿ ಪರಜಾತಿ ಅಂದರೆ ಅನ್ಯಮತೀಯರನ್ನ ಸೇರಿಸಿಕೊಂಡು ಗಂಧಕೊಡುವ ಕಟ್ಟೇ ಇರುವುದು. ಅಂತಹ ನಾಡಲ್ಲಿ ಇದ್ದುಕೊಂಡು ದೈವಾರಾಧನೆಯಲ್ಲಿ , ಅವರಿಲ್ಲ ಇವರಿಲ್ಲ ಎಂದು ವಾದಿಸುವುದು ತಪ್ಪು. ಯಾವುದೇ ಜಾತಿಯವನಿರಲಿ ಅವನ ಮನೆಯ ದೈವಕ್ಕೇ ಅವನೇ ಮೊದಲ ನಾಯಕ.
ನಮ್ಮದು ವಸುದೈವಕುಟುಂಬಕಂ ಎನ್ನುವ ತತ್ವ ಹೇಗೋ ಅದನ್ನೇ ದೈವ , ಜನರನ್ನ ರಾಸಿ ಎಂದು ಸಂಭೋದಿಸುತ್ತದೆ.ಹಾಗಾಗಿ ನಾವು ಚದುರದೇ ಭಾರತೀಯರೆಂಬ ರಾಶಿಯಾಗಿರೋಣ, ನಾವು ಚದುರಿ, ನಮ್ಮ ನಿರೋಧಕ ಶಕ್ತಿ ಕಡಿಮೆಯಾಗಿ ಹೊರಗಿನಿಂದ ಬರುವ ಮಹಾಮಾರಿಗಳಿಗೆ ಬಲಿಯಾಗದಿರೋಣ.ಜಾತಿ ನಮ್ಮ ಆಚರಣೆಗಳಲ್ಲಿ ಅಥವಾ ಸಂಪ್ರದಾಯ ಪಾಲಿಸುವಲ್ಲಿ ಮಾತ್ರವಿರಲಿ ಅದು ಯಾವತ್ತಿಗೂ ಬೇಧ ಸೃಷ್ಟಿಸದಿರಲಿ.
ಯಾವುದೋ ಊರಲ್ಲಿ ದೇವರ ಮೆರವಣಿಗೆಯಲ್ಲಿ ಕೋಲುಮುಟ್ಟಿದ ಎಂದು ಬೇಧ ತೋರಿದ ಪಿಡುಗು ನಮ್ಮ ತುಳುವರ ಮೇಲೆ ದಾಳಿ ಮಾಡದಿರಲಿ ಇಲ್ಲಿ ಯಾರೇ ಯಾವ ಜಾತಿಯವ ಬಂದರೂ ಸಮಾನವಾಗಿ ಕಾಣುವ ನಾಡಾಗಿಯೇ ಇರಲಿ.
ಚಿತ್ರ, ಲೇಖನ :- ಅನೂಪ್ ಶೆಟ್ಟಿ ಸೂರಿಂಜೆ