ಮಂಗಳೂರು ಎಂದರೆ ಪ್ರಕೃತಿ ಸೌಂದರ್ಯ, ಸಮುದ್ರದ ಅಲೆಗಳು, ಮಳೆಯ ಸಿಂಚನ, ದೇವಾಲಯಗಳ ಘಂಟಾನಾದ, ಯಕ್ಷಗಾನದ ಹೆಜ್ಜೆ, ನಾಗಾರಾಧನೆಯ ಪರಂಪರೆ, ಭೂತಾರಾಧನೆಯ ನಂಬಿಕೆ, ದೈವಾರಾಧನೆಯ ಸಂಸ್ಕೃತಿ ಮತ್ತು ವಿವಿಧ ಸಮುದಾಯಗಳ ಸಹಬಾಳ್ವೆಯ ನೆಲ. ಈ ನೆಲದ ಜನಜೀವನದಲ್ಲಿ ಹಬ್ಬಗಳು ಕೇವಲ ಧಾರ್ಮಿಕ ಆಚರಣೆಗಳಲ್ಲ; ಅವು ನಮ್ಮ ಸಂಸ್ಕೃತಿ, ಸಂಬಂಧಗಳು, ನೆನಪುಗಳು ಮತ್ತು ಸಾಮಾಜಿಕ ಬದುಕಿನ ಪ್ರತಿಬಿಂಬವೂ ಹೌದು. ಅಂತಹ ಹಬ್ಬಗಳಲ್ಲಿ ಗಣೇಶ ಚತುರ್ಥಿಗೆ ವಿಶೇಷ ಸ್ಥಾನವಿದೆ. ಈಗ ಮನೆಯ ಅಂಗಳದಲ್ಲಿ ಗಣಪತಿಯ ಮೂರ್ತಿ ಪ್ರತಿಷ್ಠಾಪನೆ ಕಡಿಮೆ ಆದರೆ ಊರು, ಕೇರಿ, ಮೈದಾನಗಳಲ್ಲಿ ವಿವಿಧ ಸಂಘ ಸಂಸ್ಥೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವಗಳು ವಿಜೃಂಭಣೆಯಿಂದ ನಡೆಯುತ್ತಿದೆ. ಹೂವು ಹಣ್ಣುಗಳಿಂದ ಅಲಂಕಾರ, ಗರಿಕೆ ಅರ್ಪಣೆ, ಮೋದಕ ಕಡುಬಿನ ನೈವೇದ್ಯಗಳಿಂದ ಪ್ರಾರ್ಥನೆ, ಬಂಧು ಬಳಗದ ಭೇಟಿ ಇವೆಲ್ಲವೂ ಮಂಗಳೂರಿನ ಗಣೇಶೋತ್ಸವದ ಭಾವನಾತ್ಮಕ ಚಿತ್ರಣ. ಊರಿಗೆ ಊರೇ ಬಣ್ಣ ಬಣ್ಣದ ಶೃಂಗಾರದಿಂದ ಕಂಗೊಳಿಸುತ್ತಿದೆ. ಜಘಮಘಿಸುತ್ತಿದೆ. ಆದರೆ ಪ್ರಶ್ನೆ ಒಂದಿದೆ.! ಗಣೇಶ ಚತುರ್ಥಿ ಎಂದರೆ ಕೇವಲ ಗಣಪತಿಯನ್ನು ಪೂಜಿಸಿ, ಸಂಭ್ರಮಿಸಿ, ವಿಸರ್ಜಿಸುವ ಹಬ್ಬವೇ? ಅಥವಾ ನಮ್ಮ ಬದುಕನ್ನು ಬದಲಿಸುವ ಸಂದೇಶವನ್ನು ನೀಡುವ ಹಬ್ಬವೇ?ಇಂದಿನ ಸಂದರ್ಭದಲ್ಲಿ ಈ ಪ್ರಶ್ನೆಯನ್ನು ಕೇಳಿಕೊಳ್ಳುವುದು ಅಗತ್ಯ. ಗಣಪತಿ ಎಂದರೆ ಹಿಂದೂ ಧಾರ್ಮಿಕ ನಂಬಿಕೆಯಲ್ಲಿ ವಿಘ್ನ ವಿನಾಶಕ. ಯಾವುದೇ ಶುಭ ಕಾರ್ಯಕ್ಕೂ ಮೊದಲು ಗಣಪತಿಯನ್ನು ಸ್ಮರಿಸುವುದು ನಮ್ಮ ಪರಂಪರೆ. ಆದರೆ ನಮ್ಮ ಜೀವನದಲ್ಲಿರುವ ಬರುವ ವಿಘ್ನಗಳು ಯಾವುವು? ಅಜ್ಞಾನ, ಅಹಂಕಾರ, ದ್ವೇಷ, ಅಸೂಯೆ, ಕೋಪ, ಸ್ವಾರ್ಥ, ಅಶಿಸ್ತು, ಪರಿಸರದ ಬಗ್ಗೆ ನಿರ್ಲಕ್ಷ್ಯ ಇವೆಲ್ಲವೂ ಮನುಷ್ಯನ ಬದುಕಿನ ದೊಡ್ಡ ವಿಘ್ನಗಳೇ ಅಲ್ಲವೇ? ಹೀಗಿರುವಾಗ ಗಣೇಶ ಚತುರ್ಥಿಯಂದು ಗಣಪತಿಗೆ ಪೂಜೆ ಸಲ್ಲಿಸುವುದರ ಜೊತೆಗೆ, ನಮ್ಮೊಳಗಿನ ಈ ವಿಘ್ನಗಳನ್ನು ದೂರ ಮಾಡುವ ಸಂಕಲ್ಪವೂ ಆಗಬೇಕಲ್ಲವೇ? ದೇವರ ಮುಂದೆ ಕೈ ಮುಗಿಯುವುದು ಸುಲಭ. ಆದರೆ ದೇವರು ತೋರಿಸಿದ ಮಾರ್ಗದಲ್ಲಿ ಬದುಕುವುದು ಕಷ್ಟ. ಆದ್ದರಿಂದ ಗಣೇಶೋತ್ಸವವು ಭಕ್ತಿಯ ಜೊತೆಗೆ ಆತ್ಮಶೋಧನೆಯ ಹಬ್ಬವೂ ಆಗಬೇಕು. ಮಣ್ಣಿನಿಂದ ಬಂದ ಗಣಪತಿ ಮತ್ತೆ ಮಣ್ಣಿಗೇ. ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಕೆಲವು ದಿನಗಳ ಕಾಲ ಪೂಜಿಸಿ, ನಂತರ ನೀರಿನಲ್ಲಿ ವಿಸರ್ಜಿಸುವ ಪದ್ಧತಿ ನಮ್ಮಲ್ಲಿ ಇದೆ. ಈ ಆಚರಣೆಯ ಹಿಂದೆ ಒಂದು ಆಳವಾದ ಜೀವನದ ತತ್ವವಿದೆ. ಮಣ್ಣಿನಿಂದ ರೂಪುಗೊಂಡ ದೇಹ ಕೊನೆಗೆ ಮಣ್ಣಿನಲ್ಲೇ ಲೀನವಾಗುತ್ತದೆ. ಇಂದು ಮನುಷ್ಯ ಸಂಪತ್ತು, ಅಧಿಕಾರ, ಸ್ಥಾನಮಾನ ಮತ್ತು ಹೆಸರಿನ ಹಿಂದೆ ಓಡುತ್ತಿದ್ದಾನೆ. ಆದರೆ ಜೀವನ ಶಾಶ್ವತವಲ್ಲ ಎಂಬ ಸತ್ಯವನ್ನು ಗಣೇಶನ ವಿಸರ್ಜನೆ ಪ್ರತಿವರ್ಷ ನಮಗೆ ನೆನಪಿಸುತ್ತದೆ. ನಾವು ಎಷ್ಟೇ ದೊಡ್ಡವರಾಗಿದ್ದರೂ ಪ್ರಕೃತಿಯ ಮುಂದೆ ಸಣ್ಣವರೇ. ಆದ್ದರಿಂದ ಗಣೇಶೋತ್ಸವ ನಮಗೆ ವಿನಯವನ್ನು ಕಲಿಸಬೇಕು.




