
ಈ ಜಗತ್ತೇ ನಿಂತಿರುವುದು ನಂಬಿಕೆ ಮತ್ತು ವಿಶ್ವಾಸ ಎಂಬ ಎರಡು ಮಹತ್ವಪೂರ್ಣವಾದ ವಿಚಾರಗಳಲ್ಲಿ. ನಂಬಿಕೆ ಇದ್ದಲ್ಲಿ ಮಾತ್ರ ಶಿಲೆಯಲ್ಲಿ ಶಂಕರನನ್ನು ಕಾಣಲು ಸಾಧ್ಯ. ಅದೇ ರೀತಿ ತಾಯಿ ತೋರಿಸಿದವನ ಮೇಲೆ ಆತ ನಮ್ಮ ತಂದೆ ಎಂಬ ವಿಶ್ವಾಸ ಮೂಡಲು ಸಾಧ್ಯ!. ಇವುಗಳಿಗೆ ಸಾಕ್ಷಿ ಆಧಾರಗಳ ಅಗತ್ಯವಿಲ್ಲ. ಈ ವಿಚಾರವನ್ನೇ ಆಧರಿಸಿ ತಯಾರಿಸಿದ ಹೊಸ ಚಿತ್ರ ಮೊನ್ನೆ ತಾನೇ ತೆರೆಕಂಡ ‘ಕಟ್ಟೆಮಾರ್’ ಎಂಬ ತುಳು ಚಿತ್ರ. ‘ಕಟ್ಟೆಮಾರ್’ ಚಿತ್ರದಲ್ಲಿ ‘ಸು ಫ್ರಮ್ ಸೋ’ ಖ್ಯಾತಿಯ ಜೆಪಿ ತುಮಿನಾಡು ಹಾಗೂ ‘ಕಾಂತಾರ’ದಲ್ಲಿ ಗುರುವ ಪಾತ್ರ ಮಾಡಿದ ಸ್ವರಾಜ್ ಶೆಟ್ಟಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಪ್ರೇಮಕಥೆ, ಸಸ್ಪೆನ್ಸ್ ವಿಷಯಗಳು ಕೂಡಾ ಇವೆ. ಎಲ್ಲವನ್ನು ಹದವಾಗಿ ಬೆರೆಸಿ, ಸಿನಿಮಾ ಸಿದ್ಧಪಡಿಸಲಾಗಿದೆ. ಈ ಚಿತ್ರವನ್ನು ರಕ್ಷಿತ್ ಗಾಣಿಗ ಹಾಗೂ ಸಚಿನ್ ಕಟ್ಲ ನಿರ್ದೇಶನ ಮಾಡಿದ್ದಾರೆ. ಇದು ಈಗಾಗಲೇ ಕನ್ನಡದಲ್ಲಿ ಡಬ್ ಆಗಿದ್ದು, ಮುಂದಿನ ದಿನಗಳಲ್ಲಿ ಬಿಡುಗಡೆ ಕಾಣಲಿದೆ. ಸಂತೋಷ್ ಆಚಾರ್ಯ ಛಾಯಾಗ್ರಹಣ, ಗಣೇಶ್ ನಿರ್ಚಾಲ್ ಸಂಕಲನ ಚಿತ್ರಕ್ಕಿದೆ. ವಿಶ್ವಾಸ್ ಅಡ್ಯಾರ್, ಆರ್.ಕೆ ಮುಲ್ಕಿ, ವಿನೋದ್ ಶೆಟ್ಟಿ ಕೃಷ್ಣಾಪುರ, ಸಂದೇಶ್ ಉಕ್ಕುಡ ನಿರ್ದೇಶನ ತಂಡದಲ್ಲಿದ್ದಾರೆ. ಅಸ್ತ್ರ ಪ್ರೊಡಕ್ಷನ್ ಚಿತ್ರವನ್ನು ಪ್ರಸ್ತುತಪಡಿಸುತ್ತಿದೆ. ‘ಕಾಂತಾರ’ ಎಂಬ ದೈವ ಕಾರ್ಣಿಕ ಮೆರೆದ ಚಿತ್ರ ಸೂಪರ್ ಡೂಪರ್ ಹಿಟ್ ಆದ ಮೇಲೆ ಹೆಚ್ಚಿನ ಸಿನೆಮಾಗಳು ಈ ಹಿನ್ನೆಲೆಯಿಂದಲೇ ತಯಾರಾಗುತ್ತಿದೆ. ಹಾಗೆಯೇ ತಯಾರಾದ ಚಿತ್ರ ‘ಕಟ್ಟೆಮಾರ್’ ಕೂಡಾ. ಇಲ್ಲಿ ತುಳುನಾಡಿನ ಹೆಚ್ಚಿನ ಮನೆ ಮನೆಗಳಲ್ಲಿ ನೆಲೆನಿಂತ ‘ಮಂತ್ರ ದೇವತೆ’ ದೈವದ ಕಾರ್ಣಿಕದ ಕತೆಯನ್ನು ತೋರಿಸಲಾಗಿದೆ. ಆದರೆ ಎಲ್ಲೂ ದೈವವನ್ನು ನೇರವಾಗಿ ತೋರಿಸದೆ ಮತ್ತು ದೈವದ ಕಟ್ಟುಪಾಡುಗಳಿಗೆ ಅಪಚಾರವಾಗದಂತೆ ತೋರಿಸಲಾಗಿದೆ. ದೈವವನ್ನು ನಂಬಿದರೆ ಅದು ನಮ್ಮನ್ನು ಯಾವ ಯಾವ ವಿಧದಲ್ಲಿ ಆಪತ್ತಿನಿಂದ ಪಾರು ಮಾಡಬಹುದು ಎಂಬುದನ್ನು ಬಲು ಸುಂದರವಾಗಿ ತೋರಿಸಿ ಕೊಟ್ಟಿದ್ದಾರೆ. ಇತರ ಎಲ್ಲಾ ಬಾಕಿ ಸಿನಿಮಾಗಳಂತೆ ಹುಲಿವೇಶ ಕುಣಿತ, ಕೋಳಿ ಕಟ್ಟ, ಶೇಂದಿ ಅಂಗಡಿ, ಬಚ್ಚಾಲಿ ಕೂಟ, ಸಿಗರೇಟು, ಬಾಟ್ಲಿ, ಹಳ್ಳಿಯ ಪೆಟ್ಟ್ ಲಡಾಯಿ, ಮತ್ತೆ ಪ್ರತೀ ಸಲ ಮಂಗಳೂರ್ ಫೇಮಸ್ ಟಿಫಿಕಲ್ ಬೈಗುಳ ‘ಬೇವರ್ಸಿ’ ಸ್ವಲ್ಪ ಹೆಚ್ಚೇ ಇದೆ.

ಮೊದಲಿಗೆ ಛೇ ತುಳುವಿನ ಸಿನಿಮಾ ಒಂದೇ ರೀತಿ ಎಂದು ಎನಿಸಿದ್ದು ನಿಜ. ಆದರೆ ನೋಡುತ್ತಾ ಮುಂದುವರಿದಾಗ ಏನೂ ಒಂದು ಹೊಸತನ ಗೋಚರಿದ್ದು ಸತ್ಯ. ‘ಸು ಫ್ರಮ್ ಸೋ’ ಚಿತ್ರದಲ್ಲಿ ಸೌಮ್ಯವಾದ ಸೀದಾ ಸಾದಾ ಪಾತ್ರದಲ್ಲಿ ಗಮನ ಸೆಳೆದಿದ್ದ ಜೆ.ಪಿ ತುಮಿನಾಡ್ ಅವರ ಖಳ ನಾಯಕ ಪಾತ್ರವಂತೂ ಅದ್ಭುತ. ಅದೇ ರೀತಿ ಕಾಂತಾರದ ಸರಳ ಸಜ್ಜನ ಗುರುವ ಪಾತ್ರದ ಸ್ವರಾಜ್ ಶೆಟ್ರು ಹೀರೋನೂ ವಿಲನೂ ಎಂಬಂತೆ ಸತ ಬಚ್ಚಾಲಿ ಪಾತ್ರವನ್ನು ಅಧ್ಭುತವಾಗಿ ಸಾಕಾರಗೊಳಿಸಿದ್ದಾರೆ. ಇನ್ನೊಂದು ಧನಾತ್ಮಕ ವಿಚಾರ ತುಳುವಿನಲ್ಲಿ ಕಂಡ ಮುಖಗಳನ್ನೇ ಕಂಡೂ ಕಂಡೂ ಬೇಸರಪಟ್ಟಿದ್ದ ತುಳುವರಿಗೆ ಸಂತಸವಾಗುವ ರೀತಿಯಲ್ಲಿ ಹೊಸ ಪ್ರತಿಭೆಗಳಿಗೆ ಈ ಚಿತ್ರ ಅವಕಾಶ ಮಾಡಿಕೊಟ್ಟಿದೆ. ಮತ್ತೊಂದು ಖುಷಿಯ ಸಂಗತಿ ಪ್ರತೀ ಪಾತ್ರಧಾರಿಗೂ ಸ್ಪಷ್ಟವಾದ ತುಳುವಿನಲ್ಲಿ ಮಾತನಾಡುವ ತುಳುವರೇ ಕಂಠದಾನ ನೀಡಿದ್ದು. ಈ ಹಿಂದಿನ ಚಿತ್ರಗಳಲ್ಲಿ ತುಳು