2002 ರಲ್ಲಿ ಸ್ಥಾಪನೆಗೊಂಡ ಬಂಟ್ಸ್ ಬಹರೈನ್ ತನ್ನ 20 ನೇ ವರುಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಇತ್ತೀಚಿಗೆ ಸಂಪನ್ನಗೊಂಡ ವಾರ್ಷಿಕ ಮಹಾಸಭೆಯಲ್ಲಿ ಸಂಸ್ಥೆಯ ಹಿರಿಯ ಸದಸ್ಯರಲ್ಲೋರ್ವರಾದ ಶ್ರೀ ಸೌಕೂರು ಅರುಣ್ ಶೆಟ್ಟಿಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಖ್ಯಾತ ವಕೀಲರಾಗಿದ್ದ ದಿವಂಗತ ಶ್ರೀ ಮೋಹನ್ ದಾಸ್ ಶೆಟ್ಟಿ ಹಾಗೂ ದಿವಂಗತ ಶ್ರೀಮತಿ ಸೌಕೂರು ಹೇಮಲತಾ ಶೆಟ್ಟಿಯವರ ಪುತ್ರ ಶ್ರೀ ಅರುಣ್ ಶೆಟ್ಟಿಯವರು ಈ ಹಿಂದೆ ಸೆಷನ್ ಕೋರ್ಟ್ ನ್ಯಾಯಾಧೀಶರಾಗಿದ್ದ ಸೌಕೂರು ನಾರಾಯಣ ಶೆಟ್ಟಿಯವರ ಮೊಮ್ಮಗ ಕೂಡ.
ನಗುಮೊಗದ, ಸಾಮಾಜಿಕ ಚಟುವಟಿಕೆಗಳಲ್ಲಿ ಸದಾ ತನ್ನನ್ನು ತೊಡಗಿಸಿಕೊಂಡಿದ್ದ ಶ್ರೀ ಅರುಣ್ ಶೆಟ್ಟಿಯವರ ಆಯ್ಕೆ ಬಂಟ್ಸ್ ಬಹರೈನ್ ನ ಸರ್ವ ಸದಸ್ಯರಿಗೂ ಸಂತೋಷವನ್ನುಂಟುಮಾಡಿದೆ. ಅರುಣ್ ಶೆಟ್ಟಿಯವರು ಪ್ರಸ್ತುತ ಬಹರೈನ್ ನ ಪ್ರಸಿದ್ಧ ನಾಸ್ಸರ್ ಫಾರ್ಮಸಿ ಸಂಸ್ಥೆಯಲ್ಲಿ ಬ್ರಾಂಡ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಾಲೇಜು ದಿನಗಳಲ್ಲಿ ಉಡುಪಿಯ MGM ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದರು ಹಾಗೂ ರಾಷ್ಟ್ರೀಯ ಮಟ್ಟದ ಕ್ರೀಡಾಪಟುವಾಗಿ, ಕಬ್ಬಡ್ಡಿ ಆಟಗಾರನಾಗಿ ಮಿಂಚಿದ್ದರು. ತನ್ನ ಸ್ನೇಹಪರ ನಡತೆಯಿಂದ ಬಹರೈನ್ ನ ಸರ್ವ ಕನ್ನಡ ಹಾಗೂ ತುಳು ಭಾಷಿಗರ ಪ್ರೀತಿಗೆ ಅರುಣ್ ಶೆಟ್ಟಿಯವರು ಪಾತ್ರರಾಗಿದ್ದಾರೆ. ಪತ್ನಿ ಶ್ರೀಮತಿ ಪ್ರತಿಮಾ ಶೆಟ್ಟಿಯವರು ಬಹರೈನ್ ನ ಭಾರತೀಯ ರಾಯಭಾರಿ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದು, ತನ್ನ ಸಾರ್ವಜನಿಕ ಸೇವೆಯಿಂದಾಗಿ ಎಲ್ಲರ ಮೆಚ್ಚುಗೆ ಗಳಿಸಿರುವ ಸದಾ ಲವಲವಿಕೆಯ ಮಹಿಳೆ.
ಅರುಣ್ ಶೆಟ್ಟಿಯವರ ಬಗ್ಗೆ ಬಹಳಷ್ಟು ಗೌರವ. ಅದಕ್ಕೆ ಕಾರಣಗಳೂ ಸಾಕಷ್ಟಿವೆ. ಯಾವುದೇ ಸಭೆ ಸಮಾರಂಭಗಳಿರಲಿ, ಅರುಣ್ ಶೆಟ್ಟಿಯವರು ಆಗಮಿಸಿದ ತಕ್ಷಣ ಎಲ್ಲಾ ಗೆಳೆಯರ, ಪರಿಚಯದವರ ಬಳಿ ಹೋಗಿ ನಗು ನಗುತ್ತಾ ಮಾತನಾಡುವ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದವರು. ದೊಡ್ಡವರಾಗಲೀ, ಸಣ್ಣವರಾಗಲೀ, ಇತರರು ತನ್ನ ಬಳಿಗೆ ಬರಲು ಕಾದವರಲ್ಲ. ಯಾರಾದರೂ ಸಮಸ್ಯೆಯೊಂದಿಗೆ ಅವರನ್ನು ಸಂಪರ್ಕಿಸಿದಾಗ, ತನ್ನಿಂದ ಆಗುವ ಸಹಾಯವನ್ನು ನಗುಮೊಗದಿಂದಲೇ ಮಾಡಲು ಮುಂದೆ ಬರುವ ವ್ಯಕ್ತಿ. ಬಹುಶ: ಎರಡು ದಶಕಗಳನ್ನು ಪೂರೈಸುತ್ತಿರುವ ಬಂಟ್ಸ್ ಬಹರೈನ್ ಸಂಸ್ಥೆ ಇವರ ಅಧ್ಯಕ್ಷತೆಯಲ್ಲಿ ಬಹಳಷ್ಟು ಎತ್ತರಕ್ಕೇರುವ ಅವಕಾಶವನ್ನು ಹೊಂದಿದೆ. ಶ್ರೀ ಅರುಣ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಬಂಟ್ಸ್ ಬಹರೇನ್ ಉತ್ತರೋತ್ತರ ಅಭಿವೃದ್ಧಿಯನ್ನು ಹೊಂದಲೆಂದು ಸಮಸ್ತ ಬಂಟ ಸಮಾಜದ ಪರವಾಗಿ ಶುಭ ಹಾರೈಸುತ್ತಿದ್ದೇನೆ.