
ನನ್ನ ಮನೆಯಲ್ಲಿರುವ ಇಷ್ಟೊಂದು ಪುಸ್ತಕಗಳನ್ನು ಮುಂದೆ ನಾನೇನು ಮಾಡಲಿ? ಆ ಹಿರಿಯರ ಇದೊಂದು ಪ್ರಶ್ನೆ ಮೊನ್ನೆಯಿಂದ ನನ್ನನ್ನು ಕಾಡುತ್ತಲೇ ಇದೆ. ಅದು ಬರೀ ಅವರೊಬ್ಬರ ಏಕಾಂಗಿ ಕಳವಳವಲ್ಲ. ಆ ಆತಂಕ ಅವರ ಬಾಯಿಂದ ಬಂದದ್ದಾದರೂ, ಅದರ ಕರಿನೆರಳು ಹಲವರ ಮನೆಯಲ್ಲೂ ಹಬ್ಬಿಕೊಂಡಿದೆ. ಕಳೆದ ಒಂದು ವರ್ಷದಲ್ಲಿ ಆರೇಳು ಮಂದಿ ಹಿರಿಯ ಬರಹಗಾರರು, ಓದುಗರು, ವಿಮರ್ಶಕರು, ಪತ್ರಕರ್ತರು, ಸಾಹಿತಿಗಳು, ಪ್ರಾಧ್ಯಾಪಕರು ಬೇರೆ ಬೇರೆ ಸಂದರ್ಭಗಳಲ್ಲಿ, ಬೇರೆ ಬೇರೆ ಶಬ್ದಗಳಲ್ಲಿ ಇದೇ ಅರ್ಥದ ಪ್ರಶ್ನೆಯನ್ನು ಮುಂದೆ ಇಟ್ಟಿದ್ದಾರೆ. ಹೌದು, ಕೆಲವರ ಮನೆಗಳಲ್ಲಿ ಪುಸ್ತಕಗಳು ರಾಶಿ ರಾಶಿಯಾಗಿ ಬಿದ್ದಿವೆ. ಓದಿ ಮುಗಿಸಿದ ಕೃತಿಗಳು, ಮನೆಯ ಬಹು ಜಾಗ ಹಿಡಿದಿರುವ ಡೈಜೆಸ್ಟ್ಗಳು, ಯಾವುದೋ ಕಾಲದಿಂದ ಅವರಿಗೆ ಬಂದ ಗೌರವ ಪ್ರತಿಗಳು, ಕಾಲದ ವಾಸನೆ ಹೊತ್ತ ನಿಯತಕಾಲಿಕಗಳು, ಮಡಚಿ ಇಟ್ಟ ದಿನಪತ್ರಿಕೆಗಳು, ಮಣಬಾರದ ಗಂಭೀರ ಸಂಶೋಧನಾ ಗ್ರಂಥಗಳು, ಅಟ್ಟದಲ್ಲಿ, ಕಿಟಕಿಯ ಅಂಚಿನಲ್ಲಿ, ಊಟದ ಟೇಬಲ್ ನಲ್ಲಿ, ಎಲ್ಲೆಲ್ಲಿ ಜಾಗ ಉಂಟು ಅಲ್ಲೆಲ್ಲಾ ಹರಡಿಕೊಂಡ ಇವೆಲ್ಲವೂ ಒಟ್ಟಿಗೆ ಮನೆ ತುಂಬಾ ಮೌನ ಸಾಕ್ಷಿಯಾಗಿ ನಿಂತಿವೆ. ಬಹುತೇಕ ನಿಮ್ಮ ಕೆಲವರ ಮನೆ ಮನದಲ್ಲಾದರೂ ಇದೇ ತರದ ಒಂದು ಅಸ್ವಸ್ಥತೆ ಕಣ್ಣಿಗೆ ಕಾಣದಂತೆ ಕುಳಿತು ಕೊಂಡಿರಬಹುದೇನೋ. ನನಗಿಂತ ಹಿರಿಯ ತಲೆಮಾರಿನವರ ಒಂದು ವಿಶೇಷ ಗುಣ ಎಂದರೆ, ಓದು ಅವರಿಗೆ ಕೇವಲ ಉದ್ಯೋಗದ ಅವಶ್ಯಕತೆಯಾಗಿರಲಿಲ್ಲ, ಬದುಕಿನ ಸಹಜ ವಿಸ್ತರಣೆ. ಆ ರಾಶಿ ಪುಸ್ತಕಗಳನ್ನು ಅವರು ತಪಸ್ಸಿನಂತೆ ಕೂತು ಓದಿದ್ದು ಪದವಿ ಪುರಸ್ಕಾರಗಳಿಗಾಗಿ ಅಲ್ಲ, ತಮ್ಮೊಳಗಿನ ಅಸಮಾಧಾನವನ್ನು ತಣಿಸಲು. ವಿಜ್ಞಾನದ ಶಿಕ್ಷಕರಾಗಿರಲಿ, ರೈತರಾಗಿರಲಿ, ಹೋಟೆಲ್ ಉದ್ಯಮಿಗಳಾಗಿರಲಿ, ಬಸ್ ಚಾಲಕರಾಗಿರಲಿ ತಮ್ಮ ವೃತ್ತಿಯ ಮಿತಿಗಳನ್ನು ಮೀರಿ ಓದಿದವರು. ಓದುವುದು ಅವರಿಗೆ ಕೇವಲ ಹವ್ಯಾಸವಲ್ಲ, ಬುದ್ಧಿಯ ಹಸಿವು.


ನಮ್ಮೂರಿನ ಮಣಿಕ್ಕಾರದ ಗೋಪಾಲಕೃಷ್ಣ ಶಾನುಭೋಗರ ಮನೆಯನ್ನೊಮ್ಮೆ ನೋಡಿದರೆ ಸಾಕು. ಸಾವಿರಾರು ಪುಸ್ತಕಗಳು. ಕನ್ನಡ ಮಾತ್ರವಲ್ಲ, ಬೇರೆ ಭಾಷೆಗಳ ಕೃತಿಗಳು, ಕಾದಂಬರಿಗಳು, ಹಳೆಯ ರೀಡರ್ಸ್ ಡೈಜೆಸ್ಟ್, ಕಸ್ತೂರಿ, ಮಯೂರ, ತುಷಾರ ಇವೆಲ್ಲವೂ ಒಂದೇ ಜಾಗದಲ್ಲಿ ರಾಶಿ ಬಿದ್ದು ಉಸಿರಾಡುತ್ತಿವೆ. ಅವರ ಮಗ ಲಕ್ಷ್ಮೀನಾರಾಯಣ ಶಾನುಭಾಗ್ ಐದಾರು ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರೂ, ಹಿರಿಮಗನಾಗಿ ಕೃಷಿಯ ಜವಾಬ್ದಾರಿ ಹೊತ್ತು ಮಣ್ಣಿನ ಜೊತೆಗೇ ಉಳಿದವರು. ತೋಟದೊಳಗಡೆ ಕೃಷಿಯಾಳುಗಳು ಕಳೆ ತೆಗೆಯುವ ಹೊತ್ತು ಇವರು ಅಡಿಕೆ ಹಾಳೆಯನ್ನು ಅಡಿಗೆ ಹಾಕಿ ಅದರ ಮೇಲೆ ಕೂತು ಪುಸ್ತಕ ಓದುತ್ತಾರೆ. ಯಾರದ್ದೋ ಮನೆಯ ಗೊಬ್ಬರ ತನ್ನ ತೋಟಕ್ಕೆ ಬರಲು ಲೋಡು ಆಗುವಾಗ ಗಾಡಿಯೊಳಗಡೆ ಪುಸ್ತಕ ಹಿಡಿದು ಧ್ಯಾನಸ್ಥರಾಗುತ್ತಾರೆ. ನಾಟಿ ಹೆಂಗಸರೆಲ್ಲಾ ಪಾಡ್ದನ ಹೇಳುತ್ತಾ ಗದ್ದೆಯಲ್ಲಿ ನೇಜಿ ನೆಡುವಾಗ ಇವರು ಮಾತ್ರ ಅದೇ ಗದ್ದೆಯ ಬದುವಿನಲ್ಲಿ ಕೂತು ಭೈರಪ್ಪರ ಮಂದ್ರವನ್ನು ಓದುತ್ತಾರೆ. ಆ ಮನೆಯ ನಿಜವಾದ ಆಸ್ತಿ ಅವರ ಪದವಿಗಳಲ್ಲ. ಓದಿ ಮುಗಿಸಿ ಅಲ್ಲಿ ಶಾಂತವಾಗಿ ಬಿದ್ದಿರುವ ಆ ಪುಸ್ತಕಗಳೇ. ಅವು ಕೇವಲ ಕಾಗದದ ಗುಡ್ಡಗಳಲ್ಲ ಹಳೆಯ ತಲೆಮಾರಿನ ಕುತೂಹಲ, ಅವರ ಹಸಿವು, ಅವರ ನಂಬಿಕೆಗಳು ಎಲ್ಲವೂ ಮೌನವಾಗಿ ಅಲ್ಲಿ ಜೀವಂತವಾಗಿವೆ. ಹಾಗಂತ ಇದು ಕೇವಲ ಒಂದು ಮನೆಯ ಕಥೆಯಲ್ಲ. ರಾಜ್ಯದ ಹಲವಾರು ಹಿರಿಯ ಸಜ್ಜನ ಓದುಗರ ಮನೆಮನೆಗಳಲ್ಲಿ ಇದೇ ದೃಶ್ಯವಿದೆ. ಕಾಲೇಜು ವಿಶ್ವವಿದ್ಯಾಲಯಗಳ ಉನ್ನತ ಪದವಿಗಳಿಲ್ಲದೆ, ಪುಸ್ತಕದ ದಾರಿಯಲ್ಲೇ ಜೀವನವನ್ನು ಅರ್ಥ ಮಾಡಿಕೊಂಡ ಅವರಲ್ಲಿ ಓದುಲೋಕದ ಮೂಲಕವೇ ಸೃಷ್ಟಿಸಿಕೊಂಡ ಒಂದು ಜಗತ್ತಿದೆ. ಆ ಪುಸ್ತಕಗಳನ್ನು ಅವರು ಸಂಗ್ರಹಿಸಿದ್ದು ಕೇವಲ ಹವ್ಯಾಸಕ್ಕಾಗಿ ಅಲ್ಲ, ಬದುಕನ್ನು ವಿಶಾಲಗೊಳಿಸಿಕೊಳ್ಳಲು. ಇವರೆಲ್ಲಾ ಬರೀ ಪೈಸೆಗೆ ಪೈಸೆ ಸೇರಿಸಿ ಸಾಯುವ ಹೊತ್ತಿಗೆ ಮೂಟೆಗಟ್ಟಲೆ ದುಡ್ಡು ಉಳಿಸಲಿಲ್ಲ, ಪುಸ್ತಕಗಳನ್ನೇ ಉಳಿಸಿದ್ದಾರೆ.
ಆದರೆ ಈಗ ಅಂತಹ ಮನೆಗಳಲ್ಲಿ ಒಂದು ಖಾಲಿತನ ಕಾಣಿಸುತ್ತಿದೆ. ಎರಡನೆಯ, ಮೂರನೆಯ ತಲೆಮಾರು ಹೊಸ ಮಾಧ್ಯಮದ ಕಡೆಗೆ ಚಕಚಕನೆ ಓಡಿ ಹೋಗಿದೆ. ಹಿರಿಯರ ಓದುಕಣ್ಣು ಮಸುಕಾಗುತ್ತಾ ಬಂದಂತೆ, ಆ ಪುಸ್ತಕ ರಾಶಿಯ ಮೇಲಿನ ದೂಳು ದಪ್ಪವಾಗಿದೆ. ಹೊತ್ತಗೆಯೊಂದಿನ ಮೌನ ಸಂಭಾಷಣೆ ನಿಂತುಹೋಗಿದೆ. ಪುಸ್ತಕಗಳು ಅಲ್ಲೇ ಇವೆ, ಆದರೆ ಅವುಗಳ ಜೊತೆ ನಿತ್ಯ ಮಾತನಾಡುವವರು ಇಲ್ಲ. ಇಲ್ಲೇ ಸಹಜವಾಗಿ ಆರಂಭವಾಗುವ ಪ್ರಶ್ನೆ ಮುಂದೆ ಈ ಪುಸ್ತಕಗಳ ವಿಲೇವಾರಿ ಹೇಗೆ? ಭವಿಷ್ಯದಲ್ಲಿ ಇವುಗಳನ್ನು ಓದುವವರು ಯಾರು? ಹಾಳಾಗದ ರೀತಿಯಲ್ಲಿ ಕಾಪಾಡುವವರು ಯಾರು? ಮನೆಯ ಹಿರಿಯ ಓದುಗ, ಇವುಗಳ ಖರೀದಿದಾರ, ನಿಜದ ವಾರಸುದಾರ ತೀರಿದ ಮೇಲೆ ಸುರಕ್ಷಿತವಾಗಿ ಇವುಗಳನೆಲ್ಲಾ ಕೈ ಹಿಡಿಯಲು ಮುಂದೆ ಬರುವವರು ಯಾರು? ಹೌದು, ಈ ಭವಿಷ್ಯ ಊಹಿಸಿಯೇ ಕೆಲವರು ತಾನಿರುವಾಗಲೇ ಇವುಗಳಿಗೊಂದು ಗತಿ ಸಿಗಲಿ ಎಂದು ಸ್ಥಳೀಯ ಕಾಲೇಜುಗಳಿಗೆ, ವಿಶ್ವವಿದ್ಯಾನಿಲಯಗಳಿಗೆ ಪ್ರತಿ ಪುಸ್ತಕಗಳ ಮೇಲೆ “ಪ್ರೀತಿಯಿಂದ ಗೌರವದ ಕೊಡುಗೆ”ಎಂದು ಷರಾ ಬರೆದು ನೀಡುತ್ತಾರೆ. ಆದರೆ ಅಲ್ಲಿ ಇವು ಬದುಕುವುದು ಅಲ್ಲಿರುವವರ ಆಸಕ್ತಿಗನುಗುಣವಾಗಿ. ಪುಸ್ತಕ ಕಾಳಜಿಯ ಗ್ರಂಥ ಪಾಲಕನೋ, ಭಾಷಾ ಉಪನ್ಯಾಸಕನೋ ಆ ವ್ಯಕ್ತಿ ಅಲ್ಲಿ ಇದ್ದಷ್ಟೂ ಕಾಲ. ನಂತರ?
ಪುಸ್ತಕಗಳು ನಿಧಾನವಾಗಿ ‘ವ್ಯರ್ಥ ವಸ್ತು’ಗಳ ಪಟ್ಟಿಗೆ ಸೇರುತ್ತಿವೆ. ದಿನವೂ ಮನೆಗೆ ಬರುವ ದೈನಿಕ, ಮಾಸಪತ್ರಿಕೆ ಆ ಮನೆಯ ಕಿರಿಯರಿಗೆ ನವ ನಾಗರಿಕ ಮನಸುಗಳಿಗೆ ಬರೀ ಕಸದಂತೆ ಕಾಣಿಸುತ್ತಿವೆ. ಎಂತದ್ದೇ ಘನಂದಾರಿ ಕೆಲಸವಿದ್ದರೂ ಆರಾಮವಾಗಿ ಜಗಲಿಯ ಒಂದು ಮೂಲೆಯ ಈಸಿಯರಿನಲ್ಲಿ ಕೂತು ಆ ಪತ್ರಿಕೆಯ ಹೆಡ್ಡಗ್ನಿಂದ ಹಿಡಿದು ಕೊನೆಗೆ ಪ್ರಕಾಶಕರ ಹೆಸರಿನವರೆಗೆ ಎಲ್ಲವನ್ನೂ ಓದಿ ನಿಟ್ಟುಸಿರು ಬಿಟ್ಟ ಹಿರಿಯ ಪರಂಪರೆ ನಮ್ಮದು. ಗಂಡ ಪೇಪರ್ ಓದುವಾಗ ಅಲ್ಲೇ ಪಕ್ಕದಲ್ಲಿ ಕೂತ ಪತ್ನಿ ಆ ಓದು ಸುಖವನ್ನು ಮಗ್ನತೆಯಿಂದ ಅನುಭವಿಸಿದವರು. ಈ ದೇಶದ ಯಾವುದಾದರೂ ಸಾಹಿತಿಗಳ ಮನೆಯೊಳಗೆ ಹೋಗಿ ನೋಡಿ ಬರೆಯುವ ಟೇಬಲ್ ಸುತ್ತಲೂ ಪುಸ್ತಕಗಳ ರಾಶಿ. ಗೌರವ ಪ್ರತಿಗಳು, ವಿಮರ್ಶೆಗೆ ಬಂದ ಕೃತಿಗಳು, ತಮ್ಮದೇ ಬರಹಗಳು ಅವುಗಳ ನಡುವೆ ಧ್ಯಾನಸ್ಥರಾಗಿ ಬರೆಯುವ ಲೇಖಕ. ಆದರೆ ಅದೇ ಪುಸ್ತಕಗಳು, ಅದೇ ಮನೆಯ ಅವರದ್ದೇ ಮಕ್ಕಳಿಗೆ, ಮೊಮ್ಮಕ್ಕಳಿಗೆ ಅನಗತ್ಯ, ನಿರುಪಯುಕ್ತ ವಸ್ತುಗಳಂತೆ ಕಾಣುತ್ತಿವೆ. ಇಲ್ಲಿ ಸಮಸ್ಯೆ ಇರುವುದು ಕೇವಲ ಓದುಗರ ಕೊರತೆಯದ್ದಲ್ಲ. ಸಮಸ್ಯೆ ಓದಿನ ಮೌಲ್ಯ ಕಳೆದು ಹೋಗುತ್ತಿರುವುದು. ಸರ್ಕಾರದ ಅಕಾಡೆಮಿಗಳು, ಪ್ರಾಧಿಕಾರಗಳು, ವಿಶ್ವವಿದ್ಯಾನಿಲಯದ ಪ್ರಸಾರಾಂಗಗಳು, ಅಧ್ಯಯನ ಕೇಂದ್ರಗಳು ಮತ್ತೆ ಮತ್ತೆ ಹೊಸ ಹೊಸ ಪುಸ್ತಕಗಳನ್ನು ಮುದ್ರಿಸುತ್ತಲೇ ಇವೆ. ಆದರೆ ಈಗಾಗಲೇ ಓದಿದ, ಎಲ್ಲೋ ಚದುರಿ ರಾಶಿ ಬಿದ್ದಿರುವ ಅತ್ಯಪೂರ್ವ ಜ್ಞಾನನಿಧಿಯಾಗಿರುವ ಇಂಥ ಅಗಣಿತ ಪುಸ್ತಕಗಳನ್ನು ಸಂರಕ್ಷಿಸುವ, ಹಂಚುವ ವ್ಯವಸ್ಥೆಯನ್ನು ದೊಡ್ಡ ಪ್ರಮಾಣದಲ್ಲಿ ಮಾಡುತ್ತಿಲ್ಲ. ಹೊಸದನ್ನು ಸೃಷ್ಟಿಸುವ ಉತ್ಸಾಹ ಇದೆಯೇ ಹೊರತು ಹಳೆಯದನ್ನು ಉಳಿಸುವ ಉಮೇದು ಭಾಗಶಃ ಅವರಿಗಿಲ್ಲ.
ಮೊನ್ನೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹೇಳಿದ ಒಂದು ಮಾತು ಇನ್ನೂ ಕಿವಿಯಲ್ಲಿ ಉಳಿದಿದೆ. ನಾಲ್ಕೈದು ದಶಕದ ಹಿಂದೆ ಕರ್ನಾಟಕದ ಜನಸಂಖ್ಯೆ ಮೂರು ಕೋಟಿ ಇರುವಾಗಲೇ ಕನ್ನಡ ಪುಸ್ತಕಗಳ ಮುದ್ರಣ ಸಾವಿರ ಪ್ರತಿಗಳಾಗುತ್ತಿತ್ತು. ಈಗ ಜನಸಂಖ್ಯೆ ಏಳು ಕೋಟಿ ದಾಟಿದೆ. ಆದರೆ ಮುದ್ರಣ ಬರೀ ೩೦೦-೫೦೦ ಪ್ರತಿಗಳಿಗೆ ಇಳಿದಿದೆ. ಇದರ ಅರ್ಥ ಏನು? ಓದುಗರ ಸಂಖ್ಯೆ ಹೆಚ್ಚಾಗಿದೆ ಎಂದರೆ ಈ ಅಂಕೆಗಳು ಏನನ್ನು ಹೇಳುತ್ತವೆ? ಒಂದು ಕಡೆ ಪುಸ್ತಕ ಮೇಳಗಳಲ್ಲಿ ತುಳಿದು ಹೋಗುವಷ್ಟು ಜನಸಾಗರ, ಇನ್ನೊಂದು ಕಡೆ ನಿಶ್ಶಬ್ದವಾಗಿ ಬಾಗಿಲು ಮುಚ್ಚುವ ಪುಸ್ತಕ ಅಂಗಡಿಗಳು. ಇದು