
ಆಕೆಗೆ ಮಧ್ಯ ವಯಸ್ಸು. ಬಂದದ್ದು ಸೊಂಟ ನೋವಿನ ಸಮಸ್ಯೆ ಪರಿಹಾರಕ್ಕೆ. ಆದರೆ ಜೀವನದ ಹಲವು ತಿರುವುಗಳನ್ನು ಅನುಭವಗಳನ್ನು ಆಕೆ ಹಂಚಿಕೊಂಡಾಗ ದಿಗ್ಭ್ರಮೆಯಾದದ್ದೇ ಅಲ್ಲ ಆಕೆಯ ಬಗೆಗೆ ಗೌರವದ ಭಾವನೆಯೂ ಬಂತು. ಇದ್ದ ಎರಡು ಮಕ್ಕಳು ತಮ್ಮ ಹದಿ ಹರೆಯದಲ್ಲೇ ಇಹಲೋಕ ತ್ಯಜಿಸಿದರು. ಗುಣವಾದ ಖಾಯಿಲೆ ವರ್ಷಗಳವರೆಗೆ ತಪಸ್ಸಿನಂತೆ ನೋಡಿಕೊಂಡ ದಂಪತಿ. ಈಗ ಆಕೆ ಮಕ್ಕಳಿಗೆ ಕಲಿಸುವ ಶಿಕ್ಷಕಿ. ಇದನ್ನೆಲ್ಲಾ ಹೇಳುವಾಗ ಆ ಮುಖದಲ್ಲಿ ಏನೋ ಒಂದು ದೃಢ ನಿಶ್ಚಯವಿತ್ತು. ಕೆಲವು ಒಳ್ಳೆಯ ವಿಷಯಗಳನ್ನು ಮಕ್ಕಳಿಗೆ ಕಲಿಸುವುದೇ ನನ್ನ ಗುರಿ ನನ್ನ ಮಕ್ಕಳೂ ಅದನ್ನೇ ಬಯಸಿದ್ದರು ಎಂದು ಆಕೆ ಹೇಳಿದರು. ದುಃಖವನ್ನು ಗೆದ್ದ ಬದುಕಿಗೊಂದು ಅರ್ಥ ಹುಡುಕಿಕೊಂಡಿರುವ ಆಕೆಗೆ ಪ್ರಣಾಮಗಳು. ಇನ್ನೊಂದು ದಿನ ಬಂದ 40ರ ಆಸುಪಾಸಿನ ಮಹಿಳೆ ನೋವುಗಳನ್ನು ಉಂಡವಳೇ. ಖಿನ್ನತೆ ಮತ್ತು ಬೊಜ್ಜು ಸಮಸ್ಯೆಯಿಂದ ಬಳಲುತ್ತಿದ್ದ ಈ ಮಹಿಳೆ ಹೊರಬಂದದ್ದು ತನ್ನಲ್ಲಿರುವ ಮೊಬೈಲಿನ ಸಹಾಯದಿಂದ. ಮೊಬೈಲ್ ನಿಂದ ಯುವ ಜನಾಂಗವೇ ದಾರಿ ತಪ್ಪುತ್ತಿದೆ ಎಂದು ಎಲ್ಲರೂ ಹೇಳುತ್ತಿದ್ದು, ಆದರೆ ಆಕೆ ತೋರಿಸಿದ್ದು ಬೇರೆಯೇ ಆಯಾಮಗಳನ್ನು ಮೊಬೈಲ್ ನಲ್ಲಿಯೇ ಯೋಗ ಗುರುವನ್ನು, ಆಹಾರ ತಜ್ಞರನ್ನು ಕಂಡುಕೊಂಡ ಆಕೆ ಅವರ ನಿರ್ದೇಶನದಂತೆ ದಿನಂಪ್ರತಿ ಯೋಗವನ್ನು, ಆಹಾರದಲ್ಲಿ ಶಿಸ್ತನ್ನು ಪಾಲಿಸಿಕೊಂಡು ಬಂದು ಬೊಜ್ಜು ಕರಗಿಸಿದ್ದೇ ಅಲ್ಲದೇ, ಖಿನ್ನತೆಯನ್ನು ಗೆದ್ದು ಬಂದಳು. ಈಕೆಯ ಸಾಧನೆಯಲ್ಲಿಯೂ ಸಮಾಜಕ್ಕೊಂದು ಪಾಠವಿಲ್ಲವೇ?.

