ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಹೆಗ್ಗೂಡು ಗ್ರಾಮದಲ್ಲಿ ಜನಾನುರಾಗಿ ವೈದ್ಯರಾಗಿ ಸುಮಾರು 45 ವರ್ಷಗಳ ಕಾಲ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ ದಿವಂಗತ ಡಾಕ್ಟರ್ ಸುರೇಶ್ ಹೆಗ್ಡೆಯವರ 10 ನೇ ವರ್ಷದ ಪುಣ್ಯ ಸ್ಮರಣೆಯ ಅಂಗವಾಗಿ ಜನವರಿ 8 ರಂದು ಬೃಹತ್ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಹೆಗ್ಗೂಡಿನ ಡಾ. ಸುರೇಶ್ ಹೆಗ್ಡೆ ಸ್ವಗೃಹ ಸರಸ್ವತಿ ನಿಲಯದಲ್ಲಿ ಅವರ ಕುಟುಂಬ ವರ್ಗದವರು ಮತ್ತು ಡಾಕ್ಟರ್ ಸುರೇಶ್ ಹೆಗ್ಡೆ ಅಭಿಮಾನಿ ಬಳಗದ ವತಿಯಿಂದ ಅತ್ಯಂತ ಯಶಸ್ವಿಯಾಗಿ ರಕ್ತದಾನ ಶಿಬಿರ ಜರುಗಿತು.

ಈ ಸಂದರ್ಭದಲ್ಲಿ ಆಗಮಿಸಿದ್ದ ಅತಿಥಿಗಳು ದಿವಂಗತರು ಖಾಸಗಿ ವೈದ್ಯರಾಗಿ 45 ವರ್ಷಗಳ ಕಾಲ ಯಾವುದೇ ಫಲಾಪೇಕ್ಷೆ ಬಯಸದೇ ಜನಸೇವೆಯೇ ಜನಾರ್ಧನ ಸೇವೆ ಎನ್ನುವ ಧ್ಯೇಯ ವಾಕ್ಯದಂತೆ ಹೆಗ್ಗೋಡು ಗ್ರಾಮ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಜನರಿಗೆ ಹಗಲು ರಾತ್ರಿ ಅವಿಶ್ರಾಂತವಾಗಿ ನೀಡಿದ ವೈದ್ಯಕೀಯ ಹಾಗೂ ಸಾಮಾಜಿಕ ಸೇವೆಯನ್ನು ಹೃದಯಾಂತರಾಳದಿಂದ ಸ್ಮರಿಸಿದರು. ರಕ್ತದಾನ ಶಿಬಿರದಲ್ಲಿ ಸಾಗರ ರೋಟರಿ ಮತ್ತು ರೆಡ್ ಕ್ರಾಸ್ ರಕ್ತ ನಿಧಿ ಕೇಂದ್ರದ ಸಹಯೋಗದಲ್ಲಿ 70 ಕ್ಕೂ ಹೆಚ್ಚು ಯೂನಿಟ್ ರಕ್ತ ಸಂಗ್ರಹಿಸಲಾಯಿತು.
ಪುಣ್ಯ ಸ್ಮರಣೆ ಹಾಗೂ ರಕ್ತದಾನ ಶಿಬಿರದ ಕಾರ್ಯಕ್ರಮದ ಶಿವಮೊಗ್ಗ ಬಂಟರ ಸಂಘದ ಅಧ್ಯಕ್ಷ ಅಧ್ಯಕ್ಷತೆಯನ್ನು ಡಾ| ಎ. ಸತೀಶ್ ಕುಮಾರ್ ಶೆಟ್ಟಿಯವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಾಗರ ಬಂಟರ ಸಂಘದ ಅಧ್ಯಕ್ಷ ಶ್ರೀ ಸುಧಿರ್ ಕುಮಾರ್ ಶೆಟ್ಟಿ, ರೋಟರಿ ಅಧ್ಯಕ್ಷರಾದ ಶಿವಕುಮಾರ್, ಸಾಗರ ಗ್ಯಾಸ್ ಏಜೆನ್ಸಿ ಮಾಲಿಕರಾದ ಸುಬ್ಬು ರಾವ್, ಭಾಗಿ ಸತ್ಯನಾರಾಯಣ, ಪಿ ಎಲ್ ಡಿ ಬಿ ಬ್ಯಾಂಕ್ ಭೀಮನಕೊಣೆ ಅಧ್ಯಕ್ಷರಾದ ಗುರುಪ್ರಸಾದ್, ಧನಪಾಲ್ ಶೆಟ್ಟಿ, ದೀನ್ ಪಾಲ್ ಶೆಟ್ಟಿ, ಧರ್ಮಪಾಲ್ ಶೆಟ್ಟಿ ಭಾಗವಹಿಸಿದ್ದರು. ಡಾ. ಸುರೇಶ ಹೆಗ್ಡೆ ಪುತ್ರಿ ಶ್ರೀಮತಿ ವಾತ್ಸಲ್ಯ ಎಸ್ ಶೆಟ್ಟಿ ಇವರು ಸ್ವಾಗತಿಸಿದರು. ಮಗ ಉಲ್ಲಾಸ್ ಹೆಗ್ಡೆ ವಂದಿಸಿದರು. ಮಾಧವ ಚಿನ್ನಿತೋಟ ಕಾರ್ಯಕ್ರಮದ ನಿರೂಪಣೆ ಮಾಡಿದರು. ಕಾರ್ಯಕ್ರಮಕ್ಕೆ ಬಂದಂತಹ ಅತಿಥಿಗಳಿಗೆ ಮತ್ತು ಗ್ರಾಮಸ್ಥರಿಗೆ ಊಟೋಪಚಾರದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು.

















































































































