ಯಕ್ಷಾಂಗಣ ಮಂಗಳೂರು ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆ, ಮಂಗಳೂರು ವಿ.ವಿ.ಯ ಡಾ| ಪಿ ದಯಾನಂದ ಪೈ ಮತ್ತು ಪಿ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಕರ್ನಾಟಕ ಯಕ್ಷಭಾರತಿ (ರಿ) ಪುತ್ತೂರು ಇವರ ಸಹಯೋಗದಲ್ಲಿ ನಗರದ ವಿವಿ ಕಾಲೇಜು ರವೀಂದ್ರ ಕಲಾಭವನದಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮದ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ -2026’ ಹದಿನಾಲ್ಕನೇ ವರ್ಷದ ನುಡಿಹಬ್ಬ ಚತುರ್ದಶ ಸರಣಿಯ ಎರಡನೇ ದಿನ ಕೀರ್ತಿಶೇಷ ಅರ್ಥಧಾರಿಗಳಾದ ದಿ. ಎ.ಕೆ ನಾರಾಯಣ ಶೆಟ್ಟಿ ಮತ್ತು ಎ.ಕೆ ಮಹಾಬಲ ಶೆಟ್ಟಿ ಫರಂಗಿಪೇಟೆ ಇವರ ನೆನಪಿನ ಕಾರ್ಯಕ್ರಮ ನವೆಂಬರ್ 23 ರಂದು ನಡೆಯಿತು. ಸಂಸ್ಮರಣಾ ಜ್ಯೋತಿ ಬೆಳಗಿ ಮಾತನಾಡಿದ ಮಂಗಳೂರು ಸ್ಟಾರ್ಟ್ ಸಿಟಿಯ ಮಹಾ ಪ್ರಬಂಧಕರಾದ ಅರುಣ ಪ್ರಭ ಕೆ.ಎಸ್ ಅವರು, ಹಿರಿಯ ತಲೆಮಾರಿನಲ್ಲಿ ಆಗಿ ಹೋದ ಕಲಾವಿದರು ಇಂದಿನವರಿಗೆ ಮಾರ್ಗದರ್ಶಕರು. ಅದರಲ್ಲೂ ಯಕ್ಷರಂಗದಲ್ಲಿ ಮೆರೆದು ಕಣ್ಮರೆಯಾದವರು ಕೀರ್ತಿಶೇಷರಾಗಿ ನಮ್ಮ ನೆನಪಲ್ಲಿ ಉಳಿಯುತ್ತಾರೆ. ಅಂತಹ ಹಿರಿಯ ಸಾಧಕರ ಬದುಕು ಸಾರ್ಥಕ ಎಂದರು.




ನೆನಪು ಸಮಿತಿ ಸಂಚಾಲಕರಾದ ಮಹೇಶ್ ಮೋಟರ್ಸ್ ಮಾಲಕ ಎ.ಕೆ ಜಯರಾಮ ಶೇಖ ಅಧ್ಯಕ್ಷತೆ ವಹಿಸಿದ್ದರು. ಸಂಜ್ಯೋತಿ ಶೇಖ ಸಂಸ್ಮರಣಾ ಭಾಷಣ ಮಾಡಿದರು. ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ| ಮಂಜುನಾಥ ಎಸ್ ರೇವಣ್ಕರ್ ಮತ್ತು ಜಿಲ್ಲಾ ಬಸ್ ಮಾಲಕರ ಸಂಘದ ಮಾಜಿ ಅಧ್ಯಕ್ಷ ಜಯಶೀಲ ಅಡ್ಯಂತಾಯ ಮುಖ್ಯ ಅತಿಥಿಗಳಾಗಿದ್ದರು. ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಪ್ರಾರ್ಥಿಸಿ, ಕಾರ್ಯದರ್ಶಿ ಲಕ್ಷ್ಮೀನಾರಾಯಣ ರೈ ಹರೇಕಳ ವಂದಿಸಿದರು. ಪ್ರಧಾನ ಸಂಚಾಲಕ ರವೀಂದ್ರ ರೈ ಕಲ್ಲಿಮಾರು ಕಾರ್ಯಕ್ರಮ ನಿರೂಪಿಸಿದರು. ಪ್ರಮುಖರಾದ ಎಂ ಸುಂದರ ಶೆಟ್ಟಿ ಬೆಟ್ಟಂಪಾಡಿ, ಜಗದೀಶ ಪೂಜಾರಿ ಇರಾ ಆಚೆಬೈಲು, ಸಿದ್ಧಾರ್ಥ ಅಜ್ರಿ ಮತ್ತು ಸುಮಾ ಪ್ರಸಾದ್ ಉಪಸ್ಥಿತರಿದ್ದರು.

ಸಪ್ತಾಹದ ಎರಡನೇಯ ದಿನದ ಕಾರ್ಯಕ್ರಮವಾಗಿ ಕದ್ರಿ ಹವ್ಯಾಸಿ ಬಳಗದ ಶರತ್ ಕುಮಾರ್ ಕದ್ರಿ ಸಂಯೋಜನೆಯಲ್ಲಿ ‘ರಾಜಾ ಸೌದಾಸ’ ಯಕ್ಷಗಾನ ತಾಳಮದ್ದಳೆ ಜರಗಿತು. ದಿವಾಕರ ಆಚಾರ್ಯ ಪೊಳಲಿ ಅವರ ಭಾಗವತಿಕೆ, ಸುದಾಸ್ ಆಚಾರ್ಯ ಕಾವೂರು ಮತ್ತು ರಾಜೇಶ್ ಕುಡ್ಪಾಡಿಯವರ ಹಿಮ್ಮೇಳದಲ್ಲಿ ಜಬ್ಬಾರ್ ಸಮೋ ಸಂಪಾಜೆ, ರವಿ ಅಲೆವೂರಾಯ ವರ್ಕಾಡಿ, ಶಿವಾನಂದ ಪೆರ್ಲಗುರಿ, ಡಾ. ದಿನಕರ ಎಸ್ ಪಚ್ಚನಾಡಿ, ವಿದ್ಯಾಧರ ಶೆಟ್ಟಿ, ಸುನಿಲ್ ಪಲ್ಲಮಜಲು ಅರ್ಥಧಾರಿಗಳಾಗಿ ಭಾಗವಹಿಸಿದ್ದರು.


















































































































