ಶ್ರೀ ಮಂದಾರ್ತಿ ಕ್ಷೇತ್ರದ ಯಕ್ಷಗಾನ ಮೇಳವೊಂದು ಮೊದಲ್ಗೊಂಡು ಅಂದಿನಿಂದ ಇಂದಿನವರೆಗೂ ಕೇವಲ ಭಕ್ತಾದಿಗಳ ಹರಕೆ ಸೇವೆಗೆ ಮಾತ್ರ ಮೀಸಲಿದ್ದು,ಕಾಲಾನುಕಾಲಕ್ಕೆ ಶ್ರೀ ದೇವಳದ ಮೇಳಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿ, ಪ್ರಸ್ತುತ ಐದು ಯಕ್ಷಗಾನ ಮೇಳಗಳನ್ನು ಹೊಂದಿದ್ದೂ ವರ್ಷಕ್ಕೆ ಸುಮಾರು 900 ಆಟಗಳನ್ನು ಆಡಿಯೂ 2042 – 43 ರ ಸಾಲಿನವರೆಗೆ ಹರಕೆ ಯಕ್ಷಗಾನ ಬಯಲಾಟ ಬುಕ್ಕಿಂಗ್ ಇರುವ ಏಕಮಾತ್ರ (ಬಹುಶಃ) ಮೇಳ ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮೇಳ,
ಶ್ರೀ ಕ್ಷೇತ್ರ ಮಂದಾರ್ತಿ ಎಂದರೆ ತಪ್ಪಾಗಲಾರದು.
ಹೀಗೊಂದು ಸೇವಾ ಮನೋಭಾವನೆಯನ್ನು ತಮ್ಮದಾಗಿಸಿಕೊಂಡು ತಲೆಮಾರುಗಳಿಂದ ಚಾಚೂ ತಪ್ಪದೆ ಮುನ್ನಡೆಸಿಕೊಂಡು ಬರುತ್ತಿರುವ ಮೊಕ್ತೇಸರ ಕುಟುಂಬದ ಹೆಸರು ಹೆಗ್ಗುಂಜೆ ನಾಲ್ಕು ಮನೆಯವರು. ಹಾಗೆಯೇ ಕುಟುಂಬದ ಹಿರಿಯರಿಂದ ಕಿರಿಯರಿಗೆ, ಮುಂದಿನ ತಲೆಮಾರಿಗೆ ವರ್ಗಾವಣೆಗೊಳ್ಳುತ್ತಾ ಬಂದು ಹೊಣೆಗಾರಿಕೆಯ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾಗಿ ಹೆಗ್ಗುಂಜೆ ಚಾವಡಿಮನೆ ಮಂದಾರ್ತಿ ಶ್ರೀ ಧನಂಜಯ ಶೆಟ್ಟಿ ಅವರು ಸೇವೆಯ ನೊಗಕ್ಕೆ ಹೆಗಲಾಗಿ ಮುನ್ನಡೆಸುತ್ತಿದ್ದಾರೆ. ಇವರು ಶ್ರೀ ದೇವಳದ ಮೊಕ್ತೇಸರರಾಗಿ ಅನುಪಮ ಅಧ್ಯಾಯಗಳನ್ನೇ ದಾಖಲೆಯಾಗಿಸಿ ಇತಿಹಾಸ ನಿರ್ಮಿಸಿದ್ದಾರೆ ನಿರ್ಮಿಸುತ್ತಿದ್ದಾರೆ. ಮೂರು ದಶಕಗಳಿಂದ ಚಾಲ್ತಿಯಲ್ಲಿರುವ ಶ್ರೀಯುತರ ಧಾರ್ಮಿಕ ಸೇವೆ – ದೇವತಾ ಸೇವಾ ಸಮರ್ಪಣತೆ, ಹೆಗ್ಗಳಿಕೆಗಳ ನಿದರ್ಶನ ಸುಯೋಗವಾಗಿ ಭಕ್ತಾಭಿಮಾನಿಗಳ ಅಂತರಂಗದ ಸುವರ್ಣ ಪುಟಗಳೇ ಆಗಿ ದಾಖಲಾಗಿವೆ.
