ಪ್ರಕೃತಿಯ ನೈಜ ಸೌಂದರ್ಯಕ್ಕೆ ಅಗ್ರತಾಣವಾದ ಪಶ್ಚಿಮ ಘಟ್ಟಗಳ ಸಾಲುಗಳ ನಡುವೆ ನಿಸರ್ಗದ ಮಡಿಲಲ್ಲಿ ಬೆಟ್ಟಗಳ ಸಾಲು ಮಾರ್ಗದುದ್ದಕ್ಕೂ ಮುಗಿಲುಚುಂಬಿಸುವ ದಟ್ಟ ಹಸಿರು ಕಾನನದ ಪ್ರಶಾಂತ ವಾತಾವರಣ ಹಾಗೂ ಹಕ್ಕಿಗಳ ಚಿಲಿಪಿಲಿ ಕಲರವ, ಪ್ರಕ್ರತಿ ಸೌಂದರ್ಯದ ಖನಿ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದಲ್ಲಿ ಜನ್ಮ ತಾಳುವ ಶರಾವತಿ ನದಿ ರಭಸದಿಂದ ಹರಿದು ಜೋಗದಲ್ಲಿ ಧುಮ್ಮಿಕ್ಕುತ್ತಾಳೆ. ಅದೇ ವಿಶ್ವವಿಖ್ಯಾತ ಜೋಗ ಜಲಪಾತ. ಭೋರ್ಗರೆಯತ್ತಾ ಹಾಲ್ನೋರೆಯುಕ್ಕಿಸುತ್ತಾ ವೈಯ್ಯಾರದೊಂದಿಗೆ ರೌದ್ರತೆಯನ್ನು ತೋರುವ ಸೌಂದರ್ಯ ವರ್ಣನಾತೀತ. ಧರೆಗಿಳಿವ ದೇವ ವಧುವಿನಂತೆ ಕಂಗೊಳಿಸುವ ದೃಶ್ಯ ವೈಭವ, ಜಲಪಾತದ ಬೆಳ್ನೊರೆಗಳ ಚೆಲುವಿನ ಚಿತ್ತಾರವನ್ನು ಕಣ್ತುಂಬಿಕೊಳ್ಳುವ ಕಾತರದಲ್ಲಿ ಜೋಗಜಲಪಾತಕ್ಕೆ ಬಂದಾಗ ಇಲ್ಲಿನ ಜಲಧಾರಗಳ ನೃತ್ಯ ವೈಭವ, ಜಲಪಟಗಳ ಝೇಂಕಾರ, ಪ್ರಾಕೃತಿಕ ಸೌಂದರ್ಯ ಮನಸ್ಸಿಗೆ ಆಹ್ಲಾದ ನೀಡಿತು. ಆಳವಾದ ಕಣಿವೆ, ಸುಂದರವಾಗಿ ಧುಮ್ಮಿಕ್ಕುವ ಜಲಪಾತ ತುಂತುರು ಹನಿಗಳ ಸಿಂಚನದೊಂದಿಗೆ ಜಲಪಾತದ ಹರ್ಷೊದ್ದಾರಗಳ ವೀಕ್ಷಣೆಗೆ ಪ್ರವಾಸಿಗರ ದಂಡೇ ಜಲಪಾತದತ್ತ ಹರಿದು ಬರುತ್ತದೆ.
ಜೋಗ ಜಲಪಾತದ ಜಲರಾಶಿಯ ಹಾಲ್ನೋರೆಯ ಚಿತ್ತಾರ, ನಿಬ್ಬೆರಗು ಗೊಳಿಸುವ ಮೋಹಕ ನೋಟ ಅನುಪಮ. ಹಸಿರು ಗಿರಿ ಶೃಂಗಗಳ ನಡುವೆ ಬೆಳ್ಳಿರೇಖೆಯಂಥ ಜಲಪಾತ ಮಲೆನಾಡಿನ ಹೆಮ್ಮೆ. ಭಾರತದ ಅತೀ ಎತ್ತರದ ಜಲಪಾತವೆಂದರೆ ವಿಶ್ವವಿಖ್ಯಾತ ಜೋಗ ಜಲಪಾತ. ಎತ್ತರದಿಂದ ನೀರು ಭೋರ್ಗರೆಯತ್ತಾ ಧಾರೆ ಧಾರೆಯಾಗಿ ಧುಮ್ಮಿಕ್ಕುವ ಜಲಪಾತವನ್ನು ನೋಡುವುದೆಂದರೆ ಎಲ್ಲಾ ವಯೋಮಾನದವರಿಗೂ ಕನಸಿನ ಲೋಕದಲ್ಲಿ ವಿಹರಿಸಿದಂತ ವಾಸ್ತವ ಅನುಭವ.
ಹಸಿರು ಕಾನನದಿಂದ ಹರಿದು ಬರುವ ನೀರು ನರ್ತಿಸುತ್ತಾ ಮಳೆ ರಾಯನ ಆಭರ್ಟಕ್ಕೆ ರುದ್ರ ರಮಣೀಯವಾದ ಜೋಗ ಮತ್ತೋಮ್ಮೆ ಮೈತುಂಬಿಕೊಂಡು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಅಕ್ಷರದಲ್ಲಿ ವರ್ಣಿಸಲಾಗದು ನೋಡಿಯೇ ಸವಿಯಬೇಕಾದುದು. ಜೂನ್ ನಿಂದ ಅಕ್ಟೋಬರ್ ವರೆಗೆ ಜೋಗ ಹೊಸತೊಂದು ಆಯಾಮಕ್ಕೆ ತೆರೆದುಕೊಳ್ಳುತ್ತದೆ. ಜಲಧಾರೆಯ ತುಂತುರು ಹಾಡು ಮಳೆಗಾಲ ಬಂತೆಂದರೆ ಪ್ರಕ್ರತಿಗೆ ಹಬ್ಬ. ಶಾಶ್ವತವಾಗಿ ಜೋಗ ಜಲಪಾತ ಮನದಾಳದಲ್ಲಿ ಉಳಿಯಬೇಕು ಅಂದರೆ ಮಳೆಗಾಲದ ವೀಕ್ಷಣೆ ಸರಿ. ಮಾನವನಾಗಿ ಹುಟ್ಟಿದ್ಮೇಲೆ ಏನೇನ್ ಕಂಡಿ ಸಾಯೋತನಕ ಸಂಸಾರದೊಳಗೆ ಗಂಡಾಗುಂಡಿ ಹೇರಿಕೊಂಡು ಹೋಗುದಿಲ್ಲ ಸತ್ತಾಗ್ ಬಂಡಿ ಇರೋದ್ರೋಳಗೆ ಒಮ್ಮೆ ನೋಡು ಜೋಗಾದ್ ಗುಂಡಿ ಎಂಬ ಹಾಡು ಜೋಗದ ನೆನಪು ಅಚ್ಚಳಿಯದೆ ಉಳಿಯುವಂತೆ ಮಾಡಿದೆ. ಇಲ್ಲಿನ ಜಲಧಾರೆ ವೀಕ್ಷಿಸುವುದೇ ರೋಚಕ ಅನುಭವ. ಮನಮೋಹಕ ಪ್ರಕೃತಿ ಸೌಂದರ್ಯಕ್ಕೆ ಮೆರುಗು ಇಟ್ಟಂತಹ
ಬೆಟ್ಟದ ಸಾಲುಗಳನ್ನು ಸೀಳಿಕೊಂಡು ಹಾಲಿನ ನೊರೆ ಸೂಸುತ್ತಾ ಧರೆಗೆ ಅಪ್ಪಳಿಸುತ್ತಿರುವ ಈ ಜಲಪಾತ ತನ್ನ ಅಂದ ಚಂದದಿಂದ ದೂರದಿಂದಲೇ ಪ್ರವಾಸಿಗರನ್ನು ಸೆಳೆಯುತ್ತದೆ.
ಶಿವಮೊಗ್ಗದಿಂದ 106 ಕಿ.ಮೀ ಮತ್ತು ಸಾಗರ ದಿಂದ 25 ಕಿ.ಮೀ ದೂರದಲ್ಲಿರುವ ಜೋಗ ಜಲಪಾತದಲ್ಲಿ ನೀರಿನದ್ದೆ ಸಾಮ್ರಾಜ್ಯ. ಅಪೂರ್ವ ಸೌಂದರ್ಯ, ರಮಣೀಯತೆ, ರೌದ್ರತೆಯನ್ನು ತನ್ನ ಮಡಿಲಲ್ಲಿ ಹುದುಗಿಸಿಕೊಂಡ ಈ ಜಲಪಾತ ನಾಲ್ಕು ಕವಲುಗಳಾಗಿ ಬೀಳುವ ಜಲಧಾರೆಯನ್ನು “ರಾಜ” “ರಾಣಿ’ “ರೋರರ್ “ಹಾಗೂ “ರಾಕೆಟ್ “ಎಂದು ನಾಮಾಂಕಿತಗೊಳಿಸಿದವರು ಬ್ರಿಟಿಷರು. ಇಲ್ಲಿನ ನಾಲ್ಕು ಧಾರೆಯಲ್ಲಿ ಮೊದಲ ಧಾರೆ “ರಾಜ” ಸ್ಥಳೀಯ ಐತಿಹ್ಯವನ್ನು ಆಧರಿಸಿ ಮೊದ ಮೊದಲು ವಿದೇಶಿ ಪ್ರವಾಸಿಗರು ಆ ಧಾರೆಯ ಹಿಂದಿನ ಬಂಡೆಯನ್ನು ಅರಸು ಕಲ್ಲು ಎಂದು ರಾಜ ಠೀವಿಯಿಂದ ಸುರಿವ ಮೊದಲ ಧಾರೆಯನ್ನು ರಾಜ ಎಂದೇ ಕರೆದರು ಮತ್ತು ದಾಖಲಿಸಲಾಯಿತು.
ಜೋಗ ಜಲಪಾತ ಆರ್ಭಟಿಸುವ ಸದ್ದು ಬಹು ದೂರದವರೆಗೂ ಕೇಳುವ ಎರಡು ಬದಿಯ ಕಲ್ಲುಗಳಿಗೆ ಬಡಿದು ಮುನ್ನುಗ್ಗುವ ಧಾರೆ ಕಾರಣವಾದ್ದರಿಂದ ಪ್ರವಾಸಿಗರೇ ಗರ್ಜಿಸುತ್ತಾ ಆರ್ಭಟಿಸುತ್ತಾ ಸಾಗುವ ಧಾರೆಗೆ “ರೋರರ್” ಎಂದು ಹೆಸರಿಸಿದರು. ಇನ್ನೊಂದು ಧಾರೆ ಅತಿ ವೇಗದಲ್ಲಿ ನೀರು ಕೆಳಗೆ ಬಿದಂತೆ ಕಾಣುವುದರಿಂದ ಇದನ್ನು ರಾಕೆಟ್ ಎನ್ನಲು ಪ್ರಾರಂಭಿಸಿದರು. ಜಲಪಾತ ತುಂಬಿ ಹರಿವ ಕಾಲದಲ್ಲಿ ಶ್ವೇತವರ್ಣದಲ್ಲಿ ಧರೆಗಿಳಿವ ದೇವ ವಧುವಿನಂತೆ ಕಂಗೊಳಿಸುವ ಕಾರಣ ಫ್ರೆಂಚ್ ಪ್ರವಾಸಿಯೊಬ್ಬರು ರಾಣಿ ಧಾರೆಯನ್ನು ಶ್ವೇತವಸನದಲ್ಲಿ ಶೃಂಗರಿಸಲ್ಪಟ್ಟ ವಧು ಎಂದು ಕರೆದ ಕಾರಣ ಆ ಧಾರೆಗೆ ರಾಣಿಯೆಂದು ಕರೆಯಲ್ಪಟ್ಟಿತು.
