ಡೊಂಬಿವಲಿಯ ತನಿಷ್ಕಾ ಹೋಟೆಲಿನ ಗುರ್ಮೆದ ಬೈಲು ಗಣೇಶ್ ಶೆಟ್ಟಿಯವರು ‘ತನಗೆ ಕೊoಚ ಪರರಿಗೆ ಅಧಿಕ’ ಎಂಬ ಮನೋಭಾವದೊಂದಿಗೆ ಸಮಾಜ ಸೇವೆ ಮಾಡುತ್ತಿರುವವರು. ತಾನು ಗಳಿಸುವುದರಲ್ಲಿ ಅಧಿಕ ಪಾಲನ್ನು ಸಮಾಜಕ್ಕಾಗಿ ವಿನಿಯೋಗಿಸುವುದರಲ್ಲಿ ಅವರಿಗೆ ವಿಶೇಷ ಸಂತೃಪ್ತಿ. ಕಾರ್ಕಳ ತಾಲೂಕು ಕಲ್ಯಾ ಗ್ರಾಮದ ಗುರ್ಮೆದ ಬೈಲು ‘ಲೀಲಾ ಫಾರ್ಮ್ ಹೌಸ್’ನ ಹಿರಿಯಣ್ಣ ಶೆಟ್ಟಿ ಲೀಲಾ ಶೆಟ್ಟಿ ದಂಪತಿಯ ಪುತ್ರನಾಗಿರುವ ಗಣೇಶ್ ಶೆಟ್ಟಿಯವರು ಕಳೆದ ಹಲವಾರು ವರ್ಷಗಳಿಂದ ಕಲ್ಯಾಣ್ ಡೊಂಬಿವಲಿ ಪರಿಸರದಲ್ಲಿ ಹೋಟೆಲ್ ಉದ್ಯಮಿಯಾಗಿ ಗುರುತಿಸಿಕೊಂಡವರು. ಡೊಂಬಿವಲಿಯಲ್ಲಿ ‘ತನಿಷ್ಕಾ ಹೋಟೆಲ್’ ಹೊಂದಿರುವ ಅವರು ‘ತನಿಷ್ಕಾ ಗಣೇಶ್’ ಎಂದೇ ಪರಿಚಿತರು. ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಗಣೇಶ್ ಶೆಟ್ಟಿಯವರಿಗೆ ವಿಶೇಷ ಆಸಕ್ತಿ. ಯಕ್ಷಗಾನ, ನಾಟಕ, ಕ್ರೀಡೆ ಮತ್ತಿತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸದಾ ಪ್ರೋತ್ಸಾಹ ನೀಡುತ್ತಿದ್ದಾರೆ.




ಡೊಂಬಿವಲಿಯಲ್ಲಿ ಅವರದ್ದೇ ಆದ ಕ್ರಿಕೆಟ್ ಮತ್ತು ಕಬಡ್ಡಿ ತಂಡವಿದ್ದು, ಇತ್ತೀಚೆಗೆ ಬಂಟರ ಸಂಘ ಮುಂಬಯಿ ಮಿರಾ ಡಹಾಣು ಪ್ರಾದೇಶಿಕ ಸಮಿತಿ ಏರ್ಪಡಿಸಿದ ಕಬಡ್ಡಿ ಪಂದ್ಯಾಟದಲ್ಲಿ ತನಿಷ್ಕಾ ತಂಡ ಪ್ರಥಮ ಬಹುಮಾನ ಪಡೆದಿದೆ. ಇದಲ್ಲದೇ ಗಣೇಶ್ ಶೆಟ್ಟಿಯವರು ವರ್ಷಪೂರ್ತಿ ಅಲ್ಲಲ್ಲಿ ಕಬಡ್ಡಿ ಮತ್ತು ಕ್ರಿಕೆಟ್ ಟೂರ್ನಮೆಂಟ್ ಗಳನ್ನು ಆಯೋಜಿಸುತ್ತಿದ್ದಾರೆ. ಅನೇಕ ಟೂರ್ನಮೆಂಟ್ ಗಳಲ್ಲಿ ಇವರ ತಂಡ ಟ್ರೋಪಿ ಗೆದ್ದುಕೊಂಡು ಸಾಧನೆ ಮಾಡಿದೆ. ಹುಟ್ಟೂರಿನಲ್ಲಿ ನಡೆಯುವ ಕ್ರೀಡಾ ಟೂರ್ನಮೆಂಟ್ ಗಳಿಗೆ ಟಿ-ಶರ್ಟ್ ಮುಂತಾದ ಕೊಡುಗೆಗಳನ್ನು ನೀಡಿ ಸದಾ ಪ್ರೋತ್ಸಾಹಿಸುತ್ತಾರೆ. ತಾನು ಕಲಿತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಯಾ ಶತಮಾನೋತ್ಸವ ಆಚರಿಸಿಕೊಂಡ ಸಂದರ್ಭದಲ್ಲಿ ಗಣೇಶ್ ಶೆಟ್ಟಿಯವರು ಮಾಡಿದ ಸೇವೆ ಗಮನ ಸೆಳೆದಿತ್ತು. ಶತಮಾನೋತ್ಸವ ಮೆರವಣಿಗೆಯಲ್ಲಿ ಭಾಗವಹಿಸಿದ ಸಾವಿರಾರು ಮಂದಿಗೆ ಅವರು ಉಚಿತವಾಗಿ ಟೀ-ಶರ್ಟ್ ಹಂಚಿದ್ದರು. ಇಷ್ಟು ಮಾತ್ರವಲ್ಲದೇ ಶಾಲೆಗೂ ದೇಣಿಗೆ ಮತ್ತಿತರ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಕಲ್ಯಾದ ಗರಡಿಯ ವಾರ್ಷಿಕ ನೇಮದ ಸಂದರ್ಭದಲ್ಲೂ ನಾಟಕ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾರೆ. 2025 ರ ವಾರ್ಷಿಕ ನೇಮದ ಸಂದರ್ಭದಲ್ಲಿ ‘ಶಿವದೂತೆ ಗುಳಿಗೆ’ ನಾಟಕವನ್ನು ಆಡಿಸಿ ಅಪಾರ ಜನ ಮೆಚ್ಚುಗೆ ಗಳಿಸಿದ್ದರು. ಇಡೀ ಮೈದಾನ ಕಿಕ್ಕಿರಿದು ತುಂಬಿ ಸ್ಥಳವಿಲ್ಲದೆ ಜನ ರಸ್ತೆಯಲ್ಲಿ ನಿಂತುಕೊಂಡೇ ನಾಟಕ ನೋಡಿದ್ದು ಗಣೇಶ್ ಶೆಟ್ಟಿಯವರ ಜನಪ್ರಿಯತೆಗೆ ಸಾಕ್ಷಿ.