ನಾನು ಕಂಡ ಇನ್ನೊಬ್ಬ ಮಹಿಳೆಯ ಬಗ್ಗೆಯೂ ಹೇಳಬಯಸುತ್ತೇನೆ. ಮದುವೆಯಾಗಿ ಹೋದ ಮನೆಯಲ್ಲಿ ಸಮಾಧಾನವಿಲ್ಲ. ಕುಡುಕ ಗಂಡ ಆತ ದುಡಿದದೆಲ್ಲ ಕುಡಿಯಲು ಬೇಕಾಗುತ್ತದೆ. ಮನೆಗೆ ಬಂದರೆ ಹೆಂಡತಿಗೆ ಒದೆ. ಎರಡು ಮಕ್ಕಳು ಆದಂತೆ ಆರ್ಥಿಕ ಸಂಕಷ್ಟ ದುಪ್ಪಟ್ಟಾಯಿತು. ಅದನ್ನು ಸರಿದೂಗಿಸಲು ಹಲವು ರೀತಿಯಲ್ಲಿ ಪ್ರಯತ್ನ ಮಾಡುತ್ತಿದ್ದಳು. ಮನೆಮನೆಗೆ ಹೋಗಿ ಬಟ್ಟೆ ಮಾರುವುದು, ಶರಬತ್ತು ಮಾಡಿ ಅಂಗಡಿಗೆ ಕೊಡುವುದು ಇತ್ಯಾದಿ ನೆರೆಮನೆಯವರ ಕೊಂಕು ಮಾತಿಗೂ ಕಿವಿಯಾಗಬೇಕಿತ್ತು. ಜೀವನವನ್ನು ಕೊನೆಗೊಳಿಸಿದರೆ ಹೇಗೆ ಎಂದು ಹಲವು ಬಾರಿ ಆಲೋಚಿಸಿದ್ದೂ ಇದೆ. ಒಂದು ಮಧ್ಯರಾತ್ರಿ ಗಂಡನ ಉಪಟಳ ತಾಳಲಾರದೆ ತಾಯಿ ಮನೆಗೆ ಬಂದವಳನ್ನು ಆಕೆಯ ತಾಯಿ ವಾಪಸ್ ಗಂಡನ ಮನೆಗೆ ಕಳುಹಿಸಿದ್ದಳು. ಆ ಬಳಿಕ ಆಕೆ ಒಂದು ದೃಢ ನಿರ್ಧಾರ ಮಾಡಿದಳು. ಹೇಗಾದರೂ ಮಾಡಿ ಗಂಡನನ್ನು ಕುಡಿತದಿಂದ ಬಿಡಿಸಬೇಕು ಎಂಬುದಾಗಿತ್ತು. ಆ ನಿರ್ಧಾರ ಅದರಲ್ಲಿ ಯಶಸ್ಸು ಕಂಡಳು. ನಿಧಾನವಾಗಿ ಗಂಡನನ್ನು ಕುಡಿತದ ಚಟದಿಂದ ಬಿಡಿಸಿದಳು. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿದಳು. ಈಗ ಇಬ್ಬರು ಮಕ್ಕಳು ಒಳ್ಳೆಯ ಉದ್ಯೋಗದಲ್ಲಿದ್ದಾರೆ. ಇಂತಹ ಧೈರ್ಯಶಾಲಿ ಸಾಧಕಿಗೆ ದೊಡ್ಡದೊಂದು ಸಲಾಂ. ನಮ್ಮ ಸಮಾಜದಲ್ಲಿ ಇಂತಹ ವ್ಯಕ್ತಿಗಳು ಹಲವರಿದ್ದಾರೆ. ರೋಗವಿಲ್ಲದಿದ್ದರೂ ರೋಗ ಇದೆ ಎಂದು ಭಾವಿಸಿ ಹೆದರುವವರು, ಚಿಕ್ಕ ಸಮಸ್ಯೆ ಬಂದಾಗಲೇ ಆಕಾಶವೇ ಕಳಚಿಬಿದ್ದಂತೆ ಗೋಳಾಡುವವರು, ತನ್ನ ಹಿತ ಮಾತ್ರ ನೋಡುವ ಸ್ವಾರ್ಥಿಗಳು, ಬದುಕೇ ಭಾರವೆಂದು ಮಾತುಮಾತಿಗೂ ಅಲವತ್ತುಕೊಳ್ಳುವವರು. ಈ ಮೇಲೆ ಹೇಳಿದ ಸಾಮಾನ್ಯರ ಅಸಾಮಾನ್ಯ ಸಾಧನೆಗಳನ್ನು ಕಣ್ತೆರೆದು ನೋಡಬೇಕು. ಇಂತಹ ವ್ಯಕ್ತಿಗಳು ಸಮಾಜಕ್ಕೆ ಸ್ಪೂರ್ತಿ. ದಾರಿ ದೀಪ.
ಬರಹ : ಡಾ. ಪ್ರವೀಣ್ ರಾಜ್ ಆಳ್ವ





















































































































