ಬಂಟ ಸಮಾಜದ ಜನರು ಮಾಡದ ಉದ್ಯೋಗ ಇಲ್ಲ. ಪ್ರಯತ್ನಿಸದ ಉದ್ಯಮ ವ್ಯಾಪಾರಗಳಿಲ್ಲ. ಮಿಂಚದ ಕಲಾ ಸಾಹಿತ್ಯ ಪ್ರಕಾರಗಳಿಲ್ಲ. ಬೆಳ್ತಂಗಡಿ ತಾಲೂಕಿನಲ್ಲಿ ತುಂಬಾ ಜವಾಬ್ದಾರಿಯಿಂದ ಕೂಡಿದ ಉಪ ತಹಶೀಲ್ದಾರ್ ವೃತ್ತಿ ನಿರ್ವಹಣೆಯಲ್ಲಿ ತನ್ನ ಕಾರ್ಯ ವೈಖರಿಯಿಂದ ಶ್ರೀ ರವೀಂದ್ರ ಶೆಟ್ಟಿ ಹೊಸೂರು ರವರು ಅಪಾರ ಜನಪ್ರಿಯತೆ ಗಳಿಸಿಕೊಂಡಿದ್ದಾರೆ. ಕುಂದಾಪುರ ತಾಲೂಕಿನ ಹೊಸೂರು ಗ್ರಾಮದ ಶ್ರೀ ಸಂಜೀವ ಶೆಟ್ಟಿ ಮತ್ತು ಸುಶೀಲಾವತಿ ಶೆಟ್ಟಿ ದಂಪತಿಯರಿಗೆ ಸುಪುತ್ರರಾಗಿ ಜನಿಸಿದ ಶೆಟ್ಟರು ಬಿ ಎ ಪದವೀಧರರು. ಶ್ರೀಯುತರ ಧರ್ಮಪತ್ನಿ ಶ್ರೀಮತಿ ಸುಮಂಗಲಾ ಆರ್ ಶೆಟ್ಟಿ ಅವರು ವಿಜ್ಞಾನ ಮತ್ತು ಶಿಕ್ಷಣ ತರಬೇತಿ ವಿಭಾಗಗಳಲ್ಲಿ ಸ್ನಾತಕೋತ್ತರ ಪದವಿಧರೆ. ಎಂ.ಎಸ್ಸಿ, ಎಂ.ಎಡ್ ಪದವಿ ಪಡೆದ ಬಳಿಕ ಪ್ರಸ್ತುತ ಗುರುಪುರ ಹೋಬಳಿ ಕುಟಿನ್ಹೊ ಪದವು ಇಲ್ಲಿರುವ ಡಾ.ಅಂಬೇಡ್ಕರ್ ವಸತಿ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ರವೀಂದ್ರ ಶೆಟ್ಟಿ ಅವರು ತನ್ನ ವೃತ್ತಿ ಕರ್ತವ್ಯದ ಜೊತೆಗೆ ಜನಸಾಮಾನ್ಯರಿಗೆ ಸಹಾಯ ಆಗುವ ಮಹತ್ತರವಾದ ಕೆಲಸಗಳನ್ನು ಮಾಡಿ ಕೊಡುತ್ತಾರೆ. ಕೆಲವು ದಾಖಲಾತಿ ಕುರಿತ ಮಾಹಿತಿ, ಅದಕ್ಕೆ ಪೂರಕವಾಗಿ ಬೇಕಾದ ಕಾಗದಪತ್ರ, ಸರ್ಟಿಫಿಕೇಟ್ ಇತ್ಯಾದಿ ಕುರಿತ ಮಾಹಿತಿ ನೀಡಿ ಸಹಕರಿಸುತ್ತಾರೆ. ಕರ್ತವ್ಯವೇ ದೇವರು ಎಂಬ ಸಿದ್ಧಾಂತಕ್ಕೆ ಬದ್ಧರಾಗಿ ದುಡಿಯುವ ಇವರು ಹೋದಲ್ಲೆಲ್ಲಾ ತನ್ನ ವಿಶೇಷ ವ್ಯಕ್ತಿತ್ವ, ಕಾರ್ಯ ಕ್ಷಮತೆ ಹಾಗೂ ಪರೋಪಕಾರಿ ಸ್ವಭಾವವನ್ನು