ಕೇವಲ ವ್ಯತ್ಯಾಸವಲ್ಲ, ಇದು ನಮ್ಮ ಓದಿನ ಸಂಸ್ಕೃತಿಯೊಳಗಿನ ಮೌನ ಬಿರುಕು. ಈ ಬಿರುಕು ಏನನ್ನೋ ಹೇಳುತ್ತಿದೆ ನಾವು ಓದುವುದನ್ನು ಬಿಟ್ಟಿಲ್ಲ; ನಾವು ಓದುವ ದಾರಿಯನ್ನು ಬದಲಾಯಿಸಿದ್ದೇವೆ ಎಂದು .ಇವತ್ತು ಯುವಕರ ಕೈಯಲ್ಲಿ ಪುಸ್ತಕ ಕಡಿಮೆ, ಆದರೆ ಓದಿಲ್ಲ, ಓದುತ್ತಿಲ್ಲ ಎಂದಲ್ಲ. ಅವನ ಕಣ್ಣ ಮುಂದೆ ಮೊಬೈಲ್ ಪರದೆ ಇದೆ; ಅದರೊಳಗೆ ಕಥೆಗಳು, ಲೇಖನಗಳು, ಅಭಿಪ್ರಾಯಗಳು ಪ್ರವಾಹದಂತೆ ಹರಿಯುತ್ತಿವೆ. ಹಳೆಯ ಕಾಲದಂತೆ ಪುಸ್ತಕವನ್ನು ಹಿಡಿದು ಕುಳಿತು ಓದುವ ಧೈರ್ಯ, ಸಮಯ, ಮನಸ್ಸು ಇವೆಲ್ಲಾ ಬದಲಾಗಿದೆ. ಓದಿನ ಸ್ವರೂಪವೇ ಬೇರೆ ದ್ರವವಾಗಿ ಬದಲಾಗಿದೆ. ಹೀಗಿರುವಾಗ ಪುಸ್ತಕಗಳನ್ನು ಏನು ಮಾಡಬೇಕು? ಎಂಬ ಪ್ರಶ್ನೆ, ವಾಸ್ತವದಲ್ಲಿ ನಮ್ಮ ಓದಿನ ಸಂಸ್ಕೃತಿಯನ್ನು ಹೇಗೆ ಉಳಿಸಬೇಕು? ಎಂಬ ದೊಡ್ಡ ಪ್ರಶ್ನೆಯ ನೆರಳು. ನಾವು ಪುಸ್ತಕಗಳನ್ನು ‘ವಸ್ತು’ ಎಂದು ನೋಡಿದಷ್ಟು ದಿನ, ಅವು ನಮ್ಮ ಮನೆಗಳಲ್ಲಿ ಧೂಳು ಸೇರುತ್ತವೆ. ಒಂದು ಶೆಲ್ಫ್, ಒಂದು ಕಪಾಟು, ಒಂದು ಕೋಣೆ ಅಷ್ಟೇ ಅವುಗಳ ಗಡಿ. ಆದರೆ ಪುಸ್ತಕವೆಂದರೆ ವಸ್ತುವಲ್ಲ; ಅದು ಒಂದು ಜ್ಞಾನ ಪ್ರವಾಹ. ಅದು ಹರಿಯಬೇಕು. ಒಂದು ಮನೆಯಲ್ಲಿ ಓದಿದ ಪುಸ್ತಕ, ಮತ್ತೊಂದು ಮನೆಯಲ್ಲಿ ಹೊಸ ಓದನ್ನು ಹುಟ್ಟಿಸಬೇಕು. ನಮ್ಮ ಹಳ್ಳಿಗಳಲ್ಲಿ, ಊರುಗಳಲ್ಲಿ, ಪುಸ್ತಕಗಳು ಒಂದೆಡೆಯಿಂದ ಎದ್ದು ಮತ್ತೆ ಹತ್ತು ಮನೆ ಮನಸ್ಸಿಗೆ ಓಡಾಡುವ ವ್ಯವಸ್ಥೆ ಹುಟ್ಟಬೇಕು. ‘ನನ್ನ ಪುಸ್ತಕ’ ಎಂಬ ಸ್ವಾರ್ಥ ‘ನಮ್ಮ ಓದು’ ಎಂಬ ಸಮೂಹ ಮನಸ್ಸಿಗೆ ಬದಲಾಗಬೇಕು.