ಸರಿಯಾಗಿ ಬರದ ಕಲಾವಿದನಿಗೆ ಅರ್ಧoಬರ್ದ ತುಳು ಮಾತಾಡುವ ಇಲ್ಲವೇ ಇಂಗ್ಲೀಷ್ ನವರಿಂದ ತುಳು ಮಾತಾಡಿಸಿ ತುಳುವಿಗೆ ಸರಿಯಾದ ನ್ಯಾಯ ಕೊಟ್ಟಿರಲಿಲ್ಲ. ಆದರೆ ಆ ಪ್ರಮಾದ ಈ ಚಿತ್ರದಲ್ಲಿ ಆಗಿಲ್ಲ. ಎಲ್ಲರ ತುಳುವೂ ಸ್ಪಷ್ಟ ಮತ್ತು ತುಟಿಯ ಚಲನೆ ಸರಿಯಾಗಿ ಸಿಂಕ್ ಆಗಿದೆ. ಇನ್ನು ಬಂಗಾರದ ಮನುಷ್ಯ ಲಂಚು ಲಾಲರು ಬಂಗಾರವನ್ನು ತೆಗೆದಿಟ್ಟು ಬಂಗಾರದಂತಹ ನಟನೆಯಿಂದ ಅವರು ಕೇವಲ ಒಬ್ಬ ಸಮರ್ಥ ಉದ್ಯಮಿ ಮಾತ್ರವಲ್ಲ ಒಬ್ಬ ಉತ್ತಮ ನಟನೂ ಆಗಿರುವರು ಎಂಬುದನ್ನು ಸಾಬೀತು ಪಡಿಸಿದ್ದಾರೆ. ಖಂಡಿತಾ ಇದು ಉತ್ಪ್ರೇಕ್ಷೆಯಲ್ಲ. ಅಂತೂ ಒಂದು ಉತ್ತಮ ಕತೆಯನ್ನು ಯಾವುದೇ ವಿಚಾರದಲ್ಲೂ ಚ್ಯುತಿಯಾಗದ ರೀತಿ, ತುಳುವರು ಅಭಿಮಾನ ಪಡುವ ರೀತಿ ನಿರ್ಮಾಣ ಮಾಡಿ ತೋರಿಸಿದ ಇಡೀ ಚಿತ್ರ ತಂಡದ ಶ್ರಮ ನಿಜಕ್ಕೂ ಮೆಚ್ಚುವಂತದ್ದು. ಇಂತಹ ಸಮರ್ಪಕ ಚಿತ್ರಗಳು ಇನ್ನೂ ಹೊಸತನದೊಂದಿಗೆ ಮತ್ತಷ್ಟು ಬರಲಿ ಎಂಬುದು ನನ್ನ ಆಶಯ. ಕೇವಲ ಕೊಲೆ, ರಕ್ತಪಾತಗಳನ್ನೇ ತೋರಿಸಿ ಜನರಂಜನೆ ಎಂದು ಗಲ್ಲಾ ಪೆಟ್ಟಿಗೆ ತುಂಬಿಸುವ ಈಗಿನ ಸಾಕಷ್ಟು ಸಿನಿಮಾಗಳಿಗಿಂತ ವಿಭಿನ್ನವಾದ ಜನ ಮನಗಳಲ್ಲಿ ಸಂಬಂಧ ಹುಟ್ಟಿಸುವ ಆ ಮೂಲಕ ಮಾನವೀಯ ಮೌಲ್ಯ ವೃದ್ಧಿಸುವ ಸುಂದರ ಕಥಾವಸ್ತುವಿನ ಚಿತ್ರಗಳು ಶ್ರೀಯುತ ಲಂಚುಲಾಲ್ ರವರ ಅಸ್ತ್ರ ಪ್ರೊಡಕ್ಷನ್ ನಿಂದ ಮತ್ತಷ್ಟು ಮೂಡಿಬರಲಿ ಎಂಬ ಆಶಯ ಮತ್ತು ಅಭಿಪ್ರಾಯ. ಮತ್ತೊಮ್ಮೆ ಇಡೀ ಚಿತ್ರತಂಡಕ್ಕೆ ಅಭಿನಂದನೆಗಳು.
ಬರಹ : ಶರತ್ ಶೆಟ್ಟಿ ಪಡುಪಳ್ಳಿ





















































































































