ನನ್ನ ತಂದೆ ಶಿಕ್ಷಕರಾಗಿದ್ದರು. ನಮ್ಮ ಮನೆಯಲ್ಲಿ ವಿದ್ಯೆಗೆ ಮೊದಲ ಆದ್ಯತೆ ಇತ್ತು. ತಂದೆಯವರು ಶಿಸ್ತಿನ ಸಿಪಾಯಿ. ಗಣಿತದಲ್ಲಿ ನನಗೆ ಹೆಚ್ಚಿನ ಪರಿಣತಿ ಬರಲು ನನ್ನ ತಂದೆಯೇ ಕಾರಣ. ನನ್ನ ಚಿಕ್ಕಪ್ಪ ಸೀತಾರಾಮ ಶೆಟ್ಟಿಯವರು ನಾನು ಮುಂಬಯಿಗೆ ಆಗಮಿಸಲು ಕಾರಣರಾದರು. ಉನ್ನತ ಅಧ್ಯಯನದ ಆಕಾಂಕ್ಷೆಯಿಂದ ನಾನು ಮುಂಬಯಿಗೆ ಬಂದೆ. ಸಿ.ಎ ವೈ.ಆರ್ ಶೆಟ್ಟಿ ಅವರಲ್ಲಿ ಮೂರು ವರ್ಷಗಳ ಕಾಲ ಆರ್ಟಿಕಲ್ಶಿಪ್ ಮಾಡಿದೆ. ಸ್ವಾಭಿಮಾನದಿಂದ ನನ್ನ ಕಾಲ ಮೇಲೆ ನಾನು ನಿಲ್ಲಬೇಕು ಎಂಬ ನಿರ್ಧಾರ ಕೈಗೊಂಡು ಕೆಲಸದ ಕಡೆ ಗಮನ ಹರಿಸಿದುದರಿಂದ ಉನ್ನತ ಅಧ್ಯಯನವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಆದರೆ ನಾನು ಆಯ್ದ ಕ್ಷೇತ್ರದಲ್ಲಿಯೇ ನಿಷ್ಠೆಯಿಂದ ಕೆಲಸ ಮಾಡುತ್ತಾ ಬಂದಿರುವುದು ಸಮಧಾನ ನೀಡಿದೆ. ಕಾಯಕವೇ ಕೈಲಾಸ ಎಂಬ ನಂಬಿಕೆಯಿಂದ ಸುಮಾರು 35 ವರ್ಷಗಳಿಂದ ಪರಿಶ್ರಮದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ ಎಂದರು. ನಮ್ಮ ಎದುರಿಗೆ ಇರುವವರು ನಮಗಿಂತ ಹೆಚ್ಚು ತಿಳಿದವರು ಎಂಬ ವಿನೀತ ಭಾವವಿರಬೇಕು. ನಾವು ಮಾಡುವ ಕೆಲಸವನ್ನು ನಾವು ಪ್ರೀತಿಸಬೇಕು. ಯಾವ ಕೆಲಸವೂ ಮೇಲು-ಕೀಳು ಅಲ್ಲ. ಯಾವುದೇ ಕೆಲಸವನ್ನು ಸ್ವಾರ್ಥ ರಹಿತವಾಗಿ ಮಾಡಿದಾಗ ಮಾತ್ರ ಅದು ಜನರನ್ನು ತಲುಪುತ್ತದೆ ಎಂದು ಪ್ರತಿಷ್ಠಿತ ಬಂಟರ ಸಂಘದ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ ಅವರು ಹೇಳಿದರು. ಅವರು ಮುಂದುವರೆಸುತ್ತಾ ತುಳು ಕನ್ನಡಿಗರ ಪರಿಶ್ರಮದ ಬದುಕನ್ನು ಉಲ್ಲೇಖಿಸುತ್ತಾ ಮುಂಬಯಿಯ ತುಳು ಕನ್ನಡಿಗರು ಯಾರ ಮೇಲೂ ಅವಲಂಬಿತರಾಗದೆ ಸ್ವಪರಿಶ್ರಮದಿಂದ ಮುಂದೆ ಬಂದವರು. ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಬಂಟರ ಸಂಘದಲ್ಲಿ ಹಂತ ಹಂತವಾಗಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುವ ಅವಕಾಶವೂ ನನಗೆ ದೊರೆಯಿತು. ಅಂತಿಮವಾಗಿ ಅಧ್ಯಕ್ಷನಾಗಿ ಸೇವೆ ಸಲ್ಲಿಸುವ ಸದವಕಾಶವೂ ನನ್ನ ಪಾಲಿಗೆ ಒದಗಿ ಬಂತು. ಇದು ನಾನು ಬಯಸದೆ ಬಂದ ಭಾಗ್ಯ ಎಂದು ತಮ್ಮ ಬದುಕಿನ ಪಯಣವನ್ನು ಮೆಲುಕು ಹಾಕಿದ ಪ್ರವೀಣ್ ಭೋಜ ಶೆಟ್ಟಿ ಅವರು, ಉನ್ನತ ಅಧ್ಯಯನಕ್ಕಾಗಿ ಮುಂಬೈಗೆ ಬಂದು ಇಲ್ಲಿ ಉದ್ಯಮಿಯಾಗಿ, ಸಂಘಟಕರಾಗಿ ಬೆಳೆದ ಬಗೆಯನ್ನು ಸ್ಮರಿಸಿದರು. ಅವರು ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗ ಸೆಪ್ಟೆಂಬರ್ 11ರಂದು ರಾನಡೆ ಭವನದಲ್ಲಿ ಆಯೋಜಿಸಿದ್ದ ‘ಸಾಧಕರೊಂದಿಗೆ ಮುಖಾಮುಖಿ’ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ವೃತ್ತಿಜೀವನ, ಸಂಘಟನ ಪಯಣ ಹಾಗೂ ಸಮಾಜಸೇವೆಯ ಅನುಭವಗಳನ್ನು ಹಂಚಿಕೊಂಡರು.
ಮುಖಾಮುಖಿ ಕಾರ್ಯಕ್ರಮದಲ್ಲಿ ಸಂದರ್ಶನವನ್ನು ನಡೆಸಿಕೊಟ್ಟ ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಹಿರಿಯ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಪ್ರೊ.ಜಿ.ಎನ್ ಉಪಾಧ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ,
ಸಾಧಕರ ಜೀವನಾನುಭವಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದರೊಂದಿಗೆ ಅವರ ಸಾಧನೆಯ ಹಿಂದಿರುವ ಪರಿಶ್ರಮ, ನಿಷ್ಠೆ, ಶಿಸ್ತು, ಸ್ವಾಭಿಮಾನ ಮತ್ತು ಸಮಾಜಮುಖಿ ಚಿಂತನೆಯನ್ನು ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬಂದಿದ್ದೇವೆ. ಮುಂಬೈನ ತುಳು ಕನ್ನಡ ಸಾಧಕರ ಸಾಧನೆಯನ್ನು ವಿಭಾಗ ಲೋಕಮುಖಕ್ಕೆ ಪರಿಚಯ ಮಾಡಿಕೊಡುವ ಕೆಲಸವನ್ನು ವಿವಿಧ ನೆಲೆಗಳಲ್ಲಿ ಮಾಡುತ್ತಾ ಬಂದಿದೆ. ಈ ಮಾಲಿಕೆಯಲ್ಲಿ ಈಗಾಗಲೇ ನಾಮಾಂಕಿತ ಸಂಘಟಕ ಐಕಳ ಹರೀಶ್ ಶೆಟ್ಟಿ, ಜಸ್ಟೀಸ್ ಬಿ.