ಆದರೆ ಇಲ್ಲಿ ಇನ್ನೊಂದು ಸೂಕ್ಷ್ಮ ಅಂಶ ಇದೆ. ಪುಸ್ತಕವನ್ನು ಇನ್ನೊಬ್ಬರಿಗೆ ಕೊಡುವುದರಿಂದ ಮಾತ್ರ ಓದು ಹರಡುವುದಿಲ್ಲ. ಅದರ ಹಿಂದೆ ಇರುವ ಅನುಭವ, ಆ ಓದಿನ ಹೊಳಪು ಅದನ್ನು ಪರಸ್ಪರ ಕೂಡುಕೂಟದಲ್ಲಿ ಹಂಚಿದಾಗ ಮಾತ್ರ ಅದು ಮತ್ತೊಬ್ಬನೊಳಗೆ ಬೌದ್ಧಿಕ ಬೆಂಕಿ ಹಚ್ಚುತ್ತದೆ. ಒಂದು ಪುಸ್ತಕ ಓದಿದ ನಂತರ, ಅದರ ಬಗ್ಗೆ ಮಾತನಾಡುವ ಚಿಕ್ಕ ವಲಯಗಳು ಹುಟ್ಟಬೇಕು. ಮನೆಗಳ ಜಗಲಿಗಳು, ಶಾಲೆಗಳ ತರಗತಿಗಳು, ಕಾಲೇಜುಗಳ ಮಂಟಪಗಳು ಎಲ್ಲೆಡೆ ಓದಿನ ಮಾತುಕತೆ ನಡೆಯಬೇಕು. ಈಗಾಗಲೇ ರಾಜ್ಯದ ಹಲವೆಡೆ ಇಂತಹ ಪುಟ್ಟ ವಲಯಗಳು ಹುಟ್ಟಿಕೊಂಡಿವೆ. ಅವು ಬೀಜಗಳು. ಆ ಬೀಜಗಳು ಬುದ್ಧಿಯ ಕಾಡಾಗಬೇಕು. ಇನ್ನೊಂದು ದಾರಿ ಡಿಜಿಟಲ್. ಆದರೆ ನಾವು ಡಿಜಿಟಲ್ ಎಂದರೆ ಕೇವಲ ಪುಸ್ತಕ ಪುಟಗಳ ಸ್ಕ್ಯಾನಿಂಗ್ ಎಂದುಕೊಂಡಿದ್ದೇವೆ. ಅದು ಸಾಕಾಗುವುದಿಲ್ಲ. ಒಂದು ಪುಸ್ತಕದ ಜೀವ ಅದರ ಅಕ್ಷರದಲ್ಲೇ ಇಲ್ಲ; ಅದರ ಪ್ರವೇಶದಲ್ಲಿದೆ. ಡಿಜಿಟಲ್ ಲೋಕದಲ್ಲಿ ಪುಸ್ತಕಗಳನ್ನು ಸಂರಕ್ಷಿಸುವುದು, ಸರಿಯಾಗಿ ವರ್ಗೀಕರಿಸುವುದು, ಯಾರಿಗಾದರೂ ಬೇಕಾದಾಗ ಸುಲಭವಾಗಿ ಸಿಗುವಂತೆ ಮಾಡುವುದು ಇದು ಒಂದು ದೊಡ್ಡ ಬೌದ್ಧಿಕ ಯೋಜನೆ. ಇಲ್ಲವಾದರೆ, ನಾವು ಕಾಗದದ ಧೂಳನ್ನು ಡಿಜಿಟಲ್ ಧೂಳಿಗೆ ಬದಲಾಯಿಸಿದಷ್ಟೇ. ಶಿಕ್ಷಣ ಸಂಸ್ಥೆಗಳ ಪಾತ್ರ ಇಲ್ಲಿ ನಿರ್ಣಾಯಕ. ನಮ್ಮ ಶಾಲಾ ಕಾಲೇಜುಗಳಲ್ಲಿ ಗ್ರಂಥಾಲಯಗಳು ಬಹಳಷ್ಟು ಬಾರಿ ಬೀಗ ಹಾಕಿದ ಕಪಾಟುಗಳಾಗಿವೆ. ಅವು ಅಲಂಕಾರ, ದಾಖಲೆ ಅಥವಾ ಯುಜಿಸಿ ನ್ಯಾಕಿನ ‘ಇನ್ಸ್ಪೆಕ್ಷನ್’ಗಾಗಿ ಉಳಿದಿವೆ. ಆದರೆ ಗ್ರಂಥಾಲಯವು ಒಂದು ಸಂಸ್ಥೆಯ ಹೃದಯವಾಗಬೇಕು. ಅಲ್ಲಿ ರಕ್ತ ಸಂಚಾರದಂತೆ ಪುಸ್ತಕಗಳು ಹರಿಯಬೇಕು. ವಿದ್ಯಾರ್ಥಿ ಗ್ರಂಥಾಲಯಕ್ಕೆ ಹೋಗುವುದಲ್ಲ; ಗ್ರಂಥಾಲಯವೇ ವಿದ್ಯಾರ್ಥಿಯೊಳಗೆ ಬರಬೇಕು. ಕೊನೆಗೆ, ಓದನ್ನು ನಾವು ಮತ್ತೆ ಸಾಮಾನ್ಯಗೊಳಿಸಬೇಕಾಗಿದೆ. ಓದುವುದು ಒಂದು ವಿಶೇಷ ಗುಣ, ಬುದ್ಧಿಜೀವಿಗಳ ವೈಶಿಷ್ಟ್ಯ ಈ ಭ್ರಮೆ ಮುರಿಯಬೇಕು. ಓದುವುದು ಅನ್ನದಂತೆ, ಉಸಿರಿನಂತೆ ಎಲ್ಲರ ಬದುಕಿನ ಅವಶ್ಯಕತೆ ಎಂದು ಮರಳಿ ತಿಳಿಯಬೇಕು. ಶಾಲೆಗಳಲ್ಲಿ, ಕಾಲೇಜುಗಳಲ್ಲಿ, ಪ್ರತಿವಾರ ಒಂದು ಪುಸ್ತಕದ ಬಗ್ಗೆ ಮಾತುಕತೆ, ಪ್ರಶ್ನೆ, ಚರ್ಚೆ ನಡೆಯಬೇಕು. ಬಹುಮಾನವಾಗಿ ಆ ಮಗುವಿಗೆ ಮತ್ತೆ ಪುಸ್ತಕವೇ ಸಿಗಬೇಕು. ಅಲ್ಲಿ ಒಂದು ಚಕ್ರ ಹುಟ್ಟುತ್ತದೆ. ಓದು, ಹಂಚಿಕೆ, ಪ್ರೇರಣೆ ಮತ್ತೊಂದು ಓದು. ಹೀಗಾದಾಗ, ಹಳೆಯ ಪುಸ್ತಕಗಳನ್ನು ಏನು ಮಾಡಬೇಕು? ಎಂಬ ಪ್ರಶ್ನೆ ನಿಧಾನವಾಗಿ ಮಾಯವಾಗುತ್ತದೆ. ಏಕೆಂದರೆ, ಆಗ ಯಾವುದೇ ಪುಸ್ತಕ ಹಳೆಯದು ಆಗುವುದಿಲ್ಲ. ಅದು ಓದಿಗೆ ಮರಳಿದ ಕ್ಷಣದಿಂದಲೇ ಮತ್ತೆ ಹೊಸದಾಗುತ್ತದೆ.!
ಬರಹ : ನರೇಂದ್ರ ರೈ ದೇರ್ಲ

























































































































