

ಮೂರು ವರ್ಷದ ಹಿಂದೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕಾರ್ಯಕ್ರಮ ಉಡುಪಿಯಲ್ಲಿ ನಡೆದಾಗ ಸರಿಯಾಗಿ ಇವರನ್ನು ನೋಡಿದ್ದೆ. ಹೊಳೆಯುವ ಕಂಗಳು, ಎದೆಯುಬ್ಬಿಸಿ ನಡೆಯುವ ಪರಿ, ಕುತ್ತಿಗೆಯಲ್ಲಿ ನೇತಾಡುವ ಮಣಬಾರದ ಚೈನು, ಇವರಲ್ಲಿರುವ ಲೆಕ್ಕಕ್ಕಿಂತ ಹೆಚ್ಚಿನ ಬಿಗುಮಾನವನ್ನು ನೋಡಿ ಮನೆಯಲ್ಲಿ ಬೇಕಾದಷ್ಟು ಮಾಡಿ ಇಟ್ಟಿದ್ದಾರೇನೋ ಜಾಪು ಮಾಡಿಕೊಂಡು ತಿರುಗಲು ಒಳ್ಳೆಯದಾಯಿತು ಅಂತ ಅಂದುಕೊಂಡಿದ್ದೆ. ಆದರೆ ಈ ವ್ಯಕ್ತಿಯ ವಜನ್ನೇ ಬೇರೆ. ‘ಅಮ್ಮನ ನೆರವು’ ಎನ್ನುವ ಚಾರಿಟೇಬಲ್ ಟ್ರಸ್ಟ್ ಆರಂಭಿಸಿಕೊಂಡು ತನ್ನ ಹೆತ್ತಬ್ಬೆಯ ನೆನಪಿನಲ್ಲಿ ಈ ಹುಡುಗ ಮಾಡುವ ಕೆಲಸ ಇದೆ ಅಲ್ವಾ ಅದಕ್ಕೆ ಶ್ಲಾಘನೀಯ ಎಂಬ ಪದ ಚಿಕ್ಕದಾಗಬಹುದು. ಎರಡು ವರ್ಷದ ಹಿಂದೆ ಕಾರ್ಕಳ ತಾಲೂಕಿನ ಎಲ್ಲಾ ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ, ಬ್ಯಾಗ್ ಮತ್ತು ಕೊಡೆಯನ್ನು ವಿತರಿಸುವ ಕಾರ್ಯಕ್ರಮವನ್ನು ಇವರು ಹಮ್ಮಿಕೊಂಡು ನಮ್ಮ ಶಾಲೆಗೆ ಬಂದಾಗ ಈ ವ್ಯಕ್ತಿಯ ಮಾನವೀಯ ಕೆಲಸದ ಬಗ್ಗೆ ನನಗೆ ಸಂಪೂರ್ಣವಾಗಿ ಅರಿವಾದದ್ದು.



ದೀಪಾವಳಿ ಹಬ್ಬವನ್ನು ಮನೆಯವರ ಜೊತೆ ಸಂಭ್ರಮಿಸುವುದರ ಬದಲು ಕಾರ್ಕಳದಲ್ಲಿ ಪಟಾಕಿ ಅಂಗಡಿ ತೆರೆದು ಅದರಲ್ಲಿ ಬಂದ ಲಾಭವನ್ನು ಭಜನಾ ಮಂಡಳಿಗಳಿಗೆ ಸಮವಸ್ತ್ರ ಕೊಡಲು ಉಪಯೋಗಿಸಿದ ಪುಣ್ಯಾತ್ಮ ಈತ. ಹತ್ತು ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸರಕಾರಿ ಶಾಲೆಯಲ್ಲಿ ಕಲಿತು 90% ಗಿಂತ ಹೆಚ್ಚಿನ ಅಂಕವನ್ನು ಪಡೆದು ತೇರ್ಗಡೆಯಾದ ಬಡ ವಿದ್ಯಾರ್ಥಿಗಳಿಗೆ ಇವರು ಕೊಡುವ ವಿದ್ಯಾರ್ಥಿವೇತನ ಅವರ ಓದುವ ಕನಸಿಗೆ ನೀರೆರೆಯುವ ಚೇತನ. ಈ ಬಾರಿಯೂ 25 ಲಕ್ಷಕ್ಕಿಂತ ಹೆಚ್ಚು ಮೊತ್ತವನ್ನು ದಾನಿಗಳಿಂದ ಸಂಗ್ರಹಿಸಿ ಅದಕ್ಕೆ ತನ್ನ ಸಂಪಾದನೆಯ ಪಾಲನ್ನು ಸೇರಿಸಿ ಕೊಂಚವೂ ಚ್ಯುತಿ ಬರದ ಹಾಗೆ ಓದುವ ಕಂದಮ್ಮಗಳಿಗೆ ಅರ್ಪಿಸಿದ ನಿಜವಾದ ಸಾಧಕ. ನಮಗಂತೂ ಇಂತಹ ಕಾಯಕಗಳನ್ನು ಮಾಡಲು ಸಾಧ್ಯವಿಲ್ಲ. ಈ ರೀತಿಯ ವ್ಯಕ್ತಿಗಳಿಗೆ ಅಭಿನಂದನೆಯನ್ನಾದರೂ ಸಲ್ಲಿಸಿ ಅವರ ಪುಣ್ಯದಲ್ಲಿ ಪಾಲುದಾರರಾಗೋಣ. ಅವಿನಾಶ್ ಎಂದರೆ ನಾಶವಿಲ್ಲದ್ದು ನಿಮ್ಮ ಕೈಂಕರ್ಯವೂ ಕೂಡಾ ಮರೆಯಲಾಗದ್ದು.
ಬರಹ : ಎಳ್ಳಂಪಳ್ಳಿ ಸಂತೋಷ್ ಶೆಟ್ಟಿ



























































































































