ಕಾಂತಾರ…ಕಾಂತಾರ…ಕಾಂತಾರ…ಎಲ್ಲರ ಬಾಯಲ್ಲೂ ಈಗ ಈ ಸಿನಿಮಾದ್ದೇ ಸುದ್ದಿ. ‘ಹೊಂಬಾಳೆ ಫಿಲ್ಮ್ಸ್’ ನಿರ್ಮಿಸಿ, ರಿಷಬ್ ಶೆಟ್ಟಿ ನಿರ್ದೇಶಿಸಿ, ಪ್ರಧಾನ ಪಾತ್ರದಲ್ಲಿ ಆಭಿನಯಿಸಿರುವ ಈ ಕನ್ನಡ ಚಲನಚಿತ್ರ ಇತ್ತೀಚೆಗೆ ಬೆಳ್ಳಿ ತೆರೆಗೆ ಅಪ್ಪಳಿಸಿದ ವೇಗಕ್ಕೆ ಗಲ್ಲಾಪೆಟ್ಟಿಗೆ ಅಕ್ಷರಶಃ ಉಡಾಯಿಸಲ್ಪಟ್ಟಿದೆ! ವಿಶ್ವದೆಲ್ಲೆಡೆ ಭರ್ಜರಿ ಪ್ರದರ್ಶನಗಳನ್ನು ಕಂಡು ಕೋಟಿ-ಕೋಟಿ ರೂ.ಬಾಚುತ್ತಿರುವ ಈ ಚಿತ್ರದ ಯಶಸ್ಸು ಕಂಡು ಇಡೀ ಸ್ಯಾಂಡಲ್ವುಡ್ ಬೆಕ್ಕಸ ಬೆರಗಾಗಿದೆ!
ಕರ್ನಾಟಕದ ಕರಾವಳಿಯ ಅತ್ಯಂತ ಶ್ರೀಮಂತ ಸಂಸ್ಕೃತಿ ಎನಿಸಿರುವ ದೈವಾರಾಧನೆಯ ಜೊತೆಗೆ ಜಮೀನ್ದಾರಿ ವ್ಯವಸ್ಥೆ, ಅರಣ್ಯ ಒತ್ತುವರಿ ಇತ್ಯಾದಿ ಸೂಕ್ಷ್ಮ ವಿಷಯಗಳನ್ನು ಆಧರಿಸಿ ನಿರ್ಮಿಸಲಾದ ವಿಭಿನ್ನ ಕಥಾವಸ್ತುವುಳ್ಳ ಈ ಚಲನಚಿತ್ರ ವೀಕ್ಷಕರನ್ನು ಮೋಡಿ ಮಾಡುತ್ತಿದೆ. ಪ್ರಕೃತಿ ಮತ್ತು ಮನುಷ್ಯನ ನಡುವಿನ ಆಪ್ತ ಸಂಬಂಧ ಚಿತ್ರದುದ್ದಕ್ಕೂ ಅನಾವರಣಗೊಂಡಿದೆ. ಆಸ್ತಿಕರು ಶ್ರದ್ಧಾ-ಭಕ್ತಿಯಿಂದ ಆರಾಧಿಸಿಕೊಂಡು ಬಂದಿರುವ ದೈವದ ಕಾರಣಿಕವನ್ನು ಜಗದಗಲ ಪಸರಿಸುತ್ತಿರುವ ಈ ಚಲನಚಿತ್ರ ನಾಸ್ತಿಕರನ್ನೂ ಒಮ್ಮೆಗೆ ನಿಬ್ಬೆರಗಾಗಿಸುತ್ತಿದೆ ಎಂದರೆ ಅತಿಶಯೋಕ್ತಿ ಆಗಲಾರದು.
