84ರ ಹರೆಯದ ಎ.ಸಿ ಭಂಡಾರಿಯವರು ತುಳು ಭಾಷೆ, ಸಾಹಿತ್ಯ, ರಂಗಭೂಮಿ, ಧಾರ್ಮಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ದೀರ್ಘಕಾಲದಿಂದ ನಿರಂತರವಾಗಿ ಸೇವೆ ಸಲ್ಲಿಸುವ ಮೂಲಕ ಗುರುತಿಸಿಕೊಂಡಿದ್ದಾರೆ. 1942 ಸೆಪ್ಟೆಂಬರ್ 26 ರಂದು ಬಂಟ್ವಾಳ ತಾಲೂಕಿನ ಸಜಿಪ ಮುನ್ನೂರು ಗ್ರಾಮದಲ್ಲಿ ಜನಿಸಿದ ಅಂಬಡೆಬೈಲು ಚಂದ್ರಶೇಖರ ಭಂಡಾರಿ ಅವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಹುಟ್ಟೂರಿನಲ್ಲಿ ಪೂರೈಸಿದರು. ಮಂಗಳೂರಿನಲ್ಲಿ ಟೈಪ್ ರೈಟಿಂಗ್ ಶಿಕ್ಷಣ ಪಡೆದ ಬಳಿಕ 1965ರಲ್ಲಿ ಕದ್ರಿಯಲ್ಲಿ ‘ವಿಜಯಾ ಟೈಪ್ ರೈಟಿಂಗ್ ತರಬೇತಿ ಕೇಂದ್ರ’ವನ್ನು ಆರಂಭಿಸಿದರು. 1968 ರಲ್ಲಿ ಸರಕಾರದ ಮಾನ್ಯತೆ ಪಡೆದ ಈ ಸಂಸ್ಥೆಯ ಪ್ರಿನ್ಸಿಪಾಲರಾಗಿ ಸೇವೆ ಸಲ್ಲಿಸಿದ ಅವರು ಬಂಟ್ವಾಳ ಮತ್ತು ಬೆಳ್ತಂಗಡಿ ಸೇರಿದಂತೆ ವಿವಿಧೆಡೆ ಶಾಖೆಗಳನ್ನು ವಿಸ್ತರಿಸಿದರು. ಮಂಗಳೂರಿನಲ್ಲಿ ಟೈಪ್ ರೈಟಿಂಗ್ ಸಂಸ್ಥೆ ನಡೆಸುತ್ತಿದ್ದ ವೇಳೆ ಖ್ಯಾತ ರಂಗಕರ್ಮಿಗಳ ಒಡನಾಟ ಪಡೆದ ಅವರು, ‘ದಳವಾಯಿ ದುಗ್ಗಣ್ಣ’ (ತುಳು ರಾಜ್ಯ ಅವಸಾನ) ಹಾಗೂ ‘ಕಾಂತೆ’ ನಾಟಕಗಳಲ್ಲಿನ ಹಾಸ್ಯ ಪಾತ್ರಗಳ ಮೂಲಕ ನಾಟಕ ರಂಗದಲ್ಲಿ ಯಶಸ್ಸು ಗಳಿಸಿದರು.
