
ಫೆಬ್ರವರಿ 18 ರಂದು ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಪಕ್ಷದ ರಾಷ್ಟ್ರೀಯ ವಕ್ತಾರರಾದ ಸುಧಾಕರ್ ಎಸ್ ಶೆಟ್ಟಿಯವರು ಕಾಫಿ ಬೆಳೆಗಾರರ ಸಮಸ್ಯೆಗಳ ಕುರಿತು ಮಹತ್ವದ ವಿಚಾರಗಳನ್ನು ಮಂಡಿಸಿದರು. ಸರ್ಫೇಸಿ ಕಾಯ್ದೆ ಅಡಿಯಲ್ಲಿ ಕಾಫಿ ತೋಟಗಳನ್ನು ಆನ್ಲೈನ್ ಮೂಲಕ ಹರಾಜು ಹಾಕುತ್ತಿದ್ದರಿಂದ ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದರು. ಈ ಸಮಸ್ಯೆಯನ್ನು ಮನಗಂಡು ಮಾಜಿ ಪ್ರಧಾನಿಗಳಾದ ಸನ್ಮಾನ್ಯ ಎಚ್ ಡಿ ದೇವೇಗೌಡರವರು ಹಾಗೂ ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯರಾದ ಕೋಟಾ ಶ್ರೀನಿವಾಸ ಪೂಜಾರಿಯವರು ಕೇಂದ್ರ ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಪರಿಣಾಮವಾಗಿ ಆನ್ಲೈನ್ ಹರಾಜು ಪ್ರಕ್ರಿಯೆಗೆ ತಾತ್ಕಾಲಿಕ ತಡೆ ದೊರೆತಿದೆ ಎಂದು ಹೇಳಿದರು. ಕೇಂದ್ರ ವಿತ್ತ ಸಚಿವೆ ಆರ್ಬಿಐ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಹರಾಜು ಪ್ರಕ್ರಿಯೆ ತಡೆಯಲು ಸೂಚನೆ ನೀಡಿರುವುದಾಗಿ ತಿಳಿಸಿದ ಅವರು, ಈ ನಿರ್ಧಾರ ಕಾನೂನು ರೂಪದಲ್ಲಿ ಬರುವಂತೆ ಮಾಡಲು ಮತ್ತೊಮ್ಮೆ ಒತ್ತಾಯಿಸಲಾಗುತ್ತದೆ ಎಂದರು. ಇದರಿಂದ ಹಾಸನ, ಕೊಡಗು, ಚಿಕ್ಕಮಗಳೂರು ಭಾಗದ ಕಾಫಿ ಬೆಳೆಗಾರರಿಗೆ ಅನುಕೂಲವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದ ಕೈಗಾರಿಕಾ ಅಭಿವೃದ್ಧಿಯ ಬಗ್ಗೆ ಮಾತನಾಡಿದ ಸುಧಾಕರ್ ಶೆಟ್ಟಿಯವರು, ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಎಚ್ ಡಿ ಕುಮಾರಸ್ವಾಮಿಯವರು ರಾಜ್ಯದ ಕೈಗಾರಿಕಾ ಕ್ಷೇತ್ರದ ಬೆಳವಣಿಗೆಗಾಗಿ ನಿರಂತರ ಶ್ರಮಿಸುತ್ತಿದ್ದಾರೆ ಎಂದರು. ಜಿಲ್ಲೆಯಲ್ಲಿನ ಕೈಗಾರಿಕಾ ಹಿನ್ನಡೆಯಿಂದ ಯುವಕರು ಉದ್ಯೋಗಕ್ಕಾಗಿ ಹೊರ ಜಿಲ್ಲೆಗಳಿಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತೀ ತಾಲೂಕಿನಲ್ಲಿ ಕೈಗಾರಿಕೆಗಳು ಬೆಳೆಯುವಂತೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು. ಅರಣ್ಯ ವತ್ತುವರಿ ವಿಚಾರವಾಗಿ ರಚಿಸಲಾದ ಎಸ್ಐಟಿ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಮಲೆನಾಡಿನ ಮೂಲ ನಿವಾಸಿಗಳಲ್ಲಿ ತಮ್ಮ ಭೂಮಿಯ ಕುರಿತು ಗೊಂದಲ ಉಂಟಾಗಿದೆ ಎಂದು ಹೇಳಿದರು. ಜೊತೆಗೆ ಮಲೆನಾಡಿನಲ್ಲಿ ಕಾಡಾನೆ ದಾಳಿ ಹೆಚ್ಚುತ್ತಿರುವುದನ್ನು ಉಲ್ಲೇಖಿಸಿ, ದಾಳಿಯಿಂದ ಮೃತಪಟ್ಟವರಿಗೆ ನೀಡುವ ಪರಿಹಾರವನ್ನು 20 ಲಕ್ಷದಿಂದ 50 ಲಕ್ಷ ರೂಪಾಯಿಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು. ಕಾಡಾನೆ ದಾಳಿಯಿಂದ ಯಾರು ಮೃತಪಟ್ಟರೂ, ಅವರ ಕುಟುಂಬಕ್ಕೆ ತಕ್ಷಣವೇ ಪರಿಹಾರ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಬಿಜೆಪಿ ಜೆಡಿಎಸ್ ಮೈತ್ರಿ ಕುರಿತು ಸ್ಪಷ್ಟನೆ ನೀಡಿದ ಅವರು, ಮೈತ್ರಿಯಲ್ಲಿ ಯಾವುದೇ ಗೊಂದಲವಿಲ್ಲ. ಮುಂಬರುವ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲೂ ಮೈತ್ರಿ ಮುಂದುವರಿಯಲಿದೆ ಎಂದು ಸುಧಾಕರ್ ಶೆಟ್ಟಿ ಅವರು ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಪ್ಪ, ಮಾಜಿ ಜಿಲ್ಲಾಧ್ಯಕ್ಷರಾದ ಎಚ್ ಎಸ್ ಮಂಜಪ್ಪ, ಮುಖಂಡರುಗಳಾದ ಜಯಂತಿ, ರತ್ನ, ಅಣ್ಣಪ್ಪ ಶೆಟ್ಟಿ, ಆನಂದೇಗೌಡ, ಜಗನ್ನಾಥ, ಮಾಜಿ ಅಧ್ಯಕ್ಷರಾದ ರವಿ ಉಪಸ್ಥಿತರಿದ್ದರು.


























































































