ಕಂಬಳ ಓಟಗಾರನಾಗಿ ಹಾಗೂ ದೈವ ನರ್ತಕನಾಗಿ ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಅವರು ತನ್ನ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿ ವೀಕ್ಷಕರನ್ನು ಹುಬ್ಬೇರಿಸುವಂತೆ ಮಾಡುತ್ತಾರೆ. ದಟ್ಟಕಾಡುಗಳ ಅವರ್ಣನೀಯ ಸೊಬಗನ್ನು ಅದ್ಭುತವಾಗಿ ಸೆರೆಹಿಡಿದ ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣ ಮನಸ್ಸಿಗೆ ಮುದ ನೀಡುತ್ತದೆ. ಅಜನೀಶ್ ಅವರ ಹಿತಮಿತವಾದ ಸಂಗೀತ ಕಚಗುಳಿ ಇಡುತ್ತದೆ. ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಹಾಗೂ ಸಪ್ತಮಿ ಗೌಡ ಅವರು ಈ ಸಿನಿಮಾದಲ್ಲಿ ಮನೋಜ್ಞವಾಗಿ ನಟಿಸಿ, ಮಿಂಚಿದ್ದಾರೆ. ನವೀನ್ ಡಿ.ಪಡೀಲ್, ಪ್ರಕಾಶ್ ತೂಮಿನಾಡ್, ದೀಪಕ್ ರೈ ಪಾಣಾಜೆ, ಸ್ವರಾಜ್ ಶೆಟ್ಟಿ, ಮೈಮ್ ರಾಮದಾಸ್, ಜ್ಯೋತಿಷ್ ಶೆಟ್ಟಿ, ಮಾನಸಿ ಸುಧೀರ್ ಮತ್ತಿತರ ಸ್ಥಳೀಯ ಪ್ರತಿಭಾವಂತ ಕಲಾವಿದರ ಅಭಿನಯ ಈ ಚಿತ್ರದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಚಿತ್ರದ ಕ್ಲೈಮಾಕ್ಸ್ ನಲ್ಲಿ ರಿಷಬ್ ಶೆಟ್ಟಿ ಅವರು ಗುಳಿಗನ ಆವೇಶದಲ್ಲಿ ತೋರಿದ ಮೈನವಿರೇಳಿಸುವ ಅಮೋಘ ನಟನೆಗೆ ಯಾವ ಪ್ರಶಸ್ತಿ ನೀಡಿದರೂ ಕಡಿಮೆ ಎನಿಸೀತು!
ಈ ಸಂದರ್ಭದಲ್ಲಿ ʻಕಾಂತಾರʼ ಸಿನಿಮಾ ಬಿಡುಗಡೆಯ ಮುಂಚಿತವಾಗಿಯೇ ತುಳುನಾಡಿನಾದ್ಯಂತ 300ಕ್ಕೂ ಹೆಚ್ಚಿನ ಪ್ರಯೋಗಗಳನ್ನು ಕಂಡು ತುಳು ರಂಗಭೂಮಿಯಲ್ಲಿ ತೀವ್ರ ಸಂಚಲನವನ್ನುಂಟು ಮಾಡಿ ಅಪಾರ ಯಶಸ್ಸು ಗಳಿಸಿದ ʼಶಿವದೂತೆ ಗುಳಿಗೆ” ಎಂಬ ತುಳು ನಾಟಕದ ಬಗ್ಗೆ ಇಲ್ಲಿ ಪ್ರಸ್ತಾಪಿಸಲೇ ಬೇಕಾಗಿದೆ. ಯಾಕೆಂದರೆ, ಈ ನಾಟಕವೂ ತುಳುನಾಡಿನ ದೈವವೊಂದರ ಕಾರಣಿಕದ ಸುತ್ತಲೇ ನಿರ್ಮಿಸಲಾಗಿರುವುದು