ಗಣೇಶೋತ್ಸವಕ್ಕೆ ತನ್ನದೇ ಆದ ಸೊಗಡು, ಪರಂಪರೆ ಇದೆ. ಬೀದಿಗಳಲ್ಲಿ ಮಂಟಪಗಳು ನಿರ್ಮಾಣವಾಗುತ್ತವೆ. ಗಣೇಶನ ಮೂರ್ತಿಗಳು ಪ್ರತಿಷ್ಠಾಪನೆಯಾಗುತ್ತವೆ. ಭಜನೆ, ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಮಕ್ಕಳಿಗೆ ವಿವಿಧ ಸ್ಪರ್ಧೆಗಳು, ಹೋಮ ಹವನಾದಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಒಂದು ಮಂಟಪದ ಮುಂದೆ ವಿವಿಧ ವಯಸ್ಸಿನ ಜನರು, ವಿವಿಧ ಜಾತಿಯ ಜನರು, ಬಡವ ಬಲ್ಲಿದ ಭೇದ ವಿಲ್ಲದೆ ಒಂದಾಗಿ ನಿಲ್ಲುವ ದೃಶ್ಯವೇ ಒಂದು ರೀತಿಯ ಸಾಮಾಜಿಕ ಸಂದೇಶ. ಹಿರಿಯರು ತಮ್ಮ ನೆನಪುಗಳನ್ನು ಹಂಚಿಕೊಳ್ಳುತ್ತಾರೆ. ಯುವಕರು ವ್ಯವಸ್ಥೆ ಮಾಡುತ್ತಾರೆ. ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಹೀಗೆ ಒಂದು ಹಬ್ಬವು ತಲೆಮಾರುಗಳನ್ನು ಸಂಪರ್ಕಿಸುವ, ಭೇದ ಭಾವ ಮರೆಸುವ ಸಮಾಜವನ್ನು ಜೋಡಿಸುವ ಭಾವ ಸೇತುವೆಯಾಗುತ್ತದೆ. ಇಂತಹ ಸಂಸ್ಕೃತಿಯನ್ನು ಉಳಿಸುವುದು ನಮ್ಮ ಜವಾಬ್ದಾರಿ.
ಕಾಲ ಬದಲಾಗಿದೆ. ಹಬ್ಬಗಳ ಆಚರಣೆಯಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ. ಹಿಂದೆ ಸರಳತೆ ಮತ್ತು ಭಕ್ತಿಗೆ ಹೆಚ್ಚಿನ ಸ್ಥಾನವಿದ್ದರೆ, ಇಂದು ಕೆಲವು ಕಡೆಗಳಲ್ಲಿ ಹಬ್ಬದ ಸಂಭ್ರಮವು ಪ್ರದರ್ಶನದ ರೂಪ ಪಡೆಯುತ್ತಿರುವುದು ಕಂಡುಬರುತ್ತದೆ. ದುಬಾರಿ ಅಲಂಕಾರ, ದೊಡ್ಡ ಮಂಟಪ, ಭಾರೀ ಕಿವಿಗಡಚಿಕ್ಕುವ ಧ್ವನಿವರ್ಧಕ, ಪಟಾಕಿ, ವಿದ್ಯುತ್ ದೀಪಾಲಂಕಾರ ಇವೆಲ್ಲವೂ ಹಬ್ಬದ ಭಾಗವಾಗಬಹುದು. ಆದರೆ ಅದರ ಮಿತಿ ಎಲ್ಲಿ? ಸಂಭ್ರಮ ಇರಲಿ; ಸ್ಪರ್ಧೆ ಬೇಡ. ಭಕ್ತಿ ಇರಲಿ; ಪ್ರದರ್ಶನ ಬೇಡ. ಅಲಂಕಾರ ಇರಲಿ ಅಪವ್ಯಯ ಬೇಡ. ಒಬ್ಬರಿಗಿಂತ ಮತ್ತೊಬ್ಬರು ದೊಡ್ಡದಾಗಿ ಮಾಡಬೇಕು ಎಂಬ ಮನೋಭಾವ ಅಥವಾ ಸ್ಪರ್ಧೆ ಹಬ್ಬದ ಮೂಲ ಉದ್ದೇಶವನ್ನೇ ಮರೆ ಮಾಡಬಾರದು. ಶಬ್ದದ ನಡುವೆ ನೆಮ್ಮದಿಯೂ ಇರಲಿ. ಗಣೇಶೋತ್ಸವದಲ್ಲಿ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸ್ಥಾನವಿದೆ. ಆದರೆ ಧ್ವನಿವರ್ಧಕದ ಅತಿಯಾದ ಶಬ್ದದಿಂದ ವೃದ್ಧರು, ಮಕ್ಕಳು, ರೋಗಿಗಳು ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗಬಹುದು. ನಮ್ಮ ಸಂತೋಷ ಮತ್ತೊಬ್ಬರ ನೋವಿಗೆ ಕಾರಣವಾಗಬಾರದು. ಗಣಪತಿ ವಿಘ್ನ ವಿನಾಶಕ. ಆದ್ದರಿಂದ ಗಣಪತಿಯ ಹೆಸರಿನಲ್ಲಿ ಮತ್ತೊಬ್ಬರ ನೆಮ್ಮದಿಗೆ ವಿಘ್ನ ಉಂಟು ಮಾಡುವುದು ಎಷ್ಟು ಸೂಕ್ತ ಎಂಬುದನ್ನು ನಾವು ಯೋಚಿಸಬೇಕು. ಧಾರ್ಮಿಕ ಸ್ವಾತಂತ್ರ್ಯದ ಜೊತೆಗೆ ಸಾಮಾಜಿಕ ಜವಾಬ್ದಾರಿಯೂ ಇರಬೇಕು. ಪರಿಸರ ಸ್ನೇಹಿ ಗಣೇಶೋತ್ಸವ ಇಂದು ಗಣೇಶೋತ್ಸವದ ಸಂದರ್ಭದಲ್ಲಿ ಅತ್ಯಂತ ಗಂಭೀರವಾಗಿ ಚರ್ಚಿಸಬೇಕಾದ ವಿಷಯವೆಂದರೆ ಪರಿಸರ. ನಮ್ಮ ಕರಾವಳಿ ಪ್ರಕೃತಿಯ ಕೊಡುಗೆಯಿಂದ ಸಮೃದ್ಧವಾಗಿದೆ. ಸಮುದ್ರ, ನದಿಗಳು, ಕೆರೆಗಳು, ಹೊಳೆಗಳು ಮತ್ತು ಜಲಮೂಲಗಳು