ಮುಂಬಯಿ (ಆರ್ಬಿಐ), ಅ.18: ನೆರೆಯ ಗೋವಾದಂತಹ ಸಣ್ಣ ರಾಜ್ಯದ ಭಾಷೆ ಕೊಂಕಣಿಗೆ ಮಾನ್ಯತೆ ಸಿಗುವುದಾದರೆ ಸಾಹಿತ್ಯ, ಸಂಸ್ಕೃತಿ, ಲಿಪಿ ಸಂಪನ್ನ ವಿಸ್ತಾರ ನಾಡಿನ ತುಳು ಭಾಷೆಗೆ ಕೂಡಾ ಅಂತಹುದೇ ಮಾನ್ಯತೆ ಸಿಗಬೇಕು. ಅದಕ್ಕಾಗಿ ತುಳುನಾಡಿನ ರಾಜಕಾರಣಿಗಳು ಎಲ್ಲರೂ ಒಮ್ಮತದಿಂದ ಒತ್ತಾಯಿಸ ಬೇಕು ಎಂದು ಅಮೆರಿಕಾ ಅಲ್ಲಿನ ಆಲ್ ಅಮೇರಿಕಾ ತುಳು ಅಸೋಸಿಯೇಷನ್ (ಎಎಟಿಎ-ಆಟ) ಸಂಸ್ಥೆಯ ಅಧ್ಯಕ್ಷ ಭಾಸ್ಕರ್ ಶೇರಿಗಾರ್ ಕರ್ನಾಟಕ ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಇಲಾಖೆಯ ಸಚಿವ ವಿ.ಸುನೀಲ್ಕುಮಾರ್ ಮತ್ತು ತುಳುನಾಡಿನ ಮಂತ್ರಿ, ಇತರ ಇತರ ಶಾಸಕರÀನ್ನು ವಿನಂತಿಸಿದರು.
ಆಟ ಆಯೋಜಿಸಿದ್ದ ವರ್ಷದ ತುಳು ಉಚ್ಚಯ-2022 ವರ್ಚುಯಲ್ ಕಾರ್ಯಕ್ರಮದಲ್ಲಿ ದೇಶ ವಿದೇಶದ ತುಳು ಅಭಿಮಾನಿಗಳನ್ನು ಉದ್ದೇಶಿಸಿ ಆಟ ನಡೆದುಬಂದ ಮತ್ತು ಅದರ ಉದ್ದೇಶಗಳ ಪರಿಚಯ ಮಾಡುತ್ತಾ ಈ ಮೇಲಿನ ಒತ್ತಾಯವನ್ನು ಮಂಡಿಸಿದರು. ತುಳು ಭಾಷೆ ತುಳು ಲಿಪಿ ಮತ್ತು ಸಾಹಿತ್ಯ ಸಂಸ್ಕೃತಿಯನ್ನು ಉಳಿಸುವುದು ಮತ್ತು ಬೆಳೆಸುವುದು ಆಟ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ಅದಕ್ಕಾಗಿ ವರ್ಷಕ್ಕೆ ಎರಡು ಬಾರಿ ಬಿಸು ಮತ್ತು ತುಳು ಉಚ್ಚಯ ಕಾರ್ಯಕ್ರಮಗಳನ್ನು ಆಚರಿಸುವುದಾಗಿ ಭಾಸ್ಕರ್ ಶೇರಿಗಾರ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಚಿವ ಸುನಿಲ್ ಕುಮಾರ್, ಹಂಪಿಯ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಉಪಕುಲಪತಿ ಡಾ| ವಿವೇಕ್ ರೈ , ವಿದ್ವಾಂಸ ವೆಂಕಟ್ರಮಣ ಭಟ್ ಮತ್ತು ದಾಯ್ಜಿವರ್ಲ್ಡ್ ಸಂಸ್ಥೆಯ ಮುಖ್ಯಸ್ಥ ವಾಲ್ಟರ್ ನಂದಳಿಕೆ ಅತಿಥಿಗಳಾಗಿ ಭಾಗವಹಿಸಿದ್ದರು .
ತುಳು ಭಾಷೆಯ ಕಾರ್ಯಕ್ರಮಗಳು ತುಳುನಾಡಿನಲ್ಲಿ ನಡೆಯುವುದು ವಿಶೇಷವಲ್ಲ ಆದರೆ ಹೊರ ದೇಶದಲ್ಲಿ ತುಳುವರು ಒಂದೇ ಕುಟುಂಬದವರಂತೆ ಒಟ್ಟು ಸೇರಿಕೊಂಡು ನಡೆಸುವುದು ಅತ್ಯಂತ ವಿಶೇಷ ಎಂದು ಬಣ್ಣಿಸುತ್ತಾ ಂಂಖಿಂ ಸಂಸ್ಥೆಯ ಕಾರ್ಯಕ್ರಮಕ್ಕೆ ಶುಭಕೋರಿದರು.
