ಸೃಜನಶೀಲ ಮನಸ್ಸಿನ ಪ್ರಬುದ್ಧವಾದ ಪ್ರಯೋಗವೇ ಕವನಗಳು ಅಥವಾ ಕಾವ್ಯಗಳು. ಕವಿಯ ಪರಿಕಲ್ಪನೆಗಳಿಗೆ ನಿಲುಕದ್ದು ಯಾವುದೂ ಇಲ್ಲ. ಕವಿಗಳು ಹೃದಯ ಶ್ರೀಮಂತಿಕೆಯನ್ನು ಹೊಂದಿರುತ್ತಾರೆ. ಭಾವನೆಗಳ ಬೆನ್ನುಹತ್ತಿ ಶಬ್ದ, ಲಯ, ಗತ್ತು, ಪದಗಳ ಚೌಕಟ್ಟಿನೊಂದಿಗೆ ಕವನಗಳು ಸೃಷ್ಟಿಯಾಗಿ ಕವಿಯ ಆಶಯಗಳು ಜನರಿಗೆ ಮುಟ್ಟುವಂತಹ ಕಾರ್ಯ ಆಗಬೇಕಾಗಿದೆ. ತನ್ನನ್ನು ತಾನು ಅರಿತುಕೊಂಡು ಜನರ ಭಾವನೆಗಳಿಗೆ ಸ್ಪಂದಿಸುವ ಸಾಮಾಜಿಕ ಹೊಣೆಗಾರಿಕೆ ಕವಿಗಳಿಗೆ ಇರಬೇಕಾಗಿದೆ ಎಂದು ಖ್ಯಾತ ಸಾಹಿತಿಗಳು ಹಾಗೂ ಬಸವ ಅಧ್ಯಯನ ವೇದಿಕೆ ಪುಣೆ ಇದರ ಅಧ್ಯಕ್ಷರಾದ ಡಾ. ಶಶಿಕಾಂತ ಪಟ್ಟಣ ಅವರು ಅಭಿಪ್ರಾಯಪಟ್ಟರು. ದಿ. ಗುಂಡೂರಾಜ್ ಶೆಟ್ಟಿ ಸಭಾಭವನದಲ್ಲಿ ನಡೆದ ಪುಣೆ ಕನ್ನಡ ಸಂಘದ ವಾರ್ಷಿಕ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಜಗತ್ತಿನ ಅತೀ ಪುರಾತನ ಇತಿಹಾಸ ಹೊಂದಿದ ನಮ್ಮ ಕನ್ನಡ ಭಾಷೆಗೆ ೮ ಜ್ಞಾನಪೀಠ ಪ್ರಶಸ್ತಿಗಳು ಲಭಿಸಿದ್ದು ಕನ್ನಡದ ಮೇರು ಕವಿಗಳು, ಸಾಹಿತಿಗಳು ಭಾಷೆಯನ್ನು ಶ್ರೀಮಂತಗೊಳಿಸಿದ್ದಾರೆ. ಸುಖ, ದುಃಖ, ನೋವು ನಲಿವುಗಳಿಗೆ ಸ್ಪಂದಿಸುವ ಗುಣ ಕೇವಲ ತಾಯಿಗೆ ಮತ್ತು ತಾಯಿ ಭಾಷೆಗಿದೆ. ಅಂತಹ ನಮ್ಮ ಕನ್ನಡ ಭಾಷೆಗೆ ಎಂದೂ ಅಳಿವಿಲ್ಲ. ನಾವು ಮನುಷ್ಯನಾಗಿ ಬದುಕು ಕಟ್ಟಲು ಸಮರ್ಥವಾದ, ಪ್ರಬಲವಾದ ಸಾಧನ ಕನ್ನಡ ಭಾಷೆಯಾಗಿದೆ . ಪುಣೆಯಲ್ಲಿ 1978 ರಲ್ಲಿ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಯನ ವಿಭಾಗವಿತ್ತು. ಪುಣೆ ನಗರದಲ್ಲಿ ಕನ್ನಡ ಸಂಘವನ್ನು ಸ್ಥಾಪಿಸಿ ಆ ಮೂಲಕ ಕನ್ನಡದ ಮನಸ್ಸುಗಳನ್ನು ಒಂದುಗೂಡಿಸುವ ಕಾಯಕವನ್ನು ಮಾಡುತ್ತಿರುವ ಕನ್ನಡ ಸಂಘ ನಿಜವಾಗಿಯೂ ಅಭಿನಂದನಾರ್ಹವಾಗಿದೆ. ಇಂದಿನ ಕವಿಗೋಷ್ಠಿ ತುಂಬಾ ಔಚಿತ್ಯಪೂರ್ಣವಾದ ಕಾರ್ಯಕ್ರಮವಾಗಿದೆ. ಇಂದು ಭಾಗವಹಿಸಿದ ಎಲ್ಲಾ ಕವಿಗಳ ಕವಿತೆಗಳು ವಿಭಿನ್ನತೆಯೊಂದಿಗೆ ಅರ್ಥಪೂರ್ಣವಾಗಿತ್ತು ಎಂದರು.