ನಮ್ಮ ಬದುಕಿನ ಭಾಗ. ಹೀಗಿರುವಾಗ ಗಣೇಶನ ವಿಸರ್ಜನೆಯ ಹೆಸರಿನಲ್ಲಿ ಜಲ ಮೂಲಗಳಿಗೆ ಹಾನಿಯಾಗುವಂತಹ ವಸ್ತುಗಳನ್ನು ಬಿಡುವುದು ಸರಿಯಲ್ಲ. ಮಣ್ಣಿನ ಗಣಪತಿ, ನೈಸರ್ಗಿಕ ಬಣ್ಣಗಳು ಮತ್ತು ಪರಿಸರ ಸ್ನೇಹಿ ಅಲಂಕಾರಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಗಣಪತಿಯನ್ನು ಪೂಜಿಸುವ ನಾವು ಗಣಪತಿಯ ಸೃಷ್ಟಿಯಾದ ಪ್ರಕೃತಿಯನ್ನೂ ಪೂಜಿಸಬೇಕು. ಪರಿಸರ ರಕ್ಷಣೆಗಿಂತ ದೊಡ್ಡ ಗಣೇಶ ಸೇವೆ ಇನ್ನೊಂದಿಲ್ಲ. ಮಕ್ಕಳಿಗೆ ಹಬ್ಬದ ಅರ್ಥ ತಿಳಿಸೋಣ. ಇಂದಿನ ಮಕ್ಕಳ ಜೀವನದಲ್ಲಿ ಮೊಬೈಲ್, ಸಾಮಾಜಿಕ ಜಾಲತಾಣಗಳು ಮತ್ತು ಡಿಜಿಟಲ್ ಮನರಂಜನೆ ದೊಡ್ಡ ಸ್ಥಾನ ಪಡೆದಿವೆ. ಅಂತಹ ಸಂದರ್ಭದಲ್ಲಿ ಹಬ್ಬಗಳು ಮಕ್ಕಳನ್ನು ನಮ್ಮ ಸಂಸ್ಕೃತಿಯೊಂದಿಗೆ ಸಂಪರ್ಕಿಸುವ ಅವಕಾಶ. ಗಣೇಶನ ದೊಡ್ಡ ತಲೆ ಜ್ಞಾನವನ್ನು, ದೊಡ್ಡ ಕಿವಿಗಳು ಆಲಿಸುವ ಗುಣವನ್ನು, ಸಣ್ಣ ಕಣ್ಣುಗಳು ಏಕಾಗ್ರತೆಯನ್ನು ಮತ್ತು ದೊಡ್ಡ ಹೊಟ್ಟೆ ಸಹನೆಯನ್ನು ಸೂಚಿಸುತ್ತದೆ ಎಂಬಂತಹ ಮೌಲ್ಯಗಳನ್ನು ಮಕ್ಕಳಿಗೆ ತಿಳಿಸಬೇಕು. ಮಕ್ಕಳು ಗಣಪತಿಯ ಮೂರ್ತಿಯನ್ನು ನೋಡುವುದಷ್ಟೇ ಅಲ್ಲ, ಗಣಪತಿಯ ಸಂದೇಶವನ್ನು ಅರ್ಥಮಾಡಿಕೊಳ್ಳಬೇಕು. ಇದು ಪೋಷಕರ ಮತ್ತು ಸಮಾಜದ ಜವಾಬ್ದಾರಿ.
