
ಮೊನ್ನೆ ಒಂದು ಹೊಸ ಟ್ರೆಂಡ್ ಬಗ್ಗೆ ಕೇಳಿದೆ. ನಿಜಕ್ಕೂ ಒಂದು ಕ್ಷಣ ಶಾಕ್ ಆದೆ. ಈಗೀಗ ಬಂಟರಲ್ಲಿ ಮದುವೆಗೆ ಹುಡುಗಿ ಸಿಗುತ್ತಿಲ್ಲ. ಒಂದು ಕಾಲದಲ್ಲಿ ವರದಕ್ಷಿಣೆ ಎಂದು ಅತಿಯಾಗಿ ಅಹಂಕಾರದಿಂದ ಬೀಗುತ್ತಿದ್ದ ಸಮುದಾಯದ ಗಂಡುಗಳು ಇಂದು ವಧು-ದಕ್ಷಿಣೆ ಕೊಟ್ಟರೂ ಹೆಣ್ಣು ಸಿಗದೆ ಮದುವೆ ಆಗದೆ ಹಾಗೆ ಉಳಿದುಕೊಂಡಿದ್ದಾರೆ. ಸಾಕಷ್ಟು ಹೆಸರು ಮಾಡಿದ ಒಳ್ಳೊಳ್ಳೆ ಮನೆತನವಿದ್ದರೂ ಕೈಯಲ್ಲಿ ಸಂಪಾದಿಸುವ ಉದ್ಯೋಗವಿದ್ದರೂ ಎತ್ತರ ತೂಕ ಸರಿಯಾಗಿದ್ದರೂ ಜಾತಕ ಕೂಡಿದ್ದರೂ ಇತ್ತೀಚೆಗೆ ಹುಡುಗಿಯರ ಬೇರೆ ಬೇರೆ ಡಿಮ್ಯಾಂಡು ಪೂರೈಸಲಾಗದ ನಮ್ಮ ಈ ಸಮಾಜದ ಅದೆಷ್ಟೋ ಗಂಡುಗಳು ಮದುವೆಯಾಗದೆ ಸೂಕ್ತ ಹುಡುಗಿಗಾಗಿ ವರ್ಷ 40 ದಾಟಿದರೂ ಇನ್ನೂ ಕಾಯುತ್ತಲೇ ಇದ್ದಾರೆ. ಸರಕಾರಿ ಉದ್ಯೋಗ ಬೇಡ, ಡ್ರಿಂಕ್ಸ್ ಬೇಡ, ಸ್ಮೋಕ್ ಬೇಡ, ಊರಲ್ಲಿರುವವ ಬೇಡ, ಬೆಂಗಳೂರೇ ಬೇಕು. ಫಾರಿನ್ ಬೇಡ, ದಪ್ಪ ಬೇಡ, ಕುಳ್ಳ ಬೇಡ, ಕುಡಿಯದೇ ಇರುವವ ಕೂಡಾ ಬೇಡ ಎಂದು ಕಾರಣ ಕೊಡುವ ಹೆಣ್ಣುಗಳು, ಇತ್ತೀಚೆಗೆ ಮನೆಯಲ್ಲಿ ಹಳೆಯ ಗುಜರಿ ಬೇಡ (ಅತ್ತೆ ಮಾವ ಇಲ್ಲದ ಹುಡುಗ ಬೇಕು) ಎಂದು ಹೇಳುತ್ತಿರುವುದು ಅಹಂಕಾರದ ಪರಮಾವಧಿ ಅಲ್ಲವೇ.

ಒಂದು ಕಾಲದಲ್ಲಿ ಬಂಟ ಮನೆತನದಲ್ಲಿ ಹುಡುಗ ಹುಟ್ಟಿದಾಗ ಪಡುತ್ತಿದ್ದ ಸಂಭ್ರಮ ಹಾಗೆ ಹೆಣ್ಣು ಹುಟ್ಟಿದಾಗ ಮೂಗು ಮುರಿಯುತ್ತಿದ್ದ ಕಾಲವೊಂದಿತ್ತು, ಹುಡುಗ ಅಂದರೆ ದೊಡ್ಡ ಮೂಟೆ ಸಿಗುತ್ತದೆ. ಹುಡುಗಿ ಅಂದರೆ ನಾಳೆ ಮದುವೆ ಮಾಡುವಾಗ ದೊಡ್ಡ ಮೂಟೆ ಕೊಡಲು ರೆಡಿ ಇರಬೇಕು ಎನ್ನುವ ಮನಸ್ಥಿತಿ. ಕೊನೆ ಕೊನೆಗೆ ವರದಕ್ಷಿಣೆಯ ಅಹಂಕಾರ ತಲೆಗೆ ಏರಿದಾಗ ದೇವರಿಗೂ ಬೇಸರವಾಗಿ ಇಂದು ಪರಿಸ್ಥಿತಿಯನ್ನೇ ಉಲ್ಟಾ ಮಾಡಿಸಿ ಬಿಟ್ಟಿದ್ದಾನೆ. ಹೆಣ್ಣುಗಳೆಂದರೆ ಮೂಗು ಮುರಿಯುವ ಅದೇ ಜನ ಒಂದು ಹೆಣ್ಣು ಮಗು ಕೊಡಪ್ಪ ತಂದೆ ಎಂದು ದೇವರಿಗೆ ಮೊರೆ ಹೋಗುವ ಪರಿಸ್ಥಿತಿ ತಂದಿದ್ದಾನೆ. ಇಲ್ಲಿ ಹೆಣ್ಣು ಮಕ್ಕಳಿಗೆ ಸರಿಯಾದ ಸಂಸ್ಕಾರ, ಸಂಸ್ಕೃತಿ ಹೇಳಿಕೊಟ್ಟರಷ್ಟೇ ಮುಂದಿನ ದಿನಗಳಲ್ಲಿ ದೇವರ ಶಾಪಕ್ಕೆ ಮತ್ತೆ ಗುರಿಯಾಗದೆ ಇರಲು ಸಾಧ್ಯ. ನಿಜ! ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಮುಂದಿನ ದಿನಗಳಲ್ಲಿ ಗುಜರಿ ಬೇಡ ಎನ್ನುವ ಮಗಳ ತಂದೆಯಯೋ ತಾಯಿಯೋ ನೀವಾಗಿದ್ದರೆ ನಿಮ್ಮ ಮಗಳಿಗೆ ತಿಳಿಸಿ ಹೇಳಿ. ಇಲ್ಲ ಆಕೆ ಡಿಮಾಂಡ್ ಕೇಳಿ ನೀವು ಹೌದು ಎಂದು ತುಟಿಯಂಚಲ್ಲಿ ನಗುವಿರಾದರೆ, ಅದೇ ನಿಮ್ಮ ಮಗನ ಹೆಂಡತಿಯಾಗಿ ಬರುವವಳು ನಿಮ್ಮನ್ನು ಅದೇ ಗುಜರಿ ತರ ಟ್ರೀಟ್ ಮಾಡುವುದರಲ್ಲಿ ಸಂದೇಹವೇ ಇರದು ಅಲ್ಲವೇ.
ಬರಹ : ಡಾ. ಶಶಿಕಿರಣ್ ಶೆಟ್ಟಿ


























































































