ಪುಣೆ ಕನ್ನಡ ಸಂಘದ ಉಪಾಧ್ಯಕ್ಷೆ ಹಾಗೂ ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷೆ ಇಂದಿರಾ ಸಾಲ್ಯಾನ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ ೨೫ ವರ್ಷಗಳಿಂದ ಕನ್ನಡ ಸಂಘದ ಮೂಲಕ ಕವಿಗೋಷ್ಠಿಯನ್ನು ಆಯೋಜಿಸುತ್ತಾ ಪುಣೆಯಲ್ಲಿರುವ ಕನ್ನಡದ ಕವಿಮನಸ್ಸುಗಳನ್ನು ಒಂದುಗೂಡಿಸುತ್ತಾ ಬಂದ ಸಂತಸ ನಮ್ಮೆಲ್ಲರಲ್ಲಿದೆ. ಕನ್ನಡ ನಮ್ಮ ಆದ್ಯತೆ, ಅಸ್ಮಿತೆ ಹಾಗೂ ಅನನ್ಯತೆ, ಇಂಗ್ಲಿಷ್ ನಮ್ಮ ಅನಿವಾರ್ಯತೆ, ಸೃಜನಶೀಲತೆ ಮತ್ತು ಸಂವೇದನಾಶೀಲತೆ ಕವಿಗಳ ಆಸ್ತಿ. ಕವಿಗಳೆಂದರೆ ಮೃದು ಹೃದಯದವರು. ಸಮಕಾಲೀನ ಜಗತ್ತಿನ ಆಗುಹೋಗುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಸಂವೇದನೆಯನ್ನು ವ್ಯಕ್ತಪಡಿಸುವವರು. ಜೀವನಾನುಭವ ಹೆಚ್ಚಾದಂತೆ ಮನಸ್ಸಿನ ಭಾವನೆಗಳ ಉತ್ಕಟತೆ ತೀವ್ರವಾಗುತ್ತಾ ಸಾಗುತ್ತದೆ. ಕವನ ಕೇವಲ ಮನೋರಂಜನೆಗಾಗಿ ಇರಬಾರದು. ಕವನಗಳು ಹೃದಯವನ್ನುತಟ್ಟುವಂತಿರವೇಕು, ಚಿಂತನೆಗೆ ಹಚ್ಚುವಂತಿರವೇಕು, ಸಮಾಜಮುಖಿಯಾಗಿರಬೇಕಾಗಿದೆ. ನಮ್ಮ ಕನ್ನಡ ಸಂಘವೆಂದರೆ ಪುಣೆಯ ಪುಣ್ಯಕ್ಷೇತ್ರವೆನ್ನಬಹುದಾಗಿದೆ. ಇಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಾ ವ್ಯಕ್ತಿತ್ವದ ಸರ್ವತೋಮುಖ ವಿಕಸನ ಹೊಂದುತ್ತದೆ. ಇದು ಪುಣ್ಯದ ಕೆಲಸವಾಗಿದೆ. ಇಲ್ಲಿ ಎರಡು ಗುಡಿಗಳಿವೆ. ಒಂದು ತಾಯಿ ಭುವನೇಶ್ವರಿಯನ್ನು ಆರಾಧಿಸುವ ಕನ್ನಡ ಮಾಧ್ಯಮ ಶಾಲೆ. ಇನ್ನೊಂದು ಆಂಗ್ಲ ಮಾಧ್ಯಮ ಶಾಲೆ. ಇಲ್ಲಿ ಸರಸ್ವತಿಯ ಆರಾಧನೆ ನಡೆಯುತ್ತಿದೆ. ಕವಿ ಸಮ್ಮೇಳನ ಕನ್ನಡದ ವಾರ್ಷಿಕ ಪೂಜೆಯಾದರೆ ಕನ್ನಡ ಮಾಧ್ಯಮ ಶಾಲೆಯಲ್ಲಿ ಕನ್ನಡದ ನಿತ್ಯಪೂಜೆ ನಡೆಯುತ್ತಿದೆ . ಶಿಕ್ಷಕ ಶಿಕ್ಷಕಿಯರು ಇಲ್ಲಿ ಅರ್ಚಕರಾದರೆ ವಿದ್ಯಾರ್ಥಿಗಳು