ಡಾ| ವಿವೇಕ್ ರೈ ಮಾತನಾಡಿ ತುಳು ಭಾಷೆಯ ಕಾವ್ಯ ಸೌಂದರ್ಯವನ್ನು ಎಳೆಎಳೆಯಾಗಿ ಬಿಚ್ಚಿಡುತ್ತಾ ಈ ಪಾಡ್ದನ ಹಾಡುಗಳು ಕೃಷಿ ಕೆಲಸಗಾರರ ನಡುವಿನ ಸ್ನೇಹ ಸಂಕೋಲೆಯಾಗಿ ಕೆಲಸ ಮಾಡುತ್ತಿದ್ದುದನ್ನು ನೆನಪಿಸಿದರು. ಈ ಹಾಡುಗಳು ಅಂದಿನ ಜೀವನ ಶೈಲಿಯನ್ನು, ಉಡುಗೆ ತೊಡುಗೆಗಳನ್ನು ವಿವರಿಸುವ ಪರಿಯನ್ನು ಹಾಡಿ ತೋರಿಸಿದರು. ಕೃಷಿ ಸಂಪತ್ತು ಸಂಪನ್ನವಾಗಬೇಕು ಎನ್ನುವುದು ಈ ಹಾಡುಗಳ ಮೂಲ ಸಂಕಲ್ಪವಾಗಿತ್ತು . ಇವನ್ನೆಲ್ಲ ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿಯನ್ನು ನೆನಪಿಸಿದರು.
ವೆಂಕಟರಾಮ ಭಟ್ ಮಾತನಾಡಿ ತುಳುವಿನಲ್ಲಿ ಇನ್ನಷ್ಟು ಘನ ಸಾಹಿತ್ಯದ ರಚನೆಯಾಗಬೇಕು ಎನ್ನುವ ಕಾರಣಕ್ಕಾಗಿ ಲಕ್ಷ್ಮೀಶನ ಜೈಮಿನಿ ಭಾರತವನ್ನು ತುಳುವಿಗೆ ಅನುವಾದಿಸಲು ಆರಂಭಿಸಿದೆ. ತುಳುವಿನ ಕಳೆದ ಹಳೆಯ ಶಬ್ದಗಳನ್ನು ಉಳಿಸಿಕೊಂಡು ಹೊಸ ಶಬ್ದಗಳನ್ನು ಹುಟ್ಟಿಸಿಕೊಂಡು ತುಳು ಭಾಷೆಯನ್ನು ಬೆಳೆಸಬೇಕು ಎಂದು ಅಭಿಪ್ರಾಯ ಪಟ್ಟರು.
ವಾಲ್ಟರ್ ನಂದಳಿಕೆ ಮಾತನಾಡಿ ಹೊರದೇಶದಲ್ಲಿ ಭಾಷೆಯನ್ನು ಬೆಳೆಸುವ ಆಟ ಸಂಸ್ಥೆಯ ಆಸ್ಥೆಯನ್ನು ಹೊಗಳುತ್ತಾ ತುಳುಭಾಷೆ ಎಂಟನೇ ಪರಿಚ್ಚೇಧಕ್ಕೆ ಸೇರುವಲ್ಲಿ ವಿದೇಶದ ತುಳುವರೂ ಧ್ವನಿಯಾಗಬೇಕು ಎಂದರು .
ಅಮಿತಾ ಅನುಜ್ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಗಿದ್ದು ಆಟದ ಉಪಾಧ್ಯಕ್ಷ ಶಿರೀಶ್ ಶೆಟ್ಟಿ ಸ್ವಾಗತಿಸಿದರು. ಸುದರ್ಶನ್ ಶೆಟ್ಟಿ, ಅನಿತಾ ನಾಯಕ್ (ಕ್ಯಾಲಿಫೋರ್ನಿ), ಪ್ರೀತಿ ಶೆಟ್ಟಿ, ರೋಶನ್ ಪಾಯ್ಸ್ ಅತಿಥಿಗಳನ್ನು ಪರಿಚಯಿಸಿದರು.
ಮನರಂಜನೆಯ ಭಾಗವಾಗಿ ಮಂಗಳೂರಿನ ನಂದಗೋಕುಲ ಮತ್ತು ಗ್ರೀನ್ ಪಾರ್ಕ್ ಟೈಗರ್ಸ್ ಇವರಿಂದ ಶ್ರೀ ದೇವಿ ವೈಭವ ಮತ್ತು ಪಿಲಿ ನಲಿಕೆ, ವಿಠ್ಠಲ ನಾಯಕ್ ಅವರಿಂದ ಗೀತಾ ಸಾಹಿತ್ಯ, ಸನಾತನ ನಾಟ್ಯಾಲಯ ಇವರಿಂದ ಸತ್ಯನಾಪುರ ಸಿರಿ ನೃತ್ಯನಾಟಕ, ಐಲೆಸಾದ ಡಾ| ರಮೇಶ್ಚಂದ್ರ ತಂಡದಿಂದ ಗೀತಾ ಗಾಯನ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ಸಿದ್ದಾರ್ಥ್ ಶೆಟ್ಟಿ ಮತ್ತು ಮಿಥಾಲಿ ಸಿದ್ದಾರ್ಥ್ ಶೆಟ್ಟಿ ಡಲ್ಲಾಸ್ ಸಭಾ ಕಾರ್ಯಕ್ರಮ ನಿರ್ವಹಿಸಿದರು. ಸಿನಿನಟ ವಿನೀತ್ ಅಭಿಷೇಕ್ ಶೆಟ್ಟಿ ಮತ್ತು ಶ್ರೀವಲ್ಲಿ ರೈ ಮಾರ್ಟೆಲ್ ಮನೋರಂಜನಾ ಭಾಗವನ್ನು ನಿರ್ವಹಿಸಿ ವಂದಿಸಿದರು.