ಜೋಗ ಜಲಪಾತ ನೀರಿನ ಭೋರ್ಗರೆತದ ಸದ್ದು ಪ್ರತಿಧ್ವನಿಸುತ್ತಾ ಕಿವಿಗೆ ಅಪ್ಪಳಿಸುತ್ತದೆ. ತುಂತುರು ಹನಿಯ ಸಿಂಚನದೊಂದಿಗೆ ನೀರಿನ ಅಬ್ಬರ ಗುಡುಗಿನಂತೆ ಭಾಸವಾಗುತ್ತದೆ. ಈ ಜಲಪಾತವನ್ನು ನಿಂತು ನೋಡಲು ಸ್ಥಳ ವಕಾಶವಿದೆ. ಜೋಗದಗುಂಡಿಗೆ ಇಳಿಯಲು ಕಲ್ಲಿನಲ್ಲಿ ಕಟ್ಟಿದ 1400 ಮೆಟಿಲುಗಳ ವ್ಯವಸ್ಥೆ ಚೆನ್ನಾಗಿದೆ. ಬಿರುಗಾಳಿ, ದಟ್ಟ ಮಳೆಗಾಲದಲ್ಲಿ ಇಲ್ಲಿಗೆ ತೆರಳುವಾಗ ಎಚ್ಚರಿಕೆಯ ಅಗತ್ಯವಿದೆ. ಇಲ್ಲಿನ ಸಿಂಬದಿಗಳು ನೀಡುವ ಮಾರ್ಗದರ್ಶನ ಪಾಲಿಸಬೇಕು. ನಾಲ್ಕು ಸ್ಥಳಗಳಿಂದ ವೀಕ್ಷಣೆಗೆ ಅವಕಾಶವಿದ್ದು ಪ್ರತಿಯೊಂದು ಸ್ಥಳದಿಂದಲೂ ವಿಭಿನ್ನ ದ್ರಶ್ಯ ವೈಭವ ನೋಡಬಹುದು. 1916ರಲ್ಲಿ ಸರ್.ಎಂ. ವಿಶ್ವೇಶ್ವರಯ್ಯ ಜೋಗಕ್ಕೆ ಭೇಟಿ ನೀಡಿ ವಿದ್ಯುತ್ ಯೋಜನೆಗೆ ಸಮೀಕ್ಷೆ ನಡೆಸಲು ಆದೇಶಿಸಿದ್ದರಂತೆ. ಜೋಗದಲ್ಲಿ ಸುರಿಯುತ್ತಿದ್ದ ಅಪಾರ ಪ್ರಮಾಣದ ನೀರಿನಿಂದ ವ್ಯರ್ಥವಾಗುತ್ತಿದ್ದ ಶಕ್ತಿಯನ್ನು ಕಂಡು ಮರುಗಿ ಎಷ್ಟೊಂದು ನೀರು ಹಾಳಾಗುತ್ತಿದೆ ಎಂದು ಉದ್ಗರಿಸಿದ್ದು ನಂತರ 1918 ರಲ್ಲಿ ಜೋಗದಲ್ಲಿ ವಿದ್ಯುತ್ ಉತ್ಪಾದನೆ ಕೈಗೊಳ್ಳಲು ಅಗತ್ಯ ಸರ್ವೆ ಮತ್ತು ಸಮೀಕ್ಷೆ ನಡೆಸುವುದಕ್ಕೆ ಆದೇಶ ಪಡೆಯಲು ಪ್ರ ಮುಖ ಪಾತ್ರಧಾರಿಯಾದರು.
