
ಒಬ್ಬ ಕಾಫಿ ಘಮಲಿನಲ್ಲಿ ಜಗತ್ತನ್ನೇ ಗೆದ್ದಿದ್ದ ‘ಕಾಫಿ ಕಿಂಗ್’ ಸಿದ್ದಾರ್ಥ್. ಇನ್ನೊಬ್ಬ ಸಿಮೆಂಟ್ ಕಾಂಕ್ರೀಟ್ ಕಾಡಿನಲ್ಲಿ ಸಾಮ್ರಾಜ್ಯ ಕಟ್ಟಿದ್ದ ‘ರಿಯಲ್ ಎಸ್ಟೇಟ್ ಸುಲ್ತಾನ’ ಸಿಜೆ ರಾಯ್. ಇಬ್ಬರದ್ದು ಬೇರೆ ಬೇರೆ ದಾರಿ, ಆದ್ರೆ ಸೇರಿದ್ದು ಮಾತ್ರ ಒಂದೇ ಸ್ಮಶಾನವನ್ನು. ಕೇರಳದವರಾದ್ರೂ ರಾಯ್ ಗೆ ಕನ್ನಡ ಅಂದ್ರೆ ಪ್ರಾಣ. ಸುಮ್ನೆ ದುಡ್ಡು ಮಾಡಿ ಕೇರಳಕ್ಕೆ ಹೋಗ್ಲಿಲ್ಲ. ಗಾಂಧಿನಗರದ ಕಷ್ಟದ ಕಾಲದಲ್ಲಿ ಹೆಗಲು ಕೊಟ್ರು. ಕ್ರೇಜಿಸ್ಟಾರ್ ರವಿಚಂದ್ರನ್ ಅವರ ‘ಕ್ರೇಜಿ ಲೋಕ’ ಸಿನಿಮಾ ನಿರ್ಮಾಣ ಮಾಡಿದ್ದು ಯಾರು? ಇದೇ ರಾಯ್!ರಮೇಶ್ ಅರವಿಂದ್ ಅವರ ‘ಪ್ರೀತಿಯಿಂದ ರಮೇಶ್’ ಮತ್ತು ‘ರಂಗಪ್ಪ ಹೋಗ್ಬಿಟ್ನ’ ಸಿನಿಮಾಗೆ ದುಡ್ಡು ಹಾಕಿದ್ರು. ಕೋಮಲ್ ಅವರ ‘ರಾಧಾನ ಗಂಡ’ ಸಿನಿಮಾಕ್ಕೂ ಇವರೇ ಬೆನ್ನೆಲುಬು. ಹೀಗೆ ಬಿದ್ದವರನ್ನು ಮೇಲೆತ್ತೋ ಜಾಯಮಾನ ಇವರದ್ದು. ನೀವು ಟಿವಿಯಲ್ಲಿ ಕಿಚ್ಚ ಸುದೀಪ್ ಅವರ ‘ಬಿಗ್ ಬಾಸ್’ ನೋಡಿರ್ತೀರ. ಆದ್ರೆ ಅದರ ಆರಂಭದ ಸೀಸನ್ ಗಳಲ್ಲಿ ಬರೀ ಸ್ಪಾನ್ಸರ್ ಆಗಿ ದುಡ್ಡು ಕೊಡದೆ, ಆ ಶೋನ ಅದ್ದೂರಿಯಾಗಿ ನಡೆಸೋಕೆ ಬೆನ್ನೆಲುಬಾಗಿ ನಿಂತಿದ್ದು ಇದೇ ಸಿಜೆ ರಾಯ್! ‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು’ ಇರಲಿ, ಅಥವಾ ಸ್ಟಾರ್ ಸುವರ್ಣದ ರಿಯಾಲಿಟಿ ಶೋಗಳಿರಲಿ ನಿರ್ಮಾಪಕರು ಕಷ್ಟ ಅಂತ ಬಂದ್ರೆ, ಚೆಕ್ ಬುಕ್ ತೆಗೆದು ಸಹಿ ಹಾಕ್ತಿದ್ರು. “ಕಲೆ ಬೆಳಿಬೇಕು ಬಾಸ್” ಅನ್ನೋದು ಅವರ ಪಾಲಿಸಿ ಆಗಿತ್ತು. ರಿಯಾಲಿಟಿ ಶೋಗಳಲ್ಲಿ ಗೆದ್ದವರಿಗೆ ಬರೀ ಚೆಕ್ ಕೊಡೋದು, ಹೂವಿನ ಹಾರ ಹಾಕೋದು ಕಾಮನ್. ಆದ್ರೆ ರಾಯ್ ಸ್ಟೈಲೇ ಬೇರೆ. ಜೀ ಕನ್ನಡದ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋನಲ್ಲಿ, ಬಡತನದಲ್ಲಿದ್ದ ಒಬ್ಬ ಅದ್ಭುತ ಪ್ರತಿಭೆಯನ್ನು ನೋಡಿ ತಡ್ಕೊಳೋಕೆ ಆಗಲಿಲ್ಲ. ನೇರವಾಗಿ ವೇದಿಕೆಗೆ ಬಂದು, “ತಗೋಳಪ್ಪಾ, ನನ್ ಕಡೆಯಿಂದ ನಿನಗೊಂದು ಫ್ಲಾಟ್” ಅಂತ ಲಕ್ಷಾಂತರ ರೂಪಾಯಿ ಬೆಲೆ ಬಾಳೋ ಮನೆಯ ಕೀ ಎಸೆದಿದ್ರು! ಟಿವಿ ಇತಿಹಾಸದಲ್ಲೇ ಅಂತಹ ಕೆಲಸ ಯಾರೂ ಮಾಡಿರಲಿಲ್ಲ. ಇವತ್ತು ನೀವು ಯಾವುದೇ ಲೇಔಟ್ ಗೆ ಹೋದ್ರೂ ಕಾಂಕ್ರೀಟ್ ರಸ್ತೆ ನೋಡ್ತೀರಾ. ಆದ್ರೆ ಬೆಂಗಳೂರಿನ ಪ್ರೈವೇಟ್ ಲೇಔಟ್ ಗಳಲ್ಲಿ ಈ ಕಾನ್ಸೆಪ್ಟ್ ತಂದಿದ್ದೇ ಸಿಜೆ ರಾಯ್! “ಟಾರ್ ರಸ್ತೆ ಮಳೆ ಬಂದ್ರೆ ಹಾಳಾಗುತ್ತೆ, ನನ್ನ ಕಸ್ಟಮರ್ಸ್ ಗೆ ಧೂಳು ಬರಬಾರದು” ಅಂತ ಸ್ವಂತ ಖರ್ಚಲ್ಲಿ ಕಾಂಕ್ರೀಟ್ ರಸ್ತೆ ಹಾಕಿ ಟ್ರೆಂಡ್ ಸೆಟ್ ಮಾಡಿದ್ರು. ಬೆಂಗಳೂರಿನ ಕಾರ್ಪೊರೇಟ್ ಜಗತ್ತನ್ನೇ ನಡುಗಿಸಿದ ಈ ಎರಡು ಸಾವುಗಳನ್ನು ಪಕ್ಕ ಪಕ್ಕ ಇಟ್ಟು ನೋಡಿದ್ರೆ, ಮೈ ಜುಮ್ ಅನ್ನುವಂತಹ ಸತ್ಯಗಳು ಹೊರ ಬರುತ್ತವೆ. ಇವರ ಸಾವಿನ ಹಿಂದೆ ಇದ್ದದ್ದು ಬರೀ ಸಾಲನಾ? ಅಥವಾ ‘ಸಿಸ್ಟಮ್’ ಎಂಬ ಕಬಂಧಬಾಹುನಾ?

ಸಿದ್ದಾರ್ಥ ನೇತ್ರಾವತಿ ನದಿಗೆ ಹಾರುವ ಮುನ್ನ ಬರೆದ ಪತ್ರ ನೆನಪಿದೆಯಾ? “ನಾನು ಸೋತು ಹೋದೆ” ಅಂತ ಬರೆದಿದ್ರು. ಸಿದ್ದಾರ್ಥ ಆಗಲಿ, ಸಿಜೆ ರಾಯ್ ಆಗಲಿ. ಇವರಿಗೆ ಸಾಲ ಅನ್ನೋದು ದೊಡ್ಡ ವಿಷ್ಯ ಆಗಿರಲಿಲ್ಲ. ಸಾವಿರ ಕೋಟಿ ಆಸ್ತಿ ಇದ್ದೋರಿಗೆ ನೂರು ಕೋಟಿ ಸಾಲ ಏನ್ ಮಹಾ?ಆದ್ರೆ, ಯಾವಾಗ ಈ ‘ಸಿಸ್ಟಮ್’ (System) ಕುತ್ತಿಗೆ ಪಟ್ಟಿ ಹಿಡಿಯೋಕೆ ಬರುತ್ತೋ, ಯಾವಾಗ ಈ ಐಟಿ (IT) ಮತ್ತು ಇಡಿ (ED)ಯಂಥ ಸಂಸ್ಥೆಗಳು ಬಾಗಿಲು ಬಡಿಯುವ ಮುನ್ಸೂಚನೆ ಸಿಗುತ್ತೋ ಆಗ ಹುಟ್ಟುತ್ತೆ ನೋಡಿ ಭಯ! ಒಬ್ಬ ಉದ್ಯಮಿಗೆ ‘ಜೈಲು’ ಅನ್ನೋದಕ್ಕಿಂತ, ಸಮಾಜದ ಮುಂದೆ ತಲೆ ತಗ್ಗಿಸೋದು ಇದೆಯಲ್ಲ? ಅದು ಸಾವಿಗಿಂತ ನರಕ!. ಒಮ್ಮೆ ಯೋಚಿಸಿ, ರೋಲ್ಸ್ ರಾಯ್ಸ್ ಕಾರಲ್ಲಿ ಓಡಾಡುತ್ತಿದ್ದ ರಾಯ್ ಗೆ ಅಥವಾ ಸಾವಿರಾರು ಎಕರೆ ಕಾಫಿ ತೋಟದ ಒಡೆಯ ಸಿದ್ದಾರ್ಥಗೆ, ನಾಳೆ ಪೊಲೀಸರು ಬಂದು ಕೈಗೆ ಕೋಳ ಹಾಕಿದರೆ? ಈ ಇಡಿ ಮತ್ತು ಐಟಿ ರೇಡ್ ಗಳು ಹೇಗಿರುತ್ತೆ ಅಂದ್ರೆ ವ್ಯಕ್ತಿ ಸಾಯುವ ಮುನ್ನವೇ ಅವನ ಮಾನ ಮರ್ಯಾದೆಯನ್ನು ಬೀದಿಯಲ್ಲಿ ಹಾರಾಜಿಗಿಟ್ಟು ಬಿಡ್ತಾರೆ. ಸಿದ್ದಾರ್ಥ ಹೆದರಿದ್ದು ಇದೇ ಅವಮಾನಕ್ಕೆ. ಸಿಜೆ ರಾಯ್ ಕುಗ್ಗಿ ಹೋಗಿದ್ದು ಇದೇ ಒತ್ತಡಕ್ಕೆ. “ನಾನು ಕಳ್ಳನಲ್ಲ, ಆದ್ರೆ ಈ ಸಿಸ್ಟಮ್ ನನ್ನನ್ನು ಕಳ್ಳನನ್ನಾಗಿ ಮಾಡುತ್ತೆ” ಅನ್ನೋ ಹತಾಶೆ ಇಬ್ಬರಲ್ಲೂ ಇತ್ತು. ಜಗತ್ತಿಗೆ ಇವರಿಬ್ಬರೂ ಹೀರೋಗಳು. ಆದ್ರೆ ತಮ್ಮ ಕಷ್ಟವನ್ನು ಯಾರ ಹತ್ರ ಹೇಳಿಕೊಳ್ಳೋಕೆ ಆಗುತ್ತೆ? ಹೆಂಡತಿ ಹತ್ರನಾ? ಮಕ್ಕಳ ಹತ್ರನಾ? ಅಥವಾ ನಂಬಿ ಬಂದ ಇನ್ವೆಸ್ಟರ್ಸ್ ಹತ್ರನಾ? ಯಾರ ಹತ್ರ ಹೇಳಿದ್ರೂ ವೀಕ್ನೆಸ್ ಆಗುತ್ತೆ. ಸಿದ್ದಾರ್ಥ ನದಿಯ ಸೇತುವೆ ಮೇಲೆ ಏಕಾಂಗಿಯಾಗಿ ನಡೆದ್ರು. ರಾಯ್ ತಮ್ಮ ಕೋಣೆಯಲ್ಲಿ ಏಕಾಂಗಿಯಾಗಿ ಪಿಸ್ತೂಲು ಎತ್ತಿಕೊಂಡ್ರು. ಸುತ್ತಲೂ ಸಾವಿರಾರು ಜನರಿದ್ದರೂ ಸಾಯುವಾಗ ಇವರಿಬ್ಬರೂ ಅಪ್ಪಟ ಒಂಟಿಯಾಗಿದ್ದರು. ಅವರ ಬಳಿ ‘ಕ್ಯಾಶ್’ ಇತ್ತು, ಆದ್ರೆ ‘ಪೀಸ್ ಆಫ್ ಮೈಂಡ್’ ಇರ್ಲಿಲ್ಲ. ಈ ಇಡಿ, ಐಟಿ, ಸಾಲ, ಬಡ್ಡಿ ಇವೆಲ್ಲವೂ ಉದ್ಯಮಿಯನ್ನು ಕೊಲ್ಲೋ ಅಸ್ತ್ರಗಳು. ಸಿದ್ದಾರ್ಥ ನೀರಲ್ಲಿ ಮುಳುಗಿ ಹೋದ್ರು, ರಾಯ್ ರಕ್ತದ ಮಡುವಲ್ಲಿ ಮಲಗಿದ್ರು. ಎಷ್ಟೇ ಎತ್ತರಕ್ಕೆ ಬೆಳೆದ್ರೂ, ನೆಮ್ಮದಿ ಅನ್ನೋ ನೆಲದ ಸಂಪರ್ಕ ಬಿಡಬಾರದು. ಇಲ್ಲಾಂದ್ರೆ ಬದುಕು ಹೀಗೇ… ಢಮಾರ್!





















































































