ಭಕ್ತಾದಿಗಳು. ಆದುದರಿಂದ ನಾವೆಲ್ಲಾ ನಮ್ಮ ಸುಂದರ ಹೃದಯದ ಭಾಷೆ ಕನ್ನಡವನ್ನು ಉಳಿಸಿ ಪೋಷಿಸುವ ಕಾರ್ಯವನ್ನು ನಿರಂತರ ಮಾಡಬೇಕಾಗಿದೆ ಎಂದರು. ಕಾರ್ಯಕ್ರಮದಲ್ಲಿ ಜಯಶ್ರೀ ಶಶಿಕಾಂತ ಪಟ್ಟಣ, ಕನ್ನಡ ಸಂಘದ ಅಧ್ಯಕ್ಷರಾದ ಕುಶಲ್ ಹೆಗ್ಡೆ, ಕಾರ್ಯದರ್ಶಿ ಮಾಲತಿ ಕಲ್ಮಾಡಿ, ವಿಶ್ವಸ್ಥರಾದ ಡಾ. ಶಶಿಕಲಾ ಗುರುಪುರ್ ,ಡಾ. ಬಾಲಾಜಿತ್ ಶೆಟ್ಟಿ, ನಾಟ್ಯಗುರು ಮದಂಗಲ್ಲು ಆನಂದ ಭಟ್ ಉಪಸ್ಥಿತರಿದ್ದರು . .
ಪುಣೆಯ ಕವಿಗಳಾದ ಕೃ.ಶಿ.ಹೆಗಡೆ, ಕೃಷ್ಣ ಇತ್ನಾಳ್ , ಇಂದಿರಾ ಸಾಲ್ಯಾನ್, ಪಾಂಗಾಳ ವಿಶ್ವನಾಥ್ ಶೆಟ್ಟಿ, ಮಹೇಶ್ ಪ್ರಸಾದ್ ಹೆಗ್ಡೆ ಪೊಳಲಿ, ಡಾ. ಶಶಿಕಲಾ ಗುರುಪುರ್, ಕಿರಣ್ ಬಿ ರೈ ಕರ್ನೂರು, ಜ್ಯೋತಿ ಕಡಕೋಳ್, ಶ್ರೀನಿವಾಸ ಕಡಕೋಳ್, ಸುಭಾಷ್ ಚಂದ್ರ ಸಕ್ರೋಜಿ, ಅನ್ನಪೂರ್ಣ ಸಕ್ರೋಜಿ, ಮಮತಾ ಪಿ ಅಂಚನ್, ಹೇಮಾ ಎ ಭಟ್, ವಿಕೇಶ್ ರೈ ಶೇಣಿ, ಸದಾನಂದ ತಾವರೆಗೇರಿ, ಶೋಭಾ ಪಂಚಾಂಗಮಠ, ವಿಲ್ಮಾ ಮಾರ್ಟಿಸ್ ಮತ್ತು. ಪೂಜಾ ಪೂಜಾರಿ ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದರು. ಕನ್ನಡ ಮಾಧ್ಯಮ ಹೈಸ್ಕೂಲ್ ಮುಖ್ಯೋಪಾಧ್ಯಾಯರಾದ ಚಂದ್ರಕಾಂತ ಹಾರಕೂಡೆ ಡಾ. ಶಶಿಕಾಂತ ಪಟ್ಟಣ ರವರನ್ನು ಪರಿಚಯಿಸಿದರು. ಕನ್ನಡ ಮಾಧ್ಯಮ ಹೈಸ್ಕೂಲ್ ವಿದ್ಯಾರ್ಥಿಗಳು ಹಚ್ಚೇವು ಕನ್ನಡದ ದೀಪ ಪ್ರಾರ್ಥನೆಯನ್ನು ಹಾಡಿ ನಂತರ ಕವಿಗಳನ್ನು ಪರಿಚಯಿಸಿದರು. ಕವಿಗಳನ್ನು ಸಂಘದ ವತಿಯಿಂದ ಸತ್ಕರಿಸಲಾಯಿತು. ಪೂಜಾ ಪಾಟೀಲ್ ಕಾರ್ಯಕ್ರಮ ನಿರೂಪಿಸಿ ನೇತ್ರಾ ವಂದಿಸಿದರು. ಕಾರ್ಯಕ್ರಮದಲ್ಲಿ ಪುಣೆ ಕನ್ನಡ ಸಂಘದ ಸದಸ್ಯರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯ ಪ್ರೇಮಿಗಳು ಉಪಸ್ಥಿತರಿದ್ದರು. ಪ್ರೀತಿ ಭೋಜನದೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.