ಪರಿಚಯಿಸಿದ್ದಾರೆ. ಭಗವದ್ಗೀತೆಯಲ್ಲಿ ಹೇಳುವ ಕರ್ಮ ಸಿದ್ಧಾಂತ ಕುರಿತಂತೆ ವಿಶೇಷ ಆಸ್ಥೆ ತೋರಿಸುವ ಇವರು ಓರ್ವ ದೈವಭಕ್ತರು ಕೂಡಾ ಹೌದು. ಇವರು ಕಛೇರಿಗೆ ಬಂದರೆಂದರೆ ಸಹೋದ್ಯೋಗಿಗಳಿಗೆ ಏನೋ ಒಂದು ರೀತಿಯ ಆತ್ಮೀಯತೆ. ಅವರೂ ಹಾಗೆಯೆ ಮೃದುಮಾತು ಸಜ್ಜನಿಕೆಗಳಿಂದಲೇ ಅವರಿಂದ ಕೆಲಸ ಮಾಡಿಸಿಕೊಂಡು ಅವರೆಲ್ಲರ ಪ್ರೀತಿ ವಿಶ್ವಾಸಗಳಿಗೆ ಪಾತ್ರರಾಗಿದ್ದಾರೆ. ಇವರು ಒಂದು ದಿನ ಕಛೇರಿಗೆ ಗೈರು ಹಾಜರಾದರೆ ಸಹೋದ್ಯೋಗಿಗಳಿಗೆ ಏನನ್ನೋ ಕಳೆದುಕೊಂಡ ಯಾವುದೋ ಕೊರತೆಯ ಭಾವ ಕಾಡುತ್ತದೆ.
ಇವರು ಈ ಹಿಂದೆ ಮಂಗಳೂರಿನ ಮಿನಿ ವಿಧಾನಸೌಧದ ಸಾರಿಗೆ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದು, ಈಗ ಬೆಳ್ತಂಗಡಿ ತಾಲೂಕು ಕಛೇರಿಯ ತಹಶೀಲ್ದಾರ್ ಆಫೀಸಲ್ಲಿ ಉಪ ತಹಶೀಲ್ದಾರ್ ಹುದ್ದೆಯಲ್ಲಿ ಕಾರ್ಯ ನಿರತರಾಗಿದ್ದಾರೆ. ಇಂಥಹ ಪ್ರಾಮಾಣಿಕ ಸರಕಾರಿ ಅಧಿಕಾರಿಗಳ ಸಂಖ್ಯೆ ಹೆಚ್ಚಾದರೆ ಸರಕಾರಿ ಕೆಲಸ ಕುರಿತಂತೆ ಜನರ ವಿಶ್ವಾಸ ಖಂಡಿತಾ ಹೆಚ್ಚಾಗಬಹುದು. ಒಂದು ಸರಕಾರಿ ಹುದ್ದೆಯ ಗೌರವ ಹೆಚ್ಚಿಸಿ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾದ ರವೀಂದ್ರ ಶೆಟ್ಟಿ ಅವರಿಗೆ ದೇವರು ಆಯುರಾರೋಗ್ಯ ಭಾಗ್ಯ ನೀಡಿ ಹರಸಲಿ. ಇನ್ನಷ್ಟು ವರ್ಷಗಳ ಕಾಲ ತನ್ನ ವೃತ್ತಿ ಮೂಲಕ ಜನ ಸೇವೆ ಮಾಡುವ ಭಾಗ್ಯವನ್ನು ದೇವರು ಕರುಣಿಸಲೆಂದು ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಹಾರೈಸುತ್ತದೆ.
ಲೇಖಕರು : ಅರುಣ್ ಶೆಟ್ಟಿ ಎರ್ಮಾಳ್, ಗೌರವ ಸಂಪಾದಕರು