ಹೆಗ್ಗುಂಜೆ ಚಾವಡಿಮನೆ ಭವಾನಿ ಶೆಡ್ತಿ ಮತ್ತು ಚಾರ ದೊಡ್ಡಮನೆ ಬಾಲಕೃಷ್ಣ ಶೆಟ್ಟಿಯವರ ಸುಪುತ್ರರಾಗಿ ಜನಿಸಿ 01 ಏಪ್ರಿಲ್ 1992 ರಲ್ಲಿ ಆಡಳಿತದ ನೇತಾರಿಕೆ ವಹಿಸಿಕೊಂಡ ಧನಂಜಯ ಶೆಟ್ಟಿ ಅವರಿಗೆ ಸಹ ಮೊಕ್ತೇಸರರಾಗಿ ಜೊತೆಯಾದವರು ಹೆಗ್ಗುಂಜೆ ಪಟೇಲರ ಮನೆ (ದಿ|) ರಾಜೀವ ಶೆಟ್ಟಿ ಮತ್ತು ಹೆಗ್ಗುಂಜೆ ಬಡಾಮನೆ ಸುರೇಂದ್ರ ಶೆಟ್ಟಿ ಹಿಲಿಯಾಣ ಅವರು. ಈ ಮೂವರ ನಂಟು 2000 ನೇ ಸಾಲಿನವರೆಗೂ ಸಾಗಿ ದೇವಳದ ಇತಿಹಾಸದಲ್ಲೇ ಅತ್ಯುತ್ಕೃಷ್ಟ ಪುಟಗಳನ್ನು ತೆರೆದು ಬರೆದು ಅಚ್ಚಳಿಯದೇ ರಾರಾಜಿಸಿದೆ.
ಮಂದಾರ್ತಿ ಧನಂಜಯ ಶೆಟ್ಟಿ ಅವರ ಹೊಣೆಗಾರಿಕೆ ಕಳೆಗಟ್ಟಿದ್ದು, ವಿದ್ಯುಕ್ತ ಆರಂಭವನ್ನು ಕಂಡುಕೊಂಡಿದ್ದು 1993 ರ ನಾಗಮಂಡಲೋತ್ಸವದ ಮುಖೇನ. ತದನಂತರ ಗಮನ ಹರಿಸಿದ್ದು ಶ್ರೀ ಕ್ಷೇತ್ರದ ಮೂಲ ಸೌಕರ್ಯಗಳ ಕಡೆಗೆ, ತತ್ಸಂಬಂಧದ ಅಭಿವೃದ್ಧಿ ಕಾಮಗಾರಿಗಳ ಕಡೆಗೆ. ಯಾಗಶಾಲೆ, ದೇವಳದ ಆಡಳಿತ ಕಛೇರಿ, ಸೇವಾ ರಶೀದಿ ಕೌಂಟರ್, ಪ್ರಸಾದ ವಿತರಣಾ ಕೌಂಟರ್, ಭೋಜನ ಶಾಲೆ, ಪಾಕ ಶಾಲೆ, ಪುಷ್ಕರಣಿ, ಭಕ್ತಾಭಿಮಾನಿಗಳಿಗೆ ಶೌಚಾಲಯ ಸೌಲಭ್ಯ, ಏಕ ಕಾಲದಲ್ಲಿ ಸಾಕಷ್ಟು ಜನ ಭಕ್ತರು ತಂಗಬಹುದಾದ 20 ರೂಮ್ ಗಳ ಲಾಡ್ಜಿಂಗ್ ವ್ಯವಸ್ಥೆ ಹೀಗೆ ಪುಟ ಪುಟವೂ ಸೇವಾ ಸಮರ್ಪಣತೆಗಳನ್ನೇ ಮೆರೆದಿವೆ.
1997 ರಲ್ಲಿ ಶ್ರೀ ದೇವಳದ ವತಿಯಿಂದ ದಿನನಿತ್ಯ ಸಾರ್ವಜನಿಕ ಅನ್ನಸಂತರ್ಪಣೆ – ಮಹಾಪ್ರಸಾದ ವಿತರಣೆಯನ್ನು ಆರಂಭಿಸಲಾಯಿತು.