ಇಲ್ಲಿ ಗಮನಾರ್ಹ ಸಂಗತಿಯಾಗಿದೆ. ತುಳು ರಂಗಭೂಮಿಯ ಪ್ರಸಿದ್ಧ ನಾಟಕಕಾರ ವಿಜಯಕುಮಾರ್ ಕೊಡಿಯಾಲ್ಬೈಲ್ ನಿರ್ದೇಶಿಸಿ, ʻಕಲಾ ಸಂಗಮʼ ಕಲಾವಿದರು ಆಭಿನಯಿಸಿರುವ ಈ ನಾಟಕದಲ್ಲಿ ಗುಳಿಗ ದೈವದ ಹುಟ್ಟು ಮತ್ತು ಅದರ ಬೆಳವಣಿಗೆ ಹಾಗೂ ಗುಳಿಗನ ಅಪಾರ ಮಹಿಮೆಯನ್ನು ಸಾದರಪಡಿಸುವ ಕುತೂಹಲಭರಿತ ಕಥಾಹಂದರವಿದೆ. ಎ.ಕೆ.ವಿಜಯ್ ʼಕೋಕಿಲʼ ಅವರ ಸಂಗೀತ ನಿರ್ದೇಶನದಲ್ಲಿ ಖ್ಯಾತ ಯಕ್ಷಗಾನ ಭಾಗವತರಾದ ಸತೀಶ್ ಶೆಟ್ಟಿ ಪಟ್ಲ ಹಾಗೂ ʻತೆಲಿಕೆದ ಬೊಳ್ಳಿʼ ದೇವದಾಸ್ ಕಾಪಿಕಾಡ್ ಅವರ ಕಂಠಸಿರಿಯಲ್ಲಿ ಹೊರಹೊಮ್ಮಿರುವ ಇಂಪಾದ ಹಾಡುಗಳು ಎಲ್ಲರ ಮನಸೂರೆಗೊಳ್ಳುತ್ತದೆ. ಗುಳಿಗನ ಪಾತ್ರದಲ್ಲಿ ಆರ್ಭಟಿಸಿ, ಅದ್ಭುತ ನಟನಾ ಪ್ರತಿಭೆ ಮೆರೆದಿರುವ ಸ್ವರಾಜ್ ಶೆಟ್ಟಿ ಅವರು ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತಾರೆ! ಈ ಯಶಸ್ಸಿನಿಂದಾಗಿಯೇ ʻಕಾಂತಾರʼ ಸಿನಿಮಾದಲ್ಲಿ ಅವರಿಗೆ ಪ್ರಮುಖ ಪಾತ್ರದಲ್ಲಿ ನಟಿಸುವ ಅವಕಾಶ ಒದಗಿ ಬಂದಿರಬಹುದಾಗಿದೆ. ಹಿರಿಯ ರಂಗ ನಟ ರಮೇಶ್ ಕಲ್ಲಡ್ಕ ಅವರ ಅಭಿನಯ ನಾಟಕದಲ್ಲಿ ನೈಜವಾಗಿ ಮೂಡಿ ಬಂದಿದೆ.
ದೃಶ್ಯದಿಂದ ದೃಶ್ಯಕ್ಕೆ ಅತ್ಯಂತ ತ್ವರಿತಗತಿಯಲ್ಲಿ ಬದಲಾಗುವ ಆಕರ್ಷಕ ರಂಗ ವಿನ್ಯಾಸ, ವಿಶಿಷ್ಟ ಬೆಳಕಿನ ಸಂಯೋಜನೆ ಹಾಗೂ ಪೂರ್ವ ಮುದ್ರಿತ ಪ್ರಬುದ್ಧ ಸಂಭಾಷಣೆ ಇಡೀ ನಾಟಕದ ಹೈಲೈಟ್ಸ್ ಎನ್ನಬಹುದು. . ನಂಬಿದವರನ್ನು ಆಧರಿಸುವ ಹಾಗೂ ಧರ್ಮವನ್ನು ಎಡವಿ
ಆದರ್ಮ-ಧರ್ಪ ತೋರುವ ಮಂದಿಗೆ ʻಗುಳಿಗ ಪೆಟ್ಟುʼ ನೀಡಿ ಶಿಕ್ಷಿಸುವ ದ್ಯಶ್ಯವಂತೂ ರೋಮಾಂಚನವನ್ನುಂಟು ಮಾಡುತ್ತದೆ. ಅತ್ಯಧಿಕ ಸಂಖ್ಯೆಯ ಯುವ ಪ್ರೇಕ್ಷಕ ವರ್ಗ ಈ ನಾಟಕವನ್ನು ವೀಕ್ಷಿಸಿ, ಸಂಭ್ರಮಿಸಿದ್ದು ಇಲ್ಲಿ ಉಲ್ಲೇಖನೀಯ!
