
ಸಮರ್ಪಣಾ ಮನೋಭಾವದ ಶಿಕ್ಷಕರು ಹಾಗೂ ಊರ ಶಾಲಾಭಿಮಾನಿ ದಾನಿಗಳ ಸಹಕಾರದಿಂದ ಒಂದು ಶಾಲೆಯು ಉತ್ತಮ ಶಾಲೆಯಾಗಿ ಮೂಡಿಬರಲು ಸಾಧ್ಯ ಎನ್ನುವುದಕ್ಕೆ ನಮ್ಮೂರ ಶಾಲೆಯೇ ಸಾಕ್ಷಿ. ಈ ಶಾಲೆ ಬಗ್ಗೆ ತುಂಬಾ ಹೆಮ್ಮೆಯಾಗುತ್ತದೆ ಎಂದು ಕಲ್ಯಾ ಗ್ರಾಮ ಪಂಚಾಯತ್ ಅಧ್ಯಕ್ಷೆ ಕುಮಾರಿ ಪೂಜಾ ಹೇಳಿದರು. ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಯಾ ಇದರ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಶಂಕರ್ ಆಚಾರ್ಯ ರವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ರೋಟರಿ ಕ್ಲಬ್ ಕಾರ್ಕಳ ಇದರ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಮಾತನಾಡುತ್ತಾ, ವಿದ್ಯಾರ್ಥಿಗಳು ಉತ್ತಮ ಶಿಕ್ಷಣವನ್ನು ಪಡೆದು ಸಂಸ್ಕಾರಯುತ ಜೀವನ ನಡೆಸಿ, ದೇಶದ ಉತ್ತಮ ನಾಗರೀಕರಾಗಿ ತಮ್ಮ ಹೆಸರು ಉಳಿಯುವಂತೆ ಬಾಳಿ ಎಂದರು.


ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಪ್ರೇಮಾ, ಜಗದೀಶ್ ಆಚಾರ್ಯ, ಸಂಜೀವ ಶೆಟ್ಟಿ, ಪ್ರೌಢಶಾಲಾ ಮುಖ್ಯ ಶಿಕ್ಷಕ ಸುಭಾಶ್ಚಂದ್ರ ಶೆಟ್ಟಿಗಾರ್, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಆಟೋಟ ಸ್ಪರ್ಧೆ, ಪಠ್ಯೇತರ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಪೋಷಕರಿಗೆ ಬಹುಮಾನ ವಿತರಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಾಲಾ ವರದಿಯನ್ನು ವಾಚಿಸಿದ ಮುಖ್ಯ ಶಿಕ್ಷಕಿ ಕಸ್ತೂರಿ ಎಸ್ ಎಲ್ಲರನ್ನೂ ಸ್ವಾಗತಿಸಿದರು. ಶಿಕ್ಷಕಿ ವೀಣಾ ಕಾಮತ್ ನಿರೂಪಿಸಿದರು. ಅನಿತಾ ಮಥಾಯಿಸ್ ವಂದಿಸಿದರು.

















































































