ಶ್ರೀ ದುರ್ಗಾಪರಮೇಶ್ವರೀ ದೇವಿಯ ಗರ್ಭಗುಡಿಯ ತಾಮ್ರದ ಶೀಟುಗಳ ಹೊದಿಕೆಗೆ ಕಳೆ ಹೊಂದಿಸಿದ್ದು, ನೂತನವಾದ ಭದ್ರವಾದ ಮೇಲ್ಛಾವಣಿ, ನೆಲದ ಹಾಸು, ಶ್ರೀ ವೀರಭದ್ರ ದೇವರು, ಶ್ರೀ ಚಾಮುಂಡೇಶ್ವರೀ, ಶ್ರೀ ಆದಿಸುಬ್ರಹ್ಮಣ್ಯ, ಶ್ರೀ ಕಲ್ಲುಕುಟಿಗ, ಶ್ರೀ ನಂದಿಕೇಶ್ವರ, ಶ್ರೀ ಹಾಯ್ಗುಳಿ, ಶ್ರೀ ಹುಲಿ ದೇವರು, ಶ್ರೀ ಬೊಬ್ಬರ್ಯ, ಶ್ರೀ ಕ್ಷೇತ್ರಪಾಲ ಗುಡಿ – ಸಾನಿಧ್ಯಗಳು, ಶ್ರೀ ಕ್ಷೇತ್ರದ ಜಾತ್ರೆ – ಉತ್ಸವಗಳು, 2016 ರ ಅಷ್ಟಬಂಧ ಬ್ರಹ್ಮಕಲಶ, ದೇವಿಯ ಸೇವೆಗೆ ಎಲ್ಲೆಯೂ ಇಲ್ಲ, ಮಿತಿಯೂ ಇಲ್ಲ. ದೇವಳದ ಸಮೀಪದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸುವಲ್ಲಿಯೂ ಶ್ರೀಯುತರ ಪ್ರಯತ್ನ ನಿರ್ಣಾಯಕವೂ ಆಗಿತ್ತು ಮತ್ತು ಫಲಪ್ರದವೂ ಆಗಿತ್ತು.
ಶ್ರೀ ದೇವಳದ ವತಿಯಿಂದ 2004 ರಿಂದ ನಿರಂತರವಾಗಿ ಸಾಮೂಹಿಕ ವಿವಾಹ ಮಹೋತ್ಸವವನ್ನು ಏರ್ಪಡಿಸಿಕೊಂಡು, ನೆರವೇರಿಸಿಕೊಂಡು ಬರಲಾಗುತ್ತಿದೆ. ಈ ಸತ್ಕಾರ್ಯದಲ್ಲಿ ಭಾಗಿಯಾದ ಜೋಡಿಗಳಿಗೆ 2008 ರಿಂದ ಸರ್ಕಾರದ ಪ್ರೋತ್ಸಾಹ ಧನ ಕೂಡಾ ಜತೆಯಾಗಿ ಸಲ್ಲುತ್ತಿದೆ. ಶ್ರೀ ದೇವಳದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ 55 ಜೋಡಿ ಒಮ್ಮೆಗೇ ಭಾಗವಹಿಸಿದ್ದು ಈ ವರೆಗಿನ ದಾಖಲೆಯಾಗಿದೆ. ಹೀಗೆ ಸಾಮೂಹಿಕ ವಿವಾಹ ಸಂಭ್ರಮದಲ್ಲಿ ಇಷ್ಟರ ವರೆಗೆ ಒಟ್ಟು 610 ಜೋಡಿಗಳು ಶ್ರೀ ಕ್ಷೇತ್ರದಲ್ಲಿ ದಾಂಪತ್ಯ ಜೀವನದ ಸಪ್ತಪದಿ ತುಳಿದು ಸುಖ – ಸಂತೋಷ – ನೆಮ್ಮದಿಯ ಒಲವಿನ ಗೀತೆ ಹಾಡುತ್ತಿದ್ದಾರೆ.
ಆರಂಭದಲ್ಲಿ ಶ್ರೀ ಕ್ಷೇತ್ರದ ಯಕ್ಷಗಾನ ಮೇಳವನ್ನು ವರ್ಷಂಪ್ರತಿ ಟೆಂಡರ್ ಮೇಲೆ ವಹಿಸಿ ಕೊಡಲಾಗುತ್ತಿತ್ತು. 1987 ರಲ್ಲಿ ಶ್ರೀ ಕ್ಷೇತ್ರದ ಯಕ್ಷಗಾನ ಮೇಳವನ್ನು ದೇವಳದ ವತಿಯಿಂದ ಮುನ್ನಡೆಸುವ ತೀರ್ಮಾನಕ್ಕೆ, ಬದ್ಧತೆಗೆ ಒಪ್ಪಿಗೆಯ ಮುದ್ರೆ ಒತ್ತಲಾಯಿತು.
1992 ರ ವರೆಗೂ ಸಂಖ್ಯೆಯಲ್ಲಿ ಒಂದು ಯಕ್ಷಗಾನ ಮೇಳ ಮಾತ್ರ ಹೊಂದಿದ್ದ ‘ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮೇಳ, ಶ್ರೀ ಕ್ಷೇತ್ರ ಮಂದಾರ್ತಿ’ 1993 ರಲ್ಲಿ ಎರಡು, 2001 ರಲ್ಲಿ ಮೂರು, 2003 ರಲ್ಲಿ ನಾಲ್ಕು, 2010 ರಲ್ಲಿ ಐದು ಯಕ್ಷಗಾನ ಮೇಳಗಳನ್ನು ಕಟ್ಟಿಕೊಂಡು ಶ್ರೀ ಕ್ಷೇತ್ರದ ಭಕ್ತಾಭಿಮಾನಿಗಳ ಹರಕೆ ಯಕ್ಷಗಾನ ಬಯಲಾಟ ಸೇವೆಗೆ ಮುಡಿಪಾಗಿದೆ. ಇಂತಹ ಸುವರ್ಣ ಅಧ್ಯಾಯಗಳನ್ನು ಬರೆದ ಮುತ್ಸದ್ದಿಯ ಹೆಸರು ನಮ್ಮ ನಿಮ್ಮೆಲ್ಲರ ಪ್ರೀತಿಯ ಮಂದಾರ್ತಿ ಧನಂಜಯ ಶೆಟ್ಟಿ.
ಯಕ್ಷಗಾನ ಮೇಳಗಳನ್ನು ಕಟ್ಟುವುದು, ಮುನ್ನಡೆಸುವುದು, ಕಲಾವಿದರನ್ನು ಒಗ್ಗೂಡಿಸುವುದು ಮತ್ತು ಅವರ ಒಗ್ಗಟ್ಟನ್ನು ಕಾಪಾಡಿಕೊಂಡು ಪ್ರಸಂಗಕ್ಕೆ ಅಪಚಾರ ಆಗದ ಹಾಗೆ ಸೇವಾಕರ್ತೃಗಳ ನಿರೀಕ್ಷೆಗಳನ್ನು ಪೊರೆಯುವುದು, ದಶಾವತಾರಿಗಳಾಗಿರುವ ಕಲಾವಿದರನ್ನು ಅವರ ವ್ಯಕ್ತಿತ್ವಕ್ಕೆ ಕುಂದುಂಟಾಗದಂತೆ ಜತೆಯಾಗಿ ತೊಡಗಿಸಿಕೊಳ್ಳುವ ಮತ್ತು ಆಟ ಆಡಿಸಿದ – ಆಡಿಸುವ ಮನೆ ಮನೆಯ – ಮನೆ ಪರಿಸರದ ಸ್ವಾಸ್ಥ್ಯವನ್ನು ಸಡಗರಿಸುವ ಸವಾಲಿಗೆ ಎಡೆಯೊಡ್ಡುವುದು ಅಂದರೆ ಸುಮ್ಮನೆ ಸಣ್ಣ ಮಾತಲ್ಲ. ಬಹಳ ದೊಡ್ಡ ಬದ್ಧತೆ, ಕಾರ್ಯದಕ್ಷತೆ, ಕಾರ್ಯಕ್ಷಮತೆ, ಜಾಗ್ರತೆ, ಎಚ್ಚರಿಕೆ, ನಿಗಾ, ಮುಂದಾಲೋಚನೆ, ದೂರದೃಷ್ಟಿಗಳ ಮಹಾ ಸಂಗಮವದು.
ಶ್ರೀ ಕ್ಷೇತ್ರ ಮಂದಾರ್ತಿಯ ಒಂದೊಂದು ಮೇಳದಲ್ಲೂ ಕಲಾವಿದರು ಮತ್ತು ಸಹಾಯಕರು ಸೇರಿ ಕನಿಷ್ಟ ಅಂದರೂ 45 ಮಂದಿ ಇದ್ದಾರೆ. ಒಟ್ಟು ಐದು ಮೇಳಗಳಲ್ಲಿ ಒಟ್ಟಾರೆಯಾಗಿ 225 ಮಂದಿ ಯಕ್ಷಗಾನ ಸೇವೆ ನಿರ್ವಹಿಸುತ್ತಿದ್ದು, ಒಂದು ದೊಡ್ಡ ಯಕ್ಷ ಸಂಪುಟವೇ ಇಲ್ಲಿ ಸೇವೆಗೈಯ್ಯುತ್ತಿದೆ. ತನ್ಮೂಲಕ ಯಕ್ಷಗಾನ ಸೇವೆಯ ಮುಖೇನ ಇನ್ನೂರು ಕುಟುಂಬಗಳನ್ನು ಪೊರೆಯುತ್ತಿರುವ ಹೆಚ್ಚುಗಾರಿಕೆ ಶ್ರೀ ಕ್ಷೇತ್ರ ಮಂದಾರ್ತಿಯದ್ದು.
ನಾಳೆಗಳ ಬಗ್ಗೆ ಖಾತ್ರಿ ಇಲ್ಲದ ಜೀವನ ಯಾನದಲ್ಲಿ ಸೇವೆಯಲ್ಲಿರುವ ಮೇಳದ ಕಲಾವಿದರು ಅವಘಡದಲ್ಲಿ ಬದುಕು ಮುಗಿಸಿದರೆ ಶ್ರೀ ದೇವಳದ ವತಿಯಿಂದ ಅವರ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಆರ್ಥಿಕ ಸಹಕಾರ ನೀಡಲಾಗುತ್ತಿದೆ. ಶ್ರೀ ದೇವಳದ ಆಡಳಿತ ಕಛೇರಿಯಲ್ಲಿ ಐವತ್ತಕ್ಕೂ ಮಿಕ್ಕಿ ಸೇವಾ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಶ್ರೀ ದೇವಳದ ವತಿಯಿಂದ ಪ್ರೌಢಶಾಲೆಯನ್ನು ನಿರ್ವಹಿಸಲಾಗುತ್ತಿದ್ದು, 2000 ನೇ ಸಾಲಿನಲ್ಲಿ ಪದವಿಪೂರ್ವ ಕಾಲೇಜನ್ನು ಕೂಡಾ ತೆರೆಯಲಾಗಿದೆ. ಪದವಿಪೂರ್ವ ಕಾಲೇಜಿನಲ್ಲಿ 700 – 800 ವಿದ್ಯಾರ್ಥಿಗಳು ವ್ಯಾಸಂಗ ನಡೆಸುತ್ತಿದ್ದಾರೆ. ಬಡವರಿಗೆ, ನೊಂದವರಿಗೆ ಹೊರೆಯಾಗದ ಮೊತ್ತದಲ್ಲೇ ಕಾಲೇಜಿನ ಶುಲ್ಕದ ಮೊಬಲಗು ನಿಗದಿಪಡಿಸಲಾಗಿದೆ. ವಿದ್ಯಾರ್ಥಿಯ ಕುಟುಂಬದ ಆರ್ಥಿಕ ಮಟ್ಟದ ಅನಿವಾರ್ಯತೆಗಳನ್ನು ಮನಗಂಡು ಅಗತ್ಯ ರಿಯಾಯಿತಿಗಳನ್ನು ಕೂಡಾ ಶುಲ್ಕದಲ್ಲಿ ನೀಡಲಾಗುತ್ತಿದೆ.
ಶಾಲೆ – ಕಾಲೇಜುಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಬೋಧಕ, ಬೋಧಕೇತರ ಸಿಬ್ಬಂದಿಗಳು ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದು ತಮ್ಮ ಪ್ರತಿಭೆಯ ಮುಖೇನ ವಿದ್ಯಾರ್ಥಿಗಳ ಬಾಳಿಗೆ ಬಣ್ಣ ತುಂಬುತ್ತಿದ್ದಾರೆ. ಪರಿಸರದ ಜನರ ಕಷ್ಟ – ಸುಖಗಳಿಗೆ ಸ್ಪಂದಿಸಿಕೊಂಡು ಜನಾನುರಾಗಿಯಾಗಿ ಗುಣಾನುರಾಗಿಯಾದ ಕರುಣಾಳು, ಅನುಭವದ – ಅನುಭಾವದ ವ್ಯಕ್ತಿತ್ವವನ್ನು ದೇವತಾ ಸೇವೆಗೆ, ಶ್ರೀ ದೇವಿಯ ಸೇವೆಗಳಿಗೆ ಮುಡಿಪಾಗಿಟ್ಟಿರುವ, ಭಕ್ತಿಲೋಕದ ಪರಮಾಳು, ದಕ್ಷತೆ, ಸಮರ್ಪಣತೆ, ಕ್ಷಮತೆ, ಪರಿಶ್ರಮ, ಚೇತೋಹಾರಿತನವನ್ನೇ ನೆಚ್ಚಿಕೊಂಡಿರುವ ಹಿರಿಯಾಳು, ಇಂತಹ ಹಿರಿಯರ ಲವಲವಿಕೆಗೆ, ಚುರುಕುತನಕ್ಕೆ ನಾನೀಗಲೂ ಬೆರಗಿನ ಆಳು ಎಂದು ನಂಬಿರುವ ಶ್ರೀ ಧನಂಜಯ ಶೆಟ್ಟಿ ಅವರ ಚುಕ್ಕಾಣಿ ಶ್ರೀ ಕ್ಷೇತ್ರದಲ್ಲಿ ಅದ್ವಿತೀಯ ಸೇವಾ ಪರ್ವವನ್ನೇ, ಸೇವಾ ಪರ್ವಗಳನ್ನೇ ಉಸಿರಾಗಿಸಿಕೊಂಡಿದೆ.
