ಮಡಂತ್ಯಾರು ರೋಟರಿ ಕ್ಲಬ್ನ 2026 -27ನೇ ಸಾಲಿನ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಸಭಾಭವನದಲ್ಲಿ ವಿಜೃಂಭಣೆಯಿಂದ ನಡೆಯಿತು. ಸಂಜೆ 6 ಗಂಟೆಗೆ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿ ಬಳಿಕ ಸಂಜೆ 7 ಗಂಟೆಗೆ ನಡೆದ ಅಧಿಕೃತ ಸಮಾರಂಭವು ಕುಮಾರಿ ಆರುಷಿ, ಕುಮಾರಿ ಅದಿತ್ರಿ, ಕುಮಾರಿ ಶ್ರೀನಿಕಾ ಹಾಗೂ ಸಹಪಾಠಿಗಳ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಕ್ಲಬ್ನ ಪೂರ್ವಾಧ್ಯಕ್ಷ ರೋ. ಜಯಂತ್ ಶೆಟ್ಟಿ ಅವರು ಸಭೆಯನ್ನು ಸ್ವಾಗತಿಸಿ ಎಲ್ಲರನ್ನೂ ಬರಮಾಡಿಕೊಂಡರು. ರೋ. ವಾಸುದೇವ ಗೌಡ ಅವರು ಕಳೆದ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿದರು. ನಿರ್ಗಮಿತ ಅಧ್ಯಕ್ಷ ರೋ. ಮ್ಯಾಕ್ಸಿಮ್ ಅವರು ತಮ್ಮ ಒಂದು ವರ್ಷದ ಸೇವಾ ಅವಧಿಯ ಅನುಭವಗಳನ್ನು ಹಂಚಿಕೊಂಡರು. ಪದಗ್ರಹಣ ಅಧಿಕಾರಿಯಾಗಿ ಆಗಮಿಸಿದ್ದ ಮಾಜಿ ಜಿಲ್ಲಾ ಗವರ್ನರ್ (P.D.G) ರೋ. MPHF ವಿಕ್ರಂ ದತ್ತ ಅವರು ನೂತನ ಪದಾಧಿಕಾರಿಗಳಿಗೆ ಅಧಿಕಾರ ಮತ್ತು ಗೌಪ್ಯತಾ ಪ್ರಮಾಣ ವಚನ ಬೋಧಿಸಿ ಪದಗ್ರಹಣ ವಿಧಿಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯು ವಿಶ್ವದಾದ್ಯಂತ ಮಾನವೀಯ ಸೇವೆಯ ಮೂಲಕ ಸಮಾಜದಲ್ಲಿ ಮೂಡಿಸುತ್ತಿರುವ ಮಹತ್ತರ ಬದಲಾವಣೆಗಳ ಕುರಿತು ಅವರು ವಿವರಿಸಿದರು.



ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ರೋ. ಪ್ರಶಾಂತ್ ಶೆಟ್ಟಿ ಅವರು 2026 -27ನೇ ಸಾಲಿನ ಸೇವಾ ಯೋಜನೆಗಳು ಹಾಗೂ ಕ್ಲಬ್ನ ಮುಂದಿನ ಕಾರ್ಯ ಚಟುವಟಿಕೆಗಳ ಕುರಿತು ತಮ್ಮ ದೃಷ್ಟಿಕೋನವನ್ನು ಮಂಡಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರೋ. ಪ್ರಕಾಶ್ ಕಾರಂತ್, ರೋ. ಡಾ. ಶಶಿಧರ ಡೋಂಗ್ರೆ, ರೋ. ಮೋಹನ್ ಮೂಲ್ಯ, ರೋ. ಡಾ. ಹಂಸರಾಜ ಆಳ್ವ ಹಾಗೂ ವಂದನೀಯ ಸ್ವಾಮಿ ಸ್ಟಾನಿ ಗೋವಿಯಸ್ ಅವರು ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿ, ಸಮಾಜಮುಖಿ ಸೇವಾ ಕಾರ್ಯಗಳನ್ನು ಇನ್ನಷ್ಟು ವಿಸ್ತರಿಸುವಂತೆ ಕರೆ ನೀಡಿದರು.

ನೂತನ ಕಾರ್ಯದರ್ಶಿ ರೋ. ಫ್ರಾನ್ಸಿಸ್ ವಿ.ವಿ ಅವರು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮವನ್ನು ರೋ. ತುಳಸಿದಾಸ್ ಪೈ, ರೋ. ಹರ್ಷ ನಾರಾಯಣ ಶೆಟ್ಟಿ ಹಾಗೂ ರೋ. ಅಶೋಕ್ ಗುಂಡಿಯಲ್ಕೆ ಅವರು ನಿರೂಪಿಸಿದರು. ಈ ಸಂದರ್ಭದಲ್ಲಿ ಕ್ಲಬ್ನ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಗಣ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ನೂತನ ಪದಾಧಿಕಾರಿಗಳಿಗೆ ಶುಭಾಶಯ ಕೋರಿದರು.




















































































