ತುಳು ಭಾಷೆಯ ಪುನರುತ್ಥಾನಕ್ಕಾಗಿ 1969ರಲ್ಲಿ ಮಂಗಳೂರಿನ ಕಂಕನಾಡಿಯ ಎಸ್.ಆರ್ ಹೆಗ್ಡೆ ಅವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡು, ಪ್ರಪ್ರಥಮ ತುಳು ಸಂಘಟನೆಯಾದ “ತುಳುಕೂಟ ಕುಡ್ಲ” ಅಸ್ತಿತ್ವಕ್ಕೆ ಬರಲು ಪ್ರಮುಖ ಕಾರಣರಾದರು. ಅಲ್ಲದೇ, ‘ತುಳುಕೂಟ’ ತಿಂಗಳ ಪತ್ರಿಕೆಯ ಸಂಪಾದಕ ಮಂಡಳಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದರು. 1969 ರಿಂದ ಇದುವರೆಗೆ ನಡೆದ ಪ್ರಮುಖ ತುಳು ಸಮ್ಮೇಳನಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರು, 2009ರಲ್ಲಿ ಉಜಿರೆಯಲ್ಲಿ ನಡೆದ ವಿಶ್ವ ತುಳು ಸಮ್ಮೇಳನದ ಬಂಟ್ವಾಳ ಸಮಿತಿಯ ಸಂಚಾಲಕರಾಗಿ ಪೂರ್ವಭಾವಿ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. 2014 ರಲ್ಲಿ ಅಡ್ಯಾರಿನಲ್ಲಿ ನಡೆದ ‘ವಿಶ್ವ ತುಳುವೆರೆ ಪರ್ಬ’ದ ಪ್ರಮುಖ ಮಾರ್ಗದರ್ಶಕರಾಗಿ ದುಡಿದು, ಸರಕಾರದಿಂದ ಅನುದಾನ ತರುವುದರಲ್ಲಿ ಹಾಗೂ ಉಳಿತಾಯ ಮಾಡಿದ ಹಣದಿಂದ ಕಾವೂರಿನಲ್ಲಿ ಅಖಿಲ ಭಾರತ ತುಳು ಒಕ್ಕೂಟಕ್ಕೆ ಸ್ವಂತ ಕಚೇರಿ ಕಟ್ಟಡ ಖರೀದಿಸಲು ಪ್ರೇರಣೆಯಾದರು. ತುಳುವನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಪ್ರಯತ್ನದ ಭಾಗವಾಗಿ, 2016ರ ಆಗಸ್ಟ್ 31 ರಂದು ದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಗೃಹಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ನಿಯೋಗದಲ್ಲೂ ಇವರು ಸಕ್ರಿಯವಾಗಿ ಪಾಲ್ಗೊಂಡಿದ್ದರು.



1980ರಲ್ಲಿ ಸಜಿಪಮುನ್ನೂರು ಗ್ರಾಮದ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ 27 ವರ್ಷಗಳ ಕಾಲ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅಲ್ಲದೇ ಶ್ರೀ ಮುದೆಲ್ ಮುಟ್ಟಿ ನಾಲ್ಕೈತ್ತಾಯ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ ಕೇವಲ 9 ತಿಂಗಳುಗಳಲ್ಲಿ 1.5 ಕೋಟಿ ರೂಪಾಯಿಗಳಿಗೂ ಅಧಿಕ ವೆಚ್ಚದಲ್ಲಿ ಬ್ರಹ್ಮಕಲಶ ನೆರವೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 1977ರಿಂದ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ಅವರು, 2000ನೇ ಇಸವಿಯಲ್ಲಿ ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ, ರಾಜ್ಯ ಖಾದಿ ಬೋರ್ಡ್ ನಿರ್ದೇಶಕರಾಗಿ ಹಾಗೂ ಕುರ್ನಾಡು ಜಿಲ್ಲಾ ಪಂಚಾಯತ್ ಕ್ಷೇತ್ರದ ಸದಸ್ಯರಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದಾರೆ. ನಿಷ್ಕಲ್ಮಶ ಜನಸೇವೆಗಾಗಿ 1990ರ ಸುಮಾರಿಗೆ ಕರ್ನಾಟಕ ಸರಕಾರದ ದ.ಕ ಜಿಲ್ಲಾ ‘ರಾಜ್ಯೋತ್ಸವ ಪ್ರಶಸ್ತಿ’ಯನ್ನು ಪಡೆದಿರುವ ಎ.ಸಿ ಭಂಡಾರಿಯವರು, ಪ್ರಸ್ತುತ ಬಂಟ್ವಾಳ ತುಳುಕೂಟದ ಗೌರವಾಧ್ಯಕ್ಷರಾಗಿ ಹಾಗೂ ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷರಾಗಿ ಯುವ ಜನತೆಗೆ ದಾರಿದೀಪವಾಗಿದ್ದಾರೆ. 2022ರಲ್ಲಿ ಎ.ಸಿ ಭಂಡಾರಿಯವರಿಗೆ ಬಂಟ್ವಾಳ ಅಭಿಮಾನಿ ಬಳಗದಿಂದ ಅದ್ದೂರಿಯಾಗಿ ಸನ್ಮಾನವೂ ನೆರವೇರಿತ್ತು.


















































































































