ಕುಂದಾಪುರ ತಾಲೂಕು ಯುವ ಬಂಟರ ಸಂಘದ ಆಶ್ರಯದಲ್ಲಿ ನಗರದ ಗಾಂಧಿ ಮೈದಾನದಲ್ಲಿ ಫೆಬ್ರವರಿ 14, 2027ರ ಆದಿತ್ಯವಾರ ನಡೆಯಲಿರುವ ರಾಜ್ಯಮಟ್ಟದ ಬಂಟರ ಕ್ರೀಡೋತ್ಸವದ ಪೋಸ್ಟರ್ ಅನಾವರಣ ಸಮಾರಂಭ ಕುಂದಾಪುರದ ಬಂಟರ ಯಾನೆ ನಾಡವರ ಸಂಕೀರ್ಣದಲ್ಲಿ ನಡೆಯಿತು. ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ದುಬೈ ಇದರ ಸಿಎಂಡಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರು ಪೋಸ್ಟರ್ ಅನಾವರಣಗೊಳಿಸಿ ಮಾತನಾಡಿ, ಇಂದಿನ ಜೆನ್ ಜಿ ಪೀಳಿಗೆಯ ಮಕ್ಕಳಲ್ಲಿ ಬೌದ್ಧಿಕ ಸಾಮರ್ಥ್ಯ ಉತ್ತಮವಾಗಿದ್ದರೂ, ಅವರ ದೈಹಿಕ ಕ್ಷಮತೆ ಮತ್ತು ಆರೋಗ್ಯದ ಬಗ್ಗೆಯೂ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ. ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಕ್ರೀಡೆ ಮಹತ್ವದ ಪಾತ್ರ ವಹಿಸುತ್ತದೆ. ಆದ್ದರಿಂದ ಬಾಲ್ಯದಿಂದಲೇ ಮಕ್ಕಳಲ್ಲಿ ಕ್ರೀಡೆಯ ಬಗ್ಗೆ ಆಸಕ್ತಿ ಮೂಡಿಸಿ, ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸುವುದು ಅಗತ್ಯವಾಗಿದೆ ಎಂದರು. ಅಲ್ಲದೇ, ಈ ಕ್ರೀಡೋತ್ಸವವು ಬಂಟ ಸಮುದಾಯದ ವಿವಿಧ ವಿಭಾಗಗಳ ನಡುವೆ ಸೌಹಾರ್ದ, ಒಗ್ಗಟ್ಟು ಮತ್ತು ಪರಸ್ಪರ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ವೇದಿಕೆಯಾಗಲಿ ಎಂದು ಆಶಿಸಿದರು.






ಕುಂದಾಪುರ ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಡಾ| ಚೇತನ್ ಶೆಟ್ಟಿ ಕೋವಾಡಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ವಕ್ವಾಡಿ ಪ್ರಮೋದ್ ಶೆಟ್ಟಿ, ಸಂಘದ ಕಾರ್ಯದರ್ಶಿ ಪ್ರವೀಣ್ ಕುಮಾರ್ ಶೆಟ್ಟಿ ಹರ್ಕೂರು, ಕ್ರೀಡೋತ್ಸವದ ಸಂಚಾಲಕ ಚಂದ್ರಶೇಖರ್ ಶೆಟ್ಟಿ ಯಳೂರು ಹಕ್ಲಾಡಿ, ಸಹ ಸಂಚಾಲಕ ಸತೀಶ್ ಶೆಟ್ಟಿ ಉಳ್ತೂರು, ಮಾಜಿ ಅಧ್ಯಕ್ಷರಾದ ಸುನಿಲ್ ಕುಮಾರ್ ಶೆಟ್ಟಿ ಹೇರಿಕುದ್ರು, ನಿತೇಶ್ ಶೆಟ್ಟಿ ಬಸ್ರೂರು, ಉಪಾಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಹೈಕಾಡಿ, ರವಿಶಂಕರ್ ಹೆಗ್ಡೆ ದಬ್ಬಾಡಿ, ಸುಕುಮಾರ್ ಶೆಟ್ಟಿ ಹೇರಿಕುದ್ರು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಸಂಘದ ಸ್ಥಾಪಕಾಧ್ಯಕ್ಷ ಡಾ| ಅಂಪಾರು ನಿತ್ಯಾನಂದ ಶೆಟ್ಟಿ ಪ್ರಸ್ತಾವಿಸಿದರು. ಮಾಜಿ ಅಧ್ಯಕ್ಷ ಸುಕೇಶ್ ಶೆಟ್ಟಿ ಹೊಸಮಠ ಸ್ವಾಗತಿಸಿ, ಕೋಶಾಧಿಕಾರಿ ಅರುಣ್ ಕುಮಾರ್ ಶೆಟ್ಟಿ ಕುಂದಾಪುರ ವಂದಿಸಿ, ಉಪಾಧ್ಯಕ್ಷ ಸತೀಶ್ ಶೆಟ್ಟಿ ಹೆಸ್ಕತ್ತೂರು ಕಾರ್ಯಕ್ರಮ ನಿರೂಪಿಸಿದರು.


















































































































