
ಮಕ್ಕಳ ಮನಸ್ಸು ಖಾಲಿ ಕಾಗದದಂತಿರುತ್ತದೆ. ಅದರಲ್ಲಿ ಮೊದಲ ಅಕ್ಷರಗಳನ್ನು ಬರೆಯುವವರು ಮನೆ, ಅಮ್ಮ, ಅಪ್ಪ ಮತ್ತು ಕುಟುಂಬ ವಾತಾವರಣ. ಮಕ್ಕಳಿಗೆ ಆಹಾರ, ಶಿಕ್ಷಣ ಮಾತ್ರ ಸಾಕಾಗುವುದಿಲ್ಲ. ಅವರಿಗೆ ಮುಖ್ಯವಾಗಿ ಬೇಕಾಗಿರುವುದು ಗಮನ, ಭದ್ರತೆ ಮತ್ತು ಸೇರಿದ ಭಾವನೆ. ಕೂಡು ಕುಟುಂಬದಲ್ಲಿ ಅಜ್ಜಿ, ತಾತ, ಅತ್ತೆ, ಮಾಮ, ಅಣ್ಣ, ತಂಗಿ, ಬಂಧುಗಳ ನಡುವೆ ಬೆಳೆಯುವ ಮಕ್ಕಳಿಗೆ ‘ನಾನು ಒಂಟಿಯಲ್ಲ’ ಎಂಬ ಮನೋಭಾವ ಸ್ವಾಭಾವಿಕವಾಗಿ ಮೂಡುತ್ತದೆ. ತಪ್ಪು ಮಾಡಿದರೂ ಯಾರಾದರೂ ತಿದ್ದುವರು, ದುಃಖವಾದರೆ ಯಾರಾದರೂ ಸಮಾಧಾನ ಹೇಳುವರು, ಸಾಧನೆ ಮಾಡಿದರೆ ಯಾರಾದರೂ ಹೆಮ್ಮೆ ಪಡುವರು. ಇದು ಆತ್ಮವಿಶ್ವಾಸದ ಬೇರು.

ಆದರೆ ಪ್ರೀತಿ, ಮಾತು, ಗಮನ ಇಲ್ಲದ ವಾತಾವರಣದಲ್ಲಿ ವಿಶೇಷವಾಗಿ ಭಾವನಾತ್ಮಕವಾಗಿ ಸ್ಪಂದನೆ ಪಡೆಯದ ಹೆಣ್ಣು ಮಕ್ಕಳು ತಮ್ಮ ಮನಸ್ಸನ್ನು ಅರ್ಥ ಮಾಡಿಕೊಳ್ಳುವ ಸ್ಥಳವನ್ನು ಹೊರಗೆ ಹುಡುಕಲು ಪ್ರಾರಂಭಿಸುತ್ತಾರೆ. ಅವರಿಗೆ ಯಾರು ಕೇಳುತ್ತಾರೆ, ಯಾರು ಗೌರವ ಕೊಡುತ್ತಾರೆ, ಯಾರು ಒಪ್ಪಿಕೊಳ್ಳುತ್ತಾರೆ ಎಂಬುದೇ ಮುಖ್ಯವಾಗುತ್ತದೆ. ಅಲ್ಲಿ ವ್ಯಕ್ತಿ, ಗುಂಪು, ತತ್ವ ಅಥವಾ ಹೊಸ ಆಲೋಚನೆಗಳ ಆಕರ್ಷಣೆ ಹೆಚ್ಚಾಗುತ್ತದೆ. ಅದು ಕೆಲವೊಮ್ಮೆ ಕುಟುಂಬ ಮೌಲ್ಯಗಳಿಂದ ಸಂಪೂರ್ಣ ವಿಭಿನ್ನ ದಿಕ್ಕಿಗೂ ಕರೆದೊಯ್ಯಬಹುದು. ಇದು ನೈತಿಕ ದುರ್ಬಲತೆ ಅಲ್ಲ ಮನೋವೈಜ್ಞಾನಿಕ ಅಗತ್ಯ. ಮಾನವನಿಗೆ ಸೇರಿದ ಭಾವನೆ (sense of belonging) ಬೇಕು. ಅದು ಮನೆಯಲ್ಲಿ ಸಿಗದಿದ್ದರೆ ಹೊರಗೆ ಸಿಗುತ್ತದೆ. ಆದ್ದರಿಂದ ಮಕ್ಕಳನ್ನು ನಿಯಂತ್ರಿಸುವುದಕ್ಕಿಂತ ಅವರಿಗೆ ಮಾತನಾಡುವ ಸಮಯ ಕೊಡುವುದು, ಕೇಳುವುದು, ಸ್ನೇಹದಂತಿರುವ ಸಂಬಂಧ ಕಟ್ಟುವುದು ಮುಖ್ಯ. ಕುಟುಂಬದ ಸೌಹಾರ್ದ ಮತ್ತು ಸಂವಾದವೇ ಮಕ್ಕಳನ್ನು ಗೊಂದಲದಿಂದ ರಕ್ಷಿಸುವ ಅತ್ಯಂತ ಬಲವಾದ ಗೋಡೆ.





















































































