ಎನ್. ಶ್ರೀ ಕೃಷ್ಣ, ಹಿರಿಯ ಸಂಘಟಕ ಸರ್ವೋತ್ತಮ ಶೆಟ್ಟಿ, ಪತ್ರಿಕೋದ್ಯಮಿ ಚಂದ್ರಶೇಖರ ಪಾಲೆತ್ತಾಡಿ, ಖ್ಯಾತ ವೈದ್ಯರಾದ ಡಾ. ಸುರೇಶ್ ರಾವ್, ಹಿರಿಯ ಸಂಘಟಕ ಎಲ್, ವಿ ಅಮೀನ್, ಉದ್ಯಮಿ ಸಮಾಜಸೇವಕ ಕುಸುಮೋದರ ಶೆಟ್ಟಿ, ಮೊದಲಾದವರ ಜೊತೆಗೆ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿ ಪ್ರಸಾರ ಮಾಡಲಾಗಿದೆ. ಇವತ್ತು ಶತಮಾನದ ಸಂಭ್ರಮದಲ್ಲಿರುವ ಬಂಟರ ಸಂಘದ ಅಧ್ಯಕ್ಷರಾಗಿರುವ ಪ್ರವೀಣ್ ಶೆಟ್ಟಿ ಅವರು ವಿಭಾಗಕ್ಕೆ ಬಂದಿರುವುದು ನಮಗೆ ವಿಶೇಷವಾದ ಸಂತೋಷವನ್ನು ಉಂಟು ಮಾಡಿದೆ ಎಂದವರು ವಿಶ್ವವಿದ್ಯಾಲಯ ಪರವಾಗಿ ಸ್ವಾಗತಿಸಿ ತಮ್ಮ ಮಾತನ್ನು ಮುಂದುವರೆಸುತ್ತಾ, ತುಳು ಕನ್ನಡಿಗರನ್ನು ಒಟ್ಟಾಗಿ ತೆಗೆದುಕೊಂಡು ಸಮಷ್ಟಿ ನೆಲೆಯಲ್ಲಿ ಕಾರ್ಯ ನಿರ್ವಹಿಸುವ ಉದ್ದೇಶದಿಂದ ಸಾಧಕರೊಂದಿಗೆ ಮುಖಾಮುಖಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಶಿಕ್ಷಣ ಸಂಸ್ಥೆಗಳು ಜನಮುಖಿಯಾಗಿ ಹಾಗೂ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಿದಾಗ ಅವುಗಳ ಕಾರ್ಯಕ್ಕೆ ಮತ್ತಷ್ಟು ಶಕ್ತಿ ದೊರೆಯುತ್ತದೆ. ಮುಂಬೈಗೆ ವಲಸೆ ಬಂದ ತುಳು ಕನ್ನಡಿಗರ ಸಾಧನೆಯನ್ನು ಸ್ಮರಿಸಿದ ಅವರು ವಲಸೆ ಬಂದ ತುಳು ಕನ್ನಡಿಗರಲ್ಲಿ ಮೊಗವೀರರು ಮೊದಲಿಗರಾಗಿದ್ದು, ಅವರು ಮುಂಬೈ ನೆಲದಲ್ಲಿ ಮಹತ್ತರ ಸಾಧನೆ ಮಾಡಿದ್ದಾರೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬಿಲ್ಲವರ ಕೊಡುಗೆಯೂ ಗಮನಾರ್ಹವಾಗಿದೆ. ಇಂದಿನ ಸಂದರ್ಭದಲ್ಲಿ ‘ಬಂಟರ ಯುಗ’ ಎಂದು ಹೇಳಿದರೆ ಅದು ಉತ್ಪ್ರೇಕ್ಷೆಯ ಮಾತಾಗಲಾರದು. ಶತಮಾನೋತ್ಸವದ ಸಂಭ್ರಮದಲ್ಲಿರುವ ಬಂಟರ ಸಂಘದ ಸಾಧನೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಅವರು, ಸಂಘದ ಶಿಕ್ಷಣ ಸಂಸ್ಥೆಗಳು ಮುಂದಿನ ದಿನಗಳಲ್ಲಿ ಸ್ವಾಯತ್ತ ವಿಶ್ವವಿದ್ಯಾಲಯಗಳಾಗಿ ರೂಪುಗೊಳ್ಳುವ ಸಾಧ್ಯತೆಗಳಿವೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.