ಮಂದಾರ್ತಿ ಧನಂಜಯ ಶೆಟ್ಟಿ ಅವರ ಬಗ್ಗೆ ಒಂದು ಮಾತಿದೆ, ನಿಮಗೆ ಧನಂಜಯ ಶೆಟ್ಟಿ ಅವರನ್ನು ದ್ವೇಷಿಸುವವರು ಸಿಗಬಹುದು, ಆದರೆ ಅವರು ದ್ವೇಷಿಸುವ ವ್ಯಕ್ತಿ ಸಿಗಲಿಕ್ಕಿಲ್ಲ. ಯಾರ ಯಾವ ವ್ಯಕ್ತಿಯ ಬಗೆಗೂ, ವ್ಯಕ್ತಿತ್ವದ ಬಗೆಗೂ ದ್ವೇಷಭಾವವನ್ನೇ ಹೊಂದಿರದ ತೀರಾ ಅಪರೂಪದ ಸಜ್ಜನಿಕೆ, ಸ್ವಭಾವಶ್ರೇಷ್ಠತೆ ಧನಂಜಯ ಶೆಟ್ಟಿ ಅವರದ್ದು.
ಸಹಧರ್ಮಿಣಿ ಶ್ರೀಮತಿ ಪ್ರೇಮಾ ಪತಿಯ ಪ್ರತಿಯೊಂದು ಸೇವಾಕಾರ್ಯಗಳಿಗೂ ಜೊತೆಯಾಗಿ, ಸ್ಫೂರ್ತಿಯಾಗಿ ಲೋಕ ಕಲ್ಯಾಣ ಕಾರ್ಯದ ವಿನಮ್ರ ಖುಷಿಯಲ್ಲಿ ತಮ್ಮ ಸಹಪಾಲು ನಿರೂಪಿಸಿದ್ದಾರೆ. ಮಕ್ಕಳಾದ ಸಚಿನ್ ಮತ್ತು ಸ್ನೇಹ, ಅಳಿಯ ಡಾ. ಗುರುಪ್ರಸಾದ್, ಸೊಸೆ ಸಹನಾ, ಮೊಮ್ಮಕ್ಕಳು ಪಾರ್ಥ, ದುರ್ಗಾ ಹೀಗೆ ತುಂಬು ಕುಟುಂಬದ ಕಲರವಕ್ಕೆ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿಯೇ ಶ್ರೀರಕ್ಷೆ. ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾಗಿ ಮಂದಾರ್ತಿ ಶ್ರೀ ಧನಂಜಯ ಶೆಟ್ಟಿ ಅವರ ಸೇವೆ ನೂರ್ಕಾಲ ಸಾಗಲಿ. ಆರೋಗ್ಯ, ಸಂಪತ್ತು, ಸಮೃದ್ಧಿ ನೂರ್ಮಡಿಸಲಿ. ಶ್ರೀಯುತರ ನೂರ್ಕಾಲದ ಸೇವೆ ಸಾವಿರ ಕಾಲ – ಶತ ಶತಮಾನಗಳ ಕಾಲವೂ ಬಾಳಲಿ, ಹಾಗಂತ ದೇವಾನು ದೇವತೆಗಳಲ್ಲಿ ಸವಿನಯಪೂರ್ವಕ ಪ್ರಾರ್ಥನೆ.
ಬರಹ – ಪ್ರಶಾಂತ ಶೆಟ್ಟಿ, ಹೊನ್ಮರಿ ಮನೆ.