ಗಣೇಶೋತ್ಸವದಲ್ಲಿ ಸಾವಿರಾರು ರೂಪಾಯಿಗಳನ್ನು ಅಲಂಕಾರಕ್ಕೆ ಖರ್ಚು ಮಾಡುವ ಬದಲು, ಅದರ ಒಂದು ಭಾಗವನ್ನು ಸಮಾಜ ಸೇವೆಗೆ ಬಳಸಬಹುದಲ್ಲವೇ? ಬಡ ವಿದ್ಯಾರ್ಥಿಗಳಿಗೆ ಪುಸ್ತಕ ನೀಡಬಹುದು. ಅಗತ್ಯವಿರುವವರಿಗೆ ಆಹಾರ ನೀಡಬಹುದು. ಆರೋಗ್ಯ ಶಿಬಿರ ನಡೆಸಬಹುದು. ರಕ್ತದಾನ ಶಿಬಿರ ಆಯೋಜಿಸಬಹುದು. ಗಿಡಗಳನ್ನು ನೆಡಬಹುದು. ಗಣೇಶನಿಗೆ ಮೋದಕ ಅರ್ಪಿಸುವ ಕೈ, ಹಸಿದವನಿಗೆ ಅನ್ನ ನೀಡುವ ಕೈಯಾಗಲೂ ಬೇಕು. ಅದೇ ನಿಜವಾದ ಭಕ್ತಿ. ಗಣೇಶೋತ್ಸವದ ವ್ಯವಸ್ಥೆಯಲ್ಲಿ ಯುವಕರ ಪಾತ್ರ ಪ್ರಮುಖ. ಯುವಕರ ಶಕ್ತಿ, ಸಂಘಟನಾ ಸಾಮರ್ಥ್ಯ ಮತ್ತು ತಂತ್ರಜ್ಞಾನ ಜ್ಞಾನವನ್ನು ಸಮಾಜಮುಖಿ ಕಾರ್ಯಗಳಿಗೆ ಬಳಸಿದರೆ ಗಣೇಶೋತ್ಸವ ಇನ್ನಷ್ಟು ಅರ್ಥಪೂರ್ಣವಾಗಬಹುದು. ಯುವಕರು ಕೇವಲ ಮಂಟಪ ನಿರ್ಮಿಸುವುದಕ್ಕೆ ಸೀಮಿತವಾಗದೆ, ಸ್ವಚ್ಛತೆ, ಪರಿಸರ ರಕ್ಷಣೆ, ರಕ್ತದಾನ, ಶಿಕ್ಷಣ ಮತ್ತು ಸಮಾಜ ಸೇವೆಯಂತಹ ಕಾರ್ಯಗಳಲ್ಲಿ ಮುಂದಾಗಬೇಕು. ಇದು ಯುವಕರಿಗೆ ನಾಯಕತ್ವದ ಪಾಠವನ್ನೂ ನೀಡುತ್ತದೆ. ಹಬ್ಬಗಳು ನಮ್ಮನ್ನು ಒಗ್ಗೂಡಿಸಲಿ. ಇಲ್ಲಿ ವಿವಿಧ ಧರ್ಮ, ಭಾಷೆ ಮತ್ತು ಸಂಸ್ಕೃತಿಯ ಜನರು ಹಲವು ವರ್ಷಗಳಿಂದ ಪರಸ್ಪರ ಗೌರವದಿಂದ ಬದುಕುತ್ತಿದ್ದಾರೆ. ಹಬ್ಬಗಳು ಈ ಸಾಮಾಜಿಕ ಸಾಮರಸ್ಯವನ್ನು ಇನ್ನಷ್ಟು ಬಲಪಡಿಸಬೇಕು. ಗಣೇಶೋತ್ಸವವು ಯಾರನ್ನೂ ದೂರ ಮಾಡುವ ಹಬ್ಬವಾಗದೆ, ಎಲ್ಲರನ್ನೂ ಹತ್ತಿರ ಮಾಡುವ ಹಬ್ಬವಾಗಲಿ. ನಮ್ಮ ಸಂತೋಷದಲ್ಲಿ ನೆರೆಹೊರೆಯವರಿಗೂ ಸಂತೋಷ ಸಿಗಲಿ. ನಮ್ಮ ಆಚರಣೆಯಿಂದ ಯಾರಿಗೂ ನೋವಾಗದಿರಲಿ. ಸರಳತೆಯಲ್ಲಿದೆ ನಿಜವಾದ ಸೌಂದರ್ಯ.