ʻಶಿವದೂತೆ ಗುಳಿಗೆʼ ನಾಟಕವನ್ನು ತುಳುಭಾಷೆಯಲ್ಲಿ ರಚಿಸಿರುವ ಕಾರಣದಿಂದಾಗಿ ತುಳುನಾಡು ಹಾಗೂ ತುಳು ಭಾಷಿಕರು ನೆಲೆಸಿರುವ ಬೆಂಗಳೂರು, ಮುಂಬಯಿ ಮತ್ತಿತರೆಡೆಗಳಲ್ಲಿ ಮಾತ್ರ ಪ್ರದರ್ಶನ ನೀಡುವ ಸೀಮಿತ ಅವಕಾಶ ಈ ನಾಟಕಕ್ಕಿರುವುದು ನಾವು ಗಮನಿಸಬೇಕಾದ ಅಂಶವಾಗಿದೆ. ಹಾಗಾಗಿಯೇ, ವ್ಯಾಪಕ ಮಾರುಕಟ್ಟೆಯ ವ್ಯಾಪ್ತಿ ಹೊಂದಿರುವ ಕನ್ನಡ ಸಿನಿಮಾ ಕಾಂತಾರದ ಜೊತೆ ಈ ನಾಟಕವನ್ನು ಹೋಲಿಸುವುದು ಇಲ್ಲಿ ಅಪ್ರಸ್ತುತವಾದೀತು. ಆದರೂ, ಅಪಾರ ಯಶಸ್ಸು ಸಂಪಾದಿಸಿ, ಮುನ್ನಡೆಯುತ್ತಿರುವ ʻಶಿವದೂತೆ ಗುಳಿಗೆʼ ನಾಟಕ ಹಾಗೂ ದಾಖಲೆ ಪ್ರದರ್ಶನ ಕಾಣುತ್ತಿರುವ ʻಕಾಂತಾರʼ ಸಿನಿಮಾದಲ್ಲಿ ತಲೆತಲಾಂತರದಿಂದ ನಾವೆಲ್ಲ ನಂಬಿಕೊಂಡು ಬಂದಿರುವ ಭೂತಾರಾಧನೆಗೆ ಪ್ರಾಮುಖ್ಯತೆ ದೊರಕಿರುವುದು ನಿಜಕ್ಕೂ ಹೆಮ್ಮೆ ತರುವ ವಿಚಾರವಾಗಿದೆ. ಎರಡರಲ್ಲೂ ಆಗಾಗ್ಗೆ ಕೇಳಿ ಬರುವ ಗಗ್ಗರದ ಸದ್ದು ರೋಮಾಂಚನಗೊಳಿಸುತ್ತದೆ! . ಒಟ್ಟಿನಲ್ಲಿ ʻಶಿವದೂತೆ ಗುಳಿಗೆʼ ನಾಟಕ ಹಾಗೂ ʼಕಾಂತಾರʼ ಸಿನಿಮಾಗಳೆಂಬ ಈ ಎರಡೂ ಕಲಾ ಮಾಧ್ಯಮಗಳು ದೈವಭಕ್ತಿಯನ್ನು ಉದ್ದೀಪನಗೊಳಿಸುವುದರ ಜೊತೆಗೆ ತುಳುನಾಡಿನ ದೈವಾರಾಧನೆಗೆ ಹೊಸ ಆಯಾಮ ನೀಡಿರುವುದನ್ನು ಯಾರೂ ಅಲ್ಲಗಳೆಯಲಾಗದು.
ಸತೀಶ್ ಶೆಟ್ಟಿ ಕೊಡಿಯಾಲ್ಬೈಲ್