ಹೋಟೆಲ್ ತನಿಷ್ಕ್ ದಲ್ಲಿ ಕಳೆದ ಐದು ವರ್ಷಗಳಿಂದ ಗಣೇಶೋತ್ಸವ ಸಂದರ್ಭದಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಭಕ್ತಿ ಭಾವದಿಂದ ಆರಾಧನೆ ಮಾಡುತ್ತಿದ್ದಾರೆ. ಈ 11 ದಿನಗಳಲ್ಲಿ ಮಧ್ಯಾಹ್ನ ಮತ್ತು ರಾತ್ರಿ ಎರಡೂ ಹೊತ್ತು ಅನ್ನದಾನ ಮಾಡುತ್ತಿದ್ದಾರೆ. ಆದರೆ ಗಣೇಶ್ ಶೆಟ್ಟಿಯವರು ಏಕ ವ್ಯಕ್ತಿಯಾಗಿ ‘ತನಿಷ್ಕ್ ದ ರಾಜಾ’ನನ್ನು ಪ್ರತಿಷ್ಠಾಪಿಸಿ ದಿನಾಲೂ ಅನ್ನದಾನ ಮಾಡುತ್ತಿರುವುದು ಗಮನ ಸೆಳೆದಿದೆ. 11 ದಿನಗಳ ಗಣೇಶೋತ್ಸವದ ವಿಸರ್ಜನಾ ಮೆರವಣಿಗೆಗೆ ಮೆರಗು ನೀಡಲು ಕಲಾವಿದರನ್ನು ಊರಿನಿಂದಲೇ ಕರೆಸಿ ಬಹು ವಿಜೃಂಭಣೆಯಿಂದ ‘ತನಿಷ್ಕದ ರಾಜ’ನನ್ನು ವಿಸರ್ಜನೆ ಮಾಡುತ್ತಿರುವ ಮೂಲಕ ಪ್ರಖ್ಯಾತಿ ಹೊಂದಿದ್ದಾರೆ. ಕಲ್ಯಾ ಗುರ್ಮೆದ ಬೈಲು ‘ಲೀಲಾ ಫಾರ್ಮ್ ಹೌಸ್’ ನ ಹಿರಿಯಣ್ಣ ಶೆಟ್ಟಿ ಲೀಲಾ ಶೆಟ್ಟಿ ದಂಪತಿಗೆ ನಾಲ್ವರು ಪುತ್ರರು ಮತ್ತು ಮೂವರು ಪುತ್ರಿಯರು. ವಿಶೇಷವೆಂದರೆ ಈ ಏಳು ಮಂದಿಯೂ ಕಲ್ಯಾಣ್ ನ ಆಸುಪಾಸಿನಲ್ಲೇ ವಾಸಿಸುತ್ತಿದ್ದಾರೆ. ನಾಲ್ವರು ಪುತ್ರರು ‘ರಾಮಾಯಣ’ದ ರಾಮ ಲಕ್ಷ್ಮಣ, ಭರತ ಶತ್ರುಘ್ನರಂತೆ ಅನ್ಯೋನ್ಯವಾಗಿದ್ದುಕೊಂಡು ಸಮಾಜಕ್ಕೆ ಮಾದರಿಯಾಗಿದ್ದಾರೆ. ತಂದೆ ತಾಯಿಯಿಂದ ಬಂದ ಸಂಸ್ಕಾರ ಸಂಸ್ಕೃತಿಯಿಂದ ಹಿರಿಯ ಸಹೋದರ ಸಂತೋಷ್ ಶೆಟ್ಟಿಯವರಂತೆಯೇ ಸಹೋದರರೂ ಕೂಡ ಸಾಮಾಜಿಕ ಕಳಕಳಿ ಹೊಂದಿದ್ದಾರೆ. ಪತ್ನಿ ಸುಪ್ರೀತಾ ಗಣೇಶ್ ಶೆಟ್ಟಿ, ಇಬ್ಬರು ಪುತ್ರರಾದ ಜೀತ್ ಗಣೇಶ್ ಶೆಟ್ಟಿ, ರಿದ್ವಿತ್ ಗಣೇಶ್ ಶೆಟ್ಟಿಯವರೊಂದಿಗಿನ ಸಂತೃಪ್ತ ಸಂಸಾರ ಗಣೇಶ್ ಶೆಟ್ಟಿಯವರದ್ದು.


















































































































