ಇಂಗ್ಲೀಷ್ ಭಾಷೆ ಅರ್ಥೈಸಿಕೊಳ್ಳುವ ಕ್ಷಮತೆಯು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಸಹಕಾರಿಯಾಗಿದ್ದು, ಆತ್ಮವಿಶ್ವಾಸ ಮೂಡಿಸಲು ಸಹಾಯಕ ಎಂದು ಮಂಗಳೂರು ಮೂಲದ ಕೋಡ್ ಕ್ರಾಪ್ಟ್ ಟೆಕ್ನಾಲಜೀಸ್ ಸಂಸ್ಥೆಯ ಕಾರ್ಯನಿರ್ವಾಹಕ ಮುಖ್ಯಸ್ಥ ಜೊಬಿನ್ ಜೋಸೆಫ್ ಪಿ.ಜೆ ಹೇಳಿದರು. ಮಣಿಪುರ ಕುಂತಳನಗರ ಭಾರತಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗಾಗಿ ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಆಕಾಂಕ್ಷಾ ಚಾರಿಟೇಬಲ್ ಟ್ರಸ್ಟ್ ಪುತ್ತೂರು ಸಹಭಾಗಿತ್ವದಲ್ಲಿ ಕೋಡ್ ಕ್ರಾಫ್ಟ್ ಟೆಕ್ನಾಲಜೀಸ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಆಯೋಜಿಸಲಾದ ಸ್ಪೋಕನ್ ಇಂಗ್ಲೀಷ್ ತರಗತಿಯನ್ನು ಬಂಟರ ಸಂಘದ ಸ್ಕಿಲ್ ಡೆವಲಪ್ ಮೆಂಟ್ ಸೆಂಟರ್ ನಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.




ಅಧ್ಯಕ್ಷತೆ ವಹಿಸಿದ್ದ ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಮಾತನಾಡಿ, ಕನ್ನಡದ ವಿದ್ಯಾರ್ಥಿಗಳು ಇಂಗ್ಲಿಷ್ ಜ್ಞಾನದ ಕೊರತೆಯಿಂದ ಹಿಂದುಳಿಯಬಾರದು ಎಂಬ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮುಂದೆ ನಿಂಜೂರು ಹಾಗೂ ಮರ್ಣೆ ಗ್ರಾಮದ ಶಾಲೆಗಳಲ್ಲೂ ತರಗತಿ ಆರಂಭಿಸಲಾಗುವುದು ಎಂದರು. ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಶ್ರೀಶ ಭಟ್ ಮಾತನಾಡಿ, ನಮ್ಮ ಸಂಸ್ಥೆ ಕಳೆದ ಮೂರು ವರ್ಷಗಳಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲೀಷ್ ತರಗತಿ ನಡೆಸುತ್ತಾ ಬಂದಿದೆ ಎಂದರು.

ಕುಂತಳನಗರ ಭಾರತಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಟೀಚರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಆಶಾ ಶೇಖರ್, ಉಪಾಧ್ಯಕ್ಷ ಅಶೋಕ್ ಪೂಜಾರಿ, ಗ್ರಾಮೀಣ ಬಂಟರ ಸಂಘದ ಚಾರಿಟೆಬಲ್ ಟ್ರಸ್ಟ್ ನ ಪ್ರೋಗ್ರಾಂ ಕೋ ಆರ್ಡಿನೇಟರ್ ಪದ್ಮನಾಭ ಹೆಗ್ಡೆ, ಟ್ರಸ್ಟಿಗಳಾದ ಹರೀಂದ್ರನಾಥ್ ಹೆಗ್ಡೆ, ದಯಾನಂದ ಶೆಟ್ಟಿ ಕಲ್ಮಂಜೆ, ಸಂಘದ ಸಭಾಭವನದ ವ್ಯವಸ್ಥಾಪಕ ದಯಾನಂದ ಶೆಟ್ಟಿ ಉಪಸ್ಥಿತರಿದ್ದರು. ಆಕಾಂಕ್ಷಾ ಚಾರಿಟೇಬಲ್ ಟ್ರಸ್ಟ್ ನ ಹೇಮಂತ್ ನಿರೂಪಿಸಿದರು. ಸ್ಪೋಕನ್ ಇಂಗ್ಲೀಷ್ ತರಗತಿಯ ಶಿಕ್ಷಕಿ ರೀಮಾ ವಂದಿಸಿದರು.


















































































