ಮುಂಬೈ ಕನ್ನಡಿಗರು ಎಂದಾಕ್ಷಣ ಹೋಟೆಲ್ ಉದ್ಯಮ ಎಂಬ ಸಾಮಾನ್ಯ ಕಲ್ಪನೆ ಇದೆ. ಆದರೆ ಕನ್ನಡಿಗರ ಸಾಧನೆ ಕೇವಲ
ಹೋಟೆಲ್ ಉದ್ಯಮಕ್ಕೆ ಸೀಮಿತವಾಗಿಲ್ಲ. ಶಿಕ್ಷಣ, ಉದ್ಯಮ, ಬ್ಯಾಂಕಿಂಗ್, ಲೆಕ್ಕಪರಿಶೋಧನೆ, ಸಮಾಜಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮುಂಬೈ ಕನ್ನಡಿಗರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಪ್ರವೀಣ್ ಭೋಜ ಶೆಟ್ಟಿ ಅವರು ಲೆಕ್ಕಪರಿಶೋಧಕರಾಗಿ ಹಲವು ಸಂಸ್ಥೆಗಳನ್ನು ಕಟ್ಟಿ ಬೆಳೆಸಿದವರು. ಉತ್ತಮ ಸಂಘಟಕರಾಗಿ ಗುರುತಿಸಿಕೊಂಡಿರುವ ಅವರು, ಕೊಡುಗೈ ದಾನಿಯಾಗಿ ನೊಂದವರ, ಬೆಂದವರ ಕಣ್ಣೀರನ್ನು ಒರೆಸುವ ಕಾರ್ಯದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಸಮುದಾಯದ ಹಿತದೊಂದಿಗೆ ನಾಡಿನ ಹಾಗೂ ದೇಶದ ಹಿತಕ್ಕಾಗಿ ಸೇವೆ ಸಲ್ಲಿಸುತ್ತಿರುವ ಅವರ ಸರಳ, ಸಜ್ಜನಿಕೆಯ ಮತ್ತು ಯಾವುದೇ ಹಮ್ಮು ಬಿಮ್ಮುಗಳಿಲ್ಲದ ವ್ಯಕ್ತಿತ್ವ ಶ್ಲಾಘನೀಯ. ಇಂತಹ ಸಾಧಕರೊಂದಿಗೆ ಸಂವಾದ ನಡೆಸುವುದು ಸಂತಸದ ಸಂಗತಿ ಎಂದು ನುಡಿದರು. ಪ್ರವೀಣ್ ಶೆಟ್ಟಿ ಅವರನ್ನು ಮುಂಬಯಿ ವಿಶ್ವವಿದ್ಯಾಲಯದ ಪರವಾಗಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ತಾಂತ್ರಿಕ ಸಹಾಯವನ್ನು ನೀಡಿದ ಜಯವರ್ಧನ್ ಪ್ರದೀಪ್ ಶೆಟ್ಟಿ ಅವರನ್ನು ಕೃತಿ ಗೌರವದೊಂದಿಗೆ ಗೌರವಿಸಲಾಯಿತು. ಸಂಶೋಧನ ವಿದ್ಯಾರ್ಥಿಗಳಾದ ಕಲಾ ಭಾಗ್ವತ್, ಸುರೇಖಾ ಹರಿಪ್ರಸಾದ್ ಶೆಟ್ಟಿ, ಪ್ರತಿಭಾ ರಾವ್, ಹಿರಿಯ ವಿದ್ಯಾರ್ಥಿಗಳಾದ ಆಶಾ ಸುವರ್ಣ, ರೂಪಾ ಸಂಗೊಳ್ಳಿ ಸ್ನಾತಕೋತ್ತರ ವಿದ್ಯಾರ್ಥಿಗಳಾದ ಸುಮಿತ್ರಾ ಗೌಡ, ಜ್ಯೋತಿ ಪ್ರಸಾದ್, ಮಮತಾ ಕುಕ್ಯಾನ್, ಭಾರತಿ ಆಚಾರ್ಯ, ಶಕುಂತಳ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದು ಪ್ರವೀಣ್ ಭೋಜ ಶೆಟ್ಟಿ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ಅತಿಥಿಯನ್ನು ಪರಿಚಯಿಸಿ ಕಾರ್ಯಕ್ರಮವನ್ನು ಸಂಯೋಜಿಸಿದರು.












































































