ನಮ್ಮ ಹಿರಿಯರು ಆಚರಿಸುತ್ತಿದ್ದ ಗಣೇಶ ಚತುರ್ಥಿಯನ್ನು ನೆನಪಿಸಿಕೊಂಡರೆ ಸರಳತೆ ಅದರ ಪ್ರಮುಖ ಗುಣವಾಗಿತ್ತು. ಮನೆಯಲ್ಲೊಂದು ಮಣ್ಣಿನ ಗಣಪತಿ. ಕುಟುಂಬದವರು ಸೇರಿ ಪೂಜೆ. ಮನೆಯಲ್ಲೇ ತಯಾರಿಸಿದ ಕಡುಬು, ಮೋದಕ. ಬಂಧು ಬಳಗದ ಭೇಟಿ. ದೇವರ ಮುಂದೆ ಪ್ರಾರ್ಥನೆ.ಇಷ್ಟೇ. ಇಂದು ನಮ್ಮಲ್ಲಿ ಸೌಲಭ್ಯ ಹೆಚ್ಚಾಗಿದೆ. ಆದರೆ ಆ ಸರಳ ಸಂತೋಷ ಕಡಿಮೆಯಾಗುತ್ತಿದೆಯೇ ಎಂಬ ಪ್ರಶ್ನೆಯೂ ಇದೆ. ಹಬ್ಬದ ಖರ್ಚು ಹೆಚ್ಚಾದಂತೆ ಹಬ್ಬದ ಸಂತೋಷ ಹೆಚ್ಚಾಗುತ್ತದೆ ಎನ್ನಲು ಸಾಧ್ಯವಿಲ್ಲ. ಹೃದಯದಲ್ಲಿ ಭಕ್ತಿ ಇದ್ದರೆ ಸಣ್ಣ ಮನೆಯಲ್ಲೂ ಗಣೇಶೋತ್ಸವ ದೊಡ್ಡ ಹಬ್ಬವಾಗುತ್ತದೆ. ವಿಸರ್ಜನೆಯ ಕ್ಷಣ ನೀಡುವ ಪಾಠ ಗಣೇಶನ ವಿಸರ್ಜನೆಯ ಕ್ಷಣ ಭಾವುಕ. ಕೆಲವು ದಿನಗಳ ಕಾಲ ದೇವರಾಗಿ, ಕುಟುಂಬದ ಸದಸ್ಯನಂತೆ ಪೂಜಿಸಿದ ಗಣಪತಿಯನ್ನು ಮತ್ತೆ ನೀರಿಗೆ ಅರ್ಪಿಸುವಾಗ ಮನಸ್ಸಿನಲ್ಲಿ ಒಂದು ರೀತಿಯ ಖಾಲಿತನ ಮೂಡುತ್ತದೆ. ಆದರೆ ಅದೇ ಕ್ಷಣದಲ್ಲಿ ಜೀವನದ ಸತ್ಯವೂ ಅರ್ಥವಾಗುತ್ತದೆ. ಬಂದದ್ದು ಹೋಗಲೇಬೇಕು. ಸಿಕ್ಕದ್ದು ಕಳೆದುಹೋಗಬಹುದು. ಆದರೆ ನಾವು ಬದುಕಿನಲ್ಲಿ ಮಾಡಿದ ಒಳ್ಳೆಯ ಕೆಲಸಗಳು, ನೀಡಿದ ಪ್ರೀತಿ, ತೋರಿದ ಮಾನವೀಯತೆ ಮಾತ್ರ ನಮ್ಮ ನೆನಪಾಗಿ ಉಳಿಯುತ್ತವೆ. ಹೀಗಾಗಿ ಗಣೇಶನನ್ನು ವಿಸರ್ಜಿಸುವಾಗ ನಮ್ಮೊಳಗಿನ ಕೆಟ್ಟ ಗುಣಗಳನ್ನೂ ವಿಸರ್ಜಿಸೋಣ. ಅಹಂಕಾರವನ್ನು ವಿಸರ್ಜಿಸೋಣ. ದ್ವೇಷವನ್ನು ವಿಸರ್ಜಿಸೋಣ. ಅಸೂಯೆಯನ್ನು ವಿಸರ್ಜಿಸೋಣ. ಸ್ವಾರ್ಥವನ್ನು ವಿಸರ್ಜಿಸೋಣ. ಅದರ ಬದಲಿಗೆ ಪ್ರೀತಿ, ಸಹನೆ, ಸೇವೆ ಮತ್ತು