ಅವರದ್ದು ಬರೋಬ್ಬರಿ 90ರ ವಯಸ್ಸು. ಇಂದಿಗೂ ಬತ್ತದ ಕೃಷಿಕ ತನ್ನಲ್ಲಿದ್ದ ಭೂಮಿಯಲ್ಲಿ ಜೀವಿತ ಅವಧಿಯುವುದಕ್ಕೂ ಇಳುವರಿ ಪಡೆಯಬೇಕೆಂಬ ಛಲ ಅವರದ್ದು. ಸಾಣೂರು ಗ್ರಾಮದ ಕುಂಟಲ್ಪಾಡಿ ಮಹಾಲಿಂಗಬೆಟ್ಟು ನಿವಾಸಿ ಶಿವಣ್ಣ ಶೆಟ್ಟಿ ಅವರಲ್ಲಿರುವ ಕೃಷಿ ಆಸಕ್ತಿ ಇನ್ನೂ ಕುಗ್ಗಲಿಲ್ಲ. ಬಾಲ್ಯದಿಂದಲೂ ಬತ್ತದ ಕೃಷಿಯನ್ನೇ ಅವಲಂಬಿಸಿರುವ ಅವರು ಗದ್ದೆ ಹಡಿಲು ಬೀಳಬಾರದೆಂಬ ಕಾರಣಕ್ಕೆ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಇಂದಿಗೂ ಅವರೇ ಗದ್ದೆಗೆ ಬಿತ್ತನೆ ಕಾರ್ಯ ಮಾಡುತ್ತಿದ್ದಾರೆ.
ಕೂಡು ಕುಟುಂಬದಲ್ಲಿ ಅವರೇ ಹಿರಿಯವರಾಗಿದ್ದು, ತಮ್ಮ ಮಕ್ಕಳು ಮೊಮ್ಮಕ್ಕಳ ನೆರವಿನಿಂದ ಬತ್ತದ ಕೃಷಿಯನ್ನು ಮುಂದುವರಿಸುತ್ತಿದ್ದಾರೆ. ಪ್ರಸ್ತುತ ದಿನಗಳಿಗೆ ಹೋಲಿಸಿದರೆ ಬತ್ತದ ಕೃಷಿ ಲಾಭದಾಯಕವಲ್ಲ. ಕೂಲಿ ಆಳುಗಳ ಸಮಸ್ಯೆಯ ನಡುವೆ ವರ್ಷದಿಂದ ವರ್ಷಕ್ಕೆ ಯಾಂತ್ರೀಕರಣದ ಬಾಡಿಗೆಯೂ ಹೆಚ್ಚಾಗುತ್ತಿದೆ. ಒಂದು ಕಾಲದಲ್ಲಿ ಈ ಕೃಷಿ ಭೂಮಿಯಲ್ಲಿ ಬದುಕು ಕಟ್ಟಿಕೊಳ್ಳಲಾಗಿತ್ತು. ಆದರೆ ಇಂದು ಲಾಭದಾಯಕವಲ್ಲ ಎನ್ನುವ ಕಾರಣಕ್ಕೆ ಕೃಷಿಯನ್ನು ನಿರ್ಲಕ್ಷಿಸಲು ಸಾಧ್ಯವಾಗದು ಎನ್ನುತ್ತಾರೆ ಶಿವಣ್ಣ ಶೆಟ್ಟಿ.






















































































