ಬ್ರಿಟಿಷ್ ಸರ್ಕಾರ ಜೋಗ ಜಲಪಾತದ ಎತ್ತರವನ್ನು ಅಳೆಯವ ನಿಟ್ಟಿನಲ್ಲಿ ಸಭೆ ಕರೆದು ಅದಕ್ಕಾಗಿ ಕ್ಯಾಪ್ಟನ್ ಗ್ರೇ ಎಂಬ ಸೈನ್ಯ ಅಧಿಕಾರಿ ವಿಲಿಯಂ ನೆರವಿನಿಂದ ಜಲಪಾತದ ಎತ್ತರವನ್ನು ಅಳೆದರು. ಆದರೆ ಸರ್ವೆ ಆರಂಭಿಸಿದ ಪ್ರಥಮ ತಂಡದ ನಾಯಕ ಕ್ರಷ್ಣರಾವ್ ಎಂಬ ಇನ್ನೊಂದು ಮಾಹಿತಿಯು ಇದೆ.
ಜೋಗ ಜಲಪಾತ ಪರಿಸರವನ್ನು ಸಂಪೂರ್ಣ ಪ್ಲಾಸ್ಟಿಕ್ ಮುಕ್ತಗೊಳಿಸಲು ಸೂಚನೆ ಇಲ್ಲಿ ನೀಡಲಾಗಿದೆಯಾದರೂ ಪ್ರವಾಸಿಗರು ಅಲ್ಲಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಎಸೆಯುವುದು ಕಂಡುಬರುತ್ತಿದೆ. ಜೋಗ ಜಲಪಾತ ಅಥವಾ ಸಾಗರಕ್ಕೆ ಕರ್ನಾಟಕದ ಹೆಚ್ಚಿನೆಲ್ಲಾ ಸ್ಥಳಗಳಿಂದ ವಾಹನ ಸೌಕರ್ಯ ಹಾಗೂ ಬಸ್ಸು ಸೌಲಭ್ಯವಿದೆ. ಮಳೆಗಾಲದಲ್ಲಿ ಪ್ರಕ್ರತಿ ಮತ್ತಷ್ಟು ಸೌಂದರ್ಯವನ್ನು ತುಂಬಿಕೊಂಡು ಜೀವ ರಾಶಿಗೆಲ್ಲಾ ಹೊಸತನ ನೀಡುತ್ತಾ ಹರಿವ ಜೋಗ ಜಲಪಾತದ ಸೊಬಗನ್ನು ಕಣ್ತುಂಬಿಕೊಳುವುದೇ ಕಣ್ಣ್ ಮನಗಳಿಗೆ ಸ್ವರ್ಗ. ಮುಂಗಾರು ಪ್ರಾರಂಭವಾಗಿ ಇದೀಗ ಬಹು ದಿನಗಳಿಂದ ಬಿಸಿಲ ಬೇಗೆಗೆ ಬಸವಳಿದ ಜಲಪಾತಗಳು ಪುಟಿದೆದ್ದಿದೆ. ಧುಮ್ಮಿಕ್ಕುವ ಜೋಗ ಜಲಧಾರೆಗೆ ಹೊಸ ರೂಪ ನೀಡಿದೆ. ಮಳೆಯಿಂದ ಪುಳಕಗೊಂಡ ಮಲೆನಾಡು ಮದುವಣಗಿತ್ತಿಯಂತೆ ಕಂಗೊಳಿಸುತಿದೆ. ಪ್ರಕೃತಿಯ ನಿತ್ಯೋತ್ಸವ, ವರ್ಷಧಾರಗೆ ಮ್ಯೆದುಂಬಿದ ಜೊಗ ಜಲಪಾತ ಧುಮ್ಮಿಕ್ಕುವ ದ್ರಶ್ಯಕಾವ್ಯ ಪ್ರವಾಸಿಗರ ನೆಚ್ಚಿನ ತಾಣ.
ಲತಾ ಸಂತೋಷ ಶೆಟ್ಟಿ ಮುದ್ದುಮನೆ