ಮಾನವೀಯತೆಯನ್ನು ನಮ್ಮೊಳಗೆ ಉಳಿಸಿಕೊಳ್ಳೋಣ. ಅದುವೇ ಗಣೇಶೋತ್ಸವದ ನಿಜವಾದ ಅರ್ಥ. ಗಣೇಶ ಚತುರ್ಥಿ ವರ್ಷಕ್ಕೊಮ್ಮೆ ಬರುತ್ತದೆ. ಗಣಪತಿಯ ಮೂರ್ತಿ ಕೆಲವು ದಿನಗಳಷ್ಟೇ ನಮ್ಮೊಂದಿಗೆ ಇರುತ್ತದೆ. ಆದರೆ ಗಣೇಶನು ನೀಡುವ ಸಂದೇಶ ವರ್ಷಪೂರ್ತಿ ನಮ್ಮ ಬದುಕಿನಲ್ಲಿ ಇರಬೇಕು. ಜ್ಞಾನವಿರಲಿ. ವಿನಯವಿರಲಿ. ಸಹನೆಯಿರಲಿ. ಸೇವಾ ಮನೋಭಾವವಿರಲಿ. ಪ್ರಕೃತಿಯ ಬಗ್ಗೆ ಕಾಳಜಿಯಿರಲಿ. ಸಮಾಜದ ಬಗ್ಗೆ ಜವಾಬ್ದಾರಿಯಿರಲಿ. ಆಗ ಮಾತ್ರ ನಮ್ಮ ಗಣೇಶೋತ್ಸವ ಸಾರ್ಥಕವಾಗುತ್ತದೆ. ಮಂಗಳೂರಿನ ಗಣೇಶ ಚತುರ್ಥಿ ಕೇವಲ ಧಾರ್ಮಿಕ ಹಬ್ಬವಾಗದೆ, ಸಂಸ್ಕೃತಿ, ಪರಿಸರ, ಸಾಮಾಜಿಕ ಸಾಮರಸ್ಯ ಮತ್ತು ಮಾನವೀಯತೆಯ ಮಹೋತ್ಸವವಾಗಲಿ. ಗಣಪತಿಯ ಮೌಲ್ಯಗಳನ್ನು ಮನಸ್ಸಿಗೆ ಕರೆತರುವುದು ನಿಜವಾದ ಸಾಧನೆಯಾಗಲಿ. ಈ ಗಣೇಶ ಚತುರ್ಥಿಯಲ್ಲಿ ಪ್ರತಿಯೊಂದು ಮನೆಯಲ್ಲಿ ಭಕ್ತಿ ಬೆಳಗಲಿ. ಪ್ರತಿಯೊಂದು ಹೃದಯದಲ್ಲಿ ಮಾನವೀಯತೆ ಬೆಳೆಯಲಿ. ಪ್ರತಿಯೊಂದು ಬೀದಿಯಲ್ಲಿ ಸಾಮರಸ್ಯ ಮೂಡಲಿ. ಪ್ರತಿಯೊಂದು ಜಲಮೂಲವೂ ಸ್ವಚ್ಛವಾಗಿರಲಿ. ‘ಗಣಪತಿ ಬಪ್ಪಾ ಮೋರಿಯಾ…” “ಮುಂದಿನ ವರ್ಷ ಬೇಗ ಬಾ” ಎಂದು ಮಾತ್ರ ಹೇಳದೆ, “ನೀನು ಕಲಿಸಿದ ಒಳ್ಳೆಯ ಮೌಲ್ಯಗಳು ನಮ್ಮ ಬದುಕಿನಲ್ಲಿ ಸದಾ ಉಳಿಯಲಿ” ಎಂದು ಪ್ರಾರ್ಥಿಸೋಣ. ಅದೇ ಮಂಗಳೂರಿನ ಗಣೇಶ ಚತುರ್ಥಿಯ ನಿಜವಾದ ಅರ್ಥ. ಶ್ರೀ ಗಣೇಶಾಯ ನಮಃ.
ಬರಹ -ಶರತ್ ಶೆಟ್ಟಿ ಪಡುಪಳ್ಳಿ












































































































